ಸಾಗರದಾಚೆ ಕನ್ನಡ ಡಿಂಡಿಮ
ಬಹರೇನ್ ಕನ್ನಡ ಭವನದ ಮೊಗಸಾಲೆ ನಾಳೆ (ಅ.6) ಲೋಕಾರ್ಪಣೆ
ಮನಾಮ (ಬಹರೇನ್): ಬಹರೇನ್ ಕನ್ನಡ ಭವನದಲ್ಲಿ ಹೊಸದಾಗಿ ನಿರ್ಮಿಸಿರುವ ಮೊಗಸಾಲೆಯ (ಹಜಾರ) ಲೋಕಾರ್ಪಣೆ ಶುಕ್ರವಾರ (ನಾಳೆ) ನಡೆಯಲಿದೆ.
ಅಕ್ಟೋಬರ್ 6ರ ಬೆಳಿಗ್ಗೆ 10ಕ್ಕೆ ಇಲ್ಲಿನ “ಕನ್ನಡ ಭವನ”ದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ‘ರೊನಾಲ್ಡ್ ಕೊಲಾಸೊ ಮೊಗಸಾಲೆ’ಯ (ಲೌಂಜ್) ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಅಮರನಾಥ ರೈ ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ದಿನ ಸಂಜೆ ಕನ್ನಡ ಸಂಘದ ಹೊಸ ಆಡಳಿತ ಮಂಡಳಿಯ ವಿದ್ಯುಕ್ತ ಪದಗ್ರಹಣ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಬಹರೇನ್ ನಲ್ಲಿನ ಭಾರತೀಯ ರಾಯಭಾರಿ ವಿನೋದ್ ಕೆ. ಜೇಕಬ್ ಮತ್ತು ಜಿ.ಪರಮೇಶ್ವರ ಈ ಕಾರ್ಯಕ್ರಮದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶಾಸಕರಾದ ರವಿಕುಮಾರ್ ಗೌಡ, ಎಐಸಿಸಿ ಕಾರ್ಯದರ್ಶಿ ಡಾ.ಆರತಿ ಕೃಷ್ಣ, ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಬಹರೇನ್ ಕನ್ನಡ ಭವನ ನಿರ್ಮಾಣಕ್ಕೆ ಡಾ. ರೊನಾಲ್ಡ್ ಕೊಲಾಸೊ ಅವರು ದೊಡ್ಡ ಮೊತ್ತದ ಕೊಡುಗೆ ನೀಡಿರುವುದನ್ನು ಗೌರವಿಸಿ ಇಲ್ಲಿನ ಮೊಗಸಾಲೆಗೆ ಅವರ ಹೆಸರನ್ನು ಇರಿಸಲಾಗಿದೆ.