*ಧರ್ಮಪಥದ ಮೇಲೆ ಸರ್ವಾಧ್ಯಕ್ಷತೆಯ ಹೊಂಬೆಳಕು.

*

*ಶ್ರೀ ಡಿ ಎಸ್ ನಾಯಿಕ*

 

ಹಿತಮಿತ ಮಧ್ಯಮ ಎತ್ತರದ ನಿಲುವಿನ ಶ್ವೇತಗನ್ನಡಿಯಂತಿರುವ ಧರ್ಮಣ್ಣ ಸಿದ್ದಪ್ಪ ನಾಯಿಕರು ಬಿಳಿ ಅಂಗಿˌಪೈಜಾಮ ಧರಿಸಿ ನಿಂತರೆಂದರೆ ನೋಡಿದವರ ಮನದ ತುಂಬಾ ಭಕ್ತಿಬೆಳದಿಂಗಳು ಸುರಿಯುವುದು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ  29-3-1941 ರಂದು ಸಿದ್ದಪ್ಪˌ ಬಾಗವ್ವರ ಪುಣ್ಯ ಉದರದಲ್ಲಿ ಜನಿಸಿದ ಡಿ.ಎಸ್.ನಾಯಿಕರು ಸಾಮಾನ್ಯನಾಗಿ ಹುಟ್ಟಿ ತ್ರಿವಿಕ್ರಮನಂತೆ ಬೆಳೆದ ಪರಿ ಬೆರಗು ಹುಟ್ಟಿಸುತ್ತದೆ. ಬಾಗೆನಾಡಿನ ಸರ್ವಧರ್ಮಧ್ವಜದಂತಿರುವ ನಾಯಿಕರು ಸರಳತೆˌವಾಗ್ಮಿತೆˌಪ್ರಾಮಾಣಿಕತೆˌವಿನಯತೆˌಸಹಜತೆಗಳ ಅಪೂರ್ವ ಸಂಗಮವಾಗಿದ್ದಾರೆ. ಜನಾನುರಾಗಿಯಾಗಿ ಜನಮೆಚ್ಚಿದ ನಾಯಕರಾಗಿ  ಹೊರಹೊಮ್ಮಿ ಗೊಮ್ಮಟವಾಗಿ ತೋರುಬೆರಳಾಗಿದ್ದಾರೆ.

‘ಡಿಪ್ಲೋಮಾ ಇನ್ ಕೋಆಪರೇಶನ್ ‘ಕೋರ್ಸ ಮುಗಿಸಿ ಕುಡಚಿಯಲ್ಲಿ 1962 ರಿಂದ 1969 ರವರೆಗೆ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದಾರೆ.1969 ರಿಂದ ಸಮಾಜ ಸೇವೆಯನ್ನು ತಮ್ಮ ಉಸಿರಾಗಿಸಿಕೊಂಡು ಸಾಂಸ್ಕೃತಿಕˌಸಾಮಾಜಿಕˌಶೈಕ್ಷಣಿಕˌಧಾರ್ಮಿಕˌಸಾಹಿತ್ಯಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಯಬಾಗ ತಾಲೂಕಿನ ಜಾತ್ಯಾತೀತˌಪ್ರಶ್ನಾತೀತ ನೇತಾರರಾಗಿ ಜನಮನದಲ್ಲಿ ಪೂಜಿಸಲ್ಪಡುತ್ತಿದ್ದಾರೆ.

1978 ರಲ್ಲಿ ಮೊರಬ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕೈಗೊಂಡ ಕಾರ್ಯಗಳು ಅವಿಸ್ಮರಣೀಯ.1973 ರಲ್ಲಿ ಉಪಾಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.ಸಾರ್ವಜನಿಕ ಬದುಕಿನಲ್ಲಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣ ಮಾಡಿ  ಐತಿಹಾಸಿಕ ದಾಖಲೆ ಬರೆದಿದ್ದಾರೆ.1981 ರಲ್ಲಿ ಮೊರಬದಲ್ಲಿ ಸಂತೆ ಆರಂಭಿಸಿ ಆರ್ಥಿಕ ವಹಿವಾಟಿಗೆ ಶ್ರೀಕಾರ ಹಾಕಿದ ಡಿ.ಎಸ್ ಅವರು 1982 ರಲ್ಲಿ ಸರಕಾರಿ ಪ್ರೌಢ ಶಾಲೆ ಮಂಜೂರು ಮಾಡಿಸಲು ಹಗಲಿರುಳು ಶ್ರಮಿಸಿ ಯಶಸ್ವಿಯಾದುದು ಇವರ ಶಿಕ್ಷಣ ಪ್ರೇಮಕ್ಕೆ ರನ್ನಗನ್ನಡಿಯಾಗಿದೆ.ಅದೇ ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿ ಗ್ರಾಮಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾಗ್ಯವಿಧಾತರಾಗಿದ್ದಾರೆ.1983 ರಲ್ಲಿ ಸರಕಾರಿ ಪಶು ಆಸ್ಪತ್ರೆ ಆರಂಭಿಸುವುದರ ಮೂಲಕ ಗ್ರಾಮದ ಅಭಿವೃದ್ದಿಯ ಚಕ್ರದ ವೇಗ ಹೆಚ್ಚಿಸಿ ಆಧುನಿಕ ಮೊರಬದ ಶಿಲ್ಪಿಯೆನಿಸಿದ್ದಾರೆ.

ಆದರ್ಶಗಳ ಆಕರವಾಗಿರುವ ಡಿ.ಎಸ್.ನಾಯಿಕರವರು 1985 ರಿಂದ ಹಲವು ವರ್ಷಗಳವರೆಗೆ ರೇಡಿಯೋ ಕೇಂದ್ರದಲ್ಲಿ ಭಾಷಣˌಚಿಂತನಗಳನ್ನು ಮಾಡಿ ಶ್ರೋತೃಗಳಿಂದ ಸೈ ಎನಿಸಿಕೊಂಡಿದ್ದಾರೆ.1992 ರಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ.ಸಾಹಿತ್ಯೋಪಾಸಕ ಡಿ.ಎಸ್.ನಾಯಿಕರವರು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಗಮನಾರ್ಹ ಕಾರ್ಯಗೈದಿದ್ದಾರೆ.2000 ದಿಂದ 2005 ರವರೆಗೆ ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.1979 ರಿಂದ ರಾಯಬಾಗತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿ ಭೂನ್ಯಾಯ ಮಂಡಳಿ ಗೌರವ ಹೆಚ್ಚಿಸಿದ್ದಾರೆ.ತಾಲೂಕು ಮಟ್ಟದ ಡಾ.ಅಂಬೇಡ್ಕರ ಜಯಂತಿˌಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಗಳನ್ನು ಗೆಲ್ಲಿಸಿದ್ದಾರೆ.ಪ.ಪೂ ಶ್ರೀ ಸಿದ್ಧೇಶ್ವರ ಸ್ವಾಮಿಗಳು ವಿಜಯಪುರರವರ ಶಿಷ್ಯರಾಗಿ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅನೇಕ ಪ್ರವಚನ ಕಾರ್ಯಕ್ರಮಗಳನ್ನು ನೀಡಿ ಆನಂದಿಸಿದ್ದಾರೆ.

‘ಮೊರಬದ ಪುಣ್ಯದ ಕೆನೆ’ˌ’ಧರ್ಮವೀರ’ ಧರ್ಮಣ್ಣ ಸಿದ್ದಪ್ಪ ನಾಯಿಕರು ಮೃದು ಮಾತಿನ ಹೂಹೃದಯದ ಸಜ್ಜನ ಶಕ್ತಿಕೇಂದ್ರವಾಗಿದ್ದಾರೆ.ಬಡವರˌಶೋಷಿತರˌನೊಂದವರ ಧ್ವನಿಯಾಗಿ ಸಮಾಜದ ಸಂಪತ್ತಾಗಿದ್ದಾರೆ.ಜನರ ನಡುವಿನಿಂದ ಅರಳಿದ ಅಸಲಿ ನಾಯಕ ನಾಯಿಕರವರು ಅಜಾತ ಶತ್ರುಗಳಾಗಿ ಧರ್ಮಣ್ಣ ಹೆಸರಿಗೆ ಅನ್ವರ್ಥಕರಾಗಿದ್ದಾರೆ.

ಅಮೃತದ ಅಕ್ಷಯ ಕುಂಭವಾಗಿರುವ ಡಿ.ಎಸ್.ನಾಯಿಕರವರು ನಡೆದಾಡುವ ಭಾವೈಕ್ಯದ ಬಾವುಟವಾಗಿದ್ದಾರೆ.ಸಮಾಜದ ಕೆಲಸಗಳಿಗೆ ಸದಾ ಮುಂದಾಗುವ  ಮುಂದಾಳು ಧರ್ಮಣ್ಣ ನಾಯಿಕರು ನಾಯಕರ ನಾಯಕ ಮಹಾನಾಯಕರಾಗಿ ಕಂಗೊಳಿಸುತ್ತಿದ್ದಾರೆ.ಅವರು ನಡೆದು ಬಂದ ಧರ್ಮಪಥ ಎಲ್ಲರಿಗೂ ಮಾದರಿ.ಧರ್ಮದಾರಿಯ ಚತುಷ್ಪಥವೆನಿಸಿದ ಇವರು ಯುವಕರಿಗೆ ದಾರಿದೀಪವಾಗಿದ್ದಾರೆ.ಆರೋಗ್ಯಕರ ಸಮಾಜದ ನಿರ್ಮಾಪಕ ಡಿ.ಎಸ್.ನಾಯಿಕರವರು ಮೌಲ್ಯಗಳ ಮಹಾ ಉಪಾಸಕರುˌಸಾಹಿತ್ಯಾರಾಧಕರುˌಸಂಸ್ಕೃತಿ ಅರ್ಚಕರಾಗಿ ರಾಯಬಾಗದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ.ಅವರಿಗೆ ಪರಮಾನಂದವಾಡಿಯಲ್ಲಿ ಜರುಗಲಿರುವ ರಾಯಬಾಗ ತಾಲೂಕಾ ಆರನೆಯ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷ ಪದವಿ ಅರಸಿ ಬಂದಿರುವುದು ತಾಲೂಕಿನಾದ್ಯಂತ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಎಲ್ಲೆಡೆ ಸಂತಸ ಗೂಡು ಕಟ್ಟಿದೆ.ಆನಂದದ ಅಲೆಗಳು ಕನ್ನಡ ಕಸ್ತೂರಿಯ ಪರಿಮಳ ಆಸ್ವಾದಿಸಲು ತುದಿಗಾಲ ಮೇಲೆ ನಿಂತಿರುವುದು ಸರ್ವವೇದ್ಯ .ಮೊರಬದ ಮೊಹರು ಡಿ.ಎಸ್.ನಾಯಿಕರವರ ನಿರ್ಮಲ ಚಿತ್ತˌಸಮಾಜ ಕಳಕಳಿˌಬಹುಮುಖ ಕಾಯಕಕ್ಕೆ ರಾಯಬಾಗ ತಾಲೂಕಾ 6 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟದ ಗೌರವ ದೊರಕಿದೆ .

ಅವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು.

 

:- ರವೀಂದ್ರ ಮ ಪಾಟೀಲ

ಅಧ್ಯಕ್ಷರುˌಕ.ಸಾ.ಪˌರಾಯಬಾಗ

Share this :