ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರಿ ಶಾಲೆಗಳನ್ನು ದತ್ತುಪಡೆದುಕೊಳ್ಳಲು ಮನವಿ : ಬಿಳಿಮಲೆ

ಪ್ರತಿಯೊಬ್ಬ ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಸಬಲೀಕರಣಗೊಳಿಸಿ ಮಾದರಿ ಶಾಲೆಯನ್ನಾಗಿ ಮಾಡುವಂತೆ ರಾಜ್ಯದ 224 ಶಾಸಕರುಗಳಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ ವಿಧಾನ ಸಭಾಧ್ಯಕ್ಷರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಹಾಗೂ ಎಲ್ಲ ಶಾಸಕರುಗಳಿಗೆ ತಾವು ಪ್ರತಿನಿಧಿಸುತ್ತಿರುವ ವಿಧಾನಸಭಾ ಕ್ಷೇತ್ರದಲ್ಲಿ ದುರಸ್ಥಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಸಬಲೀಕರಣಗೊಳಿಸಿ ಮಾದರಿ ಶಾಲೆಯನ್ನಾಗಿ ಮಾಡುವಂತೆ ಪ್ರಾಧಿಕಾರ ಎಲ್ಲರಿಗೂ ಪತ್ರ ಬರೆದಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದಲ್ಲಿ ನಿರಂತರ ಚರ್ಚೆಯ ಮೂಲಕ ಸರ್ಕಾರಿ ಕನ್ನಡ ಶಾಲೆಗಳನ್ನು ಬಲಗೊಳಿಸಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತಾ ಬಂದಿದೆ. ಆದರೂ ಕಳೆದ ಒಂದೂವರೆ ದಶಕದಿಂದ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ದುರ್ಬಲಗೊಳ್ಳುತ್ತಿದ್ದು, ಶಿಕ್ಷಣದ ಖಾಸಗೀಕರಣ ಹಾಗೂ ವ್ಯಾಪಾರೀಕರಣ ನಾಗಲೋಟದಲ್ಲಿ ಸಾಗುತ್ತಿದೆ.

ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಉತ್ತಮ ಕಲಿಕಾ ವಾತಾವರಣವನ್ನು ಸೃಷ್ಟಿಸಿ, ಶಾಲೆಗಳಲ್ಲಿ ಕಲಿಕೆಯನ್ನು ಕೇಂದ್ರ ಬಿಂದುವನ್ನಾಗಿಸಲು ಸಾಧ್ಯವಾಗಬಹುದಾದ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಪುನರ್ ರಚಿಸುವುದು ಇಂದಿನ ತುರ್ತು ಅಗತ್ಯ. ದಿನದಿಂದ ದಿನಕ್ಕೆ ತೀರ ದುರ್ಬಲ ಸ್ಥಿತಿ ಮುಟ್ಟುತ್ತಿರುವ ಸರ್ಕಾರಿ ಶಾಲೆಗಳ ಸಬಲೀಕರಣವಾಗದ ಹೊರತು ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಉದ್ದೇಶ ಸಫಲವಾಗುವುದಿಲ್ಲ. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಕನ್ನಡ ಭಾಷೆ ಹಾಗೂ ಸಂಸ್ಕೃತಿ ಉಳಿಯಬಲ್ಲದು. ಈ ನಿಟ್ಟಿನಲ್ಲಿ ನಾವೆಲ್ಲರೂ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಚಿಸಿ ಕಾರ್ಯನ್ಮೋಖವಾಗಬೇಕಿದೆ. ಆದ್ದರಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯವಾದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ತಾವುಗಳು ಕೈ ಜೋಡಿಸುವಿರಿ ಎಂದು ನಂಬಿದ್ದೇವೆ.

ತಾವು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವುಗಳನ್ನು ಸಬಲೀಕರಣಗೊಳಿಸುವಂತೆ ಕೋರಿದೆ. ಈ ಕುರಿತು ತಮಗೆ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಸಂಪರ್ಕಿಸಬಹುದು ಎಂದು ಪ್ರಾಧಿಕಾರ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ಅಧ್ಯಕ್ಷರ ಕಾರ್ಯಾಲಯ,  ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಧಾನಸೌಧ, ಬೆಂಗಳೂರು.

ದೂ: 080-22256365,080-22033519

Share this :