ಮಹಾರಾಣಿ ಮಹಿಳಾ ಕ್ಲಸ್ಟರ್ ವಿವಿಯ ಚೊಚ್ಚಲ ಘಟಿಕೋತ್ಸವ: ಪ್ರೋ. ಪಿ. ಬಲರಾಮ್, ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಕರ್ನಾಟಕದಲ್ಲಿ ಮಹಿಳಾ ಅಭಿವೃದ್ಧಿಗೆ ಆದ್ಯತೆ – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು,ನ, 2; ಕರ್ನಾಟಕ ಒಳಗೊಂಡಂತೆ ದೇಶದಲ್ಲಿ ಮಹಿಳಾ ಅಭಿವೃದ್ಧಿಗೆ ಆದ್ಯತೆ ದೊರೆಯುತ್ತಿದ್ದು, ಲಿಂಗತಾರತಮ್ಯ ನಿವಾರಣೆಯತ್ತ ದೇಶ ಸಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವಕ್ಕೆ ಅವರು ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಖ್ಯಾತ ವಿಜ್ಞಾನಿ ಪ್ರೊ. ಪಿ. ಬಲರಾಮ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ಬಹು ಹಿಂದಿನಿಂದಲೇ ಶಕ್ತಿ ತುಂಬುವ ಪ್ರಯತ್ನಗಳು ನಡೆಯುತ್ತಿವೆ. 1948 ರಲ್ಲಿಯೇ ಮೈಸೂರು ಮಹಾರಾಜರು ಮಹಾರಾಣಿ ಕಾಲೇಜು ಸ್ಥಾಪಿಸಿದ್ದರು. ರಾಜ್ಯ ಸರ್ಕಾರ ಕೂಡ ಮಹಾರಾಣಿ ವಿವಿಯನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಸಹಕಾರ ನೀಡುತ್ತಿದೆ ಎಂದರು.
ಕೇಂದ್ರ ಸರ್ಕಾರ ಕೂಡ ಭೇಟಿ ಬಚಾವೋ ಭೇಟಿ ಫಡಾವೋ ಸೇರಿದಂತೆ ಹಲವಾರು ಮಹಿಳಾ ಆಧಾರಿತ ಕಾರ್ಯಕ್ರಮಗಳ ಮೂಲಕ ಮಹಿಳಾ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಮಹಿಳೆಯರು ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯುದಯಪಥದತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿದ್ದು, ಇವೆಲ್ಲವೂ ಮಹಿಳೆಯರಿಗೆ ಉತ್ತಮ ಪ್ರಾತಿನಿಧ್ಯ ದೊರಕಿಸಿಕೊಡುವ ಪ್ರಯತ್ನಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ, ಪದ್ಮಭೂಷಣ ಪ್ರೊ. ಪಿ. ಬಲರಾಮ್, ಶಿಕ್ಷಣ, ವಿಜ್ಞಾನ, ಸಂಶೋಧನೆ ಸಾರ್ವಜನಿಕ ವಲಯದ ವಿಚಾರಗಳಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಭವ್ಯ ಭವಿಷ್ಯ ಯುವ ಸಮೂಹದ ಕೈಯಲ್ಲಿದ್ದು, ಅದರಲ್ಲೂ ಮುಂದಿನ ದಿನಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಿರುತ್ತದೆ. ಈ ದೇಶದಲ್ಲೂ ಮಹಿಳಾ ಮೀಸಲಾತಿ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಆದರೆ ಇದೀಗ ಮೀಸಲಾತಿ ಜಾರಿಗೆ ತೀರ್ಮಾನವಾಗಿದ್ದು, ಅನುಷ್ಠಾನ ಮುಂದೂಡಲಾಗಿದೆ ಎಂದರು.
ಶಿಕ್ಷಣ ಕೇವಲ ಜ್ಞಾನವಷ್ಟೇ ಅಲ್ಲದೇ ನಿರಂತರ ಕಲಿಕೆಯೂ ಇದರ ಮೂಲಗುಣವಾಗಿದೆ. ವಿವಿಗಳಲ್ಲಿ ಕೇವಲ ಕಲಿಯುವುದಲ್ಲ, ಏನನ್ನು ಮತ್ತು ಹೇಗೆ ಕಲಿಯಬೇಕು ಎಂಬುದು ಮುಖ್ಯವಾಗಲಿದೆ. ಕಠಿಣ ಪರಿಶ್ರಮ ಅತ್ಯಂತ ಅಗತ್ಯ. ಪ್ರೊ. ನಾರಾಯಣಮೂರ್ತಿ ಅವರು ವ್ಯಕ್ತಿಗಳ ಅಭಿವೃದ್ಧಿಗೆ ಕಠಿಣ ಶ್ರಮ ಅಗತ್ಯ ಎಂದು ಹೇಳಿದ್ದು, ಇದನ್ನು ಬೇರೆ ರೀತಿ ಅರ್ಥೈಸಲಾಗುತ್ತಿದೆ. ಬದುಕಿನಲ್ಲಿ ವೈಫಲ್ಯ ಸಹಜವಾದದ್ದು, ನಂತರವಷ್ಟೇ ಗೆಲುವು ಸಾಧ್ಯ ಎಂದು ಪ್ರತಿಪಾದಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡುತ್ತಿದ್ದು, ಬಾಲಕರು ಖಾಸಗಿ ಕಾಲೇಜುಗಳಿಗೆ ಹೆಚ್ಚು ಸೇರುತ್ತಿದ್ದಾರೆ. ಮಹಾರಾಣಿ ಕಾಲೇಜು ಇದಕ್ಕೆ ಉದಾಹರಣೆಯಾಗಿದ್ದು, ಇಲ್ಲಿನ ಕಲಾ, ವಿಜ್ಞಾನ ಕಾಲೇಜು ಎದುರುಗಡೆ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳನ್ನು ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಅತ್ಯಂತ ದೊಡ್ಡ ಮೂಲ ಸೌಕರ್ಯ ಕಲ್ಪಿಸಿದ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಶಿಥಿಲಗೊಂಡಿರುವ ಮೈಸೂರಿನ ಮಹಾರಾಜ ವಿಜ್ಞಾನ, ಕಲೆ, ವಾಣಿಜ್ಯ ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿ 11 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಬಡ ವಿದ್ಯಾರ್ಥಿಗಳು ಕಲಿಯುತ್ತಿರುವ ಇಲ್ಲಿ 51 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಇನ್ಪೋಸಿಸ್ ಮುಖ್ಯಸ್ಥರಾದ ಪ್ರೊ. ನಾರಾಯಣ ಮೂರ್ತಿ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಶಿಘ್ಲಘಟ್ಟದವರು. ಆದರೆ ಸುಧಾಮೂರ್ತಿ ಅವರು ಹುಬ್ಬಳ್ಳಿ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅವರು ನಮ್ಮ ಹಿಂದುಳಿದ ಜಿಲ್ಲೆಯತ್ತಲೂ ದೃಷ್ಟಿ ಹರಿಸಬೇಕು. ಇಲ್ಲಿನ ಅಭಿವೃದ್ಧಿಗೂ ಕೊಡುಗೆ ನೀಡಬೇಕು, ಈಗಾಗಲೇ ಪ್ರೊ. ನಾರಾಯಣ ಮೂರ್ತಿ ಅವರ ಜೊತೆ ಭವಿಷ್ಯದ ಶಿಕ್ಷಣ ಸ್ವರೂಪದ ಬಗ್ಗೆ ಚರ್ಚೆ ನಡೆಸಿರುವುದಾಗಿ ಎಂದು ಡಾ. ಎಂ.ಸಿ. ಸುಧಾಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥರಾದ ಡಾ. ಸುಧಾಮೂರ್ತಿ, ಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಲ್. ಗೋಮತಿ ದೇವಿ, ಕುಲಸಚಿವರಾದ ಪ್ರೊ. ಅನುರಾಧ ಬಿ, ಆಡಳಿತ ವಿಭಾಗದ ಕುಲಸಚಿವರಾದ ಸಂಗಪ್ಪ, ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಪಾಲ್ಗೊಂಡಿದ್ದರು.