by gadi@dmin | Sep 26, 2024 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ತಂತ್ರಜ್ನಾನ
ವಿಜ್ಞಾನಿಗಳ ಸಾಧನೆ ಯುವ ಪೀಳಿಗೆಗೆ ಆದರ್ಶ: ಸಿಎಂ
ವಿಜ್ಞಾನ-ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲ: ಸಾಧಕರಿಗೆ ಮೆಚ್ಚುಗೆ ಸೂಚಿಸಿದ ಸಿಎಂ
ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ: ಸಿ.ಎಂ
ಬೆಂಗಳೂರು ಸೆ 26: ವಿಜ್ಞಾನದ ಬೆಳವಣಿಗೆಯಿಂದ ಮಾತ್ರ ದೇಶದ ಸರ್ವತೋಮುಖ ಪ್ರಗತಿ ಸಾಧ್ಯ ಎಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನ ಮಂದಿರ ಸಂಸ್ಥೆಯ (IISC) ಜೆ.ಎನ್.ಟಾಟಾ ಸಭಾಂಗಣದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮದಲ್ಲಿ 2022 ಮತ್ತು 2023 ನೇ ಸಾಲಿನ ವಿಜ್ಞಾನಿ ಮತ್ತು ಇಂಜಿನಿಯರ್ ರಾಜ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳ ಸಾಧನೆ ಯುವ ಪೀಳಿಗೆಗೆ ಆದರ್ಶ. ಇವರ ಸಾಧನೆ ವಿಜ್ಞಾನ-ತಂತ್ರಜ್ಞಾನದಲ್ಲಿ ಯುವ ಪೀಳಿಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಲು ಅನುಕೂಲ ಆಗುತ್ತದೆ ಎಂದು ಶ್ಲಾಘಿಸಿದರು.
ಸಿ.ಎನ್.ರಾವ್ ಅವರ ಸಾಧನೆ ಇಡಿ ಮನುಷ್ಯ ಕುಲದ ಹೆಮ್ಮೆ. ವಿಜ್ಞಾನದ ಬೆಳವಣಿಗೆಗೆ ಇವರ ತುಡಿತ ಶ್ಲಾಘನೀಯ. ಕರ್ನಾಟಕ ರಾಜ್ಯ ವಿಜ್ಞಾನ-ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ನಂಬರ್ ಒನ್ ಇದ್ದೇವೆ. ಈ ವಿಜ್ಞಾನ ತಂತ್ರಜ್ಞಾನದ ಫಲ ಜನ ಸಾಮಾನ್ಯರಿಗೆ ತಲುಪಬೇಕು ಎಂದು ಆಶಿಸಿದರು.
ಬೆಂಗಳೂರು ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಆಗಿದೆ ಎಂದರೆ ಇದರಲ್ಲಿ ಹಲವು ವಿಜ್ಞಾನಿಗಳ, ತಂತ್ರಜ್ಞರ ಕೊಡುಗೆ ಇದೆ ಎಂದರು.
ವಿಜ್ಞಾನದ ಆಸಕ್ತಿ ಹೆಚ್ಚಿ, ವಿಜ್ಞಾನಿಗಳ ಸಂಖ್ಯೆ ಹೆಚ್ಚಾದರೆ ದೇಶದ ಬೆಳವಣಿಗೆ ಸಾಧ್ಯ. ಸಮಾಜದ ತಾರತಮ್ಯ ಅಳಿಯಬೇಕಾದರೆ ಎಲ್ಲಾ ಜಾತಿ, ಧರ್ಮ, ವರ್ಗಗಳಿಗೆ ಸಮಾನ ಅವಕಾಶಗಳು ಸಿಗುವಂತಾಗಬೇಕು ಎಂದರು.
ಗ್ರಾಮೀಣ ಭಾಗದ ಹಲವರು ವಿಜ್ಞಾನಿಗಳಾಗಿ ಪ್ರಶಸ್ತಿ ಪುರಸ್ಕೃತರಾಗಿರುವುದು ಖುಷಿಯ ವಿಚಾರ.
ಪ್ರತಿಭೆ ಅನುವಂಶೀಯ ಅಲ್ಲ. ಅವಕಾಶ ಮತ್ತು ನಿರಂತರ ಶ್ರಮದಿಂದ ಪ್ರತಿಭೆ ವಿಸ್ತಾರಗೊಳ್ಳುತ್ತದೆ ಎಂದರು.
ಭಾರತ ರತ್ನ ಪ್ರೊ.ಸಿ.ಎನ್.ಆರ್.ರಾವ್ , ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
by gadi@dmin | Nov 29, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ತಂತ್ರಜ್ನಾನ, ನಮ್ಮ ಬೆಂಗಳೂರು
ಬೆಂಗಳೂರು ಟೆಕ್ ಸಮ್ಮೇಳನ ಉದ್ಘಾಟನೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಆರಂಭವಾದ ಬೆಂಗಳೂರು ಟೆಕ್ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ, ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಐಟಿ, ಬಿಟಿ ಇಲಾಖೆ ಕಾರ್ಯದರ್ಶಿ ಡಾ ಏಕರೂಪ್ ಕೌರ್, ಉದ್ಯಮಿಗಳಾದ ಮಾರ್ಕ್ ಪೇಪರ್ ಮಾಸ್ಟರ್, ಕ್ರಿಶ್ ಗೋಪಾಲಕೃಷ್ಣನ್, ಡಾ. ಕಿರಣ್ ಮಜುಂದಾರ್ ಷಾ, ಪ್ರಶಾಂತ ಪ್ರಕಾಶ, ನಿವೃತಿ ರೈ, ಅರವಿಂದ ಕುಮಾರ್ ಮತ್ತಿತರರು ಭಾಗವಹಿಸಿದ್ದರು.
by gadi@dmin | Nov 2, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ತಂತ್ರಜ್ನಾನ, ನಮ್ಮ ಬೆಂಗಳೂರು
ಮಹಾರಾಣಿ ಮಹಿಳಾ ಕ್ಲಸ್ಟರ್ ವಿವಿಯ ಚೊಚ್ಚಲ ಘಟಿಕೋತ್ಸವ: ಪ್ರೋ. ಪಿ. ಬಲರಾಮ್, ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಕರ್ನಾಟಕದಲ್ಲಿ ಮಹಿಳಾ ಅಭಿವೃದ್ಧಿಗೆ ಆದ್ಯತೆ – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು,ನ, 2; ಕರ್ನಾಟಕ ಒಳಗೊಂಡಂತೆ ದೇಶದಲ್ಲಿ ಮಹಿಳಾ ಅಭಿವೃದ್ಧಿಗೆ ಆದ್ಯತೆ ದೊರೆಯುತ್ತಿದ್ದು, ಲಿಂಗತಾರತಮ್ಯ ನಿವಾರಣೆಯತ್ತ ದೇಶ ಸಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವಕ್ಕೆ ಅವರು ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಖ್ಯಾತ ವಿಜ್ಞಾನಿ ಪ್ರೊ. ಪಿ. ಬಲರಾಮ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ಬಹು ಹಿಂದಿನಿಂದಲೇ ಶಕ್ತಿ ತುಂಬುವ ಪ್ರಯತ್ನಗಳು ನಡೆಯುತ್ತಿವೆ. 1948 ರಲ್ಲಿಯೇ ಮೈಸೂರು ಮಹಾರಾಜರು ಮಹಾರಾಣಿ ಕಾಲೇಜು ಸ್ಥಾಪಿಸಿದ್ದರು. ರಾಜ್ಯ ಸರ್ಕಾರ ಕೂಡ ಮಹಾರಾಣಿ ವಿವಿಯನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಸಹಕಾರ ನೀಡುತ್ತಿದೆ ಎಂದರು.
ಕೇಂದ್ರ ಸರ್ಕಾರ ಕೂಡ ಭೇಟಿ ಬಚಾವೋ ಭೇಟಿ ಫಡಾವೋ ಸೇರಿದಂತೆ ಹಲವಾರು ಮಹಿಳಾ ಆಧಾರಿತ ಕಾರ್ಯಕ್ರಮಗಳ ಮೂಲಕ ಮಹಿಳಾ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಮಹಿಳೆಯರು ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯುದಯಪಥದತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿದ್ದು, ಇವೆಲ್ಲವೂ ಮಹಿಳೆಯರಿಗೆ ಉತ್ತಮ ಪ್ರಾತಿನಿಧ್ಯ ದೊರಕಿಸಿಕೊಡುವ ಪ್ರಯತ್ನಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ, ಪದ್ಮಭೂಷಣ ಪ್ರೊ. ಪಿ. ಬಲರಾಮ್, ಶಿಕ್ಷಣ, ವಿಜ್ಞಾನ, ಸಂಶೋಧನೆ ಸಾರ್ವಜನಿಕ ವಲಯದ ವಿಚಾರಗಳಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಭವ್ಯ ಭವಿಷ್ಯ ಯುವ ಸಮೂಹದ ಕೈಯಲ್ಲಿದ್ದು, ಅದರಲ್ಲೂ ಮುಂದಿನ ದಿನಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಿರುತ್ತದೆ. ಈ ದೇಶದಲ್ಲೂ ಮಹಿಳಾ ಮೀಸಲಾತಿ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಆದರೆ ಇದೀಗ ಮೀಸಲಾತಿ ಜಾರಿಗೆ ತೀರ್ಮಾನವಾಗಿದ್ದು, ಅನುಷ್ಠಾನ ಮುಂದೂಡಲಾಗಿದೆ ಎಂದರು.
ಶಿಕ್ಷಣ ಕೇವಲ ಜ್ಞಾನವಷ್ಟೇ ಅಲ್ಲದೇ ನಿರಂತರ ಕಲಿಕೆಯೂ ಇದರ ಮೂಲಗುಣವಾಗಿದೆ. ವಿವಿಗಳಲ್ಲಿ ಕೇವಲ ಕಲಿಯುವುದಲ್ಲ, ಏನನ್ನು ಮತ್ತು ಹೇಗೆ ಕಲಿಯಬೇಕು ಎಂಬುದು ಮುಖ್ಯವಾಗಲಿದೆ. ಕಠಿಣ ಪರಿಶ್ರಮ ಅತ್ಯಂತ ಅಗತ್ಯ. ಪ್ರೊ. ನಾರಾಯಣಮೂರ್ತಿ ಅವರು ವ್ಯಕ್ತಿಗಳ ಅಭಿವೃದ್ಧಿಗೆ ಕಠಿಣ ಶ್ರಮ ಅಗತ್ಯ ಎಂದು ಹೇಳಿದ್ದು, ಇದನ್ನು ಬೇರೆ ರೀತಿ ಅರ್ಥೈಸಲಾಗುತ್ತಿದೆ. ಬದುಕಿನಲ್ಲಿ ವೈಫಲ್ಯ ಸಹಜವಾದದ್ದು, ನಂತರವಷ್ಟೇ ಗೆಲುವು ಸಾಧ್ಯ ಎಂದು ಪ್ರತಿಪಾದಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡುತ್ತಿದ್ದು, ಬಾಲಕರು ಖಾಸಗಿ ಕಾಲೇಜುಗಳಿಗೆ ಹೆಚ್ಚು ಸೇರುತ್ತಿದ್ದಾರೆ. ಮಹಾರಾಣಿ ಕಾಲೇಜು ಇದಕ್ಕೆ ಉದಾಹರಣೆಯಾಗಿದ್ದು, ಇಲ್ಲಿನ ಕಲಾ, ವಿಜ್ಞಾನ ಕಾಲೇಜು ಎದುರುಗಡೆ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳನ್ನು ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಅತ್ಯಂತ ದೊಡ್ಡ ಮೂಲ ಸೌಕರ್ಯ ಕಲ್ಪಿಸಿದ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಶಿಥಿಲಗೊಂಡಿರುವ ಮೈಸೂರಿನ ಮಹಾರಾಜ ವಿಜ್ಞಾನ, ಕಲೆ, ವಾಣಿಜ್ಯ ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿ 11 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಬಡ ವಿದ್ಯಾರ್ಥಿಗಳು ಕಲಿಯುತ್ತಿರುವ ಇಲ್ಲಿ 51 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಇನ್ಪೋಸಿಸ್ ಮುಖ್ಯಸ್ಥರಾದ ಪ್ರೊ. ನಾರಾಯಣ ಮೂರ್ತಿ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಶಿಘ್ಲಘಟ್ಟದವರು. ಆದರೆ ಸುಧಾಮೂರ್ತಿ ಅವರು ಹುಬ್ಬಳ್ಳಿ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅವರು ನಮ್ಮ ಹಿಂದುಳಿದ ಜಿಲ್ಲೆಯತ್ತಲೂ ದೃಷ್ಟಿ ಹರಿಸಬೇಕು. ಇಲ್ಲಿನ ಅಭಿವೃದ್ಧಿಗೂ ಕೊಡುಗೆ ನೀಡಬೇಕು, ಈಗಾಗಲೇ ಪ್ರೊ. ನಾರಾಯಣ ಮೂರ್ತಿ ಅವರ ಜೊತೆ ಭವಿಷ್ಯದ ಶಿಕ್ಷಣ ಸ್ವರೂಪದ ಬಗ್ಗೆ ಚರ್ಚೆ ನಡೆಸಿರುವುದಾಗಿ ಎಂದು ಡಾ. ಎಂ.ಸಿ. ಸುಧಾಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥರಾದ ಡಾ. ಸುಧಾಮೂರ್ತಿ, ಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಲ್. ಗೋಮತಿ ದೇವಿ, ಕುಲಸಚಿವರಾದ ಪ್ರೊ. ಅನುರಾಧ ಬಿ, ಆಡಳಿತ ವಿಭಾಗದ ಕುಲಸಚಿವರಾದ ಸಂಗಪ್ಪ, ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಪಾಲ್ಗೊಂಡಿದ್ದರು.
by gadi@dmin | Aug 13, 2023 | ತಂತ್ರಜ್ನಾನ
ಸ್ಟಾರ್ಟ್‌ಅಪ್‌ಗಳು ಮತ್ತು ಉದ್ದಿಮಗಳಲ್ಲಿ ಸಂಶೋಧನೆಯ ಉತ್ತೇಜನಕ್ಕಾಗಿ ಕರ್ನಾಟಕ ರಿಸರ್ಚ್ ಫೌಂಡೇಶನ್ ಸ್ಥಾಪನೆ: ಸಚಿವ ಎನ್.ಎಸ್ ಬೋಸರಾಜು
– ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವನೆಗಳ ಅಳವಡಿಕೆಯತ್ತ ಹೆಚ್ಚಿನ ಒತ್ತು
– ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸ್ಟಾರ್ಟ್‌ಅಪ್ ಮತ್ತು ಉದ್ದಿಮೆಗಳಿಗೆ ನೂತನ ಉತ್ಪನ್ನಗಳ ಸಂಶೋಧನೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣದ ಗುರಿ
ಚಿಕ್ಕಬಳ್ಳಾಪುರ ಆಗಸ್ಟ್ 12: ರಾಜ್ಯದಲ್ಲಿ ಸ್ಟಾರ್ಟ್ ಅಪ್‌ಗಳು ಮತ್ತು ಉದ್ದಿಮೆಗಳು ನೂತನ ಉತ್ಪನ್ನಗಳ ಸಂಶೋಧನೆಗೆ ಮತ್ತು ಉತ್ಪಾದನೆಗೆ ಪೂರಕ ವಾತಾವರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸಂಶೋಧನಾ ಫೌಂಡೇಶನ್ ನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಅವರು ತಿಳಿಸಿದರು.
ಚಿಕ್ಕಬಳ್ಳಾಪುರದ ಸತ್ಯ ಸಾಯಿ ಗ್ರಾಮದಲ್ಲಿ ಆಯೋಜಿಸಲಾಗಿರುವ ಇಂಡಿಯನ್ ಸ್ಟಾರ್ಟ್‌ಅಪ್ ಫೆಸ್ಟಿವಲ್ – 2023 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವೈಜ್ಞಾನಿಕ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಆರ್ಥಿಕ ಚಟುವಟಿಕೆಗಳಿಗೆ ಬಹಳ ಅಗತ್ಯ ಮತ್ತು ಸ್ಟಾರ್ಟ್ ಅಪ್ ಎಕೋಸಿಸ್ಟಮ್‌ಗೆ ಮೂಲ. ನಮ್ಮ ಸರಕಾರ ಸ್ಟಾರ್ಟ್ ಅಪ್‌ಗಳ ಸ್ಥಾಪನೆಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದೆ. ಶಿಕ್ಷಣದಲ್ಲಿ ವೈಜ್ಞಾನಿಕ ಅಂಶಗಳನ್ನು ಅಳವಡಿಸುವ, ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಉದ್ದಿಮೆಗಳಿಗೆ ಪೂರಕವಾದ ವಾತಾವರಣ, ಪರಿಸರ ಸುಸ್ಥಿರತೆಯನ್ನು ಕಾಪಾಡುವಂತಹ ರೋಬಸ್ಟ್ ಎಕಾಮಿಯನ್ನ ಉತ್ತೇಜಿಸುವ ಗುರಿಗಳನ್ನು ನಾವು ಹೊಂದಿದ್ದೇವೆ. ಬೆಂಗಳೂರು ನಗರ ಸ್ಟಾರ್ಟ್‌ಅಪ್ ಗಳ ರಾಜಧಾನಿ ಎಂದೇ ಹೆಸರುವಾಸಿ. ರಾಜ್ಯದಲ್ಲಿರುವ ಹೂಡಿಕೆ ಪೂರಕ ವಾತಾವರಣದ ಕಾರಣದಿಂದಾಗಿ ಹೆಚ್ಚಿನ ಉದ್ದಿಮೆಗಳು ಹಾಗೂ ಸ್ಟಾರ್ಟ್ ಅಪ್ ಗಳು ಸ್ಥಾಪನೆ ಆಗುತ್ತಿವೆ. ಹೊಸ ಉದ್ದಿಮೆಗಳೂ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಸಂಶೋಧನೆ ಬಹಳ ಅವಶ್ಯಕ. ಉತ್ತಮ ಉತ್ಪನ್ನಗಳನ್ನ ಹಾಗೂ ಸೇವೆಗಳನ್ನ ನೀಡುವ ನಿಟ್ಟಿನಲ್ಲಿ ಸಂಸ್ಥೆಗಳಿಗೆ ಸಂಶೋಧನೆ ಕೈಗೊಳ್ಳಲು ಅನುವು ಮಾಡಿಕೊಡುವ ಉದ್ದೇಶವನ್ನು ಕರ್ನಾಟಕ ರಿಸರ್ಚ್ ಫೌಂಡೇಶನ್ ಹೊಂದಿದೆ. ಅಲ್ಲದೇ, ಖಾಸಗಿ ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ವ್ಯಕ್ತಿಗಳು ಸಂಶೋಧನೆ ಮತ್ತು ಅಭಿವೃದ್ದಿಗೆ ಉತ್ತೇಜನ ನೀಡಲು ಕೆಎಸ್‌ಆರ್‌ಎಫ್ ಗೆ ತಮ್ಮ ಕೊಡುಗೆಯನ್ನು ನೀಡಬಹುದಾದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ರಾಜ್ಯದ ಯುವ ಉದ್ಯಮಿಗಳ ಆಶೋತ್ತರಗಳಿಗೆ ಪೋಷಣೆ ನೀಡುವ ಮೂಲಕ ಸುಸ್ಥಿರ ಆರ್ಥಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ದವಾಗಿದೆ. ಕೆಎಸ್‌ಆರ್‌ಎಫ್ ಮೂಲಕ ಹಂತಹಂತವಾಗಿ ಸಂಶೋಧನೆ ಮತ್ತು ಅಭಿವೃದ್ದಿಗೆ ಉತ್ತೇಜನ ನೀಡುವ ನಿಟ್ಟಿನಲಿ ರಾಜ್ಯದ ಜಿಡಿಪಿಯ ಶೇಕಡಾ 3 ರಷ್ಟ ಹಣವನ್ನು ಸಂಶೋಧನಾ ಚಟುವಟಿಕೆಗಳಿಗೆ ವಿನಿಯೋಗಿಸುವ ಗುರಿಯನ್ನು ಹೊಂದಿದ್ದೇವೆ. ರಾಜ್ಯದ ಜ್ಞಾನಾರ್ಜನೆಯ ಕೇಂದ್ರಗಳಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಗಳಿಗೆ ಇಂಬು ನೀಡುವ ಮೂಲಕ ಹೊಸ ಸ್ಟಾರ್ಟ್ ಅಪ್‌ಗಳಿಗೆ ಪೋಷಣೆ ನೀಡುವುದು ಈ ಮೂಲಕ ಜ್ಞಾನವನ್ನ ಉದ್ದಿಮೆಗಳು, ವಿಶ್ವವಿದ್ಯಾಲಯಗಳೂ ಮತ್ತು ಸಂಶೋಧನಾ ಕೇಂದ್ರಗಳ ಮಧ್ಯೆ ಹರಿಯುವಂತೆ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಹೇಳಿದರು.
ಗಮನ ಸೆಳೆದ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ:
ಇಂಡಿಯನ್ ಸ್ಟಾರ್ಟ್ ಅಪ್ ಫೆಸ್ಟಿವಲ್ ನಲ್ಲಿನ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಳಿಗೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಮಳಿಗೆಯ ಮೂಲಕ ರಾಜ್ಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮೂಲಕ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳು, ಸಂಶೋಧನೆಗಾಗಿ ಇರುವಂತೆ ಸೌಲಭ್ಯಗಳ ಬಗ್ಗೆ ಸ್ಟಾರ್ಟ್‌ಅಪ್ ಗಳಿಗೆ ಮಾಹಿತಿ ನೀಡಲಾಯಿತು. ಮಾನ್ಯ ಸಚಿವರು ಮಳಿಗೆಗೆ ಭೇಟಿ ನೀಡಿದ ಸಾರ್ವಜನಿಕರುಗಳಿಗೆ ಮಾಹಿತಿಯನ್ನು ನೀಡಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮ ದಲ್ಲಿ ಸತ್ಯ ಸಾಯಿ ವಿಶ್ವ ವಿದ್ಯಾಲಯದ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸುಧನ ಸಾಯಿ, ಇಂಡಿಯನ್ ಸ್ಟಾರ್ಟ್ ಅಪ್ ಫೆಸ್ಟಿವಲ್ ಮುಖ್ಯಸ್ಥರಾದ ಜೆ ಎ ಚೌಧರಿ ಉಪಸ್ಥಿತರಿದ್ದರು.
by gadi@dmin | Oct 27, 2021 | Scrolling News ( Right to Left ), ತಂತ್ರಜ್ನಾನ
ಬೆಂಗಳೂರು: ಪ್ರತಿವರ್ಷ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಪಯುಕ್ತವಾಗುವುದರೊಂದಿಗೆ ವಿದ್ಯಾರ್ಥಿಗಳ ಕಲಿಕಾ ರೀತಿಯಲ್ಲಿ ಮಹತ್ವದ ಪರಿವರ್ತನೆ ಉಂಟುಮಾಡುವ ಒಡಂಬಡಿಕೆಗೆ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯು (ಡಿ.ಸಿ.ಟಿ.ಇ.) ಮುಂಚೂಣಿ ಐಟಿ ಕಂಪನಿ ಇನ್ಫೋಸಿಸ್ ಜತೆ ಬುಧವಾರ ಸಹಿ ಹಾಕಿತು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಡಿ.ಸಿ.ಟಿ.ಇ. ಯ ‘ಹೆಲ್ಪ್ ಎಜುಕೇಟ್’ ಉಪಕ್ರಮದಡಿಯ ಈ ಒಡಂಬಡಿಕೆಯನ್ನು ವಿಧಾನಸೌಧದಲ್ಲಿ ವಿನಿಮಯ ಮಾಡಿಕೊಳ್ಳಲಾಯಿತು. ಸರ್ಕಾರದ ಪರವಾಗಿ ಡಿಸಿಟಿಇ ಆಯುಕ್ತ ಪಿ.ಪ್ರದೀಪ್ ಮತ್ತು ಇನ್ಫೋಸಿಸ್ ಹಿರಿಯ ಉಪಾಧ್ಯಕ್ಷ (ಶಿಕ್ಷಣ ಮತ್ತು ತರಬೇತಿ) ತಿರುಮಲ ಆರೋಹಿ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶ್ವತ್ಥ ನಾರಾಯಣ ಅವರು, “ಈ ಒಪ್ಪಂದವು ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲಿಗೆ, ಇನ್ಫೋಸಿಸ್ ಕಂಪನಿಯು ರೂ 35 ಕೋಟಿ ವೆಚ್ಚದಲ್ಲಿ ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಯಲ್ಲಿರುವ 3900ಕ್ಕೂ ಹೆಚ್ಚಿನ ಕೋರ್ಸ್ ಗಳು ಮತ್ತು 1.6 ಲಕ್ಷ ಕಲಿಕಾ ಸಂಪನ್ಮೂಲಗಳನ್ನು 5 ಲಕ್ಷ ವಿದ್ಯಾರ್ಥಿಗಳು ಹಾಗೂ ಬೋಧಕರಿಗೆ ಉಚಿತವಾಗಿ ಲಭ್ಯವಾಗಿಸಲಿದೆ. ಎರಡನೆಯದಾಗಿ, ಕಂಪನಿಯು ಬೋಧಕರ ತರಬೇತಿಯಲ್ಲಿ ಸಹಕರಿಸಲಿದೆ. ಮೂರನೆಯದಾಗಿ, ಕಂಪನಿಯು 15,000 ಕಂಪ್ಯೂಟರುಗಳನ್ನು ದೇಣಿಗೆ ಕೊಡುವ ಮೂಲಕ ಕಾಲೇಜುಗಳ ಡಿಜಿಟಲ್ ಮೂಲಸೌಕರ್ಯವನ್ನು ಸದೃಢಗೊಳಿಸಲಿದೆ” ಎಂದು ವಿವರಿಸಿದರು.
ಈ ಒಪ್ಪಂದವು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಆಶಯದಂತೆ ಸಂಯೋಜಿತ ಕಲಿಕೆಗೆ (ಬ್ಲೆಂಡೆಂಡ್ ಲರ್ನಿಂಗ್) ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಪೂರಕವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
“ಇನ್ಫೋಸಿಸ್ ಸ್ಪ್ರಿಂಗ್ ಬೋರ್ಡ್ ವೇದಿಕೆಯು ವರ್ಚುಯಲ್ ಪ್ರಯೋಗಾಲಯಗಳು, ಗೇಮಿಫಿಕೇಷನ್ ಮತ್ತಿತರ ಅಂಶಗಳನ್ನು ಒಳಗೊಂಡು ಆಸಕ್ತಿದಾಯಕವಾಗಿದೆ. ಇದು ಉದ್ಯಮ ಪರಿಣತರೊಂದಿಗೆ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಉದ್ಯಮಕ್ಕೆ ಬೇಕಾದ ಕೌಶಲಗಳು ಹಾಗೂ ವಿದ್ಯಾರ್ಥಿಗಳು ಕೋರ್ಸ್ ಗಳಲ್ಲಿ ಕಲಿಯುವ ಕೌಶಲಗಳ ನಡುವಿನ ಕಂದಕವನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿರುವ 1.6 ಲಕ್ಷ ಕಲಿಕಾ ಸಂಪನ್ಮೂಲಗಳು ಆಡಿಯೊ, ವಿಡಿಯೊ, ಆನಿಮೇಷನ್ ಇತ್ಯಾದಿಗಳ ಮೂಲಕ ವಿದ್ಯಾರ್ಥಿಗಳ ಅರ್ಥಪೂರ್ಣ ಕಲಿಕೆಗೆ ಸಹಕಾರಿಯಾಗಿವೆ” ಎಂದು ಅವರು ಹೇಳಿದರು.
ಒಪ್ಪಂದದ ಪ್ರಕಾರ ಬೋಧಕರ ನಿಯಮಿತ ತರಬೇತಿಯಲ್ಲಿ ಇನ್ಫೋಸಿಸ್ ಭಾಗಿಯಾಗಲಿದ್ದು, ಈಗ ಮೊದಲನೇ ತಂಡದ 200 ಬೋಧಕರಿಗೆ ಮೈಸೂರು ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ಸದ್ಯದಲ್ಲೇ ತರಬೇತಿ ಆರಂಭವಾಗುತ್ತದೆ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಸರ್ಕಾರಿ ತಾಂತ್ರಿಕ ಕಾಲೇಜುಗಳಿಗೆ ಒಟ್ಟು 30,000 ಕಂಪ್ಯೂಟರುಗಳ ಅಗತ್ಯವಿತ್ತು. ಈಗ ಇನ್ಫೊಸಿಸ್ 15,000 ಕಂಪ್ಯೂಟರುಗಳನ್ನು ನೀಡುವ ಮೂಲಕ 27,000 ಕಂಪ್ಯೂಟರುಗಳು ಲಭ್ಯವಾದಂತೆ ಆಗಿವೆ. ಇದರಿಂದಾಗಿ ಸರ್ಕಾರಿ ಡಿಪ್ಲೊಮಾ, ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಶೇ 90ರಷ್ಟು ಕಂಪ್ಯೂಟರ್ ಅಗತ್ಯ ಪೂರೈಕೆಯಾದಂತೆ ಆಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈಗ ಸ್ಪ್ರಿಂಗ್ ಬೋರ್ಡ್ ಡಿಜಿಟಲ್ ವೇದಿಕೆಗಾಗಿ 35 ಕೋಟಿ ರೂಪಾಯಿ ವೆಚ್ಚ ಮಾಡಿರುವ ಇನ್ಫೊಸಿಸ್, ಮುಂದಿನ 5ರಿಂದ 10 ವರ್ಷಗಳ ಅವಧಿಯಲ್ಲಿ ಇನ್ನೂ 750 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆ ಹೊಂದಿದೆ ಎಂದೂ ಹೇಳಿದರು.
ಈ ಒಡಂಬಡಿಕೆ ಏರ್ಪಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಇನ್ಫೊಸಿಸ್ ಸ್ಪ್ರಿಂಗ್ ಬೋರ್ಡ್ ಪ್ರೋಗ್ರಾಮ್ ಮ್ಯಾನೇಜರ್ ಕಿರಣ್ ಎನ್.ಜಿ. ಅವರು, ಉನ್ನತ ಶಿಕ್ಷಣದ ಗುಣಮಟ್ಟವನ್ನು ಮೇಲ್ದರ್ಜೆಗೇರಿಸಲು ಇದು ಉತ್ತೇಜನ ನೀಡುತ್ತದೆ ಎಂದರು. ಜೊತೆಗೆ, ಯುವ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.
“ಇನ್ಫೊಸಿಸ್ ಕಂಪನಿಯು ತನ್ನ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿ, ಜಾಗತಿಕ ಗುಣಮಟ್ಟದ ನಿರಂತರ ಕಲಿಕೆ ಹಾಗೂ ಪ್ರತಿಭಾ ವೃದ್ಧಿಗೆ ಮೊದಲಿನಿಂದಲೂ ಒತ್ತು ಕೊಡುತ್ತಾ ಬಂದಿದೆ. ಈಗ ಒಡಂಬಡಿಕೆಯ ಮೂಲಕ ಅದನ್ನು ವಿದ್ಯಾರ್ಥಿಗಳಿಗೂ ವಿಸ್ತರಿಸಲು ಅವಕಾಶವಾಗಿದೆ” ಎಂದು ಸಂಸ್ಥೆಯ ಮುಖ್ಯ ಕಾರ್ಯಾಚರಣಾ ಅಧಿಕಾರಿ (ಸಿಒಒ) ಪ್ರವೀಣ್ ರಾವ್ ವಿವರಿಸಿದರು.
ಈ ಒಡಂಬಡಿಕೆಯ ಅನುಷ್ಠಾನದಲ್ಲಿ ಕೈಜೋಡಿಸಿರುವ ರೋಟರಿ ಸಂಸ್ಥೆಯು, ಕಂಪ್ಯೂಟರುಗಳನ್ನು ಕಾಲೇಜುಗಳಿಗೆ ತಲುಪಿಸಿ ಅವನ್ನು ಅಳವಡಿಸುವ ಕಾರ್ಯವನ್ನು ಮಾಡಲಿದೆ. ಜೊತೆಗೆ, ಕಂಪ್ಯೂಟರುಗಳಿಗೆ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣೆ ವ್ಯವಸ್ಥೆ) ಹಾಗೂ ಅಗತ್ಯ ಸಾಫ್ಟ್ ವೇರ್ ಗಳನ್ನು ಒದಗಿಸಿಕೊಡಲಿದೆ.
ಇದೇ ವೇಳೆ, ದೇಣಿಗೆ ಕೊಡಲಾದ 300 ಕಂಪ್ಯೂಟರ್ ಗಳನ್ನು ನಗರದ ಕೆ.ಆರ್.ಸರ್ಕಲ್ ನಲ್ಲಿರುವ ಎಸ್.ಜೆ.ಪಾಲಿಟೆಕ್ನಿಕ್ ಗೆ ಕೊಂಡೊಯ್ಯಲು ಸಿದ್ಧವಾಗಿದ್ದ ವಾಹನಕ್ಕೆ ಸಚಿವರು ಹಸಿರು ನಿಶಾನೆ ತೋರಿದರು.
ರೋಟರಿ ಇಂಡಿಯಾ ಲಿಟರರಿ ಮಿಷನ್ ನ ರಾಜೇಂದ್ರ ರಾಯ್, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ.ಕುಮಾರ್ ನಾಯ್ಕ್, ಡಿಸಿಟಿಇ ಆಯುಕ್ತ ಪ್ರದೀಪ್ ಪಿ ಅವರು ಮಾತನಾಡಿದರು. ಡಿಸಿಟಿಯ ನಿರ್ದೇಶಕ ಮಂಜುನಾಥ್ ಆರ್. ಮತ್ತು ಜಂಟಿ ನಿರ್ದೇಶಕ ಶಿವಶಂಕರ್ ನಾಯ್ಕ್ ಎಲ್. ಮತ್ತಿತರರು ಪಾಲ್ಗೊಂಡಿದ್ದರು.