ರಾಯಬಾಗ ತಾಲೂಕ 6 ನೇ ಕನ್ನಡ ಸಾಹಿತ್ಯ  ಸಮ್ಮೇಳನದ ಸರ್ವಾಧ್ಯಕ್ಷರು ಗಿ ಆಯ್ಕೆಯಾಗಿರುವ  ಶ್ರೀ ಡಿ ಎಸ್ ನಾಯಿಕ ರವರ ಕಿರು ಪರಿಚಯ.

ರಾಯಬಾಗ ತಾಲೂಕ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಗಿ ಆಯ್ಕೆಯಾಗಿರುವ ಶ್ರೀ ಡಿ ಎಸ್ ನಾಯಿಕ ರವರ ಕಿರು ಪರಿಚಯ.

*ಧರ್ಮಪಥದ ಮೇಲೆ ಸರ್ವಾಧ್ಯಕ್ಷತೆಯ ಹೊಂಬೆಳಕು.

*

*ಶ್ರೀ ಡಿ ಎಸ್ ನಾಯಿಕ*

 

ಹಿತಮಿತ ಮಧ್ಯಮ ಎತ್ತರದ ನಿಲುವಿನ ಶ್ವೇತಗನ್ನಡಿಯಂತಿರುವ ಧರ್ಮಣ್ಣ ಸಿದ್ದಪ್ಪ ನಾಯಿಕರು ಬಿಳಿ ಅಂಗಿˌಪೈಜಾಮ ಧರಿಸಿ ನಿಂತರೆಂದರೆ ನೋಡಿದವರ ಮನದ ತುಂಬಾ ಭಕ್ತಿಬೆಳದಿಂಗಳು ಸುರಿಯುವುದು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ  29-3-1941 ರಂದು ಸಿದ್ದಪ್ಪˌ ಬಾಗವ್ವರ ಪುಣ್ಯ ಉದರದಲ್ಲಿ ಜನಿಸಿದ ಡಿ.ಎಸ್.ನಾಯಿಕರು ಸಾಮಾನ್ಯನಾಗಿ ಹುಟ್ಟಿ ತ್ರಿವಿಕ್ರಮನಂತೆ ಬೆಳೆದ ಪರಿ ಬೆರಗು ಹುಟ್ಟಿಸುತ್ತದೆ. ಬಾಗೆನಾಡಿನ ಸರ್ವಧರ್ಮಧ್ವಜದಂತಿರುವ ನಾಯಿಕರು ಸರಳತೆˌವಾಗ್ಮಿತೆˌಪ್ರಾಮಾಣಿಕತೆˌವಿನಯತೆˌಸಹಜತೆಗಳ ಅಪೂರ್ವ ಸಂಗಮವಾಗಿದ್ದಾರೆ. ಜನಾನುರಾಗಿಯಾಗಿ ಜನಮೆಚ್ಚಿದ ನಾಯಕರಾಗಿ  ಹೊರಹೊಮ್ಮಿ ಗೊಮ್ಮಟವಾಗಿ ತೋರುಬೆರಳಾಗಿದ್ದಾರೆ.

‘ಡಿಪ್ಲೋಮಾ ಇನ್ ಕೋಆಪರೇಶನ್ ‘ಕೋರ್ಸ ಮುಗಿಸಿ ಕುಡಚಿಯಲ್ಲಿ 1962 ರಿಂದ 1969 ರವರೆಗೆ ಗುಮಾಸ್ತರಾಗಿ ಸೇವೆ ಸಲ್ಲಿಸಿದ್ದಾರೆ.1969 ರಿಂದ ಸಮಾಜ ಸೇವೆಯನ್ನು ತಮ್ಮ ಉಸಿರಾಗಿಸಿಕೊಂಡು ಸಾಂಸ್ಕೃತಿಕˌಸಾಮಾಜಿಕˌಶೈಕ್ಷಣಿಕˌಧಾರ್ಮಿಕˌಸಾಹಿತ್ಯಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಯಬಾಗ ತಾಲೂಕಿನ ಜಾತ್ಯಾತೀತˌಪ್ರಶ್ನಾತೀತ ನೇತಾರರಾಗಿ ಜನಮನದಲ್ಲಿ ಪೂಜಿಸಲ್ಪಡುತ್ತಿದ್ದಾರೆ.

1978 ರಲ್ಲಿ ಮೊರಬ ಗ್ರಾಮ ಪಂಚಾಯತ ಅಧ್ಯಕ್ಷರಾಗಿ ಕೈಗೊಂಡ ಕಾರ್ಯಗಳು ಅವಿಸ್ಮರಣೀಯ.1973 ರಲ್ಲಿ ಉಪಾಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ.ಸಾರ್ವಜನಿಕ ಬದುಕಿನಲ್ಲಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣ ಮಾಡಿ  ಐತಿಹಾಸಿಕ ದಾಖಲೆ ಬರೆದಿದ್ದಾರೆ.1981 ರಲ್ಲಿ ಮೊರಬದಲ್ಲಿ ಸಂತೆ ಆರಂಭಿಸಿ ಆರ್ಥಿಕ ವಹಿವಾಟಿಗೆ ಶ್ರೀಕಾರ ಹಾಕಿದ ಡಿ.ಎಸ್ ಅವರು 1982 ರಲ್ಲಿ ಸರಕಾರಿ ಪ್ರೌಢ ಶಾಲೆ ಮಂಜೂರು ಮಾಡಿಸಲು ಹಗಲಿರುಳು ಶ್ರಮಿಸಿ ಯಶಸ್ವಿಯಾದುದು ಇವರ ಶಿಕ್ಷಣ ಪ್ರೇಮಕ್ಕೆ ರನ್ನಗನ್ನಡಿಯಾಗಿದೆ.ಅದೇ ವರ್ಷ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸಿ ಗ್ರಾಮಕ್ಕೆ ಆರೋಗ್ಯ ಭಾಗ್ಯ ನೀಡಿದ ಭಾಗ್ಯವಿಧಾತರಾಗಿದ್ದಾರೆ.1983 ರಲ್ಲಿ ಸರಕಾರಿ ಪಶು ಆಸ್ಪತ್ರೆ ಆರಂಭಿಸುವುದರ ಮೂಲಕ ಗ್ರಾಮದ ಅಭಿವೃದ್ದಿಯ ಚಕ್ರದ ವೇಗ ಹೆಚ್ಚಿಸಿ ಆಧುನಿಕ ಮೊರಬದ ಶಿಲ್ಪಿಯೆನಿಸಿದ್ದಾರೆ.

ಆದರ್ಶಗಳ ಆಕರವಾಗಿರುವ ಡಿ.ಎಸ್.ನಾಯಿಕರವರು 1985 ರಿಂದ ಹಲವು ವರ್ಷಗಳವರೆಗೆ ರೇಡಿಯೋ ಕೇಂದ್ರದಲ್ಲಿ ಭಾಷಣˌಚಿಂತನಗಳನ್ನು ಮಾಡಿ ಶ್ರೋತೃಗಳಿಂದ ಸೈ ಎನಿಸಿಕೊಂಡಿದ್ದಾರೆ.1992 ರಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದ ಸಲಹಾ ಸಮಿತಿ ಸದಸ್ಯರಾಗಿ ಅನನ್ಯ ಸೇವೆ ಸಲ್ಲಿಸಿದ್ದಾರೆ.ಸಾಹಿತ್ಯೋಪಾಸಕ ಡಿ.ಎಸ್.ನಾಯಿಕರವರು ರಾಯಬಾಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ ಗಮನಾರ್ಹ ಕಾರ್ಯಗೈದಿದ್ದಾರೆ.2000 ದಿಂದ 2005 ರವರೆಗೆ ಬೆಳಗಾವಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಸೇವೆ ಸಲ್ಲಿಸಿ ಸಾರ್ವಜನಿಕರಿಂದ ಮೆಚ್ಚುಗೆ ಗಳಿಸಿದ್ದಾರೆ.1979 ರಿಂದ ರಾಯಬಾಗತಾಲೂಕು ಭೂನ್ಯಾಯ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿ ಭೂನ್ಯಾಯ ಮಂಡಳಿ ಗೌರವ ಹೆಚ್ಚಿಸಿದ್ದಾರೆ.ತಾಲೂಕು ಮಟ್ಟದ ಡಾ.ಅಂಬೇಡ್ಕರ ಜಯಂತಿˌಶಿಕ್ಷಕರ ದಿನಾಚರಣೆ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮಗಳನ್ನು ಗೆಲ್ಲಿಸಿದ್ದಾರೆ.ಪ.ಪೂ ಶ್ರೀ ಸಿದ್ಧೇಶ್ವರ ಸ್ವಾಮಿಗಳು ವಿಜಯಪುರರವರ ಶಿಷ್ಯರಾಗಿ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಅನೇಕ ಪ್ರವಚನ ಕಾರ್ಯಕ್ರಮಗಳನ್ನು ನೀಡಿ ಆನಂದಿಸಿದ್ದಾರೆ.

‘ಮೊರಬದ ಪುಣ್ಯದ ಕೆನೆ’ˌ’ಧರ್ಮವೀರ’ ಧರ್ಮಣ್ಣ ಸಿದ್ದಪ್ಪ ನಾಯಿಕರು ಮೃದು ಮಾತಿನ ಹೂಹೃದಯದ ಸಜ್ಜನ ಶಕ್ತಿಕೇಂದ್ರವಾಗಿದ್ದಾರೆ.ಬಡವರˌಶೋಷಿತರˌನೊಂದವರ ಧ್ವನಿಯಾಗಿ ಸಮಾಜದ ಸಂಪತ್ತಾಗಿದ್ದಾರೆ.ಜನರ ನಡುವಿನಿಂದ ಅರಳಿದ ಅಸಲಿ ನಾಯಕ ನಾಯಿಕರವರು ಅಜಾತ ಶತ್ರುಗಳಾಗಿ ಧರ್ಮಣ್ಣ ಹೆಸರಿಗೆ ಅನ್ವರ್ಥಕರಾಗಿದ್ದಾರೆ.

ಅಮೃತದ ಅಕ್ಷಯ ಕುಂಭವಾಗಿರುವ ಡಿ.ಎಸ್.ನಾಯಿಕರವರು ನಡೆದಾಡುವ ಭಾವೈಕ್ಯದ ಬಾವುಟವಾಗಿದ್ದಾರೆ.ಸಮಾಜದ ಕೆಲಸಗಳಿಗೆ ಸದಾ ಮುಂದಾಗುವ  ಮುಂದಾಳು ಧರ್ಮಣ್ಣ ನಾಯಿಕರು ನಾಯಕರ ನಾಯಕ ಮಹಾನಾಯಕರಾಗಿ ಕಂಗೊಳಿಸುತ್ತಿದ್ದಾರೆ.ಅವರು ನಡೆದು ಬಂದ ಧರ್ಮಪಥ ಎಲ್ಲರಿಗೂ ಮಾದರಿ.ಧರ್ಮದಾರಿಯ ಚತುಷ್ಪಥವೆನಿಸಿದ ಇವರು ಯುವಕರಿಗೆ ದಾರಿದೀಪವಾಗಿದ್ದಾರೆ.ಆರೋಗ್ಯಕರ ಸಮಾಜದ ನಿರ್ಮಾಪಕ ಡಿ.ಎಸ್.ನಾಯಿಕರವರು ಮೌಲ್ಯಗಳ ಮಹಾ ಉಪಾಸಕರುˌಸಾಹಿತ್ಯಾರಾಧಕರುˌಸಂಸ್ಕೃತಿ ಅರ್ಚಕರಾಗಿ ರಾಯಬಾಗದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ.ಅವರಿಗೆ ಪರಮಾನಂದವಾಡಿಯಲ್ಲಿ ಜರುಗಲಿರುವ ರಾಯಬಾಗ ತಾಲೂಕಾ ಆರನೆಯ ಕನ್ನಡ ಸಾಹಿತ್ಯ ಸಮ್ಮೆಳನದ ಸರ್ವಾಧ್ಯಕ್ಷ ಪದವಿ ಅರಸಿ ಬಂದಿರುವುದು ತಾಲೂಕಿನಾದ್ಯಂತ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರ ಹರಿದುಬರುತ್ತಿದೆ. ಎಲ್ಲೆಡೆ ಸಂತಸ ಗೂಡು ಕಟ್ಟಿದೆ.ಆನಂದದ ಅಲೆಗಳು ಕನ್ನಡ ಕಸ್ತೂರಿಯ ಪರಿಮಳ ಆಸ್ವಾದಿಸಲು ತುದಿಗಾಲ ಮೇಲೆ ನಿಂತಿರುವುದು ಸರ್ವವೇದ್ಯ .ಮೊರಬದ ಮೊಹರು ಡಿ.ಎಸ್.ನಾಯಿಕರವರ ನಿರ್ಮಲ ಚಿತ್ತˌಸಮಾಜ ಕಳಕಳಿˌಬಹುಮುಖ ಕಾಯಕಕ್ಕೆ ರಾಯಬಾಗ ತಾಲೂಕಾ 6 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪಟ್ಟದ ಗೌರವ ದೊರಕಿದೆ .

ಅವರಿಗೆ ಹಾರ್ದಿಕ ಹಾರ್ದಿಕ ಅಭಿನಂದನೆಗಳು.

 

:- ರವೀಂದ್ರ ಮ ಪಾಟೀಲ

ಅಧ್ಯಕ್ಷರುˌಕ.ಸಾ.ಪˌರಾಯಬಾಗ

ಸಪ್ತಕದ ಸಾರ್ಥಕ 15 ವರುಷಗಳ ನಡೆ  ಸಾಂಸ್ಕೃತಿಕ ಬದುಕಿನ ಮುನ್ನಡೆ

ಸಪ್ತಕದ ಸಾರ್ಥಕ 15 ವರುಷಗಳ ನಡೆ ಸಾಂಸ್ಕೃತಿಕ ಬದುಕಿನ ಮುನ್ನಡೆ

 

ಸಪ್ತಕದ ಸಾರ್ಥಕ 15 ವರುಷಗಳ ನಡೆ

ಸಾಂಸ್ಕೃತಿಕ ಬದುಕಿನ ಮುನ್ನಡೆ

ಬೆಂಗಳೂರು :

ದಿನಾಂಕ 7 ರವಿವಾರದ ಸಂಜೆ ಅಲ್ಲಿ ನೆರೆದವರಿಗೆಲ್ಲ “ಸುಶ್ರಾವ್ಯ”ವಾಗಿತ್ತು. ಕಿವಿಗೆ ಇಂಪು, ಕಣ್ಣಿಗೆ ತಂಪು, ಮನಕ್ಕೆ ಮುದ , ಹೊಟ್ಟೆಗೂ ಒಂದಿಷ್ಟು ಹದ! ಥ್ರೀ ಇನ್ ಒನ್ ಕಾರ್ಯಕ್ರಮ. ಸಪ್ತಕ ಸಂಗೀತ ಸಂಸ್ಥೆಯ 15 ನೆಯ ವಾರ್ಷಿಕೋತ್ಸವದ ಅಂಗವಾಗಿ ಏರ್ಪಟ್ಟ “ಸುಶ್ರಾವ್ಯ ಸಂಜೆ”.

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸುಂದರ ಹವ್ಯಕ ಸಭಾಗೃಹ ಅಕ್ಷರಶಃ ಕಲಾರಸಿಕರಿಂದ ತುಂಬಿತ್ತು. ಸಂಜೆ 4.30 ಕ್ಕೆ ಖ್ಯಾತ ಯುವ ಗಾಯಕ ಧನಂಜಯ ಹೆಗಡೆಯವರಿಂದ ಸುಶ್ರಾವ್ಯ ಸಂಗೀತ. ರಾಗ ಭೀಮಪಲಾಸದಲ್ಲಿ ಎರಡು ಬಂದಿಶ್ ಮತ್ತು ಒಂದು ದಾಸರ ಪದ. ಸಮಯ ಮಿತಿಯಲ್ಲೇ ಮುಕ್ತಾಯ.

ಎರಡನೇ ಹಂತವಾಗಿ ಸನ್ಮಾನ ಇಬ್ಬರು ಹಿರಿಯ ಪತ್ರರಕರ್ತರಿಗೆ. ಮೂಲತಃ ಇಬ್ಬರೂ ಉತ್ತರ ಕನ್ನಡದವರೆ. ಸದ್ಯ ಬೆಳಗಾವಿಯಲ್ಲಿರುವ ಎಲ್. ಎಸ್. ಶಾಸ್ತ್ರಿ ಮತ್ತು ವಿಶ್ವವಾಣಿ ಸಂಪಾದಕರಾದ ವಿಶ್ವೇಶ್ವರ ಭಟ್ಟರು. ಸನ್ಮಾನಿಸಿದವರೂ ಮೂಲತಃ ಉತ್ತರ ಕನ್ನಡದವರೇ ಮತ್ತು ಹಿರಿಯ ಪತ್ರರರ್ತರೇ- ಎಂ. ಕೆ. ಭಾಸ್ಕರರಾವ್. ಮೂವರೂ ಮಿತವಾಗಿ ಮತ್ತು ಹಿತವಾಗಿಯೇ ಮಾತನಾಡಿದರು. ಸಪ್ತಕದ ಜಿ. ಎಸ್. ಹೆಗಡೆ ಸ್ವಾಗತಿಸಿ ಪರಿಚಯವಿತ್ತರು. ಒಂದು ಆತ್ಮೀಯ ವಾತಾವರಣದಲ್ಲಿ ನಡೆದ ಕಾರ್ಯಕ್ರಮ.

ಮೂರನೆಯ ಹಂತದಲ್ಲಿ ನಡೆದದ್ದು ಕರಾವಳಿ ಜನರಿಗೆ ಪ್ರಿಯವಾದ ತಾಳಮದ್ದಳೆ – ಪ್ರಸಂಗ: ಸುಧನ್ವ ಮೋಕ್ಷ. ಭಾಗವತರಾಗಿ ಅನಂತ ಹೆಗಡೆ ದಂತಳಿಕೆ, ಮದ್ದಳೆಗಾರರಾಗಿ ಅನಂತ ಪಾಠಕ, ಪುಣೆ , ಕೃಷ್ಣನಾಗಿ ಶಿವಾನಂದ ಹೆಗಡೆ, ಸುಧನ್ವನಾಗಿ ನಾರಾಯಣ ಯಾಜಿ, ರ‍್ಜುನನಾಗಿ ಮೋಹನ ಹೆಗಡೆ ಹೆರವಟ್ಟಾ, ಪ್ರಭಾವತಿಯಾಗಿ ದಿವಾಕರ ಹೆಗಡೆ. ಎರಡು ತಾಸಿನ ಅವಧಿ ನಡೆದ ತಾಳಮದ್ದಳೆಯಲ್ಲಿ ಎಲ್ಲರೂ ತಮ್ಮ ಪಾತ್ರಗಳನ್ನು ಸರ‍್ಥವಾಗಿಯೇ ನರ‍್ವಹಿಸಿದರು. ಭಾಗವತಿಕೆ ಕಿವಿಗೆ ಹಿತಕರವಾಗಿತ್ತಾದರೂ ಮೂರು ನಾಲ್ಕು ಪದ್ಯಗಳು ಶುದ್ಧ ಯಕ್ಷಗಾನೀಯವಾಗಿರಲಿಲ್ಲವೆಂಬುದು ಬೇಸರದ ಸಂಗತಿ.

ಹಾಂ, ನಾಲ್ಕನೆಯ ಒಂದು ಹಂತವೂ ಇತ್ತು. ಅದು ಸುಗ್ರಾಸ ಭೋಜನದ್ದು. ಮೊದಲ ಮೂರು ಹಂತದ ಸಾಂಸ್ಕೃತಿಕ ಸೊಬಗಿಗೆ ಈ ಸವಿಯೂಟ ಸಾಥ್ ನೀಡಿತು.

ಈ ಎಲ್ಲವನ್ನೂ ಅಚ್ಚುಕಟ್ಟಾಗಿ ನರ‍್ವಹಿಸಿದ್ದು ಸಪ್ತಕದ ಸಂಸ್ಥಾಪಕ ಜಿ. ಎಸ್. ಹೆಗಡೆ, ಗೀತಾ ಹೆಗಡೆ, ಧನಂಜಯ ಹೆಗಡೆ ಮತ್ತವರ ಬಳಗದವರು. ಜಿ. ಎಸ್. ಹೆಗಡೆಯವರಿಗೆ ಸಂಘಟನೆ ಬಹಳ ಸಲೀಸು. ಅದರಲ್ಲೂ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು  ಏರ್ಪಡಿಸುವದು ಬಹಳ ಕಷ್ಟ. ಕಲಾವಿದರ ಬೆಲೆಯೂ ಇಂದು ಬಹಳ ಏರಿದೆ. ಸಹಜ. ಬೆಲೆ ಸಿಗಲೇಬೇಕು. ಆದರೆ ಅದು ಸಂಘಟನೆಗಳ ಆರ್ಥಿಕ ಸಾಸ್ಥವನ್ನು ಅವಲಂಬಿಸಿದ್ದು.

“ಸಪ್ತಕ” ಕಳೆದ ಹದಿನೈದು ರ‍್ಷಗಳಲ್ಲಿ ಅಗಾಧವಾದ ಕೆಲಸ ಮಾಡಿದೆ. ಮೂರೂವರೆ ನೂರರಷ್ಟು ಕಾರ್ಯಕ್ರಮ ನಡೆಸುವದರೊಡನೆ ಉದಯೋನ್ಮುಖ ನೂರಾರು ಕಲಾವಿದರಿಗೆ ಎಲ್ಲ ರೀತಿಯ ಉತ್ತೇಜನ, ಅವಕಾಶಗಳನ್ನು ಒದಗಿಸಿ ಬೆಳೆಸಿದೆ. ರಾಜ್ಯದ ಅಸಂಖ್ಯಾತ ಹಳ್ಳಿಗಳಲ್ಲೂ ಕಾರ್ಯಕ್ರಮ ನೀಡಿದೆ. ಅದರ ಸಾಧನೆ ಬಹಳ ದೊಡ್ಡದು. ಸಂಸ್ಥೆ ಬೆಳ್ಳಿಹಬ್ಬದತ್ತ ಸಾಗಲಿ ಎಂದು ಹಾರೈಸೋಣ.

ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್ ಸಂಕೇಶ್ವರ ರವರಿಗೆ ಪದ್ಮಶ್ರೀ ಪ್ರಶಸ್ತಿ

ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್ ಸಂಕೇಶ್ವರ ರವರಿಗೆ ಪದ್ಮಶ್ರೀ ಪ್ರಶಸ್ತಿ

ಚಂದ್ರಶೇಖರ ಕಂಬಾರ, ಡಾ. ಬಿ.ಎಂ.ಹೆಗ್ಡೆಗೆ ಪದ್ಮ ಭೂಷಣ, ಹಾಜಬ್ಬ, ವಿಜಯ್​ ಸಂಕೇಶ್ವರ್​ಗೆ ಪದ್ಮಶ್ರೀ ಪ್ರಶಸ್ತಿ

 

ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಮಹನೀಯರಿಗೆ 2020ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಸೋಮವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು.

ಕನ್ನಡಿಗ ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ ಹಾಗೂ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿದೆ.

ದಕ್ಷಿಣ ಕನ್ನಡದ ಅಕ್ಷರ ಸಂತ’ ಹರೇಕಳ ಹಾಜಬ್ಬ, ಕನ್ನಡತಿ ಮಂಜಮ್ಮ ಜೋಗತಿ, ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್, ಪರಿಸರ ಪ್ರೇಮಿ ತುಳಸಿ ಗೋವಿಂದೇಗೌಡ, ಮಾಜಿ ಹಾಕಿ ಪಟು ಎಂಪಿ ಗಣೇಶ್​​ ಮತ್ತು ಉದ್ಯಮಿ ವಿಜಯ್​ ಸಂಕೇಶ್ವರ್​  ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ : ಬೊಮ್ಮಾಯಿ

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ : ಬೊಮ್ಮಾಯಿ

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ : ಬೊಮ್ಮಾಯಿ

 

 

ಮುಂದಿನ ವರ್ಷದಿಂದ ಅರ್ಜಿ ಪಡೆದು ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ

 

ರಾಜ್ಯೋತ್ಸವ ಪ್ರಶಸ್ತಿ ಮೊತ್ತ 5 ಲಕ್ಷ ರೂ.ಗಳಿಗೆ ಹೆಚ್ಚಳ :

ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

 

ಬೆಂಗಳೂರು: ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯನ್ನು ಅರ್ಜಿ ಪಡೆದು ನೀಡಲಾಗುವುದಿಲ್ಲ. ಅದರ ಜತೆ

ರಾಜ್ಯೋತ್ಸವ ಪ್ರಶಸ್ತಿಯ ಮೊತ್ತವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯೋತ್ಸವ ಪ್ರಶಸ್ತಿ   ಪ್ರದಾನ  ಸಮಾರಂಭದಲ್ಲಿ ಘೋಷಿಸಿದರು.

ಅವರು ಇಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ  ಸಮಾರಂಭ – 2021ದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡುತ್ತಿದ್ದರು.

ರಾಜ್ಯೋತ್ಸವ ಈ ಪ್ರಶಸ್ತಿಯ ಮೌಲ್ಯ ಹೆಚ್ಚಬೇಕು.  ಹಣದ ಮೊತ್ತ ಇಲ್ಲಿ ಮಹತ್ವದ್ದಲ್ಲ. ಆದರೆ ಸರ್ಕಾರವೇ  ಪ್ರಶಸ್ತಿಎ ಅರ್ಹರನ್ನು ಗುರುತಿಸುತ್ತದೆ. ಎರಡು ತಿಂಗಳಿಗಿಂತ ಮುಂಚಿತವಾಗಿ ಆಯ್ಕೆ ಸಮೀತಿ ಸಾಧಕರನ್ನು ಪಟ್ಟಿ ಮಾಡುತ್ತದೆ. ನಂತರ ಸರ್ಕಾರವೇ ಸಾಧಕರ ನ್ನು ಅಯ್ಕೆ ಮಾಡಿ ಪ್ರಶಸ್ತಿ ನೀಡುತ್ತದೆ. ಇಂಥ ವ್ಯವಸ್ಥೆ ಜಾರಿಗೆ ಬರಲಿದೆ   ಎಂದರು.

ಸರ್ಕಾರವೇ ಅರ್ಹರನ್ನು ಗುರುತಿಸಿದಾಗ ಪ್ರಶಸ್ತಿಯ ಮೌಲ್ಯ ನೂರು ಪಟ್ಟು ಹೆಚ್ಚುತ್ತದೆ.

ಪ್ರಶಸ್ತಿ ಪಡೆಯುವವರ ನೋವು, ಅದರ ಹಿಂದಿರುವ ಕಠಿಣ ಪರಿಶ್ರಮವನ್ನು ಗುರುತಿಸಿ, ಸಮಾಜದಲ್ಲಿ  ಸಾಧಕರಿಗೆ ಯಾವುದೇ ಕಷ್ಟವಾಗಬಾರದು ಎಂಬ ದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇನ್ನು ಮುಂದೆ  ಯಾರೂ ಬಯೋ ಡೇಟಾ ತಯಾರು ಮಾಡಬೇಕಾದ, ಪತ್ರಿಕಾ ತುಣುಕುಗಳನ್ನು ಜೋಡಿಸಿತಟ್ಟು  ತೋರಿಸುವ ಅಗತ್ಯವಿಲ್ಲ ಎಂದು ಪ್ರಶಸ್ತಿ  ಆಕಾಂಕ್ಷಿಗಳಿಗೆ ಕಿವಿ ಮಾತು ಹೇಳಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಹಳ ಪ್ರತಿಷ್ಠಿತವಾದ್ದದ್ದು. ಇದರ ಮೌಲ್ಯ ಹೆಚ್ಚಾಗಬೇಕಾದರೆ ಆಯ್ಕೆ ಪ್ರಕ್ರಿಯೆ ಬದಲಾಗಬೇಕು. ಮಾಡದಂಡಗಳ ಪರಿಷ್ಕರಣೆಗೆ ಅಗತ್ಯ ಕ್ರಮ ವಹಿಸಲಾಗುವುದು.

ಒಳ್ಳೆತನಕ್ಕೆ ಶಿಕ್ಷಣ ಬೇಕಾಗಿಲ್ಲ ಮನಸ್ಸು ಒಳ್ಳೆಯದಿರಬೇಕು.   ಪೌರಕಾರ್ಮಿಕರಿಗೆ  ದೊಡ್ಡ ಪ್ರಶಸ್ತಿ ನೀಡಿದರೆ ಇನ್ನೂ ಹೆಚ್ಚು ಕೆಲಸ ಮಾಡುತ್ತಾರೆ.   ಆಯ್ಕೆ ಶೋಧನೆಯಿಂದಾಗಬೇಕು ಹೊರತಾಗಿ ಅರ್ಜಿಗಳಿಂದ ಅಲ್ಲ ಎಂದರು.

ಪ್ರತಿಭೆಗೆ ವಯಸ್ಸಿನ ಗಡಿ ಮಿತಿಗಳಿಲ್ಲ:  60 ವರ್ಷದ ಮೇಲ್ಪಟ್ಟವರಿಗೆ ಪ್ರಶಸ್ತಿ ನೀಡಬೇಕೆಂದು  ಹಿಂದೆ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಪ್ರತಿಭೆ ಎನ್ನುವುದು  ವಯಸ್ಸಿಗೆ ಸಂಬಂಧಿಸಿದ್ದಲ್ಲ. ತಂತ್ರಜ್ಞಾನದ ಕಾಲದಲ್ಲಿ ಅದೇಷ್ಟೋ  ಮಕ್ಕಳು ಎಷ್ಟೊಂದು ಕ್ಷೇತ್ರಗಳಲ್ಲಿ  ಪ್ರತಿಭಾವಂತರಿದ್ದಾರೆ. ಕನ್ನಡ ನಾಡಿನಲ್ಲಿ ಎಷ್ಟು  ನೀರಜ್ ಛೋಪ್ರಾ ಒಬ್ಬರಿಗೆ ಒಲಂಪಿಕ್ಸ್ ಚಿನ್ನದ  ಪದಕ ದೊರೆತಿರುವುದು ಇಡೀ ದೇಶಕ್ಕೆ ಸ್ಫೂರ್ತಿ ದೊರೆತಿದೆ ಎಂದು ಅಭಿಪ್ರಾಯ ಪಟ್ಟ ಮುಖ್ಯಮಂತ್ರಿಗಳು   ವಯಸ್ಸನ್ನು ಕಡಿಮೆ ಮಾಡುವ ಕುರಿತು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿ ಅನುಮತಿ ಪಡೆಯುವ  ಕೆಲಸವನ್ನು ಮುಂದಿನ ವರ್ಷ ಮಾಡಲಿದ್ದೇವೆ ಎಂದರು.

ಹಿರಿಯರ ಜೊತೆಗೆ ವಿಶೇಷ ಪ್ರತಿಭೆಗಳನ್ನು ಗುರುತಿಸಲಾಗುವುದು ಎಂದರು.

ಕಂದಾಯ ಸಚಿವ ಆರ್ ಅಶೋಕ್,

ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಮತ್ತು ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ – ರಾಜಭವನದಲ್ಲಿ ಸವಿಗನ್ನಡದ ಅನನ್ಯ ಕಾರ್ಯಕ್ರಮ

ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆ – ರಾಜಭವನದಲ್ಲಿ ಸವಿಗನ್ನಡದ ಅನನ್ಯ ಕಾರ್ಯಕ್ರಮ

ಬೆಂಗಳೂರು ಅಕ್ಟೋಬರ್ 24 : ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆರಂಭಗೊಂಡ ಕನ್ನಡಕ್ಕಾಗಿ ನಾವು ಅಭಿಯಾನ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಂದು ಬೆಂಗಳೂರಿನ ರಾಜಭವನದ ಗಾಜಿನಮನೆಯಲ್ಲಿ ವಿಶೇಷ “ಮಾತಾಡ್ ಮಾತಾಡ್ ಕನ್ನಡ” ಕಾರ್ಯಕ್ರಮ ನಡೆಯಿತು.
ಕನ್ನಡ ಹಾಡು, ಕನ್ನಡ ಧ್ವಜ, ಕನ್ನಡ ಅಕ್ಷರ ಹೀಗೆ ಕನ್ನಡಮಯವಾಗಿದ್ದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕನ್ನಡ ರಾಜ್ಯೋತ್ಸವದ ಲಾಂಛನವನ್ನು ಬಿಡುಗಡೆ ಮಾಡಿ, ಕನ್ನಡದಲ್ಲಿ ಮಾತನಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ರಾಜ್ಯಪಾಲರು, “ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ‘ ಕನ್ನಡಕ್ಕಾಗಿ ನಾವು’ ಅಭಿಯಾನವನ್ನು ಆಯೋಜಿಸಿದೆ. ಇದರಲ್ಲಿ ಎಲ್ಲರೂ ಭಾಗವಹಿಸೋಣ… ಕನ್ನಡ ಬಳಸೋಣ, ಬೆಳೆಸೋಣ, ಉಳಿಸೋಣ ಹಾಗೂ ಗೌರವಿಸೋಣ… “ಮಾತಾಡ್ ಮಾತಾಡ್ ಕನ್ನಡ” ಎಂದು ಕನ್ನಡ ಸಹೃದಯರಲ್ಲಿ ಮನವಿ ಮಾಡಿದರು.
ಸಂಜೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ವಿದ್ಯುಕ್ತವಾಗಿ ಆರಂಭಗೊಂಡಿತು. ಬಳಿಕ ಭರತ ನಾಟ್ಯ, ಯಕ್ಷಗಾನ ಪ್ರಸಂಗ, ಸಮೂಹ ನೃತ್ಯ ಕಾರ್ಯಕ್ರಮ ನಡೆದವು. ಕುವೆಂಪು ಅವರ ಬಾಗಿಲೊಳಗೆ ಕೈಮುಗಿದು ಒಳಗೆ ಬಾ ಯಾತ್ರಿಕನೆ ನೃತ್ಯ ಪ್ರದರ್ಶನ ಜನಮನ ಸೂರೆಗೊಂಡಿತು.
ದೀಪವು ನಿನ್ನದೇ, ಚೆಲ್ಲಿದರು ಮಲ್ಲಿಗೆಯ, ಅಕ್ಕು ಶ್ಯಾಮ ಅವಳೇ ರಾಧೆ ನಲಿಯುತ್ತಿರುವಳು, ಬಾರಿಸು ಕನ್ನಡ ಡಿಂಡಿಮವ ಹಾಡುಗಳ ನೃತ್ಯ ಪ್ರದರ್ಶನ ಬಹಳ ಸುಂದರವಾಗಿ ಮೂಡಿ ಬಂತು. ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.

See more pics

ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷ ಕಂಠಗಳಲ್ಲಿ ಮೊಳಗಲಿದೆ ಕನ್ನಡ ಗೀತೆಯ ಗಾಯನ

ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷ ಕಂಠಗಳಲ್ಲಿ ಮೊಳಗಲಿದೆ ಕನ್ನಡ ಗೀತೆಯ ಗಾಯನ

ಅಕ್ಟೋಬರ್ ೨೬-೨೦೨೧ : ಹಿಂದೆಂದೂ ನಡೆದಿರದ ಅಭೂತಪೂರ್ವ ಕನ್ನಡ ಉತ್ಸವ, ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ಅಕ್ಟೋಬರ್ ೨೮ರಂದು ಆಯೋಜಿಸಿರುವ ಲಕ್ಷ ಕಂಠಗಳ ಕನ್ನಡ ಗೀತಗಾಯನ ಕಾರ್ಯಕ್ರಮ ಅಸಾಧಾರಣ ರೀತಿಯಲ್ಲಿ ಆಯೋಜಿಸಿ ಯಶಸ್ವಿಗೊಳಿಸಲು ರಾಜ್ಯದ ಎಲ್ಲ ೩೧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಚರ್ಚಿಸಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ, ರಾಜ್ಯದ ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ಆಶಯದಂತೆ ಸರ್ಕಾರದ ಸಚಿವರುಗಳ ಸಹಕಾರದೊಂದಿಗೆ ವಿವಿಧ ಇಲಾಖೆಗಳ ಜೊತೆ ಸಮನ್ವಯ ಸಾಧಿಸಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಕ್ಟೋಬರ್ ೨೮ರಂದು ನಡೆಯಲಿರುವ ಈ ಗೀತಗಾಯನ ಕೇವಲ ಸರ್ಕಾರದ ಅಧಿಕಾರಿ ಸಿಬ್ಬಂದಿಗಳು ಮಾಡುವ ಸರ್ಕಾರಿ ಕಾರ್ಯಕ್ರಮವಾಗದೇ ಕನ್ನಡ ನಾಡಿನ ಜನಮಾನಸದ ಅಭಿಮಾನದ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು ಸ್ವಯಂ ಸ್ಫೂರ್ತಿಯಿಂದ ಜನತೆ ಈ ಗೀತಗಾಯನದಲ್ಲಿ ಹಾಡುವ ಮೂಲಕ ತಮ್ಮ ಅಭಿಮಾನ ಮತ್ತು ಕನ್ನಡ ಭಾಷೆ ಬಗೆಗಿನ ಪ್ರೀತಿಯನ್ನ ಅಭಿವ್ಯಕ್ತಿಗೊಳಿಸಲು ವೇದಿಕೆಯನ್ನಾಗಿ ಮಾಡುವ ಜವಾಬ್ದಾರಿ ಪ್ರತಿ ಜಿಲ್ಲಾಡಳಿತದ ಮೇಲಿದೆ. ಅದಕ್ಕೆ ಬೇಕಾದ ಪೂರ್ವಸಿದ್ಧತೆ, ಮಾಹಿತಿ ನೀಡುವಿಕೆ ಮತ್ತು ಕಾರ್ಯಕ್ರಮ ಆಯೋಜನೆಗೆ ಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಬೇಕೆಂದು ಜಿಲ್ಲಾಡಳಿತಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕಾರ್ಯಕ್ರಮದ ಜವಾಬ್ದಾರಿ ವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಿ ಹಾಡುವ ತಂಡಗಳ ಮಾಹಿತಿ, ಅವರಿಗೆ ಬೇಕಾದ ಕನಿಷ್ಠ ಅಗತ್ಯಗಳು ಮತ್ತು ಈ ಕಾರ್ಯಕ್ರಮದ ಪ್ರಚಾರ ಕಾರ್ಯನಿರ್ವಹಿಸಬೇಕೆಂದು ಸೂಚಿಸಲಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.

ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’- ಈ ಮೂರು ಗೀತೆಗಳು ಅಕ್ಟೋಬರ್ ೨೮ ರಂದು ಬೆಳಿಗ್ಗೆ ೧೧.00ಗಂಟೆಗೆ ಏಕ ಕಾಲದಲ್ಲಿ ರಾಜ್ಯಾದ್ಯಂತ ಮೊಳಗಲಿವೆ. ಇದಕ್ಕೆ ಬೇರ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ಹಾಗೂ ವಿಶ್ವಾದ್ಯಂತ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಕೂಟಗಳು ತಮಗೆ ಒದಗಿಸಿರುವ ನಿರ್ದಿಷ್ಟ ಜಾಲತಾಣ ಸಂಪರ್ಕದ ಮೂಲಕ ಒಟ್ಟಿಗೆ ಸೇರಿ ಹಾಡುವ ತಾಂತ್ರಿಕ ಸಂಯೋಜನೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂಪಿಸಿದೆ. ಇದರ ಮೂಲಕ ಒಂದೇ ಬಾರಿ ವಿಶ್ವದಾದ್ಯಂತ ಕನ್ನಡ ಗೀತೆಗಳು ಲಕ್ಷ ಲಕ್ಷ ಕಂಠಗಳಲ್ಲಿ ಮೊಳಗಲಿದೆ. ಇದು ಈ ಹಿಂದೆ ಎಂದೂ ನಡೆದಿರದ ಬೃಹತ್ ಹಾಗೂ ಅವಿಸ್ಮರಣೀಯ ಕಾರ್ಯಕ್ರಮವಾಗಲಿದೆ.

ಇಡೀ ನಾಡನ್ನು ಈ ೬೬ನೇ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡಮಯವನ್ನಾಗಿ ಮಾಡಲು, ಕನ್ನಡದ ಭಾವಲಹರಿ ಜನಮನದ ನರನಾಡಿಗಳಲ್ಲಿ ಸಂಚರಿಸುವ ರೋಮಾಂಚನವನ್ನು ಉಂಟು ಮಾಡಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಅಭಿಯಾನ ರೂಪುಗೊಂಡಿದೆ. ನಾಡಿನ ಎಲ್ಲ ಸರ್ಕಾರಿ ಕಚೇರಿಗಳಲ್ಲಿ, ಶಾಲಾ- ಕಾಲೇಜುಗಳ ಆವರಣದಲ್ಲಿ, ವಿಶ್ವವಿದ್ಯಾಲಯಗಳ ಆವರಣಗಳಲ್ಲಿ, ತಾಂತ್ರಿಕ ಹಾಗೂ ವೈದ್ಯಕೀಯ ಕಾಲೇಜುಗಳ ಆವರಣಗಳಲ್ಲಿ ಹಾಗೂ ಮೈಸೂರಿನ ಅರಮನೆಯ ಮುಂಭಾಗ ಮತ್ತು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ ಹಾಗೂ ಮಹಾನವಮಿ ದಿಬ್ಬವೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಪ್ರಸಿದ್ಧ ಸ್ಮಾರಕಗಳ ಮುಂದೆ ಸಾವಿರಾರು ಜನರು ಒಟ್ಟಿಗೆ ನಿಂತು ಈ ಗೀತಗಾಯನದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಈ ಕಾರ್ಯಕ್ರಮದ ಯಶಸ್ವಿ ಸಂಯೋಜನೆಗಾಗಿ ಪ್ರತೀ ಜಿಲ್ಲೆಗೂ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಈ ಸ್ಥಳಗಳೇ ಅಲ್ಲದೆ ರಾಜ್ಯದ ಎಲ್ಲ ದೊಡ್ಡ ಮಾರುಕಟ್ಟೆಗಳು, ಆಟೋರಿಕ್ಷಾ ನಿಲ್ದಾಣಗಳು, ಕೈಗಾರಿಕಾ ಪ್ರದೇಶಗಳು ಮತ್ತು ಜನನಿಬಿಡ ಸ್ಥಳಗಳಲ್ಲಿ ಈ ಗೀತ ಗಾಯನ ನಡೆಯಲಿದೆ. ದೊಡ್ಡ ಸಂಖ್ಯೆಯ ಗೀತಗಾಯನ ಸ್ಥಳಗಳಲ್ಲಿ ಈ ಗೀತೆಯ ಧಾಟಿಯನ್ನು ಕಲಿಸಲು ಪರಿಣತ ಸಂಗೀತ ಗಾಯಕರನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ವಿಮಾನ ನಿಲ್ದಾಣಗಳಲ್ಲೂ ಮೊಳಗಲಿದೆ ಕನ್ನಡದ ಗಾಯನ
ಈ ಅಭಿಯಾನದ ಅಂಗವಾಗಿ ವಿಶೇಷವಾಗಿ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲೂ ಸಹ ಈ ಕನ್ನಡದ ಗೀತಗಾಯನ ಅನುರುಣಿಸಲಿದೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಗಳೂರು ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿಯೂ ಸಹ ಸಾವಿರರು ಜನ ಒಟ್ಟಿಗೆ ನಿಂತು ಈ ಕನ್ನಡ ಗೀತೆಗಳ ಗಾಯನ ಮಾಡಲಿದ್ದಾರೆ.

ಮೆಟ್ರೋದಲ್ಲಿ ಮೊಳಗಲಿದೆ ಕನ್ನಡ ಕಂಠ
ಬೆಂಗಳೂರು ಮೆಟ್ರೋದಲ್ಲಿ ಕನ್ನಡಮಯ ವಾತಾವರಣ ಉಂಟುಮಾಡಲು ಅಕ್ಟೋಬರ್ ೨೮ರಂದು ಬೆಳಿಗ್ಗೆ ೧೧.೦೦ಗಂಟೆಗೆ ಬೆಂಗಳೂರು ಮೆಟ್ರೋದ ಎಲ್ಲಾ ರೈಲುಗಳಲ್ಲೂ ಸುಗಮ ಸಂಗೀತ ಗಾಯನ ತಂಡಗಳು ಈ ಮೂರು ಗೀತೆಗಳನ್ನು ಹಾಡುತ್ತವೆ. ಮೆಟ್ರೋದ ಎಲ್ಲಾ ೫೧ ನಿಲ್ದಾಣಗಳಲ್ಲಿ ಈ ಕನ್ನಡ ಗೀತೆಗಳ ಗಾಯನ ಧ್ವನಿವರ್ಧಕಗಳ ಮೂಲಕ ಪ್ರಸಾರವಾಗಲಿದೆ. ಅದರ ಜೊತೆಗೆ ಅತ್ಯಂತ ಜನ ನಿಬಿಡವಾದ 5 ಮೆಟ್ರೋ ನಿಲ್ದಾಣಗಳಲ್ಲಿ ಸಮೂಹ ಗೀತಗಾಯನ ನಡೆಯಲಿದೆ. ಅದರ ಜೊತೆಗೆ ಎಲ್.ಇ.ಡಿ. ಪರದೆಗಳನ್ನು ಅಳವಡಿಸಿ ಅದರ ಮೂಲಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಗುವುದು ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಕನ್ನಡಮಯ ಬೆಂಗಳೂರು
ಬೆಂಗಳೂರಿನ ಎಲ್ಲಾ ೨೮ ವಿಧಾನಸಭಾ ಕ್ಷೇತ್ರಗಳು ಹಾಗೂ ೧೯೮ ವಾರ್ಡ್ಗಳಲ್ಲಿ ಸ್ಥಳೀಯ ಶಾಸಕರು ಮತ್ತು ನಗರ ಸಭಾ ಸದಸ್ಯರ ಸಹಯೋಗದೊಂದಿಗೆ ಈ ಗೀತಗಾಯನದ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಎಲ್ಲಾ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನ ಸಂಸ್ಥೆಗಳ ಮುಂಭಾಗದ ಆವರಣಗಳಲ್ಲಿ ಸಾವಿರ ಸಾವಿರ ಸಂಖ್ಯೆಯ ಮಾಹಿತಿ ಮತ್ತು ತಂತ್ರಜ್ಞಾನ /ಜೈವಿಕ ತಂತ್ರಜ್ಞಾನದ ಉದ್ಯೋಗಿಗಳು, ಆಡಳಿತ ಮಂಡಳಿಯ ಸದಸ್ಯರು ಹಾಗೂ ಎಲ್ಲಾ ಆಸಕ್ತ ಸಾರ್ವಜನಿಕರು ಒಂದಾಗಿ ಸೇರಿ ಕನ್ನಡದ ಈ ಮೂರು ಗೀತೆಗಳನ್ನು ಹಾಡುವ ಮೂಲಕ ತಮ್ಮ ಕನ್ನಡ ಪ್ರೇಮ ಮೆರೆಯಲಿದ್ದಾರೆ. ಬೆಂಗಳೂರಿನ ಎಲ್ಲಾ ಕೈಗಾರಿಕಾ ಪ್ರದೇಶಗಳು, ಬಸ್ಸು ಮತ್ತು ಆಟೋ ನಿಲ್ದಾಣಗಳು ಈ ಕನ್ನಡ ಗೀತಗಾಯನಕ್ಕೆ ಕಿವಿಯಾಗಲಿವೆ.
ಬಹಳ ಮುಖ್ಯವಾಗಿ ರಾಜಧಾನಿ ಬೆಂಗಳೂರಿನ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮುಖ್ಯಕಾರ್ಯದರ್ಶಿಗಳ ಜೊತೆ ಸ್ವತಃ ತಾವೇ ಸಾವಿರಾರು ಸಂಖ್ಯೆಯ ಅಧಿಕಾರಿ / ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಈ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಸಚಿವ ಸುನಿಲ್ ಕುಮಾರ್ ಘೋಷಿಸಿದರು. ವಿಕಾಸಸೌಧ, ವಿಧಾನಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆಯ ಮುಂಭಾಗದಲ್ಲಿಯೂ ಈ ಗೀತಗಾಯನ ಆಯೋಜಿಸಿದ್ದು, ಎಲ್ಲಾ ಐಎಎಸ್, ಕೆಎಎಸ್ ಅಧಿಕಾರಿಗಳು ಸಚಿವಾಲಯದ ಅಧಿಕಾರಿ / ಸಿಬ್ಬಂದಿ, ವಿಧಾನಮಂಡಲದ ಅಧಿಕಾರಿ/ಸಿಬ್ಬಂದಿಗಳು ಈ ಗೀತಗಾಯನದಲ್ಲಿ ಭಾಗವಹಿಸಿ ವಿಧಾನಸೌಧದ ಆವರಣದಲ್ಲಿ ಕನ್ನಡ ಕಂಠದ ಅನುರುಣನಕ್ಕೆ ಸಾಕ್ಷಿಯಾಗಲಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯ ಮುಂಭಾಗದಲ್ಲಿಯೂ ಸಹ ಈ ಗೀತಗಾಯನದ ಸಂಭ್ರಮ ಅನಾವರಣಗೊಳ್ಳಲಿದೆ ಎಂದು ಎಂದು ಅವರು ತಿಳಿಸಿದರು.

ವಿವಿಧ ಜಿಲ್ಲೆಗಳಲ್ಲಿ ಗೀತಗಾಯನದ ಪ್ರಮುಖ ತಾಣಗಳು
ಜೋಗದ ಮುಂದೆ ಜೋಗದ ಸಿರಿ ಬೆಳಕಿನಲ್ಲಿ –
• ಈ ಗೀತಗಾಯನದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಜೋಗದ ಜಲಪಾತದ ಮುಂದೆ ಸಾವಿರ ಜನರ ಕಂಠದಲ್ಲಿ ಈ ಕನ್ನಡ ಗೀತೆಗಳನ್ನು ಹಾಡಲು ಯೋಜಿಸಲಾಗಿದೆ. ಹಾಗೆಯೇ ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಕವಿಶೈಲದಲ್ಲಿ ಈ ಗೀತೆಗಳು ಮೊಳಗಲಿವೆ.
• ಚಿತ್ರದುರ್ಗದ ಸುಪ್ರಸಿದ್ಧ ಕೋಟೆಯ ಮುಂಭಾಗದಲ್ಲಿ
• ಮಂಗಳೂರು ಸಮುದ್ರತೀರ,
• ಉಡುಪಿಯ ಶ್ರೀ ಕೃಷ್ಣದೇಗುಲದ ಮುಂಭಾಗದಲ್ಲಿ ಕೂಡ ಈ ಗೀತಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.
• ಮೂಡಬಿದರೆಯ ಸಾವಿರ ಕಂಬದ ಬಸದಿ ಹಾಗೂ ಮಂಗಳೂರು ಬಂದರಿನ ಮೀನುಗಾರರ ಮಧ್ಯೆ ಈ ಗೀತೆಗಾಯನ ನಡೆಯಲಿದೆ.
• ಮೈಸೂರಿನ ಅರಮನೆ ಮುಂಭಾಗ ಹಾಗೂ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗಾಯನ ತಂಡಗಳು ಈ ಗೀತೆಗಳನ್ನು ಹಾಡಲಿದೆ.
• ಬೆಳಗಾವಿಯ ಸುವರ್ಣಸೌಧದ ಮುಂದೆ ಹಾಗೂ ಬೆಳಗಾವಿ ಗಡಿ ಪ್ರದೇಶಗಳಲ್ಲಿ,
• ಹಂಪಿಯ ವಿರೂಪಾಕ್ಷ ದೇಗುಲದ ಮುಂದೆ, ಮಹಾನವಮಿ ದಿಬ್ಬ, ವಿಜಯವಿಠ್ಠಲ ದೇವಸ್ಥಾನದ ಆವರಣ, ಕಲ್ಲಿನ ರಥದ ಮುಂಭಾಗ,
• ತುಮಕೂರಿನ ಸಿದ್ಧಗಂಗಾ ಮಠದ ಆವರಣದಲ್ಲಿ ಒಂಭತ್ತು ಸಾವಿರ ವಿದ್ಯಾರ್ಥಿಗಳು ಈ ಗೀತಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ.
• ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿ ದೇಗುಲದ ಮುಂಭಾಗ,
• ಕೊಡಗಿನ ಭಾಗಮಂಡಲ ಹಾಗೂ ಇತರ ಪ್ರವಾಸಿ ತಾಣಗಳ ಮುಂದೆ
• ಹಾಸನದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ ಹಾಗೂ ಕನ್ನಡದ ಪ್ರಥಮ ಶಾಸನ ದೊರೆತ ಹಲ್ಮಿಡಿ ಗ್ರಾಮದಲ್ಲಿ ಈ ಗೀತಗಾಯನದ ಕಂಪು ಪಸರಿಸಲಿದೆ.
• ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನದ ಮುಂಭಾಗ
• ಯಾದಗಿರಿಯ ಬಂದೀಖಾನೆ ಮುಂಭಾಗ
• ಹಾವೇರಿಯ ಸುಪ್ರಸಿದ್ಧ ಕಾಗಿನೆಲೆ, ಶಿಶುನಾಳ, ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಹಾಗೂ ಕನಕದಾಸರ ಜನ್ಮಸ್ಥಳ ಬಾಡಾದಲ್ಲಿ ಈ ಗೀತಗಾಯನ ಆಯೋಜಿಸಲಾಗುತ್ತಿದೆ.
• ವಿಜಯಪುರದ ಅಕ್ಕಮಹಾದೇವಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಆವರಣ ಹಾಗೂ ಗಡಿಭಾಗಗಳಲ್ಲಿ.
• ರಾಯಚೂರಿನ ಹಟ್ಟಿ ಚಿನ್ನದಗಣಿ ಆವರಣ, ಆರ್.ಟಿ.ಪಿ.ಎಸ್. ವಿದ್ಯುತ್ ಉತ್ಪಾದನಾ ಘಟಕದ ಮುಂಭಾಗದಲ್ಲಿಯೂ ಕನ್ನಡ ಗೀತೆಯ ಗಾಯನ ಗಂಗೆ ಪ್ರವಹಿಸಲಿದೆ.
ಒಟ್ಟಾರೆಯಾಗಿ ಕನ್ನಡಕ್ಕಾಗಿ ನಾವು ಅಭಿಯಾನದ ಈ ಗೀತಗಾಯನ ಕಾರ್ಯಕ್ರಮದ ಮೂಲಕ ಕನ್ನಡದ ಉದ್ಘೋಷ ಒಂದೇ ಭಾರಿಗೆ ಇಡೀ ವಿಶ್ವದಲ್ಲಿ ಮೊಳಗಬೇಕು ಎಂದು ಮಹದಾಶಯದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಇದು ಯಾರೋ ಒಬ್ಬ ವ್ಯಕ್ತಿ, ಒಂದು ಸರ್ಕಾರ, ಒಂದು ಸಮುದಾಯಕ್ಕೆ ಸೀಮಿತವಾದದ್ದಲ್ಲ. ಇದು ಕರ್ನಾಟದ ಪ್ರತೀ ಮನೆ, ಮನದ ಕಾರ್ಯಕ್ರಮವಾಗಬೇಕು. ಕನ್ನಡಿಗರ ಕನ್ನಡ ಪ್ರೇಮ ಹಾಗೂ ಕನ್ನಡದ ಅಸ್ಮಿತೆ ಪ್ರಕಟವಾಗಲು ಇದೊಂದು ಅಭೂತಪೂರ್ವ ಅವಕಾಶವಾಗಿದೆ. ಆದ್ದರಿಂದ ಪ್ರತಿಯೊಬ್ಬ ಕನ್ನಡಿಗನೂ, ಕರ್ನಾಟಕದ ವಾಸಿಯೂ ಈ ಗೀತಗಾಯನದಲ್ಲಿ ಭಾಗಿಯಾಗುವ ಮೂಲಕ ಕನ್ನಡ ಸಂಸ್ಕೃತಿಯ ಭಾಗವಾಗಬೇಕೆಂಬುದು ನನ್ನ ಆಶಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.

ಕನ್ನಡ ಮಾತನಾಡುವ ಸ್ಪರ್ಧೆ
ಇದರೊಂದಿಗೆ ಅಂತರ್ಜಾಲದ ಮೂಲಕವೇ ಕನ್ನಡ ಮಾತನಾಡುವ ಸ್ಪರ್ಧೆಯನ್ನು ಅಕ್ಟೋಬರ್ ೨೪ರಿಂದ ನಡೆಸಲಾಗುತ್ತಿದೆ. ಈ ಸ್ಪರ್ಧೆಯಲ್ಲಿ ಸಾರ್ವಜನಿಕರು ಭಾಗವಹಿಸಿ ತಪ್ಪಿಲ್ಲದೆ ಕನ್ನಡವನ್ನು ೩ ರಿಂದ ೪ ನಿಮಿಷಗಳ ವರೆಗೆ ಮಾತನಾಡಿ ಅದರ ದೃಶ್ಯ ಚಿತ್ರೀಕರಿಸಿ ಅಂರ್ತಜಾಲದ ಮೂಲಕ ಕಳುಹಿಸಬೇಕಾಗಿದೆ. ಈ ಸ್ಪರ್ಧೆಯ ಅಂತಿಮ ದಿನಾಂಕವನ್ನು ಅಕ್ಟೋಬರ್ 28ರವರೆಗೂ ವಿಸ್ತರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಈ ಸ್ಪರ್ಧೆಗಳು ನಡೆಯಲಿವೆ. ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ರೂ.5000-00ಗಳ ನಗದು, ದ್ವಿತೀಯ ಬಹುಮಾನ ರೂ.3000-00ಗಳ ನಗದು ಹಾಗೂ ತೃತೀಯ ಬಹುಮಾನವಾಗಿ ರೂ.2000-00ಗಳ ನಗದು ಬಹುಮಾನ ನೀಡಲಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ರೂ.50,000-0ಗಳ ಪ್ರಥಮ ಬಹುಮಾನ, ರೂ.30,000-00ಗಳ ದ್ವಿತೀಯ ಬಹುಮಾನ ಹಾಗೂ ರೂ.20,000-00ಗಳ ತೃತೀಯ ಬಹುಮಾನ ನೀಡಲಾಗುವುದು. ಆಸಕ್ತರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಣಜ ಅಥವಾ ಕುವೆಂಫು ಭಾಷಾ ಭಾರತಿ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದರು.