ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪನ್ನು ಕಪಸಮ ಹರಡುತ್ತಿರುವುದು ಹೆಮ್ಮೆಯ ಸಂಗತಿ: ಕೆ.ವಿ.ಪ್ರಭಾಕರ್

ಮುಂಬೈ ಆ 6: ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪನ್ನು ಕಪಸಮ (ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರ) ಹರಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಕೆ.ಟಿ.ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮುಂಬೈನಂತಹ ಮಹಾ ನಗರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಗಳನ್ನು ಹುಟ್ಟುಹಾಕುವುದು ಯಶಸ್ವಿಯಾಗಿ ನಡೆಸುವುದು ಬಹಳ ಸವಾಲಿನದ್ದು. ಈ ಸವಾಲನ್ನು ಕಪಸಮ ಅರ್ಥಪೂರ್ಣವಾಗಿ ನಿಭಾಯಿಸಿದೆ ಎಂದರು.
ಆಧುನಿಕ ತಂತ್ರಜ್ಞಾನ ಮಾಹಿತಿ ಜಗತ್ತು ಮತ್ತು ಪತ್ರಿಕಾ ವೃತ್ತಿಗೆ ವ್ಯಾಪಕ ಅವಕಾಶಗಳನ್ನು ತೆರೆದಿಟ್ಟಿದೆ. ಆದರೆ ಪತ್ರಕರ್ತರ ಬದುಕು ಮಾತ್ರ ಸಮಸ್ಯೆಗಳಲ್ಲೇ ಮುಳುಗಿದೆ. ಮಹಾರಾಷ್ಟ್ರ ನೆಲದಲ್ಲಿ ಕನ್ನಡ ಪತ್ರಕರ್ತರ ಸಮಸ್ಯೆಗಳಿಗೆ ಕನ್ನಡ ಪತ್ರಕರ್ತರ ಸಂಘ, ಮಹಾರಾಷ್ಟ್ರ ಬಹಳ ಹೃದಯಸ್ಪರ್ಷಿಯಾಗಿ ಸ್ಪಂದಿಸುತ್ತಿದೆ ಎನ್ನುವುದು ಸಮಾಧಾನದ ಸಂಗತಿ ಎಂದರು.
ಕಪಸಮ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಆಗಮಿಸಿದ್ದರು.
ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ, ಲಾರೆನ್ಸ್ ಸೀಲೋ ಅವರು ಮಾಧ್ಯಮಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತರಾದ ಡಾ.ಸುನಿತಾ ಎಂ ಶೆಟ್ಟಿ ಅವರು ರೋಹಿ಼ಣಿ ಸಾಲ್ಯಾನ್ ಅವರ ‘ದಿವ್ಯಾಂಗನೆ’ ಕವನ ಸಂಕಲನ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಜಯ ಶ್ರೀ ಕೃಷ್ಣ ಪರಿಸರ ಸಮಿತಿ ಅಧ್ಯಕ್ಷರಾದ ಎಲ್.ವಿ.ಅಮೀನ್ ಉಪಸ್ಥಿತರಿದ್ದರು.

Share this :