by gadi@dmin | Oct 29, 2021 | ಸಿನಿಮಾ
ನಾನು ಬೆಂಗಳೂರಿಗೆ ಬಂದ ಹೊಸರದಲ್ಲಿ ಸುಮಾರು ಸಲ ಪುನೀತ್ ಅವರನ್ನು ಶೂಟಿಂಗ್ ಟೈಮಲ್ಲಿ ಭೇಟಿಯಾಗಿದ್ದೆ, ಅವರ ನಟನೆ ನನ್ನ ಮನ ಕಲುಕಿತ್ತು ನಾನು ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಆಗಾಗ ಭೇಟಿ ಮಾಡುವ ಸಂದರ್ಭ ಬರುತ್ತಿತ್ತು, ಅವರ ಲವಲವಿಕೆ ಮತ್ತು ಮುಗುಳುನಗೆ ಯಾವತ್ತೂ ಎಲ್ಲರನ್ನೂ ಆಕರ್ಷೀಣಯವಾಗಿ ಮಾಡುತ್ತಿತ್ತು.
ಆಮೇಲೆ ನಮ್ಮ ಪ್ರೆಸ್ ಕಾರ್ಯಕ್ರಮದಲ್ಲಿ ನಾವು ಅವರೊಂದಿಗೆ ಸುಮಾರು 4 ಗಂಟೆ ಒಂದೇ ವೇದಿಕೆಯಲ್ಲಿ ಇದ್ದಿದ್ದು ಇತಿಹಾಸ ರೀ.
ನನಗೆ ಡಾ.ರಾಜ್ ಕುಮಾರ್ ಅವರನ್ನು ಆರಾಧಿಸುತ್ತಿದ್ದೇ, ತದನಂತರ ಇವರು ತುಂಬಾ ನಟನಾ ಕೌಶಲ್ಯರಾಗಿದ್ದರಿಂದ ನಾನು ಅವರನ್ನಾ ಮೆಚ್ಚಿಕೊಂಡಿದ್ದೇ,
ಸಿನೇಮಾ ಕ್ಷೇತ್ರದಲ್ಲಿ ನಾವು ಚಿಕ್ಕವರಿದ್ದಾಗ ಶಂಕರ್ ನಾಗ್ ತೀರಿಕೊಂಡಿದ್ದು ಚಿಕ್ಕ ವಯಸ್ಸಲೇ
ಅವರಂತೆಯೇ ಇವರು ಕೂಡ ಚಿಕ್ಕ ವಯಸ್ಸಲ್ಲೇ ನಮ್ಮೆನ್ನೆಲ್ಲ ಅಗಲಿದ್ದು ದುರಂತವೇ ಸರಿ,
ವಿಧಿಯಾಟದ ಮುಂದೆ ನಾವೆಲ್ಲ
ಸಮಯದ ಗೊಂಬೆಗಳು,
ಹೋಗಿ ಬನ್ನಿ ಪುನೀತ್ ಸರ್…..
– K. S Nagaraj
See more pics
by gadi@dmin | Oct 29, 2021 | ಕನ್ನಡ ನಾಡು ನುಡಿ
ಬೆಂಗಳೂರು ಅಕ್ಟೋಬರ್ 24 : ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರಂಭಗೊಂಡ ಕನ್ನಡಕ್ಕಾಗಿ ನಾವು ಅಭಿಯಾನ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ವಿಶೇಷ “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮ ನಡೆಯಿತು.
ಕನ್ನಡ ಹಾಡು, ಕನ್ನಡ ಧ್ವಜ, ಕನ್ನಡ ಅಕ್ಷರ ಹೀಗೆ ಕನ್ನಡಮಯವಾಗಿದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕನ್ನಡ ರಾಜ್ಯೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ, ಕನ್ನಡದಲ್ಲಿ ಮಾತನಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ರಾಜ್ಯಪಾಲರು, “ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲರೂ ಭಾಗವಹಿಸೋಣ… ಕನ್ನಡ ಬಳಸೋಣ, ಬೆಳೆಸೋಣ, ಉಳಿಸೋಣ ಹಾಗೂ ಗೌರವಿಸೋಣ… “ಮಾತಾಡ್ ಮಾತಾಡ್ ಕನ್ನಡ” ಎಂದು ಕನ್ನಡ ಸಹೃದಯರಲ್ಲಿ ಮನವಿ ಮಾಡಿದರು.
ಸಂಜೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ವಿದ್ಯುಕ್ತವಾಗಿ ಆರಂಭಗೊಂಡಿತು. ಬಳಿಕ ಭರತ ನಾಟ್ಯ, ಯಕ್ಷಗಾನ ಪ್ರಸಂಗ, ಸಮೂಹ ನೃತ್ಯ ಕಾರ್ಯಕ್ರಮ ನಡೆದವು. ಕುವೆಂಪು ಅವರ ಬಾಗಿಲೊಳಗೆ ಕೈಮುಗಿದು ಒಳಗೆ ಬಾ ಯಾತ್ರಿಕನೆ ನೃತ್ಯ ಪ್ರದರ್ಶನ ಜನಮನ ಸೂರೆಗೊಂಡಿತು.
ದೀಪವು ನಿನ್ನದೇ, ಚೆಲ್ಲಿದರು ಮಲ್ಲಿಗೆಯ, ಅಕ್ಕು ಶ್ಯಾಮ ಅವಳೇ ರಾಧೆ ನಲಿಯುತ್ತಿರುವಳು, ಬಾರಿಸು ಕನ್ನಡ ಡಿಂಡಿಮವ ಹಾಡುಗಳ ನೃತ್ಯ ಪ್ರದರ್ಶನ ಬಹಳ ಸುಂದರವಾಗಿ ಮೂಡಿ ಬಂತು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
See more pics
by gadi@dmin | Oct 27, 2021 | Scrolling News ( Right to Left ), ತಂತ್ರಜ್ನಾನ
ಬೆಂಗಳೂರು: ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು (ಡಿ.ಸಿ.ಟಿ.ಇ.) ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್ ಜತೆ ಬುಧವಾರ ಸಹಿ ಹಾಕಿತು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಡಿ.ಸಿ.ಟಿ.ಇ. ಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿಧಾನಸೌಧದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಸರ್ಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ (ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, “ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲಿಗೆ, ಇನ್ಫೋಸಿಸ್ ಕಂಪನಿಯು ರೂ 35 ಕೋಟಿ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸ್ ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ. ಎರಡನೆಯದಾಗಿ, ಕಂಪನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಮೂರನೆಯದಾಗಿ, ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯವನ್ನು ಸದೃಢಗೊಳಿಸಲಿದೆ” ಎಂದು ವಿವರಿಸಿದರು.
ಈ ಒಪ್ಪಂದವು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಆಶಯದಂತೆ ಸಂಯೋಜಿತ ಕಲಿಕೆಗೆ (ಬ್ಲೆಂಡೆಂಡ್ ಲರ್ನಿಂಗ್) ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
“ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ವೇದಿಕೆಯು ವರ್ಚುಯಲ್ ಪ್ರಯೋಗಾಲಯಗಳು, ಗೇಮಿಫಿಕೇಷನ್ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಇದು ಉದ್ಯಮ ಪರಿಣತರೊಂದಿಗೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಉದ್ಯಮಕ್ಕೆ ಬೇಕಾದ ಕೌಶಲಗಳು ಹಾಗೂ ವಿದ್ಯಾರ್ಥಿಗಳು ಕೋರ್ಸ್ ಗಳಲ್ಲಿ ಕಲಿಯುವ ಕೌಶಲಗಳ ನಡುವಿನ ಕಂದಕವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿರುವ 1.6 ಲಕ್ಷ ಕಲಿಕಾ ಸಂಪನ್ಮೂಲಗಳು ಆಡಿಯೊ, ವಿಡಿಯೊ, ಆನಿಮೇಷನ್ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆಗೆ ಸಹಕಾರಿಯಾಗಿವೆ” ಎಂದು ಅವರು ಹೇಳಿದರು.
ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ ಇನ್ಫೋಸಿಸ್ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರುಗಳ ಅಗತ್ಯವಿತ್ತು. ಈಗ ಇನ್ಫೊಸಿಸ್ 15,000 ಕಂಪ್ಯೂಟರುಗಳನ್ನು ನೀಡುವ ಮೂಲಕ 27,000 ಕಂಪ್ಯೂಟರುಗಳು ಲಭ್ಯವಾದಂತೆ ಆಗಿವೆ. ಇದರಿಂದಾಗಿ ಸರ್ಕಾರಿ ಡಿಪ್ಲೊಮಾ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಶೇ 90ರಷ್ಟು ಕಂಪ್ಯೂಟರ್ ಅಗತ್ಯ ಪೂರೈಕೆಯಾದಂತೆ ಆಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈಗ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಗಾಗಿ 35 ಕೋಟಿ ರೂಪಾಯಿ ವೆಚ್ಚ ಮಾಡಿರುವ ಇನ್ಫೊಸಿಸ್, ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಇನ್ನೂ 750 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದೂ ಹೇಳಿದರು.
ಈ ಒಡಂಬಡಿಕೆ ಏರ್ಪಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಪ್ರೋಗ್ರಾಮ್ ಮ್ಯಾನೇಜರ್ ಕಿರಣ್ ಎನ್.ಜಿ. ಅವರು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಇದು ಉತ್ತೇಜನ ನೀಡುತ್ತದೆ ಎಂದರು. ಜೊತೆಗೆ, ಯುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
“ಇನ್ಫೊಸಿಸ್ ಕಂಪನಿಯು ತನ್ನ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ, ಜಾಗತಿಕ ಗುಣಮಟ್ಟದ ನಿರಂತರ ಕಲಿಕೆ ಹಾಗೂ ಪ್ರತಿಭಾ ವೃದ್ಧಿಗೆ ಮೊದಲಿನಿಂದಲೂ ಒತ್ತು ಕೊಡುತ್ತಾ ಬಂದಿದೆ. ಈಗ ಒಡಂಬಡಿಕೆಯ ಮೂಲಕ ಅದನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅವಕಾಶವಾಗಿದೆ” ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಪ್ರವೀಣ್ ರಾವ್ ವಿವರಿಸಿದರು.
ಈ ಒಡಂಬಡಿಕೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ರೋಟರಿ ಸಂಸ್ಥೆಯು, ಕಂಪ್ಯೂಟರುಗಳನ್ನು ಕಾಲೇಜುಗಳಿಗೆ ತಲುಪಿಸಿ ಅವನ್ನು ಅಳವಡಿಸುವ ಕಾರ್ಯವನ್ನು ಮಾಡಲಿದೆ. ಜೊತೆಗೆ, ಕಂಪ್ಯೂಟರುಗಳಿಗೆ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣೆ ವ್ಯವಸ್ಥೆ) ಹಾಗೂ ಅಗತ್ಯ ಸಾಫ್ಟ್ ವೇರ್ ಗಳನ್ನು ಒದಗಿಸಿಕೊಡಲಿದೆ.
ಇದೇ ವೇಳೆ, ದೇಣಿಗೆ ಕೊಡಲಾದ 300 ಕಂಪ್ಯೂಟರ್ ಗಳನ್ನು ನಗರದ ಕೆ.ಆರ್.ಸರ್ಕಲ್ ನಲ್ಲಿರುವ ಎಸ್.ಜೆ.ಪಾಲಿಟೆಕ್ನಿಕ್ ಗೆ ಕೊಂಡೊಯ್ಯಲು ಸಿದ್ಧವಾಗಿದ್ದ ವಾಹನಕ್ಕೆ ಸಚಿವರು ಹಸಿರು ನಿಶಾನೆ ತೋರಿದರು.
ರೋಟರಿ ಇಂಡಿಯಾ ಲಿಟರರಿ ಮಿಷನ್ ನ ರಾಜೇಂದ್ರ ರಾಯ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಡಿಸಿಟಿಇ ಆಯುಕ್ತ ಪ್ರದೀಪ್ ಪಿ ಅವರು ಮಾತನಾಡಿದರು. ಡಿಸಿಟಿಯ ನಿರ್ದೇಶಕ ಮಂಜುನಾಥ್ ಆರ್. ಮತ್ತು ಜಂಟಿ ನಿರ್ದೇಶಕ ಶಿವಶಂಕರ್ ನಾಯ್ಕ್ ಎಲ್. ಮತ್ತಿತರರು ಪಾಲ್ಗೊಂಡಿದ್ದರು.
by gadi@dmin | Oct 27, 2021 | ಕನ್ನಡ ನಾಡು ನುಡಿ
ಅಕ್ಟೋಬರ್ ೨೬-೨೦೨೧ : ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಅಕ್ಟೋಬರ್ ೨೮ರಂದು ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲ ೩೧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚಿಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಸರ್ಕಾರದ ಸಚಿವರುಗಳ ಸಹಕಾರದೊಂದಿಗೆ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಕ್ಟೋಬರ್ ೨೮ರಂದು ನಡೆಯಲಿರುವ ಈ ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ ಸಿಬ್ಬಂದಿಗಳು ಮಾಡುವ ಸರ್ಕಾರಿ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಜನಮಾನಸದ ಅಭಿಮಾನದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಸ್ವಯಂ ಸ್ಫೂರ್ತಿಯಿಂದ ಜನತೆ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಲು ವೇದಿಕೆಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿ ಜಿಲ್ಲಾಡಳಿತದ ಮೇಲಿದೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಡುವ ತಂಡಗಳ ಮಾಹಿತಿ, ಅವರಿಗೆ ಬೇಕಾದ ಕನಿಷ್ಠ ಅಗತ್ಯಗಳು ಮತ್ತು ಈ ಕಾರ್ಯಕ್ರಮದ ಪ್ರಚಾರ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’- ಈ ಮೂರು ಗೀತೆಗಳು ಅಕ್ಟೋಬರ್ ೨೮ ರಂದು ಬೆಳಿಗ್ಗೆ ೧೧.00ಗಂಟೆಗೆ ಏಕ ಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ. ಇದಕ್ಕೆ ಬೇರ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಹಾಗೂ ವಿಶ್ವಾದ್ಯಂತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ತಮಗೆ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಸೇರಿ ಹಾಡುವ ತಾಂತ್ರಿಕ ಸಂಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದೆ. ಇದರ ಮೂಲಕ ಒಂದೇ ಬಾರಿ ವಿಶ್ವದಾದ್ಯಂತ ಕನ್ನಡ ಗೀತೆಗಳು ಲಕ್ಷ ಲಕ್ಷ ಕಂಠಗಳಲ್ಲಿ ಮೊಳಗಲಿದೆ. ಇದು ಈ ಹಿಂದೆ ಎಂದೂ ನಡೆದಿರದ ಬೃಹತ್ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ.
ಇಡೀ ನಾಡನ್ನು ಈ ೬೬ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಮಯವನ್ನಾಗಿ ಮಾಡಲು, ಕನ್ನಡದ ಭಾವಲಹರಿ ಜನಮನದ ನರನಾಡಿಗಳಲ್ಲಿ ಸಂಚರಿಸುವ ರೋಮಾಂಚನವನ್ನು ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಅಭಿಯಾನ ರೂಪುಗೊಂಡಿದೆ. ನಾಡಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶಾಲಾ- ಕಾಲೇಜುಗಳ ಆವರಣದಲ್ಲಿ, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ಆವರಣಗಳಲ್ಲಿ ಹಾಗೂ ಮೈಸೂರಿನ ಅರಮನೆಯ ಮುಂಭಾಗ ಮತ್ತು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ ಹಾಗೂ ಮಹಾನವಮಿ ದಿಬ್ಬವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಪ್ರಸಿದ್ಧ ಸ್ಮಾರಕಗಳ ಮುಂದೆ ಸಾವಿರಾರು ಜನರು ಒಟ್ಟಿಗೆ ನಿಂತು ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಈ ಕಾರ್ಯಕ್ರಮದ ಯಶಸ್ವಿ ಸಂಯೋಜನೆಗಾಗಿ ಪ್ರತೀ ಜಿಲ್ಲೆಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ಸ್ಥಳಗಳೇ ಅಲ್ಲದೆ ರಾಜ್ಯದ ಎಲ್ಲ ದೊಡ್ಡ ಮಾರುಕಟ್ಟೆಗಳು, ಆಟೋರಿಕ್ಷಾ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಈ ಗೀತ ಗಾಯನ ನಡೆಯಲಿದೆ. ದೊಡ್ಡ ಸಂಖ್ಯೆಯ ಗೀತಗಾಯನ ಸ್ಥಳಗಳಲ್ಲಿ ಈ ಗೀತೆಯ ಧಾಟಿಯನ್ನು ಕಲಿಸಲು ಪರಿಣತ ಸಂಗೀತ ಗಾಯಕರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ವಿಮಾನ ನಿಲ್ದಾಣಗಳಲ್ಲೂ ಮೊಳಗಲಿದೆ ಕನ್ನಡದ ಗಾಯನ
ಈ ಅಭಿಯಾನದ ಅಂಗವಾಗಿ ವಿಶೇಷವಾಗಿ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲೂ ಸಹ ಈ ಕನ್ನಡದ ಗೀತಗಾಯನ ಅನುರುಣಿಸಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿಯೂ ಸಹ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಲಿದ್ದಾರೆ.
ಮೆಟ್ರೋದಲ್ಲಿ ಮೊಳಗಲಿದೆ ಕನ್ನಡ ಕಂಠ
ಬೆಂಗಳೂರು ಮೆಟ್ರೋದಲ್ಲಿ ಕನ್ನಡಮಯ ವಾತಾವರಣ ಉಂಟುಮಾಡಲು ಅಕ್ಟೋಬರ್ ೨೮ರಂದು ಬೆಳಿಗ್ಗೆ ೧೧.೦೦ಗಂಟೆಗೆ ಬೆಂಗಳೂರು ಮೆಟ್ರೋದ ಎಲ್ಲಾ ರೈಲುಗಳಲ್ಲೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳನ್ನು ಹಾಡುತ್ತವೆ. ಮೆಟ್ರೋದ ಎಲ್ಲಾ ೫೧ ನಿಲ್ದಾಣಗಳಲ್ಲಿ ಈ ಕನ್ನಡ ಗೀತೆಗಳ ಗಾಯನ ಧ್ವನಿವರ್ಧಕಗಳ ಮೂಲಕ ಪ್ರಸಾರವಾಗಲಿದೆ. ಅದರ ಜೊತೆಗೆ ಅತ್ಯಂತ ಜನ ನಿಬಿಡವಾದ 5 ಮೆಟ್ರೋ ನಿಲ್ದಾಣಗಳಲ್ಲಿ ಸಮೂಹ ಗೀತಗಾಯನ ನಡೆಯಲಿದೆ. ಅದರ ಜೊತೆಗೆ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಅದರ ಮೂಲಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಕನ್ನಡಮಯ ಬೆಂಗಳೂರು
ಬೆಂಗಳೂರಿನ ಎಲ್ಲಾ ೨೮ ವಿಧಾನಸಭಾ ಕ್ಷೇತ್ರಗಳು ಹಾಗೂ ೧೯೮ ವಾರ್ಡ್ಗಳಲ್ಲಿ ಸ್ಥಳೀಯ ಶಾಸಕರು ಮತ್ತು ನಗರ ಸಭಾ ಸದಸ್ಯರ ಸಹಯೋಗದೊಂದಿಗೆ ಈ ಗೀತಗಾಯನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಮುಂಭಾಗದ ಆವರಣಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನದ ಉದ್ಯೋಗಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಲ್ಲಾ ಆಸಕ್ತ ಸಾರ್ವಜನಿಕರು ಒಂದಾಗಿ ಸೇರಿ ಕನ್ನಡದ ಈ ಮೂರು ಗೀತೆಗಳನ್ನು ಹಾಡುವ ಮೂಲಕ ತಮ್ಮ ಕನ್ನಡ ಪ್ರೇಮ ಮೆರೆಯಲಿದ್ದಾರೆ. ಬೆಂಗಳೂರಿನ ಎಲ್ಲಾ ಕೈಗಾರಿಕಾ ಪ್ರದೇಶಗಳು, ಬಸ್ಸು ಮತ್ತು ಆಟೋ ನಿಲ್ದಾಣಗಳು ಈ ಕನ್ನಡ ಗೀತಗಾಯನಕ್ಕೆ ಕಿವಿಯಾಗಲಿವೆ.
ಬಹಳ ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಸ್ವತಃ ತಾವೇ ಸಾವಿರಾರು ಸಂಖ್ಯೆಯ ಅಧಿಕಾರಿ / ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸಚಿವ ಸುನಿಲ್ ಕುಮಾರ್ ಘೋಷಿಸಿದರು. ವಿಕಾಸಸೌಧ, ವಿಧಾನಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿಯೂ ಈ ಗೀತಗಾಯನ ಆಯೋಜಿಸಿದ್ದು, ಎಲ್ಲಾ ಐಎಎಸ್, ಕೆಎಎಸ್ ಅಧಿಕಾರಿಗಳು ಸಚಿವಾಲಯದ ಅಧಿಕಾರಿ / ಸಿಬ್ಬಂದಿ, ವಿಧಾನಮಂಡಲದ ಅಧಿಕಾರಿ/ಸಿಬ್ಬಂದಿಗಳು ಈ ಗೀತಗಾಯನದಲ್ಲಿ ಭಾಗವಹಿಸಿ ವಿಧಾನಸೌಧದ ಆವರಣದಲ್ಲಿ ಕನ್ನಡ ಕಂಠದ ಅನುರುಣನಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯ ಮುಂಭಾಗದಲ್ಲಿಯೂ ಸಹ ಈ ಗೀತಗಾಯನದ ಸಂಭ್ರಮ ಅನಾವರಣಗೊಳ್ಳಲಿದೆ ಎಂದು ಎಂದು ಅವರು ತಿಳಿಸಿದರು.
ವಿವಿಧ ಜಿಲ್ಲೆಗಳಲ್ಲಿ ಗೀತಗಾಯನದ ಪ್ರಮುಖ ತಾಣಗಳು
ಜೋಗದ ಮುಂದೆ ಜೋಗದ ಸಿರಿ ಬೆಳಕಿನಲ್ಲಿ –
• ಈ ಗೀತಗಾಯನದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗದ ಜಲಪಾತದ ಮುಂದೆ ಸಾವಿರ ಜನರ ಕಂಠದಲ್ಲಿ ಈ ಕನ್ನಡ ಗೀತೆಗಳನ್ನು ಹಾಡಲು ಯೋಜಿಸಲಾಗಿದೆ. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಶೈಲದಲ್ಲಿ ಈ ಗೀತೆಗಳು ಮೊಳಗಲಿವೆ.
• ಚಿತ್ರದುರ್ಗದ ಸುಪ್ರಸಿದ್ಧ ಕೋಟೆಯ ಮುಂಭಾಗದಲ್ಲಿ
• ಮಂಗಳೂರು ಸಮುದ್ರತೀರ,
• ಉಡುಪಿಯ ಶ್ರೀ ಕೃಷ್ಣದೇಗುಲದ ಮುಂಭಾಗದಲ್ಲಿ ಕೂಡ ಈ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
• ಮೂಡಬಿದರೆಯ ಸಾವಿರ ಕಂಬದ ಬಸದಿ ಹಾಗೂ ಮಂಗಳೂರು ಬಂದರಿನ ಮೀನುಗಾರರ ಮಧ್ಯೆ ಈ ಗೀತೆಗಾಯನ ನಡೆಯಲಿದೆ.
• ಮೈಸೂರಿನ ಅರಮನೆ ಮುಂಭಾಗ ಹಾಗೂ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಾಯನ ತಂಡಗಳು ಈ ಗೀತೆಗಳನ್ನು ಹಾಡಲಿದೆ.
• ಬೆಳಗಾವಿಯ ಸುವರ್ಣಸೌಧದ ಮುಂದೆ ಹಾಗೂ ಬೆಳಗಾವಿ ಗಡಿ ಪ್ರದೇಶಗಳಲ್ಲಿ,
• ಹಂಪಿಯ ವಿರೂಪಾಕ್ಷ ದೇಗುಲದ ಮುಂದೆ, ಮಹಾನವಮಿ ದಿಬ್ಬ, ವಿಜಯವಿಠ್ಠಲ ದೇವಸ್ಥಾನದ ಆವರಣ, ಕಲ್ಲಿನ ರಥದ ಮುಂಭಾಗ,
• ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಒಂಭತ್ತು ಸಾವಿರ ವಿದ್ಯಾರ್ಥಿಗಳು ಈ ಗೀತಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ.
• ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲದ ಮುಂಭಾಗ,
• ಕೊಡಗಿನ ಭಾಗಮಂಡಲ ಹಾಗೂ ಇತರ ಪ್ರವಾಸಿ ತಾಣಗಳ ಮುಂದೆ
• ಹಾಸನದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹಾಗೂ ಕನ್ನಡದ ಪ್ರಥಮ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಈ ಗೀತಗಾಯನದ ಕಂಪು ಪಸರಿಸಲಿದೆ.
• ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನದ ಮುಂಭಾಗ
• ಯಾದಗಿರಿಯ ಬಂದೀಖಾನೆ ಮುಂಭಾಗ
• ಹಾವೇರಿಯ ಸುಪ್ರಸಿದ್ಧ ಕಾಗಿನೆಲೆ, ಶಿಶುನಾಳ, ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಹಾಗೂ ಕನಕದಾಸರ ಜನ್ಮಸ್ಥಳ ಬಾಡಾದಲ್ಲಿ ಈ ಗೀತಗಾಯನ ಆಯೋಜಿಸಲಾಗುತ್ತಿದೆ.
• ವಿಜಯಪುರದ ಅಕ್ಕಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಆವರಣ ಹಾಗೂ ಗಡಿಭಾಗಗಳಲ್ಲಿ.
• ರಾಯಚೂರಿನ ಹಟ್ಟಿ ಚಿನ್ನದಗಣಿ ಆವರಣ, ಆರ್.ಟಿ.ಪಿ.ಎಸ್. ವಿದ್ಯುತ್ ಉತ್ಪಾದನಾ ಘಟಕದ ಮುಂಭಾಗದಲ್ಲಿಯೂ ಕನ್ನಡ ಗೀತೆಯ ಗಾಯನ ಗಂಗೆ ಪ್ರವಹಿಸಲಿದೆ.
ಒಟ್ಟಾರೆಯಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಈ ಗೀತಗಾಯನ ಕಾರ್ಯಕ್ರಮದ ಮೂಲಕ ಕನ್ನಡದ ಉದ್ಘೋಷ ಒಂದೇ ಭಾರಿಗೆ ಇಡೀ ವಿಶ್ವದಲ್ಲಿ ಮೊಳಗಬೇಕು ಎಂದು ಮಹದಾಶಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಇದು ಯಾರೋ ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಸಮುದಾಯಕ್ಕೆ ಸೀಮಿತವಾದದ್ದಲ್ಲ. ಇದು ಕರ್ನಾಟದ ಪ್ರತೀ ಮನೆ, ಮನದ ಕಾರ್ಯಕ್ರಮವಾಗಬೇಕು. ಕನ್ನಡಿಗರ ಕನ್ನಡ ಪ್ರೇಮ ಹಾಗೂ ಕನ್ನಡದ ಅಸ್ಮಿತೆ ಪ್ರಕಟವಾಗಲು ಇದೊಂದು ಅಭೂತಪೂರ್ವ ಅವಕಾಶವಾಗಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ, ಕರ್ನಾಟಕದ ವಾಸಿಯೂ ಈ ಗೀತಗಾಯನದಲ್ಲಿ ಭಾಗಿಯಾಗುವ ಮೂಲಕ ಕನ್ನಡ ಸಂಸ್ಕೃತಿಯ ಭಾಗವಾಗಬೇಕೆಂಬುದು ನನ್ನ ಆಶಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಕನ್ನಡ ಮಾತನಾಡುವ ಸ್ಪರ್ಧೆ
ಇದರೊಂದಿಗೆ ಅಂತರ್ಜಾಲದ ಮೂಲಕವೇ ಕನ್ನಡ ಮಾತನಾಡುವ ಸ್ಪರ್ಧೆಯನ್ನು ಅಕ್ಟೋಬರ್ ೨೪ರಿಂದ ನಡೆಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಪ್ಪಿಲ್ಲದೆ ಕನ್ನಡವನ್ನು ೩ ರಿಂದ ೪ ನಿಮಿಷಗಳ ವರೆಗೆ ಮಾತನಾಡಿ ಅದರ ದೃಶ್ಯ ಚಿತ್ರೀಕರಿಸಿ ಅಂರ್ತಜಾಲದ ಮೂಲಕ ಕಳುಹಿಸಬೇಕಾಗಿದೆ. ಈ ಸ್ಪರ್ಧೆಯ ಅಂತಿಮ ದಿನಾಂಕವನ್ನು ಅಕ್ಟೋಬರ್ 28ರವರೆಗೂ ವಿಸ್ತರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ.5000-00ಗಳ ನಗದು, ದ್ವಿತೀಯ ಬಹುಮಾನ ರೂ.3000-00ಗಳ ನಗದು ಹಾಗೂ ತೃತೀಯ ಬಹುಮಾನವಾಗಿ ರೂ.2000-00ಗಳ ನಗದು ಬಹುಮಾನ ನೀಡಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ರೂ.50,000-0ಗಳ ಪ್ರಥಮ ಬಹುಮಾನ, ರೂ.30,000-00ಗಳ ದ್ವಿತೀಯ ಬಹುಮಾನ ಹಾಗೂ ರೂ.20,000-00ಗಳ ತೃತೀಯ ಬಹುಮಾನ ನೀಡಲಾಗುವುದು. ಆಸಕ್ತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ಅಥವಾ ಕುವೆಂಫು ಭಾಷಾ ಭಾರತಿ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.