by gadi@dmin | Aug 18, 2023 | Top ಸುದ್ದಿಗಳು, ಕನ್ನಡ ನಾಡು ನುಡಿ
ಪ್ರಸಕ್ತ ಸಾಲಿನ ಡಿ. ದೇವರಾಜ ಅರಸು ಪ್ರಶಸ್ತಿಗೆ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಆಯ್ಕೆ. ಸಮಾಜವಾದಿ ಸಿದ್ಧಾಂತಕ್ಕೆ ತನ್ನನ್ನು ಅರ್ಪಿಸಿಕೊಂಡಿರುವ ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು, ಉಳುವವನನ್ನೇ ಭೂಮಿಯ ಒಡೆಯನಾಗಿ ಮಾಡುವ ಭೂ ಹೋರಾಟದ ಮೂಲಕವೇ ರಾಜಕೀಯ ಜೀವನ ಪ್ರವೇಶಿಸಿದವರು. ದೇವರಾಜ ಅರಸು ಅವರ ಗರಡಿಯಲ್ಲಿಯೇ ಬೆಳೆದಿರುವ ತಿಮ್ಮಪ್ಪನವರು ಭೂ ಸುಧಾರಣಾ ಕಾಯ್ದೆಯಷ್ಟೇ ಕ್ರಾಂತಿಕಾರಿಯಾದ “ವಾಸಿಸುವವನನ್ನೇ ಮನೆ ಒಡೆಯ” ನನ್ನಾಗಿ ಮಾಡುವ ಕ್ರಾಂತಿಕಾರಿ ಕಾಯ್ದೆಯ ರೂವಾರಿಗಳು.
ಹಿರಿಯರಿಗೆ ನಮ್ಮ ಗಡಿನುಡಿ ತಂಡ ಶುಭಹಾರೈಸುತ್ತದೆ.
by gadi@dmin | Aug 17, 2023 | ಕನ್ನಡ ನಾಡು ನುಡಿ
ಬೆಂಗಳೂರು: ʻಕನ್ನಡದ ಧ್ರುವತಾರೆʼ ಸಾಧಕರೊಂದಿಗೆ ಮಾತು-ಕತೆ ಎನ್ನುವ ವಿನೂತನ ಹಾಗೂ ವಿಶಿಷ್ಟ ಮಾದರಿ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ರೂಪಿಸಿದೆ. ಈ ಮೂಲಕ ಕನ್ನಡ ನಾಡಿನ ವಿವಿಧ ಕ್ಷೇತ್ರದಲ್ಲಿ ಅಜ್ಞಾತವಾಗಿ ಅಗಣಿತ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಲಿದೆ. ಅವರೊಂದಿಗೆ ಪರಿಷತ್ತು ಹಾಗೂ ಸಾರ್ವಜನಿಕರು ಸಂವಾದ ನಡೆಸುವ ಮೂಲಕ ಸಾಧಕರ ಅನುಭವಗಳನ್ನು ನಾಡಿನ ಜನರಿಗೆ ತಿಳಿಸುವ ಕೆಲಸಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಿದೆ, ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ-ಕನ್ನಡಿಗ-ಕರ್ನಾಟಕದ ಅಭ್ಯುದಯವನ್ನು ತನ್ನ ಧ್ಯೇಯವಾಗಿ ಹೊಂದಿರುವ ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ʻಕನ್ನಡದ ಧ್ರುವತಾರೆʼ ಎನ್ನುವ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮ ಪರಿಷತ್ತಿನ ಮಾದರಿ ಕಾರ್ಯಕ್ರಮವಾಗಲಿದೆ. ಕನ್ನಡಿಗರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಬೆರಗು ಹುಟ್ಟಿಸುವಂತಹ ಸಾಧನೆಯನ್ನು ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಮಾಹಿತಿ ಲಭ್ಯವಿರುತ್ತದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿನ ಸಾಧಕರು ‘ಎಲೆ ಮರೆಯ ಮರ’ಗಳಂತೆ ಅಪಾರ ಸಾಧನೆಯನ್ನು ಮಾಡಿದ್ದಾರೆ. ಮಾಹಿತಿ ಇದ್ದರೂ ಸಾಧಕರನ್ನು ನೇರವಾಗಿ ನೋಡುವ ಅವರ ಜೊತೆ ಸಂವಾದ ಮಾಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ‘ಕನ್ನಡದ ಧ್ರುವತಾರೆ’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ.
ಈ ಕಾರ್ಯಕ್ರಮವನ್ನು ಪ್ರತಿ ತಿಂಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಸಲು ತೀರ್ಮಾನಿಸಿದ್ದು, ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರೇ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಾಡಿನ ಕನ್ನಡ ಮೂಲದ ಸಾಧಕರು ಪರಿಷತ್ತು ಆಯೋಜಿಸುವ ʻಕನ್ನಡದ ಧ್ರುವತಾರೆʼ ವಿಶಿಷ್ಠ ಮಾದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಸಾಧಕರೊಂದಿಗೆ ಸಾರ್ವಜನಿಕರು ಸಹ ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡದ ಧ್ರುವತಾರೆʼ ಕಾರ್ಯಕ್ರಮವು ಸಾಧಕರ ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದೆ. ಪರಿಷತ್ತಿನ ʻಕನ್ನಡದ ಧ್ರುವತಾರೆʼ ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಖ್ಯಾತ ಕಲಾವಿದ ಶ್ರೀ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ.
ಏನಾದರೂ ಹೊಸತು ಸಾಧಿಸಬೇಕೆಂಬ ಮನೋಭಾವದ ಶ್ರೀ ರಮೇಶ್ ಅರವಿಂದ ಅವರು ನಟನೆ, ನಿರೂಪಣೆ, ನಿರ್ದೇಶನ, ಸಾಹಿತ್ಯದ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅವರು ತಮ್ಮ ಪ್ರತಿಭೆಯನ್ನು ಮೆರೆದವರು.೧೪೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ರಮೇಶ್ ಅರವಿಂದ್ ನಾಲ್ಕು ದಶಕಗಳಿಂದಲೂ ಕನ್ನಡದ ಪ್ರಮುಖ ನಟರಾಗಿದ್ದಾರೆ. ವಿವಿಧ ರಂಗದ ಅತಿರಥ ಮಹಾರಥರನ್ನು ಆತ್ಮೀಯವಾಗಿ ಸಂದರ್ಶಿಸಿ ಪರಿಚಯ ಮಾಡಿಕೊಡುತ್ತಿರುವ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಮನನೀಯವಾದದ್ದು. ರಮೇಶ್ ಅರವಿಂದ್ ಉತ್ತಮ ಬರಹಗಾರರೂ ಹೌದು ಅವರು ರಚಿಸಿದ ಕೃತಿಗಳು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಉತ್ತಮ ಭಾಷಣಕಾರರೂ ಆಗಿರುವ ರಮೇಶ್ ದೇಶ-ವಿದೇಶಗಳಲ್ಲಿ ತಮ್ಮ ಸ್ಪೂರ್ತಿಧಾಯಕ ಮಾತುಗಳಿಂದಲೂ ಕೂಡ ಪ್ರಸಿದ್ಧರು. ಇಂಥಹ ಮಹಾನ್ ಸಾಧಕರು ಕನ್ನಡ ಸಾಹಿತ್ಯ ಪರಿಷತ್ತಿನ ʻಕನ್ನಡ ಧ್ರುವತಾರೆ’ ಕಾರ್ಯಕ್ರಮದ ಮೂಲಕ ಕನ್ನಡಿಗರ ಮುಂದೆ ಬರಲಿದ್ದಾರೆ. ಈ ಸಂವಾದದಲ್ಲಿ ಎಲ್ಲ ಕನ್ನಡಿಗರು ಭಾಗವಹಿಸ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.x`
by gadi@dmin | Aug 11, 2023 | ಕನ್ನಡ ನಾಡು ನುಡಿ
ಕಂದಾಯ ವಿಭಾಗವಾರು ಸಾಹಿತಿಗಳ ಸಭೆ !
* ಸಭೆಯಲ್ಲಿ ಸುಮಾರು 170ಕ್ಕೂ ಹೆಚ್ಚು ಸಾಹಿತಿ, ರಂಗಕರ್ಮಿ, ಕಲಾವಿದರು ಭಾಗಿ
* ಸಭೆ ಕರೆದ ಸಚಿವರ ನಡೆಗೆ ಸಾಹಿತಿಗಳಿಂದ ಮೆಚ್ಚುಗೆ
ಬೆಂಗಳೂರು: ಆ. ಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ವರ್ಷವೀಡಿ ರಾಜ್ಯಾದ್ಯಂತ ಕರ್ನಾಟಕದ ಸಾಂಸ್ಕೃತಿಕ ಹಾಗೂ ಪರಂಪರೆ ಬಿಂಬಿಸುವ ಕಾರ್ಯಕ್ರಮ ರೂಪಿಸುವ ಹಿನ್ನೆಲೆಯಲ್ಲಿ ಸಾಹಿತಿಗಳ ಜೊತೆ ಸಭೆ ನಡೆಸಿದ್ದು, ಹಲವು ಉತ್ತಮ ಸಲಹೆಗಳು ಬಂದಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸಾಹಿತಿ, ರಂಗಕರ್ಮಿ, ಕಲಾವಿದರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ನ.1ಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಸುವ ಬಗ್ಗೆ ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಸಾಹಿತಿಗಳ ಸಭೆ ಆಯೋಜನೆ ಮಾಡಲಾಗುವುದು. ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಸಾಹಿತಿಗಳ ಸಭೆ ನಡೆಸಲಾಗಿದೆ. ಆ.22ಕ್ಕೆ ಬೆಳಗಾವಿ, ಆ.25 ಮೈಸೂರು ಹಾಗೂ 28ರಂದು ಕಲಬುರಗಿಯಲ್ಲಿ ಸಾಹಿತಿ, ರಂಗಕರ್ಮಿ ಹಾಗೂ ಹಿರಿಯ ಕಲಾವಿದರ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಕರ್ನಾಟಕದ ಪರಂಪರೆ, ಕನ್ನಡದ ಇತಿಹಾಸ ಹಾಗೂ ಸಂಸ್ಕೃತಿ ಬಿಂಬಿಸುವ ಹಿನ್ನೆಲೆಯಲ್ಲಿ ಕನ್ನಡರಥ ರಾಜ್ಯವಿಡೀ ಸಂಚಾರ ಮಾಡುವುದು, ಶಾಲಾ ಮತ್ತು ಕಾಲೇಜುಗಳಲ್ಲಿ ರಾಜ್ಯಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಆಯೋಜನೆ, ರಾಜ್ಯದ ಸಿದ್ಧಪುರದಲ್ಲಿರುವ ಏಕೈಕ ಭುವನೇಶ್ವರಿ ದೇವಾಲಯವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದು, ಕನ್ನಡದ ಮಾಹಿತಿಯನ್ನೊಳಗೊಂಡ ಸಂಚಾರಿ ವಾಹನ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ ಸೇರಿದಂತೆ ಹೀಗೆ ಹಲವು ಸಲಹೆಗಳು ಬಂದಿವೆ. ಸಾಹಿತಿಗಳಾದ ಪ್ರೊ.ಎಸ್.ಸಿದ್ದರಾಮಯ್ಯ, ಮುಖ್ಯಮಂತ್ರಿ ಚಂದ್ರು, ಮನುಬಳಿಗಾರ್, ಹಂಸಲೇಖ, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ ಸೇರಿದಂತೆ ಪ್ರತಿಯೊಬ್ಬರು ಸಲಹೆ ನೀಡಿದ್ದಾರೆ. ಇನ್ನು ಉಳಿದ ಮೂರು ವಿಭಾಗಗಳಲ್ಲಿ ಸಭೆ ನಡೆಸಿ, ಎಲ್ಲರ ಸಲಹೆ
ಕ್ರೋಢೀಕರಣ ಮಾಡಿದ ಬಳಿಕ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಇದೇ ವೇಳೆ ಇಂತಹ ಒಂದು ಕಾರ್ಯಕ್ರಮ ಆಯೋಜನೆಗೆ ಸಭೆ ಕರೆದ ಸಚಿವ ತಂಗಡಗಿ ಅವರ ನಡೆಗೆ ಸಾಹಿತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಾಹಿಗಳಾದ ಚಂದ್ರಶೇಖರ್ ಕಂಬಾರ, ಪ್ರೊ.ಎಸ್.ಸಿದ್ದರಾಮಯ್ಯ, ಬಿ.ಟಿ.ಲಲಿತಾನಾಯಕ್, ಮನುಬಳಿಗಾರ್, ನರಹಳ್ಳಿ ಬಾಲಕೃಷ್ಣ, ಮುಖ್ಯಮಂತ್ರಿ ಚಂದ್ರು, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲಾ, ಚಿತ್ರ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ಟಿ.ಎನ್.ಸೀತಾರಾಮ್, ಕಸಪಾ ಅಧ್ಯಕ್ಷ ಮಹೇಶ್ ಜೋಶಿ, ರಂಗಕರ್ಮಿಗಳಾದ ಕಪ್ಪಣ್ಣ, ನಾಗರಾಜ್ ಮೂರ್ತಿ, ಪ್ರೊ.ಕೆ.ಇ.ರಾಧಾಕೃಷ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಮಂಡ್ಯದಲ್ಲಿ ನಡೆಸಲು ಯಾವುದೇ ಅಡೆತಡೆಗಳಿಲ್ಲ. ಎಲ್ಲರೊಂದಿಗೆ ಚರ್ಚೆ ಮಾಡಿ ಸಮ್ಮೇಳನದ ದಿನಾಂಕ ನಿಗದಿ ಮಾಡಲಾಗುವುದು. ಈ ಬಗ್ಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಚೆಲುವರಾಯಸ್ವಾಮಿ ಅವರ ಬಳಿ ಮಾತನಾಡಿದ್ದೇನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಬಜೆಟ್ ನಲ್ಲಿ ಕಡಿಮೆ ಅನುದಾನ ನೀಡಿದ್ದು, ಕಾರ್ಯಿಕ್ರಮ ಆಯೋಜನೆಗೆ ಹಣವಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾರ್ಯಕ್ರಮ ನಡೆಸಲು ಹಣಕಾಸಿನ ಕೊರತೆ ಇಲ್ಲ. ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
by gadi@dmin | Aug 6, 2023 | ಕನ್ನಡ ನಾಡು ನುಡಿ
ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪನ್ನು ಕಪಸಮ ಹರಡುತ್ತಿರುವುದು ಹೆಮ್ಮೆಯ ಸಂಗತಿ: ಕೆ.ವಿ.ಪ್ರಭಾಕರ್
ಮುಂಬೈ ಆ 6: ಮರಾಠಿ ನೆಲದಲ್ಲಿ ಕನ್ನಡ ಸಂಸ್ಕೃತಿಯ ಕಂಪನ್ನು ಕಪಸಮ (ಕನ್ನಡ ಪತ್ರಕರ್ತರ ಸಂಘ ಮಹಾರಾಷ್ಟ್ರ) ಹರಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ) ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಶ್ರೀ ಕೆ.ಟಿ.ವೇಣುಗೋಪಾಲ್ ಮಾಧ್ಯಮ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಮುಂಬೈನಂತಹ ಮಹಾ ನಗರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಪತ್ರಿಕೆಗಳನ್ನು ಹುಟ್ಟುಹಾಕುವುದು ಯಶಸ್ವಿಯಾಗಿ ನಡೆಸುವುದು ಬಹಳ ಸವಾಲಿನದ್ದು. ಈ ಸವಾಲನ್ನು ಕಪಸಮ ಅರ್ಥಪೂರ್ಣವಾಗಿ ನಿಭಾಯಿಸಿದೆ ಎಂದರು.
ಆಧುನಿಕ ತಂತ್ರಜ್ಞಾನ ಮಾಹಿತಿ ಜಗತ್ತು ಮತ್ತು ಪತ್ರಿಕಾ ವೃತ್ತಿಗೆ ವ್ಯಾಪಕ ಅವಕಾಶಗಳನ್ನು ತೆರೆದಿಟ್ಟಿದೆ. ಆದರೆ ಪತ್ರಕರ್ತರ ಬದುಕು ಮಾತ್ರ ಸಮಸ್ಯೆಗಳಲ್ಲೇ ಮುಳುಗಿದೆ. ಮಹಾರಾಷ್ಟ್ರ ನೆಲದಲ್ಲಿ ಕನ್ನಡ ಪತ್ರಕರ್ತರ ಸಮಸ್ಯೆಗಳಿಗೆ ಕನ್ನಡ ಪತ್ರಕರ್ತರ ಸಂಘ, ಮಹಾರಾಷ್ಟ್ರ ಬಹಳ ಹೃದಯಸ್ಪರ್ಷಿಯಾಗಿ ಸ್ಪಂದಿಸುತ್ತಿದೆ ಎನ್ನುವುದು ಸಮಾಧಾನದ ಸಂಗತಿ ಎಂದರು.
ಕಪಸಮ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಆಗಮಿಸಿದ್ದರು.
ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ, ಲಾರೆನ್ಸ್ ಸೀಲೋ ಅವರು ಮಾಧ್ಯಮಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರುತರಾದ ಡಾ.ಸುನಿತಾ ಎಂ ಶೆಟ್ಟಿ ಅವರು ರೋಹಿ಼ಣಿ ಸಾಲ್ಯಾನ್ ಅವರ ‘ದಿವ್ಯಾಂಗನೆ’ ಕವನ ಸಂಕಲನ ಬಿಡುಗಡೆಗೊಳಿಸಿದರು.
ವೇದಿಕೆಯಲ್ಲಿ ಜಯ ಶ್ರೀ ಕೃಷ್ಣ ಪರಿಸರ ಸಮಿತಿ ಅಧ್ಯಕ್ಷರಾದ ಎಲ್.ವಿ.ಅಮೀನ್ ಉಪಸ್ಥಿತರಿದ್ದರು.
by gadi@dmin | Aug 3, 2023 | ಕನ್ನಡ ನಾಡು ನುಡಿ
ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆಗಳಿಗೆ ಶೇ.50% ರಿಯಾಯಿತಿ.
ಬೆಂಗಳೂರು, ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 2023ರ ಆಗಸ್ಟ್ ತಿಂಗಳು ಪೂರ್ತಿ ಕನ್ನಡ ಪುಸ್ತಕ ಪ್ರಾಧಿಕಾರದ ಎಲ್ಲಾ ಪುಸ್ತಕಗಳನ್ನು ಶೇಖಡಾ 50%ರ ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲಾಗುವುದು. ಪುಸ್ತಕ ಪ್ರಿಯರು ಈ ಅವಕಾಶ ಬಳಸಿಕೊಳ್ಳಲು ಕೋರಿದೆ. ಬೆಂಗಳೂರಿನ ಕನ್ನಡ ಭವನದ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಹಾಗೂ ಎಲ್ಲಾ ಜಿಲ್ಲೆಗಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದಿಂದ ತೆರೆಯಲಾದ ಎಲ್ಲಾ ಸಿರಿಗನ್ನಡ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಅಲ್ಲದೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್ ಲೈನ್www.kannadapustakapradhikara.com (ನಮ್ಮ ಪುಸ್ತಕಗಳ ವಿಭಾಗ) ನಲ್ಲಿ ಕೂಡ ಈ ಶೇ.50% ರಿಯಾಯಿತಿ ಲಭ್ಯವಿದೆ.
ಕನ್ನಡ ಪುಸ್ತಕ ಪ್ರಾಧಿಕಾರವು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಎಲ್ಲಾ ಪ್ರಕಾರದ ಸಾಹಿತ್ಯ ಕೃತಿಗಳನ್ನು ಈವರೆಗೆ ಪ್ರಕಟಿಸುತ್ತಾ ಬಂದಿದೆ. ಇವುಗಳಲ್ಲಿ ವ್ಯಕ್ತಿ ಚಿತ್ರಗಳು, ನಾಟಕಗಳು, ಅಲೆಮಾರಿ ಸಮುದಾಯ, ವೈದ್ಯಕೀಯ, ಪ್ರಾಚೀನ ಕನ್ನಡ ಸಾಹಿತ್ಯ, ಜಾನಪದ, ಪರಿಸರ, ಕೃಷಿ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಸಾಹಿತ್ಯ ಕೃತಿಗಳನ್ನು ಇದುವರೆಗೆ ಸುಮಾರು 704 ಶೀರ್ಷಿಕೆಗಳನ್ನು ಮುದ್ರಿಸಿ ಪ್ರಕಟಿಸಿದೆ. ಅತ್ಯಂತ ಮೌಲಿಕವಾದ, ಪ್ರಾಜ್ಞರಿಂದ ರಚಿತವಾದ ಈ ಕೃತಿಗಳನ್ನು ಜನಸಾಮಾನ್ಯರಿಗೆ ಸುಲಭ ಬೆಲೆಯಲ್ಲಿ ತಲುಪಿಸಬೇಕೆಂಬ ಉದ್ದೇಶ ಕನ್ನಡ ಪುಸ್ತಕ ಪ್ರಾಧಿಕಾರದ್ದು ಎಂದು ಪ್ರಾಧಿಕಾರದ ಆಡಳಿತಾಧಿಕಾರಿಗಳಾದ ಕೆ ಬಿ ಕಿರಣ್ ಸಿಂಗ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
by gadi@dmin | Aug 3, 2023 | ಕನ್ನಡ ನಾಡು ನುಡಿ
ಮುಂಬೈ: ಜುಲೈ
ಗಡಿಭಾಗದ ಹಾಗೂ ಗಡಿ ಹೊರಗಿನ ಕನ್ನಡಿಗರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮುಂಬೈ ವಿವಿಧ ಕನ್ನಡಪರ ಸಂಘ- ಸಂಸ್ಥೆಗಳ ವತಿಯಿಂದ
ಮುಂಬೈನ ರಾಧಾಬಾಯಿ ಟಿ.ಭಂಡಾರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ಹೊರನಾಡು ಕನ್ನಡ ಸಂಸ್ಕೃತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗಡಿಭಾಗ ಹಾಗೂ ಗಡಿ ಹೊರಗಿನ ಕನ್ನಡಿಗರ ಜತೆಗೆ ಸರ್ಕಾರ ಎಂದಿಗೂ ಇರಲಿದೆ. ಮುಂಬೈ ಕನ್ನಡಿಗರು ಮರಾಠಿಗರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದರು.
ಮುಂಬೈನಲ್ಲಿ ಕನ್ನಡಿಗರ ಹಿತ ರಕ್ಷಣೆ ಮಾಡುವ ಮೂಲಕ ಮನೆ- ಮನೆಗೆ ಕನ್ನಡ ತಲುಪಿಸುತ್ತಿರುವ
ಕರ್ನಾಟಕ ಸಂಘ ಅಂದೇರಿ ಕಾರ್ಯ ಶ್ಲಾಘನೀಯವಾದದ್ದು.
ಬಡತನ ರೇಖೆಗಿಂತ ಕೆಳಗಿರುವ ಸುಮಾರು 110 ಮಹಿಳೆಯರಿಗೆ ವಿಧವಾ ವೇತನ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯಧನ ನೀಡುವ ಮೂಲಕ ಇಲ್ಲಿನ ಕನ್ನಡಿಗರಿಗೆ ನೆರವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ಭಾಷೆಯ ವೈಭವಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ನಮ್ಮ ಭಾಷೆಯ ಶ್ರೀಮಂತಿಕೆ ಪ್ರಪಂಚಾದ್ಯಂತ ಹರಡಿದೆ. ಪ್ರಾಚೀನ ಕಾಲದಿಂದ ಹೊರಹೊಮ್ಮಿದ ಕನ್ನಡ ಭಾಷೆಯಲ್ಲಿನ ಕೃತಿಗಳು ಅದ್ಭುತವಾಗಿವೆ ಎಂದು ಅಭಿಪ್ರಾಯಪಟ್ಟರು.
ಕನ್ನಡಿಗರಾದ ನಾವು ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಸೊಗಡನ್ನು ಇನ್ನೂ ಹೆಚ್ಚಾಗಿ ಪಸರಿಸೋಣ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶ್ವನಾಥ್ ಪಿ.ಹಿರೇಮಠ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ
ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರಿಗೆ ಸಹಕಾರ ವಿಭೂಷಣ, ಶಿಕ್ಷಣ ತಜ್ಞ ಕೆ.ಎ.ರಾಧಾಕೃಷ್ಣ ಅವರಿಗೆ ಕರುನಾಡ ಚೇತನ ಪ್ರಶಸ್ತಿ ಹಾಗೂ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ನಿರ್ದೇಶಕ ಡಾ.ಸತೀಶ್ ಕುಮಾರ್ ಅವರಿಗೆ ಡಿಜಿಟಲ್ ಗ್ರಂಥಾಲಯ ದಿಗ್ಗಜ ಪ್ರಶಸ್ತಿ ನೀಡಿ ಗೌರವಿಸಲಾಯಿತು.