ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಕಾನೂನು ಬೆಂಬಲ ನೀಡಿ- ಮುಖ್ಯಮಂತ್ರಿಯವರಿಗೆ ಡಾ.ಪುರುಷೋತ್ತಮ ಬಿಳಿಮಲೆ ಒತ್ತಾಯ.

ಬೆಂಗಳೂರು, 19-ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿರುವ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಗೆ ಶೀಘ್ರವಾಗಿ ಕಾನೂನು ಬಲ ದೊರಕಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಡಾ. ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಂದಿನ ಜಾಗತೀಕರಣ ಕಾಲಘಟ್ಟಕ್ಕೆ ಅನುಗುಣವಾದ ಕನ್ನಡ ಪರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು ಕನ್ನಡದ ಉಳಿವಿನ ದೃಷ್ಠಿಯಿಂದ ಇದು ಮಹತ್ವದ ವರದಿಯಾಗಿದೆ ಎಂದಿದ್ದಾರೆ.

ಈ ವರದಿಯಲ್ಲಿ ಖಾಸಗಿ ವಲಯದ ವಿವಿಧ ವರ್ಗಗಳ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ; ರಾಜ್ಯದಲ್ಲಿ ವ್ಯವಹರಿಸುವ ಬ್ಯಾಂಕುಗಳಲ್ಲಿ ನೇಮಕ ಹೊಂದುವ ಅಭ್ಯರ್ಥಿಗಳಿಗೆ ಕನ್ನಡದ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಷರತ್ತು; ಸರ್ಕಾರಿ ವಲಯದ ಉದ್ಯಮಗಳಲ್ಲಿ ಕನ್ನಡಿಗರ ಆದ್ಯತೆಯ ಆಯ್ಕೆ, ಅಪ್ರೆಂಟಿಸ್ ಆಯ್ಕೆಯಲ್ಲಿ, ಕಾರ್ಮಿಕರ, ಗುತ್ತಿಗೆ, ದಿನಗೂಲಿ ನೌಕರರ ನೇಮಕಾತಿಗಳಲ್ಲಿ ಕೇವಲ ಕನ್ನಡಿಗರಿಗೆ ಅವಕಾಶ, ತಂತ್ರಜ್ಞಾನ ಬೆಳವಣಿಗೆಗೆ ಅನುಗುಣವಾಗಿ ಉದ್ಯೋಗ ತರಬೇತಿಗೆ  ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿ ಸ್ಥಾಪನೆ;  ನಾಮಫಲಕಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ, ಕೇಂದ್ರ ಪಠ್ಯಕ್ರಮ ಶಿಕ್ಷಣದಲ್ಲಿ 1 ರಿಂದ10ನೇ ತರಗತಿಯವರೆಗೆ ಕನ್ನಡ ಬೋಧನೆಯನ್ನು ಕಡ್ಡಾಯಗೊಳಿಸುವಿಕೆ ಸೇರಿದಂತೆ ಒಟ್ಟು 14 ಅನುಷ್ಠಾನ ಯೋಗ್ಯ ಅಂಶಗಳಿದ್ದು ಮುಂದಿನ ಅಧಿವೇಶನದಲ್ಲಿ ಪ್ರಾಧಿಕಾರದ ವರದಿಯನ್ನು ಮಂಡಿಸಿ ರಾಜ್ಯ ಸರ್ಕಾರದ ಕನ್ನಡ ಬದ್ಧತೆಯನ್ನು  ಸ್ಥಿರೀಕರಿಸಬೇಕೆಂದು ಡಾ.ಬಿಳಿಮಲೆ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಶಿವರಾಜ ತಂಗಡಗಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಮತ್ತಿತರರು ಇದ್ದರು.

Share this :