ಪತ್ರಿಕಾ ವಿತರಕರ ಯೋಗಕ್ಷೇಮಕ್ಕಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜತೆ ಚರ್ಚೆ: ಕೆ.ವಿ.ಪ್ರಭಾಕರ್ ಭರವಸೆ
ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರ ಶ್ರಮ ಮತ್ತು ಕಾಳಜಿ ದಾಖಲಾರ್ಹ: ಕೆ.ವಿ.ಪ್ರಭಾಕರ್
ಮೈಸೂರು ನ 18: ಕೋವಿಡ್ ಸಂದರ್ಭದಲ್ಲಿ ಪತ್ರಿಕಾ ವಿತರಕರ ಶ್ರಮ ಮತ್ತು ಕಾಳಜಿ ದಾಖಲಾರ್ಹ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಮತ್ತು ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘ ಪತ್ರಕರ್ತರ ಸಂಘದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿದರು.
ಪತ್ರಿಕಾ ವಿತರಕರು ಪತ್ರಿಕೋದ್ಯಮದ ಪಿಲ್ಲರ್ ಗಳು. ಕೋವಿಡ್ ಸಂದರ್ಭದಲ್ಲಿ ಪತ್ರಿಕೆ ಮುಟ್ಟಿದರೆ ಕೊರೋನ ಬರುತ್ತದೆ ಎನ್ನುವ ಆತಂಕ ವ್ಯಾಪಕವಾಗಿ ಹರಡಿದ್ದಾಗಲೂ ತಮ್ಮ ವೃತ್ತಿಪರತೆಯನ್ನು ಬಿಟ್ಟು ಕೊಡಲಿಲ್ಲ. ಎಂದಿನಂತೆ ಪತ್ರಿಕೆಗಳನ್ನು ವಿತರಿಸಿ ಎದೆಗಾರಿಕೆ ಮೆರೆದರು ಎಂದು ಆ ಸಂದರ್ಭದ ಸಂಕಷ್ಟಗಳನ್ನು ವಿವರಿಸಿದರು.
ಪತ್ರಿಕಾ ವಿತರಕರ ಯೋಗಕ್ಷೇಮಕ್ಕಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಜತೆ ಚರ್ಚೆ ನಡೆಸುತ್ತೇನೆ. ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘಕ್ಕೆ 2 ಕೋಟಿ ರೂಪಾಯಿ ಕೊಡಿಸಲು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಕಾರ್ಯರೂಪಕ್ಕೆ ತರಲು ಈಗಾಗಲೇ ಪ್ರಯತ್ನ ಆರಂಭಿಸಲಾಗಿದೆ. ವಿತರಕರ ಸಂಘಕ್ಕೆ ನಿವೇಶನ ಮತ್ತು ವಿತರಕರಿಗೆ ನಿವೇಶನ ಕೊಡಿಸಬೇಕು ಎನ್ನುವ ಬೇಡಿಕೆ ಕುರಿತಾಗಿಯೂ ಸರ್ಕಾರದ ಬಳಿ ಮನವಿ ಮಾಡುತ್ತೇನೆ ಎಂದು ಕೆ.ವಿ.ಪ್ರಭಾಕರ್ ಅವರು ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ಕೆ.ಶಂಬುಲಿಂಗ, ಪ್ರಜಾಪ್ರಗತಿ ಪತ್ರಿಕೆ ಸಂಪಾದಕರಾದ ನಾಗಣ್ಣ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು