ಸ್ಟಾರ್ಟ್‌ಅಪ್‌ಗಳು ಮತ್ತು ಉದ್ದಿಮಗಳಲ್ಲಿ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸ್ಥಾಪನೆ: ಸಚಿವ ಎನ್‌.ಎಸ್‌ ಬೋಸರಾಜು

ಸ್ಟಾರ್ಟ್‌ಅಪ್‌ಗಳು ಮತ್ತು ಉದ್ದಿಮಗಳಲ್ಲಿ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸ್ಥಾಪನೆ: ಸಚಿವ ಎನ್‌.ಎಸ್‌ ಬೋಸರಾಜು

ಸ್ಟಾರ್ಟ್‌ಅಪ್‌ಗಳು ಮತ್ತು ಉದ್ದಿಮಗಳಲ್ಲಿ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಸ್ಥಾಪನೆ: ಸಚಿವ ಎನ್‌.ಎಸ್‌ ಬೋಸರಾಜು
– ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವನೆಗಳ ಅಳವಡಿಕೆಯತ್ತ ಹೆಚ್ಚಿನ ಒತ್ತು
– ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟ್‌ಅಪ್‌ ಮತ್ತು ಉದ್ದಿಮೆಗಳಿಗೆ ನೂತನ ಉತ್ಪನ್ನಗಳ ಸಂಶೋಧನೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣದ ಗುರಿ
ಚಿಕ್ಕಬಳ್ಳಾಪುರ ಆಗಸ್ಟ್‌ 12: ರಾಜ್ಯದಲ್ಲಿ ಸ್ಟಾರ್ಟ್‌ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್‌ ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌.ಎಸ್‌ ಬೋಸರಾಜು ಅವರು ತಿಳಿಸಿದರು.
ಚಿಕ್ಕಬಳ್ಳಾಪುರದ ಸತ್ಯ ಸಾಯಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಇಂಡಿಯನ್‌ ಸ್ಟಾರ್ಟ್‌ಅಪ್‌ ಫೆಸ್ಟಿವಲ್‌ – 2023 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆರ್ಥಿಕ ಚಟುವಟಿಕೆಗಳಿಗೆ ಬಹಳ ಅಗತ್ಯ ಮತ್ತು ಸ್ಟಾರ್ಟ್‌ ಅಪ್‌ ಎಕೋಸಿಸ್ಟಮ್‌ಗೆ ಮೂಲ. ನಮ್ಮ ಸರಕಾರ ಸ್ಟಾರ್ಟ್‌ ಅಪ್‌ಗಳ ಸ್ಥಾಪನೆಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದೆ. ಶಿಕ್ಷಣದಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸುವ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಪೂರಕವಾದ ವಾತಾವರಣ, ಪರಿಸರ ಸುಸ್ಥಿರತೆಯನ್ನು ಕಾಪಾಡುವಂತಹ ರೋಬಸ್ಟ್‌ ಎಕಾಮಿಯನ್ನ ಉತ್ತೇಜಿಸುವ ಗುರಿಗಳನ್ನು ನಾವು ಹೊಂದಿದ್ದೇವೆ. ಬೆಂಗಳೂರು ನಗರ ಸ್ಟಾರ್ಟ್‌ಅಪ್‌ ಗಳ ರಾಜಧಾನಿ ಎಂದೇ ಹೆಸರುವಾಸಿ. ರಾಜ್ಯದಲ್ಲಿರುವ ಹೂಡಿಕೆ ಪೂರಕ ವಾತಾವರಣದ ಕಾರಣದಿಂದಾಗಿ ಹೆಚ್ಚಿನ ಉದ್ದಿಮೆಗಳು ಹಾಗೂ ಸ್ಟಾರ್ಟ್‌ ಅಪ್‌ ಗಳು ಸ್ಥಾಪನೆ ಆಗುತ್ತಿವೆ. ಹೊಸ ಉದ್ದಿಮೆಗಳೂ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸಂಶೋಧನೆ ಬಹಳ ಅವಶ್ಯಕ. ಉತ್ತಮ ಉತ್ಪನ್ನಗಳನ್ನ ಹಾಗೂ ಸೇವೆಗಳನ್ನ ನೀಡುವ ನಿಟ್ಟಿನಲ್ಲಿ ಸಂಸ್ಥೆಗಳಿಗೆ ಸಂಶೋಧನೆ ಕೈಗೊಳ್ಳಲು ಅನುವು ಮಾಡಿಕೊಡುವ ಉದ್ದೇಶವನ್ನು ಕರ್ನಾಟಕ ರಿಸರ್ಚ್‌ ಫೌಂಡೇಶನ್‌ ಹೊಂದಿದೆ. ಅಲ್ಲದೇ, ಖಾಸಗಿ ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ವ್ಯಕ್ತಿಗಳು ಸಂಶೋಧನೆ ಮತ್ತು ಅಭಿವೃದ್ದಿಗೆ ಉತ್ತೇಜನ ನೀಡಲು ಕೆಎಸ್‌ಆರ್‌ಎಫ್‌ ಗೆ ತಮ್ಮ ಕೊಡುಗೆಯನ್ನು ನೀಡಬಹುದಾದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ರಾಜ್ಯದ ಯುವ ಉದ್ಯಮಿಗಳ ಆಶೋತ್ತರಗಳಿಗೆ ಪೋಷಣೆ ನೀಡುವ ಮೂಲಕ ಸುಸ್ಥಿರ ಆರ್ಥಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ದವಾಗಿದೆ. ಕೆಎಸ್‌ಆರ್‌ಎಫ್‌ ಮೂಲಕ ಹಂತಹಂತವಾಗಿ ಸಂಶೋಧನೆ ಮತ್ತು ಅಭಿವೃದ್ದಿಗೆ ಉತ್ತೇಜನ ನೀಡುವ ನಿಟ್ಟಿನಲಿ ರಾಜ್ಯದ ಜಿಡಿಪಿಯ ಶೇಕಡಾ 3 ರಷ್ಟ ಹಣವನ್ನು ಸಂಶೋಧನಾ ಚಟುವಟಿಕೆಗಳಿಗೆ ವಿನಿಯೋಗಿಸುವ ಗುರಿಯನ್ನು ಹೊಂದಿದ್ದೇವೆ. ರಾಜ್ಯದ ಜ್ಞಾನಾರ್ಜನೆಯ ಕೇಂದ್ರಗಳಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಇಂಬು ನೀಡುವ ಮೂಲಕ ಹೊಸ ಸ್ಟಾರ್ಟ್‌ ಅಪ್‌ಗಳಿಗೆ ಪೋಷಣೆ ನೀಡುವುದು ಈ ಮೂಲಕ ಜ್ಞಾನವನ್ನ ಉದ್ದಿಮೆಗಳು, ವಿಶ್ವವಿದ್ಯಾಲಯಗಳೂ ಮತ್ತು ಸಂಶೋಧನಾ ಕೇಂದ್ರಗಳ ಮಧ್ಯೆ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.
ಗಮನ ಸೆಳೆದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ:
ಇಂಡಿಯನ್‌ ಸ್ಟಾರ್ಟ್‌ ಅಪ್‌ ಫೆಸ್ಟಿವಲ್‌ ನಲ್ಲಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಳಿಗೆಯ ಮೂಲಕ ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳು, ಸಂಶೋಧನೆಗಾಗಿ ಇರುವಂತೆ ಸೌಲಭ್ಯಗಳ ಬಗ್ಗೆ ಸ್ಟಾರ್ಟ್‌ಅಪ್ ಗಳಿಗೆ ಮಾಹಿತಿ ನೀಡಲಾಯಿತು. ಮಾನ್ಯ ಸಚಿವರು ಮಳಿಗೆಗೆ ಭೇಟಿ ನೀಡಿದ ಸಾರ್ವಜನಿಕರುಗಳಿಗೆ ಮಾಹಿತಿಯನ್ನು ನೀಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮ ದಲ್ಲಿ ಸತ್ಯ ಸಾಯಿ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸುಧನ ಸಾಯಿ, ಇಂಡಿಯನ್ ಸ್ಟಾರ್ಟ್ ಅಪ್ ಫೆಸ್ಟಿವಲ್ ಮುಖ್ಯಸ್ಥರಾದ ಜೆ ಎ ಚೌಧರಿ ಉಪಸ್ಥಿತರಿದ್ದರು.

ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಸಾಹಿತಿಗಳ ಸಲಹೆ ಪಡೆದ ಸಚಿವ ತಂಗಡಗಿ

ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಸಾಹಿತಿಗಳ ಸಲಹೆ ಪಡೆದ ಸಚಿವ ಶಿವರಾಜ್ ತಂಗಡಗಿ

ಕಂದಾಯ ವಿಭಾಗವಾರು ಸಾಹಿತಿಗಳ ಸಭೆ !

* ಸಭೆಯಲ್ಲಿ ಸುಮಾರು 170ಕ್ಕೂ ಹೆಚ್ಚು ಸಾಹಿತಿ, ರಂಗಕರ್ಮಿ, ‌ಕಲಾವಿದರು ಭಾಗಿ
* ಸಭೆ ಕರೆದ‌ ಸಚಿವರ ನಡೆಗೆ ಸಾಹಿತಿಗಳಿಂದ‌‌ ಮೆಚ್ಚುಗೆ
ಬೆಂಗಳೂರು: ಆ. ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವೀಡಿ ರಾಜ್ಯಾದ್ಯಂತ ಕರ್ನಾಟಕದ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ ರೂಪಿಸುವ ಹಿನ್ನೆಲೆಯಲ್ಲಿ ಸಾಹಿತಿಗಳ ಜೊತೆ ಸಭೆ ನಡೆಸಿದ್ದು, ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸಾಹಿತಿ, ರಂಗಕರ್ಮಿ, ಕಲಾವಿದರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನ.1ಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಸುವ ಬಗ್ಗೆ ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಸಾಹಿತಿಗಳ ಸಭೆ ಆಯೋಜನೆ ಮಾಡಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಸಾಹಿತಿಗಳ ಸಭೆ ನಡೆಸಲಾಗಿದೆ. ಆ.22ಕ್ಕೆ ಬೆಳಗಾವಿ, ಆ.25 ಮೈಸೂರು ಹಾಗೂ 28ರಂದು ಕಲಬುರಗಿಯಲ್ಲಿ ಸಾಹಿತಿ, ರಂಗಕರ್ಮಿ ಹಾಗೂ ಹಿರಿಯ ಕಲಾವಿದರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕದ ಪರಂಪರೆ, ಕನ್ನಡದ ಇತಿಹಾಸ ಹಾಗೂ ಸಂಸ್ಕೃತಿ ಬಿಂಬಿಸುವ ಹಿನ್ನೆಲೆಯಲ್ಲಿ ಕನ್ನಡರಥ ರಾಜ್ಯವಿಡೀ ಸಂಚಾರ ಮಾಡುವುದು, ಶಾಲಾ ಮತ್ತು ಕಾಲೇಜುಗಳಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ, ರಾಜ್ಯದ ಸಿದ್ಧಪುರದಲ್ಲಿರುವ ಏಕೈಕ ಭುವನೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು, ಕನ್ನಡದ ಮಾಹಿತಿಯನ್ನೊಳಗೊಂಡ ಸಂಚಾರಿ ವಾಹನ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ ಸೇರಿದಂತೆ ಹೀಗೆ ಹಲವು ಸಲಹೆಗಳು ಬಂದಿವೆ. ಸಾಹಿತಿಗಳಾದ ಪ್ರೊ.ಎಸ್.ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಮನುಬಳಿಗಾರ್, ಹಂಸಲೇಖ, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ ಸೇರಿದಂತೆ ಪ್ರತಿಯೊಬ್ಬರು ಸಲಹೆ ನೀಡಿದ್ದಾರೆ. ಇನ್ನು ಉಳಿದ ಮೂರು ವಿಭಾಗಗಳಲ್ಲಿ ಸಭೆ ನಡೆಸಿ, ಎಲ್ಲರ ಸಲಹೆ
ಕ್ರೋಢೀಕರಣ ಮಾಡಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ ಇಂತಹ ಒಂದು ಕಾರ್ಯಕ್ರಮ ಆಯೋಜನೆಗೆ ಸಭೆ ಕರೆದ ಸಚಿವ ತಂಗಡಗಿ ಅವರ ನಡೆಗೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಸಾಹಿಗಳಾದ ಚಂದ್ರಶೇಖರ್ ಕಂಬಾರ, ಪ್ರೊ.ಎಸ್.ಸಿದ್ದರಾಮಯ್ಯ, ಬಿ.ಟಿ.ಲಲಿತಾನಾಯಕ್, ಮನುಬಳಿಗಾರ್, ನರಹಳ್ಳಿ ಬಾಲಕೃಷ್ಣ, ಮುಖ್ಯಮಂತ್ರಿ ಚಂದ್ರು, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ, ಚಿತ್ರ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಟಿ.ಎನ್.ಸೀತಾರಾಮ್, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ರಂಗಕರ್ಮಿಗಳಾದ ಕಪ್ಪಣ್ಣ, ನಾಗರಾಜ್ ಮೂರ್ತಿ, ಪ್ರೊ.ಕೆ.ಇ.ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಂಡ್ಯದಲ್ಲಿ ನಡೆಸಲು ಯಾವುದೇ ಅಡೆತಡೆಗಳಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಿ ಸಮ್ಮೇಳನದ ದಿನಾಂಕ ನಿಗದಿ ಮಾಡಲಾಗುವುದು. ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರ ಬಳಿ ಮಾತನಾಡಿದ್ದೇನೆ ಎಂದರು.‌
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್ ನಲ್ಲಿ ಕಡಿಮೆ ಅನುದಾನ ನೀಡಿದ್ದು, ಕಾರ್ಯಿಕ್ರಮ ಆಯೋಜನೆಗೆ ಹಣವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕ್ರಮ ನಡೆಸಲು ಹಣಕಾಸಿನ ಕೊರತೆ ಇಲ್ಲ. ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.