ಬೆಂಗಳೂರು,ನ.4: ಕೃಷಿ ಸಚಿವ ಬಿ.ಸಿ.ಪಾಟೀಲರ ಮಹತ್ವಾಕಾಂಕ್ಷೆಯ “ರೈತರೊಂದಿಗೊಂದು ದಿನ” ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬುತ್ತಿದ್ದು, ಕಳೆದ ಬಾರಿಯಂತೆ ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಈ ಬಾರಿಯೂ ಸಹ ತಮ್ಮ ಜನ್ಮದಿನವನ್ನು ರೈತರೊಂದಿಗೆ ಕಳೆಯಲಿದ್ದಾರೆ.
ಅಂದ್ಹಾಗೆ ನ.14 ಬಿ.ಸಿ.ಪಾಟೀಲರ ಜನ್ಮದಿನ.ಕಳೆದ ವರ್ಷದಿಂದ ತಮ್ಮ ಜನ್ಮದಿನವನ್ನು ರೈತರಿಗಾಗಿ ಮುಡುಪಾಗಿಟ್ಟಿರುವ ಬಿ.ಸಿ.ಪಾಟೀಲರು ಈ ಬಾರಿಯೂ ಕೂಡ ತಮ್ಮ ಹುಟ್ಟುಹಬ್ಬವನ್ನು ಅನ್ನದಾತರೊಂದಿಗೆ ಕಳೆಯಲು ನಿರ್ಧರಿಸಿದ್ದಾರೆ.ರೈತ ಪರ ಕಾಳಜಿ ರೈತರಿಗೆ ಆತ್ಮವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ತಡೆಗಟ್ಟಿ ಕೋಲಾರ ಮಾದರಿಯ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ರೈತರಲ್ಲಿ ಈ ಕುರಿತು ಜಾಗೃತಿ ಹೆಚ್ಚಿಸಲು ಆರಂಭವಾಗಿದ್ದೇ “ರೈತರೊಂದಿಗೊಂದು ದಿನ”.
ಕೃಷಿ ಸಚಿವರಾದ ಬಳಿಕ ಮೊದಲ ಬಾರಿಗೆ ಬಿ.ಸಿ.ಪಾಟೀಲರು ರೈತರ ಮನೋಸ್ಥೈರ್ಯ ಹೆಚ್ಚಿಸಲು ತಮ್ಮ ಜನ್ಮದಿನದಂದೇ “ರೈತರೊಂದಿಗೊಂದು ದಿನ” ಎನ್ನುವ ರೈತೋಪಯೋಗಿ ಕಾರ್ಯಕ್ರಮಕ್ಕೆ ಮುಂದಾದರು.ಕಳೆದ ನ.14 ರಂದು ಆರಂಭವಾದ ಈ ದಿನ ಈಗ ಒಂದು ವರ್ಷ ಪೂರೈಸುತ್ತಿದ್ದು, ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಮೆಚ್ಚಿ ಕೃಷಿ ಇಲಾಖೆಗೆ ಸ್ವಯಂಪ್ರೇರಿತರಾಗಿ ರಾಯಭಾರಿಯಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಈ ಬಾರಿಯ “ರೈತರೊಂದಿಗೊಂದು ದಿನ” ಕಾರ್ಯಕ್ರಮದಲ್ಲಿ ಕೃಷಿ ಸಚಿವರೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ.ರೈತರೊಂದಿಗೊಂದು ದಿನ ಈಗಾಗಲೇ 10 ಜಿಲ್ಲೆಗಳಲ್ಲಿ ನಡೆದಿದ್ದು, ಹಾವೇರಿ 11 ನೇ ಜಿಲ್ಲೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿಯೂ ಕಾಲಿಗೆ ಚಕ್ರಕಟ್ಟಿಕೊಂಡು ಬಿ.ಸಿ.ಪಾಟೀಲರು ಕೋವಿಡ್ ನಿರ್ಬಂಧದಲ್ಲಿಯೂ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರೈತರ ಸಂಕಷ್ಟವನ್ನು ಅರಿಯುವ ಪ್ರಯತ್ನ ಮಾಡಿದ್ದರು. ಇದೆಲ್ಲದರಿಂದ ರೂಪತಳೆದಿದ್ದೇ “ರೈತರೊಂದಿಗೊಂದು ದಿನ”.ಕೃಷಿ ಸಚಿವರು ಹಾಗೂ ಕೃಷಿ ಅಧಿಕಾರಿಗಳು ರೈತರ ಬಳಿಯೇ ತೆರಳಿ ಅವರ ಸಂಕಷ್ಟವನ್ನು ಅರಿತು ಸಾಧ್ಯವಾದಲ್ಲಿ ಸ್ಥಳೀಯವಾಗಿಯೇ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಅಂದ್ಹಾಗೆ ಈ ಬಾರಿಯ ರೈತರೊಂದಿಗೊಂದು ದಿನ ಕೃಷಿ ಸಚಿವರ ಮತಕ್ಷೇತ್ರ ಹಿರೇಕೆರೂರಿನಲ್ಲಿ ಆಯೋಜನೆಗೊಂಡಿದ್ದು, ಹಾವೇರಿ ಜಿಲ್ಲೆಯ ರೈತರಿಗೆ ಈ ದಿನ ಸದುಪಯೋಗವಾಗಲಿದೆ.