100 ನೂತನ BMTC ಬಸ್ ಗಳ ಲೋಕಾರ್ಪಣೆ ಮಾಡಿದ ಸಿಎಂ
100 ನೂತನ BMTC ಬಸ್ ಗಳ ಲೋಕಾರ್ಪಣೆ ಮಾಡಿದ ಸಿಎಂ
ಮೊದಲ ಹಂತದ 100 ನೂತನ BMTC ಬಸ್ ಗಳ ಲೋಕಾರ್ಪಣೆ
ಒಟ್ಟು 840 ನೂತನಬಸ್ ಗಳು BMTC ಸೇರಲಿವೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ಸೆ 12:
ಇಂದು ಬೆಂಗಳೂರು ನಗರದ ಜನತೆಯ ಅನುಕೂಲಕ್ಕೆ ಮೊದಲ ಹಂತದ 100 ನೂತನ BMTC ಬಸ್ ಗಳನ್ನು ಲೋಕಾರ್ಪಣೆ ಮಾಡಿದ್ದೇವೆ. ಒಟ್ಟು 840 ನೂತನಬಸ್ ಗಳು BMTC ಸೇರಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಬಳಿ ಸಾರಿಗೆ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 100 ನೂತನ BMTC ಬಸ್ ಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಬೆಂಗಳೂರು ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ಇಲ್ಲಿನ ಹೆಚ್ಚುತ್ತಿರುವ ಶ್ರಮಿಕ ವರ್ಗಗಳಿಗೆ ಅನುಕೂಲ ಮಾಡುವ ಉದ್ದೇಶದಿಂದ ನೂತನಬಸ್ ಗಳನ್ನು BMTC ಗೆ ಸೇರ್ಪಡೆಗೊಳಿಸುವ ಜೊತೆಗೆ ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದಲ್ಲದೆ ನೂತನವಾಗಿ ಇನ್ನಷ್ಟು ಕ್ಯಾಂಟೀನ್ ಗಳನ್ನು ಆರಂಭಿಸುತ್ತಿದ್ದೇವೆ.
ಇದೇ ಶ್ರಮಿಕ ವರ್ಗದ ಅನುಕೂಲಕ್ಕಾಗಿ ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಯಶಸ್ವಿಯಾಗಿ ಮುಂದುವರೆಸುತ್ತಿದ್ದೇವೆ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ ಎಂದರು.
ಬಡವರ ಮತ್ತು ಮಧ್ಯಮ ವರ್ಗದ ವಿರೋಧಿಯಾಗಿರುವ ಬಿಜೆಪಿ ಈ ಗ್ಯಾರಂಟಿ ಯೋಜನೆಗಳ ವಿರುದ್ಧ ಅಪಪ್ರಚಾರ ಮಾಡುತ್ತಿವೆ. ಈ ಅಪಪ್ರಚಾರಕ್ಕೆ ಕಿವಿಗೊಡಬೇಡಿ. ಈ ಗ್ಯಾರಂಟಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿ ಆಗಲಿವೆ ಎಂದರು.
ಗೃಹಲಕ್ಷ್ಮಿ ಹಣದಿಂದ ಸಾವಿರಾರು ಕುಟುಂಬಗಳು ನಾನಾ ರೀತಿಯ ಅನುಕೂಲಗಳನ್ನು ಒದಗಿಸಿಕೊಳ್ಳುತ್ತಿರುವ ಬಗ್ಗೆ ಪ್ರತಿದಿನ ಮಾಧ್ಯಮಗಳು ತೋರಿಸುತ್ತಿವೆ ಎಂದರು.
ನಾವು ಬಡವರಿಗೆ ಅಕ್ಕಿ ಕೊಡುವ ಯೋಜನೆಗೆ ಮುಂದಾದರೆ ಕೇಂದ್ರ ಸರ್ಕಾರ ನಮಗೆ ಅಕ್ಕಿ ಕೊಡದೆ ತೊಂದರೆ ನೀಡಿತು. ಆದರೆ ನಾವು ಅಕ್ಕಿಯ ಬದಲಿಗೆ, ಅಕ್ಕಿಯ ಹಣವನ್ನು ಜನರಿಗೆ ನೀಡಿ ನುಡಿದಂತೆ ನಡೆದಿದ್ದೇವೆ ಎಂದರು.
ರಾಜ್ಯದ ಪ್ರತೀ ಕುಟುಂಬಗಳಿಗೆ ಪ್ರತೀ ತಿಂಗಳಿಗೆ 4-5 ಸಾವಿರ ರೂಪಾಯಿ ಅನುಕೂಲ ಆಗುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ನಾಲ್ಕು ಬಾರಿ ಹೊಸ ಬಸ್ ಗಳನ್ನು ಖರೀದಿಸಿ ಸವಲತ್ತು ಒದಗಿಸಿದ್ದೇವೆ ಎಂದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಜಮೀರ್ ಅಹಮದ್, ಇಂಧನ ಸಚಿನ ಕೆ.ಜೆ.ಜಾರ್ಜ್, ಕೆಕೆಆರ್ಡಿಬಿ ಅಧ್ಯಕ್ಷರಾದ ಅಜಯ್ ಸಿಂಗ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹಮದ್ ಅವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನ
ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನ
ಬೆಂಗಳೂರು,- ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2017ನೇ ಸಾಲಿನಿಂದ 2023ನೇ ಸಾಲಿನವರೆಗೆ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರು / ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.
ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಾಗೂ ಪರಿಸರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಪತ್ರಕರ್ತರನ್ನು ಪ್ರೋತ್ಸಾಹಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಅಭಿವೃದ್ಧಿ ಪತ್ರಿಕೋದ್ಯಮ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ನೀಡಲು 2001ರಲ್ಲಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿತು.
ಅದರಂತೆ 2001ರಿಂದ 2016ರ ವರೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಅರ್ಹ ಪತ್ರಕರ್ತರನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.
2017ನೇ ಸಾಲಿನಿಂದ 2023ನೇ ಸಾಲಿನವರೆಗೆ ಅರ್ಹ ಪತ್ರಕರ್ತರಿಗೆ ಈ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ.
ಪರಿಸರ ಹಾಗೂ ಅಭಿವೃದ್ಧಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿರುವ ಹಾಗೂ ಪತ್ರಿಕೋದ್ಯಮದಲ್ಲಿ ಕನಿಷ್ಠ 10 ವರ್ಷಗಳ ಸೇವಾ ಅನುಭವ ಹೊಂದಿರುವ ಅರ್ಹ ಪತ್ರಕರ್ತರನ್ನು ಸಾರ್ವಜನಿಕರು, ಸಂಘ ಸಂಸ್ಥೆಗಳು ನಾಮನಿರ್ದೇಶನ ಮಾಡಬಹುದು ಅಥವಾ ವೈಯಕ್ತಿಕವಾಗಿ ಸ್ವಯಂ ಅರ್ಜಿ ಸಲ್ಲಿಸಬಹುದು.
2017 ರಿಂದ 2023 ರ ಅವಧಿಯ ಎರಡೂ ವಿಭಾಗಗಳ ಪ್ರಶಸ್ತಿಗಳಿಗೆ ತಲಾ 7 ಅರ್ಹ ಪತ್ರಕರ್ತರನ್ನು ಆಯ್ಕೆ ಮಾಡಲಾಗುವುದು. ಈ ಪ್ರಶಸ್ತಿಯ ಮೊತ್ತ ಒಂದು ಲಕ್ಷ ರೂ. ನಗದು ಪುರಸ್ಕಾರ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಯನ್ನು ಹೊಂದಿರುತ್ತದೆ.
ಅರ್ಜಿಗಳು / ನಾಮನಿರ್ದೇಶನಗಳನ್ನು ಮಾನ್ಯ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. 17, ವಾರ್ತಾಸೌಧ, ಭಗವಾನ್ ಮಹಾವೀರ ರಸ್ತೆ, (ಇನ್‍ಫೆಂಟ್ರಿ ರಸ್ತೆ), ಬೆಂಗಳೂರು 560001 ಇಲ್ಲಿಗೆ ಅಥವಾ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ ವಿಳಾಸ tsraward@gmail.com ಗೆ
ದಿನಾಂಕ:30-09-2024ರ ಸಂಜೆ 5.00 ಗಂಟೆಯ ಒಳಗಾಗಿ ಸಲ್ಲಿಸಬಹುದು.
ಅರಣ್ಯ ಹುತಾತ್ಮರು ಮನುಕುಲದ, ಜೀವ ಸಂಕುಲದ ಸಂರಕ್ಷಕರು: ಸಿ.ಎಂ.ಸಿದ್ದರಾಮಯ್ಯ
ಅರಣ್ಯ ಹುತಾತ್ಮರಿಗೆ ನಮನ ಸಲ್ಲಿಸಿದ ಸಿಎಂ
ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ
ಅರಣ್ಯ ಹುತಾತ್ಮರು ಮನುಕುಲದ, ಜೀವ ಸಂಕುಲದ ಸಂರಕ್ಷಕರು: ಸಿ.ಎಂ.ಸಿದ್ದರಾಮಯ್ಯ
ಬೆಂಗಳೂರು ಸೆ 11:
ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಎಲ್ಲರಿಗೂ ಪ್ರಕೃತಿ ರಕ್ಷಣೆಯ ಹೊಣೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಭವನದಲ್ಲಿನ ಹುತತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರಾಜ್ಯದಲ್ಲಿ ಅನುಪಾತಕ್ಕೆ ತಕ್ಕಷ್ಟು ಅರಣ್ಯವಿಲ್ಲ. ಆದ್ದರಿಂದ ಅರಣ್ಯೀಕರಣ ಹೆಚ್ಚಾಗಬೇಕು. ಕಾಡು ಮತ್ತು ವನ್ಯ ಪ್ರಾಣಿ ಸಂಪತ್ತಿನ ರಕ್ಷಣೆ ಕೇವಲ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಕರ್ತವ್ಯ ಎಂದರೆ ನಾವು ನಮ್ಮ ಹೊಣೆಗಾರಿಕೆಯಿಂದ ತಪ್ಪಿಸಿಕೊಂಡಂತಾಗುತ್ತದೆ ಎಂದರು.
ರಾಜ್ಯದಲ್ಲಿ ಆನೆ, ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ. ಆದರೆ ಪ್ರಾಣಿ-ಮನುಷ್ಯ ಸಂಘರ್ಷ ತಪ್ಪಿಸಿ ಮಾನವ, ಪ್ರಾಣಿ ಸಂಪತ್ತನ್ನು ಕಾಪಾಡುವ ದಿಕ್ಕಿನಲ್ಲಿ ಇನ್ನಷ್ಟು ಪರಿಣಾಮಕಾರಿ ಕೆಲಸಗಳು ಆಗಬೇಕಿದೆ. ಇದಕ್ಕಾಗಿ ಲಭ್ಯ ಇರುವ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅರಣ್ಯ ಹುತಾತ್ಮರ ಕುಟುಂಬಕ್ಕೆ ನೀಡುವ ಪರಿಹಾರ ಮೊತ್ತವನ್ನು 30 ರಿಂದ 50 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಅರಣ್ಯ ಹುತಾತ್ಮರು ಮನುಕುಲದ ಸಂರಕ್ಷಕರು. ಇವರ ತ್ಯಾಗ ಅರಣ್ಯ ಸಂರಕ್ಷಣೆಗೆ ಸ್ಫೂರ್ಥಿಯಾಗಲಿ ಎಂದು ಹಾರೈಸಿದರು.
ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಹುತಾತ್ಮರ ಕುಟುಂಬದ ಸದಸ್ಯರು ಮತ್ತು ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅರಣ್ಯ ಹುತಾತ್ಮರಿಗೆ ಸಿಎಂ ನಮನ
ಅರಣ್ಯ ಹುತಾತ್ಮರಿಗೆ ಸಿಎಂ ನಮನ
ಬೆಂಗಳೂರು, ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಣ್ಯ ಭವನದಲ್ಲಿನ ಹುತಾತ್ಮರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಅರಣ್ಯ ಮತ್ತು ಜೀವಶಾಸ್ತ್ರ ಇಲಾಖೆಯ ಸಚಿವ ಈಶ್ವರ್ ಖಂಡ್ರೆ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಹುತಾತ್ಮರ ಕುಟುಂಬದ ಸದಸ್ಯರು ಮತ್ತು ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.