ಬೆಂಗಳೂರು ಅಕ್ಟೋಬರ್ 24 : ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರಂಭಗೊಂಡ ಕನ್ನಡಕ್ಕಾಗಿ ನಾವು ಅಭಿಯಾನ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ವಿಶೇಷ “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮ ನಡೆಯಿತು.
ಕನ್ನಡ ಹಾಡು, ಕನ್ನಡ ಧ್ವಜ, ಕನ್ನಡ ಅಕ್ಷರ ಹೀಗೆ ಕನ್ನಡಮಯವಾಗಿದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕನ್ನಡ ರಾಜ್ಯೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ, ಕನ್ನಡದಲ್ಲಿ ಮಾತನಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ರಾಜ್ಯಪಾಲರು, “ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲರೂ ಭಾಗವಹಿಸೋಣ… ಕನ್ನಡ ಬಳಸೋಣ, ಬೆಳೆಸೋಣ, ಉಳಿಸೋಣ ಹಾಗೂ ಗೌರವಿಸೋಣ… “ಮಾತಾಡ್ ಮಾತಾಡ್ ಕನ್ನಡ” ಎಂದು ಕನ್ನಡ ಸಹೃದಯರಲ್ಲಿ ಮನವಿ ಮಾಡಿದರು.
ಸಂಜೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ವಿದ್ಯುಕ್ತವಾಗಿ ಆರಂಭಗೊಂಡಿತು. ಬಳಿಕ ಭರತ ನಾಟ್ಯ, ಯಕ್ಷಗಾನ ಪ್ರಸಂಗ, ಸಮೂಹ ನೃತ್ಯ ಕಾರ್ಯಕ್ರಮ ನಡೆದವು. ಕುವೆಂಪು ಅವರ ಬಾಗಿಲೊಳಗೆ ಕೈಮುಗಿದು ಒಳಗೆ ಬಾ ಯಾತ್ರಿಕನೆ ನೃತ್ಯ ಪ್ರದರ್ಶನ ಜನಮನ ಸೂರೆಗೊಂಡಿತು.
ದೀಪವು ನಿನ್ನದೇ, ಚೆಲ್ಲಿದರು ಮಲ್ಲಿಗೆಯ, ಅಕ್ಕು ಶ್ಯಾಮ ಅವಳೇ ರಾಧೆ ನಲಿಯುತ್ತಿರುವಳು, ಬಾರಿಸು ಕನ್ನಡ ಡಿಂಡಿಮವ ಹಾಡುಗಳ ನೃತ್ಯ ಪ್ರದರ್ಶನ ಬಹಳ ಸುಂದರವಾಗಿ ಮೂಡಿ ಬಂತು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.

See more pics

Share this :