ಪುತ್ತಿಗೆ ಪರ್ಯಾಯ ಸಮಿತಿ ಮಹಾ ಪೋಷಕರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದ ಶ್ರೀ ಪುತ್ತಿಗೆ ಪರ್ಯಾಯ ಸಮಿತಿಯ ಮಹಾ ಪೋಷಕರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರನ್ನು ನೇಮಿಸಲಾಗಿದೆ. ಪುತ್ತಿಗೆ ಮಠದಲ್ಲಿ ಬುಧವಾರ ನಡೆದ ಪರ್ಯಾಯೋತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವರನ್ನು ಪರ್ಯಾಯ ಸಮಿತಿಯ ಮಹಾಪೋಷಕರನ್ನಾಗಿ ಘೋಷಿಸಲಾಯಿತು.
ಬಳಿಕ ಮಾತನಾಡಿದ ಸಚಿವರು, ಮುಂದಿನ ಜನವರಿಯಲ್ಲಿ ನಡೆಯಲಿರುವ ಶ್ರೀ ಪುತ್ತಿಗೆ ಪರ್ಯಾಯೋತ್ಸವಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು ಎಂದರು. ಮುಂದಿನ ಉಡುಪಿ ಭೇಟಿ ವೇಳೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯೋತ್ಸವ ಸಂಬಂಧ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗುವುದು ಎಂದರು.
ಪುತ್ತಿಗೆ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಶ್ರೀ ಕೃಷ್ಣ ಪರಮಾತ್ಮ ನನಗೆ ಕರುಣಿಸಿದ್ದಾನೆ. ಪುತ್ತಿಗೆ ಮಠ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಹಿಂದೂ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿ, ಇದನ್ನು ಉಳಿಸಿ, ಬೆಳಸುವ ಕರ್ತವ್ಯ ನಮ್ಮದು. ನಮ್ಮ ಸಂಸ್ಕೃತಿಯನ್ನು ಪುತ್ತಿಗೆ ಶ್ರೀಗಳು ವಿದೇಶಿ ನೆಲದಲ್ಲಿ ಪಸರಿಸುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಯಾವುದೇ ರಾಜಕೀಯ ತರದೇ ಭಕ್ತಿಭಾವದಿಂದ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳೋಣ. ದೇಶ ವಿದೇಶಗಳಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಯನ್ನು ಮಾಡೋಣ ಎಂದರು. ಪುತ್ತಿಗೆ ಪರ್ಯಾಯ ಸಮಿತಿ ಮಹಾ ಪೋಷಕರನ್ನಾಗಿ ನನ್ನನ್ನು ನೇಮಿಸಿದ್ದು, ಈ ಹುದ್ದೆಗೆ ತಕ್ಕಂತೆ ಕಾರ್ಯನಿರ್ವಹಿಸುವೆ ಎಂದು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ವೇಳೆ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗು ಮಾಜಿ ಶಾಸಕ ರಘುಪತಿ ಭಟ್, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಸ್ವಾಗತ ಸಮಿತಿಯ ಕೋಶಾಧಿಕಾರಿ ರಂಜನ್ ಕಲ್ಕೂರ ಹಾಗೂ ಪ್ರಸಾದ್ ಕಾಂಚನ್ ಉಪಸ್ಥಿತರಿದ್ದರು.