ಶಕ್ತಿಸೌಧದಲ್ಲಿ ಸಿಎಂ- ರಾಜ್ಯ ರೈತರ ಭೇಟಿ ಚರ್ಚೆ

ಶಕ್ತಿಸೌಧದಲ್ಲಿ ಸಿಎಂ- ರಾಜ್ಯ ರೈತರ ಭೇಟಿ ಚರ್ಚೆ

ಶಕ್ತಿಸೌಧದಲ್ಲಿ ಸಿಎಂ- ರಾಜ್ಯ ರೈತರ ಭೇಟಿ ಚರ್ಚೆ

ಬೆಂಗಳೂರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ರೈತ ಮುಖಂಡ ಕುರುಬೂರು ಶಾಂತಕುಮಾರ್ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾಗಿ ರೈತ ಸಮುದಾಯದ ಬಹು ಮುಖ್ಯವಾದ ಬೇಡಿಕೆಗಳ ಬಗ್ಗೆ ಚರ್ಚಿಸಿದರು. ಸರದಿಯಂತೆ ಸಮಸ್ಯೆಗಳ ಪರಿಹಾರಕ್ಕೆ ಮುಖ್ಯಮಂತ್ರಿಗಳು ಅಧಿಕಾರಿಗಳು ಸೂಚಿಸಿದರು.

ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ಬೃಹತ್ ಕನ್ನಡ ಭವನ ನಿರ್ಮಾಣ: ಸಿದ್ದರಾಮಯ್ಯ

ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ಬೃಹತ್ ಕನ್ನಡ ಭವನ ನಿರ್ಮಾಣ: ಸಿದ್ದರಾಮಯ್ಯ

ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ಬೃಹತ್ ಕನ್ನಡ ಭವನ ನಿರ್ಮಾಣ: ಸಿದ್ದರಾಮಯ್ಯ
ಸಮಾಜಕ್ಕೆ ಕೊಡುಗೆ ನೀಡಿ ಸಮಾಜದ ಋಣ ತೀರಿಸಲು ಸಾಧ್ಯ

ಬೆಂಗಳೂರು, ನವೆಂಬರ್ 1 :
ಕರ್ನಾಟಕ ಸಂಭ್ರಮ 50ರ ಸವಿನೆನಪಿಗಾಗಿ ನಾಡದೇವಿ ಭುವನೇಶ್ವರಿ ಹೆಸರಿನಲ್ಲಿ ದೊಡ್ಡ ಕನ್ನಡ ಭವನವನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಅವರು ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
1956ರ ನವೆಂಬರ್ 1 ರಂದು ಕನ್ನಡ ಭಾಷಿಕ ಪ್ರದೇಶಗಳು ಏಕೀಕರಣಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ 1973ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ಮರು ನಾಮಕರಣ ಮಾಡಲಾಯಿತು ಎಂದರು.
ಕನ್ನಡದ ಹಿರಿಮೆ ಬಿಂಬಿಸುವ ಕರ್ನಾಟಕ ಸಂಭ್ರಮ – 50:
ಕರ್ನಾಟಕಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರ ಸಂಭ್ರಮಾಚರಣೆ ಮಾಡಬೇಕಿತ್ತು. ಆದರೆ ಅವರು ಮಾಡಲಿಲ್ಲ. ನಮ್ಮ ಸರ್ಕಾರ ಈ ಸಂಭ್ರಮಾಚರಣೆಯನ್ನು ಆಚರಿಸುವು ನಮ್ಮ ಕರ್ತವ್ಯವೆಂದು ಭಾವಿಸಿ, ಇಡೀ ವರ್ಷಕನ್ನಡ ನೆಲ, ಜಲ ಸಾಹಿತ್ಯ, ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವ ‘ಕರ್ನಾಟಕ ಸಂಭ್ರಮ- 50’ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿದೆ. ‘ಹೆಸರಾಯಿತು ಕರ್ನಾಟಕ- ಉಸಿರಾಗಲಿ ಕನ್ನಡ’ ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಮ್ಮ ಉಸಿರು ಕನ್ನಡವಾಗಬೇಕು. ಇಡೀ ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಾಣವಾಗಬೇಕು ಎಂದು ತಿಳಿಸಿದರು.
ಅವಕಾಶ ವಂಚಿತರು ಮುಖ್ಯವಾಹಿನಿಗೆ ಬರಬೇಕು:
ವಚನಗಳು ಭಾರತಕ್ಕೆ ಮಾತ್ರವಲ್ಲ. ಇಡೀ ವಿಶ್ವಕ್ಕೆ ಅಗತ್ಯ. ಜಾತಿ ವ್ಯವಸ್ಥೆ ಕಾರಣಕ್ಕಾಗಿ, ಸಾಮಾಜಿಕ, ಆರ್ಥಿಕ, ರಾಜಕೀಯ ಅಸಮಾನತೆ ನಿರ್ಮಾಣವಾಗಿದೆ. ಶತಮಾನಗಳಿಂದ ಶೂದ್ರರು ಹಾಗೂ ಮಹಿಳೆಯರು ಶಿಕ್ಷಣ ಸಂಸ್ಕೃತಿಯಿಂದ ವಂಚಿತರಾಗಿದ್ದರು.ಸಮ ಸಮಾಜ ನಿರ್ಮಾಣವಾಗಬೇಕಾದರೆ ಅವಕಾಶವಂಚಿತರು, ದುರ್ಬಲರು ಮುಖ್ಯವಾಹಿನಿಗೆ ಬರಬೇಕು. ಅಂತಹ ಜನರನ್ನು ಗುರುತಿಸಿ, ಸಾಮಾಜಿಕ, ಆರ್ಥಿಕ ನ್ಯಾಯ ಕೊಡುವ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ ಎಂದರು.
ವಚನ ಸಂಸ್ಕೃತಿ ಅಭಿಯಾನ :
ಅಸಮಾನತೆ ಇರುವ ಸಮಾಜದಲ್ಲಿ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ. ಪ್ರತಿಯೊಬ್ಬರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ. ಇಂತಹ ಾಶಯಗಳನ್ನೇ ಬಸವಣ್ಣನವರು, ಅಂಬೇಡ್ಕರ್ ರವರು ತಿಳಿಸಿದರು. ಶ್ರೀ ನಿಜಗುಣ ಸ್ವಾಮೀಜಿ ಅವರು ಹೇಳಿದಂತೆ ವಚನ ಸಂಸ್ಕೃತಿ ಅಭಿಯಾನ ಸರ್ಕಾರ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು.
ಶಕ್ತಿಯಿಲ್ಲದವರಿಗೆ ಶಕ್ತಿ ತುಂಬುವ ಯೋಜನೆಗಳು :
ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯಡಿ 86 ಕೋಟಿ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಶಕ್ತಿ ಇರುವವರಿಗೆ ಶಕ್ತಿ ಕೊಡುವುದಲ್ಲ. ಶಕ್ತಿ ಇಲ್ಲದವರಿಗೆ ಶಕ್ತಿ ತುಂಬ ಬೇಕೆನ್ನುವುದೇ ಪಂಚ ಗ್ಯಾರಂಟಿ ಯೋಜನೆಗಳ ಉದ್ದೇಶ ಎಂದರು.
ಸಮಾಜಸೇವೆಯ ಮೂಲಕ ಋಣ ತೀರಿಸಲು ಸಾಧ್ಯ :
ಪ್ರೀತಿ, ವಿಶ್ವಾಸ, ಮನುಷ್ಯತ್ವ ಬಹಳ ಮುಖ್ಯ. ಮನುಷ್ಯತ್ವ ಇಲ್ಲದಿದ್ದರೆ ಅದು ಸಮಾಜವೇ ಅಲ್ಲ. ನಾವೆಲ್ಲರೂ ಕೂಡ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟರೆ ಮಾತ್ರ ಬದುಕು ಸಾರ್ಥಕವಾಗುತ್ತದೆ. ನಾವು ಹುಟ್ಟಿದ ಮೇಲೆ ಸಮಾಜದಿಂದ ಎಲ್ಲವನ್ನೂ ಪಡೆದಿದ್ದೇವೆ ಎಂದ ಮೇಲೆ , ಸಮಾಜದ ಪರ ಕೆಲಸ ಮಾಡುವ ಮೂಲಕ ಸಮಾಜದ ಋಣ ತೀರಿಸಲು ಸಾಧ್ಯ. ಇಂತಹ ಕೆಲಸವೇ ಸಮಾಜ ಸೇವೆ ಎಂದರು.
ಅರ್ಹತೆಯುಳ್ಳವರಿಗೆ ಪ್ರಶಸ್ತಿ :
ಕರ್ನಾಟಕ ಸಂಭ್ರಮದ ಶುಭಸಂದರ್ಭದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲ 68 ಪ್ರಶಸ್ತಿ ಪುರಸ್ಕೃತರ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಬಾರಿ 10 ಸಂಘ- ಸಂಸ್ಥೆಗಳಿಗೆ ಈ ವಿಶೇಷವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಹೆಚ್ಚು ಅರ್ಹತೆ ಇದ್ದವರನ್ನು ಆಯ್ಕೆ ಮಾಡಬೇಕೆಂಬ ಸೂಚನೆಯನ್ನು ನೀಡಲಾಗಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಒಂದು ಹೆಸರನ್ನು ಬಿಟ್ಟು ಬೇರೆ ಯಾರ ಹೆಸರನ್ನು ನಾನು ಸೂಚಿಸಿಲ್ಲ. ಬಹುತೇಕವಾಗಿ ಆಯ್ಕೆ ಸಮಿತಿ ಶಿಫಾರಸ್ಸು ಮಾಡಿದವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.

2023 ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

2023 ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

2023 ರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
ಬೆಂಗಳೂರು, ರಾಜ್ಯೋತ್ಸವ ಪ್ರಶಸ್ತಿ 2023ರ ಕುರಿತು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು…
2023ನೇ ಸಾಲಿನಲ್ಲಿ 68 ಜನರಿಗೆ ವೈಯಕ್ತಿಕ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ…
ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಎಲ್ಲಾ ಜಿಲ್ಲೆಗಳಿಗೆ ಪ್ರತಿನಿತ್ಯ ನೀಡಲಾಗಿದೆ…
ಕರ್ನಾಟಕ ಸಂಭ್ರಮ-50ರ ಪ್ರಯುಕ್ತ ವಿಶೇಷವಾಗಿ 10 ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ…
ಇಸ್ರೋ ಮುಖ್ಯಕ್ತ ಸೋಮನಾಥ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…
100 ವರ್ಷ ದಾಟಿದ ಇಬ್ಬರಿಗೆ ರಾಜ್ಯೋತ್ಸವ ಪ್ರಶಸ್ತಿ. ಒಬ್ಬರು ದಾವಣಗೆರೆ ಹಾಗೂ ಒಬ್ಬರು ಉತ್ತರ ಕನ್ನಡ ಜಿಲ್ಲೆಯವರು
13 ಮಹಿಳೆಯರು ಮತ್ತು 54 ಪುರುಷರು ಹಾಗೂ ಮತ್ತು ಒಬ್ಬರು ಮಂಗಳ ಮುಖಿ ಗೆ ರಾಜ್ಯೋತ್ಸವ ಪ್ರಶಸ್ತಿ…
ಪ್ರಶಸ್ತಿ ಪಡೆದವರಿಗೆ ರೂ 5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕ.
ಪ್ರಥಮ ಬಾರಿಗೆ ಹಿರಿಯ ಪತ್ರಿಕಾ ವಿತರಕರಿಗೂ ಪ್ರಶಸ್ತಿ ನೀಡಿರುವುದು.

ಬಹುತ್ವದ INDIA ಗೆ ಬಹುಮತ ಲಭಿಸುವುದೇ ?

ಬಹುತ್ವದ INDIA ಗೆ ಬಹುಮತ ಲಭಿಸುವುದೇ ?

ಬಹುತ್ವದ INDIAಗೆ ಬಹುಮತ ಲಭಿಸುವುದೇ ?
ಡಾ. ಎಂ.ಎಸ್. ಮಣಿ


`ಇಂಡಿಯಾ’, `ಇಂಡಿಯಾ’, `ಇಂಡಿಯಾ’ ದೇಶದ ಉದ್ದಗಲ ಕೇಳಿಬರುತ್ತಿದೆ. ಇದರಲ್ಲೇನು ವಿಶೇಷ ಎಂದೆನಿಸಬಹುದು. `ಇಂಡಿಯಾ’-‘ಭಾರತ’ ವಾದ-ವಿವಾದಗಳಿಂದ ಕೆಲವರಿಗೆ `ಇಂಡಿಯಾ’ ಅಪಥ್ಯವಾಗುತ್ತಿದೆ. `ರಿಪಬ್ಲಿಕ್ ಆಫ್ ಇಂಡಿಯಾ’ವನ್ನು `ರಿಪಬ್ಲಿಕ್ ಆಫ್ ಭಾರತ್’ ಆದರೆ ದೇಶಿರಾಜಕಾರಣದಲ್ಲಿ ಉಳಿಯುವ `ಇಂಡಿಯಾ’ ಯಾವುದು? ಅದು ಎದುರಿಸುತ್ತಿರುವ ಸವಾಲುಗಳೇನು? ಎಂಬ ಪ್ರಶ್ನೆ ಒಂದರೆಕ್ಷಣವಾದರೂ ಕಾಡಬಹುದು.
ಪ್ರತಿಪಕ್ಷಗಳ 28 ದಂಡನಾಯಕರು ಕೂಡಿ ಕಟ್ಟಿಕೊಂಡ ಒಕ್ಕೂಟಕ್ಕೆ `ಇಂಡಿಯಾ’ ಎಂಬ ಹೆಸರಿಟ್ಟಿದ್ದಾರೆ. `ಐ’ ಎಂದರೆ ಇಂಡಿಯನ್, `ಎನ್’ ಎಂದರೆ ನ್ಯಾಷನಲ್, `ಡಿ’ ಎಂದರೆ ಡೆವಲಪ್ಮೆಂಟ್, `ಐ’ ಎಂದರೆ ಇನ್ಕ್ಲೂಸಿವ್, `ಎ’ ಎಂದರೆ ಆಲಿಯನ್‌್ಸ ಆಗಿದೆ.
ಬರಲಿರುವ 2024ರ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ನೇತೃತ್ವ ವಹಿಸಿರುವ ಭಾಜಪ ಪಕ್ಷವನ್ನು ಮಣಿಸಲು ವಿರೋಧ ಪಕ್ಷಗಳೆಲ್ಲವೂ ಕೂಡಿ ಒಂದಾಗಿ `ಇಂಡಿಯಾ’ ಕೂಟ ರಚಿಸಿಕೊಂಡು ಸೆಡ್ಡು ಹೊಡೆದು ನಿಂತಿವೆ. `ಪ್ರಜಾಪ್ರಭುತ್ವ ಮತ್ತು ಸಂವಿಧಾನ’ ರಕ್ಷಿಸುವುದು `ಇಂಡಿಯಾ’ ಮೈತ್ರಿಕೂಟದ ಪ್ರಮುಖ ಉದ್ದೇಶವೆಂದು ಹೇಳಲಾಗಿದೆ.
2023ರ ಜೂನ್ 23ರಂದು 15 ಪಕ್ಷಗಳಿಂದ ಆರಂಭಗೊಂಡ `ಇಂಡಿಯಾ’ ಮೈತ್ರಿಕೂಟ ಜುಲೈ 17 ಮತ್ತು 18ರ ಹೊತ್ತಿಗೆ ಬೆಂಗಳೂರಿನಲ್ಲಿ ಮೈತ್ರಿದಾರರ ಸಂಖ್ಯೆಯನ್ನು 26ಕ್ಕೆ ಏರಿಸಿಕೊಂಡಿತು. ಆಗಸ್‌್ಟ 31 ಮತ್ತು ಸೆಪ್ಟೆಂಬರ್ 1ರ ಮುಂಬೈ ಸಭೆಯ ಹೊತ್ತಿಗೆ ತನ್ನ ಸಂಖ್ಯಾಬಲವನ್ನು 28ಕ್ಕೆ ವಿಸ್ತರಿಸಿಕೊಂಡಿದೆ. ಮುಂಬೈನ 3ನೇ ಸಭೆಯ ಹೊತ್ತಿಗೆ ಭಾಜಪ ನೇತೃತ್ವದ ಸರ್ಕಾರಕ್ಕೆ ಪ್ರಬಲ ಸವಾಲನ್ನು ಎಸೆದಿದೆ. ಹಾಗೆಯೇ 25ಕ್ಕೂ ಹೆಚ್ಚು ಪಕ್ಷಗಳ ನಾಯಕರನ್ನೊಳಗೊಂಡ ಭೂಪಾಲ್ ರ್ಯಾಲಿಯನ್ನು ಯಾವುದೇ ಕಾರಣ ಕೊಡದೆ ರದ್ದುಪಡಿಸಿಕೊಂಡಿದೆ. ಇದು `ಇಂಡಿಯಾ’ ಮೈತ್ರಿಕೂಟದ ಬೆಳವಣಿಗೆಯ ಹೆಜ್ಜೆಯಾಗಿದೆ.
`ಇಂಡಿಯಾ’ ಮೈತ್ರಿಕೂಟದಲ್ಲಿ ವೈವಿಧ್ಯಮಯ ಶ್ರೇಣಿಯ ಪ್ರಾದೇಶಿಕ ಪಕ್ಷಗಳು ಮತ್ತು ರಾಷ್ಟ್ರೀಯ ಪಕ್ಷಗಳು ಸೇರಿಕೊಂಡಿವೆ. ಇವು ಐತಿಹಾಸಿಕವಾಗಿ ಪ್ರತಿಸ್ಪರ್ಧಿಗಳಾಗಿದ್ದರೂ, ತಮ್ಮೊಳಗಿನ ಅಭಿಪ್ರಾಯಭೇದ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿವೆ.
`ಇಂಡಿಯಾ’ ಹೆಸರು ಕುರಿತಂತೆ ಆರಂಭದಲ್ಲಿಯೂ ಅಪಸ್ವರ ಎದ್ದಿತ್ತು. ಮೈತ್ರಿಕೂಟದ ಪ್ರಮುಖ ನಾಯಕರಾದ ನಿತೀಷ್ಕುಮಾರ್ ಮತ್ತು ಲಾಲುಪ್ರಸಾದ್ ಯಾದವ್ ಅವರು ಕೂಡ ಮೊದಲಿಗೆ ಒಪ್ಪಿರಲಿಲ್ಲವಂತೆ. ದೇಶದ ಹೆಸರನ್ನು ರಾಜಕೀಯ ಒಕ್ಕೂಟದೊಂದಿಗೆ ಸಮೀಕರಿಸುವುದು ತಾತ್ವಿಕವಾಗಿ ಸೂಕ್ತವಲ್ಲವೆಂಬ ಅಭಿಪ್ರಾಯಗಳು ಕೇಳಿಬಂದಿತ್ತು. ಬಹುಶಃ `ಇಂಡಿಯಾ’ ಕಲ್ಪನೆ ರಾಹುಲ್ಗಾಂಧಿ-ಮಲ್ಲಿಕಾರ್ಜುನ ಖರ್ಗೆ-ಸಿದ್ದರಾಮಯ್ಯ ಅವರ ಚಿಂತನೆಯಾಗಿರಬಹುದು. ಭಾರತದ ರಾಜಕಾರಣದ ಇತಿಹಾಸದಲ್ಲಿ ವಿರೋಧ ಪಕ್ಷಗಳು ಒಂದಾಗಿ ಮೈತ್ರಿಕೂಟ ಮಾಡಿಕೊಂಡಿರುವುದು ಇದೇ ಮೊದಲಾಗಿದೆ.
1977ರಲ್ಲಿ ಇಂದಿರಾಗಾಂಧಿ ಅವರು ತುರ್ತುಪರಿಸ್ಥಿತಿ ಹೇರಿದ್ದರು. ಆಗ 4 ರಾಜಕೀಯ ಪಕ್ಷಗಳು ಕೂಡಿ ಜನತಾಪಕ್ಷವನ್ನು ರಚಿಸಿಕೊಂಡಿದ್ದವು. ಇದರಲ್ಲಿ ಡಿಎಂಕೆ ಮತ್ತು ಎಡಪಕ್ಷಗಳು ಸೇರಿರಲಿಲ್ಲವಾದರೂ ಬೆಂಬಲಿಸಿದ್ದವು. 1989ರಲ್ಲಿ ಪ್ರಾದೇಶಿಕ ಪಕ್ಷಗಳು ಕೂಡ ಸಂಯುಕ್ತರಂಗ ರಚಿಸಿಕೊಂಡಿದ್ದವು. 1998ರಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ, ಎನ್ಡಿಎ ಅಧಿಕಾರ ಹಿಡಿದಾಗಲೂ ತೆಲುಗುದೇಶಂ ಮತ್ತು ಎಐಎಡಿಎಂಕೆ ಬಾಹ್ಯ ಬೆಂಬಲ ಘೋಷಿಸಿದ್ದವು. 2004ರಲ್ಲಿ ಏಕೀಕೃತ ಪ್ರಗತಿಪರ ಮೈತ್ರಿಕೂಟ, ಯುಪಿಎ ಎಡಪಕ್ಷಗಳೊಂದಿಗೆ ಅಧಿಕಾರಕ್ಕೆ ಬಂತು. ಆಗ ತೆಲಂಗಾಣದ `ಭಾರತ ರಾಷ್ಟ್ರ ಸಮಿತಿ’ ಮತ್ತು `ಜಾತ್ಯತೀತ ಜನತಾದಳ’ ಮೈತ್ರಿಕೂಟ ಸೇರದೆ ಹೊರಗುಳಿದಿದ್ದವು. ಇಂದಿನ `ಟೀಮ್ ಇಂಡಿಯಾ’ ವಿಭಿನ್ನ ಪ್ರಯೋಗವಾಗಿದೆ.
ಸಮಾಜವಾದಿ ನಾಯಕ ಡಾ. ರಾಮ್ಮನೋಹರ್ ಲೋಹಿಯಾ ಮತ್ತು ರೈತ ನಾಯಕ ಚರಣಂಸಿಂಗ್ ಅವರುಗಳು `ಇಂಡಿಯಾ’ ಮತ್ತು `ಭಾರತ’ದ ನಡುವಿನ ವ್ಯತ್ಯಾಸವನ್ನು ಗುರ್ತಿಸಿದ್ದರು. `ಇಂಡಿಯಾ’ದಲ್ಲಿರುವವರು ನಗರ ಪ್ರದೇಶವಾಸಿಗಳೆಂದಿದ್ದರು. ಇವರು ಎಲ್ಲಾ ಬಗೆಯ ಸೌಕರ್ಯಗಳೊಂದಿಗೆ, ಉತ್ತಮ ಬದುಕು ಸಾಗಿಸುತ್ತಿದ್ದಾರೆಂಬುದು ಇವರಿಬ್ಬರ ಇಂಗಿತವಾಗಿತ್ತು. `ಭಾರತ’ ಎಂಬುದು ಗ್ರಾಮಾಂತರ ಪ್ರದೇಶ. ಇಲ್ಲಿ ನಿರ್ಗತಿಕರಾಗಿ, ಶೋಚನೀಯವಾದ, ಭೀಕರ ಬಡತನದಲ್ಲಿ ಜನ ಬದುಕು ಸವೆಸುತ್ತಿದ್ದಾರೆಂಬುದೂ ಇವರಿಬ್ಬರ ಪ್ರಬಲ ವಾದವಾಗಿತ್ತು. ಇದನ್ನೇ ಆಡಳಿತ ಪಕ್ಷ ಗ್ರಾಮೀಣ ಮತದಾರರ ಮುಂದೆ `ಇಂಡಿಯಾ’ ಬೆಂಬಲಿಸಬೇಡಿ ಎಂಬ `ಏಕ’ ಬೇಡಿಕೆ ಇಟ್ಟು ಮನವೊಲಿಸಲು ಇದೀಗ ಪ್ರಯತ್ನಿಸುತ್ತಿದೆ.
ಆದರೂ, ಇತ್ತೀಚೆಗೆ ದಿನದಿಂದ ದಿನಕ್ಕೆ ಭಾಜಪದ ನೀತಿಗಳ ಬಗ್ಗೆ ಜನಮನದಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಆದರೂ, ಆಡಳಿತ ಪಕ್ಷದ ಪ್ರಾಬಲ್ಯವನ್ನು ಎದುರಿಸಲು ಕಾಂಗ್ರೆಸ್ ಪಕ್ಷ ಒಂದರಿಂದ ಸಾಧ್ಯವಿಲ್ಲ. ಜೊತೆಗೆ ಪ್ರಾದೇಶಿಕ ಪಕ್ಷಗಳನ್ನು ಸಮೀಕರಿಸಿ ನೋಡಲು ಸಾಧ್ಯವಿಲ್ಲ. ಕಾರಣ, ಲೋಕಸಭೆಯ 542 ಸ್ಥಾನಗಳಲ್ಲಿ ಭಾಜಪದ 301 ಸದಸ್ಯರಿದ್ದಾರೆ. ಹೀಗಾಗಿ ಸಣ್ಣ-ಪುಟ್ಟ ಪಕ್ಷಗಳನ್ನು ಒಗ್ಗೂಡಿಸಿ ಕಾಂಗ್ರೆಸ್ ಸಾಮೂಹಿಕ ಹೋರಾಟ ರೂಪಿಸಬೇಕಿದೆ. ಆಗ ಮಾತ್ರ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಲು ಸಾಧ್ಯವೆಂಬುದನ್ನು ವಿರೋಧ ಪಕ್ಷಗಳೆಲ್ಲವೂ ನಂಬಿವೆ.
ಹೀಗಾಗಿಯೇ ಭಾಜಪದ `ರಾಷ್ಟ್ರೀಯವಾದಿ’ ವೈಭವವನ್ನು ಎದುರಿಸಲು ವಿರೋಧ ಪಕ್ಷಗಳು ಕೂಡಿ `ಇಂಡಿಯಾ’ ಮೈತ್ರಿಕೂಟ ರಚಿಸಿಕೊಂಡಿವೆ. ಇದೇನೆ ಇದ್ದರೂ 2014ರಲ್ಲಿ ಭಾಜಪ ಎಬ್ಬಿಸಿದ `ರಾಷ್ಟ್ರೀಯತೆ’ಯ `ಬ್ರಾಂಡ್’ ಇನ್ನೂ ಪರಿಣಾಮಕಾರಿಯಾಗಿಯೇ ಉಳಿದಿದೆ. `ಇಂಡಿಯಾ’ ದೇಶದ ಹೆಸರಿಗೆ ಮಾತ್ರ ಸಂಬಂಧಿಸಿದಂತೆ ಇಟ್ಟಿದ್ದಲ್ಲ. ಭಾಜಪದ ರಾಷ್ಟ್ರೀಯತೆಯ ಮೂಲವನ್ನು ಅಲುಗಾಡಿಸಲು ಮಾಡಿರುವ ಪ್ರಯತ್ನ. ಇದರಲ್ಲಿ ಯಶಸ್ಸು ಸಾಧಿಸಲಾಗಿದೆಯೇ ಎಂದು ಶೋಧಿಸಲು ಹೊರಟರೆ ಸಾಕಷ್ಟು ಮಟ್ಟಿಗೆ ಇಲ್ಲವೆನ್ನಬಹುದಾಗಿದೆ. ವಿರೋಧ ಪಕ್ಷಗಳ ಇಂತಹ ಪ್ರಯತ್ನದಿಂದ `ಭಾರತ್ v/s ಇಂಡಿಯಾ’ದ ವಿಷಯ ಯಾವುದೇ ಸಮರ್ಥನೆ ಇಲ್ಲದೆ ಹೊರಬಂದಿದೆ. ಇಂತಹ `ವಾದ’ ಭಾಜಪವನ್ನು ಬಲಗೊಳಿಸಿದೆ. ಪ್ರತಿಪಕ್ಷಗಳನ್ನು ದುರ್ಬಲಗೊಳಿಸಲು ಸಹಕಾರಿಯಾಗಿದೆ.
ಇದರ ನಡುವೆ, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸಂಸದ ಸ್ಥಾನ ಕಳೆದುಕೊಂಡು, ನ್ಯಾಯಾಲಯದ ಮಧ್ಯಸ್ಥಿಕೆಯಿಂದ ರಾಹುಲ್ಗಾಂಧಿ ಮತ್ತೆ ಸಂಸತ್ತು ಪ್ರವೇಶಿಸಿದ್ದಾರೆ. ಲೋಕಸಭಾ ಚುನಾವಣೆಯ ಹೊತ್ತಿಗೆ ಮತ್ತೆ ಅವರ ಸ್ಥಾನ ಏನಾಗುವುದೋ ಎಂಬ ದುಗುಡ ಹಲವರಲ್ಲಿದೆ. ಆದರೂ ರಾಹುಲ್ಗಾಂಧಿ ಅವರು, ಆಡಳಿತ ಪಕ್ಷದ ವಿರುದ್ಧ `ಇಂಡಿಯಾ’ ಮೈತ್ರಿಕೂಟ ಹೋರಾಡಲಿದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು `ನಕಾರಾತ್ಮಕತೆ’ಯ ಆಧಾರದ ಮೇಲೆ ರಚನೆಯಾದ ಕೂಟಗಳು ಒಗ್ಗೂಡಿ ನಡೆಸಿದ ಹೋರಾಟ ಯಶಸ್ವಿಯಾದ ಉದಾಹರಣೆಗಳಿಲ್ಲ ಎಂದು ಟೀಕಿಸಿದ್ದಾರೆ. ಹಾಗೆಯೇ `ಇಂಡಿಯಾ’ ಮೈತ್ರಿಕೂಟ ರಚನೆಯಾಗಿದ್ದೇ ತಡ “ಅವಕಾಶವಾದಿಗಳು” ಮತ್ತು “ಭ್ರಷ್ಟ ವ್ಯಕ್ತಿಗಳು” ಕೂಡಿ ತಮ್ಮ ರಾಜಕೀಯ ಜೀವನವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆಂಬ ಮೂದಲಿಕೆ ಮಾತುಗಳನ್ನು ಹೊರಬಿಡಲಾಗಿತ್ತು.
ಇಷ್ಟಕ್ಕೂ `ಇಂಡಿಯಾ’ ಮೈತ್ರಿಕೂಟದ ಕಾರ್ಯಸೂಚಿ ಸ್ಪಷ್ಟವಾಗಿದೆ. ಭಾಜಪಗಿಂತ ವಿಭಿನ್ನ ನೆಲೆಯಲ್ಲಿ ರೂಪಿಸಿಕೊಂಡಿವೆ. ಜಾತಿಜನಗಣತಿಗೆ ಪೂರಕವಾಗಿ ಕೋಮುಹಿಂಸಾಚಾರವನ್ನು ಕೊನೆಗಾಣಿಸಲು ಮುಂದಾಗಿದೆ. ಇದಕ್ಕಾಗಿ ವಿಭಿನ್ನ ರಾಜಕೀಯ ಪಕ್ಷಗಳ ಸಿದ್ಧಾಂತವನ್ನು ಕಡೆಗಣಿಸಿ `ಇಂಡಿಯಾ’ ಮೈತ್ರಿಕೂಟ ರಚಿಸಿಕೊಂಡಿವೆ.
ಇದೇನೆ ಇರಲಿ, ದೊಡ್ಡ ಪಕ್ಷ ಕಾಂಗ್ರೆಸ್ನೊಳಗಿನ ಆಂತರಿಕ ಕಿತ್ತಾಟ, ದೇಶದ ಹೆಸರಿನಲ್ಲಿದ್ದ `ಇಂಡಿಯಾ’ವನ್ನು ಕಿತ್ತುಹಾಕುವ ನಡೆಯಿಂದ ಭವಿಷ್ಯದಲ್ಲಿ ಮೈತ್ರಿಕೂಟದ ಹೆಸರು ಬದಲಾದರೂ ಅಚ್ಚರಿ ಪಡುವಂತಿಲ್ಲ. ಇದರ ನಡುವೆ ಮರಾಠ ನಾಯಕ ಶರದ್ಪವಾರ್ ಗುಂಪಿನ ಒಡಕು ಕೂಡ `ಇಂಡಿಯಾ’ ಮೈತ್ರಿಕೂಟದ ಭದ್ರತೆಯನ್ನು ಅಲುಗಾಡಿಸಿದಂತಿದೆ.
ದೇಶವನ್ನು ಧರ್ಮದ ತಳಹದಿಯ ಮೇಲೆ ವಿಭಜಿಸಲಾಗುತ್ತಿದೆ. ಆರ್ಥಿಕತೆಯ ವೈಫಲ್ಯತೆ, ಮಣಿಪುರದಲ್ಲಿ ಹಿಂಸಾಚಾರ ತಡೆಗಟ್ಟಲಾಗದ ಅಸಹಾಯಕತೆ, ನಿರುದ್ಯೋಗದ ಸಮಸ್ಯೆಗಳನ್ನಿಟ್ಟು ಆಳುವ ಪಕ್ಷವನ್ನು ಗಟ್ಟಿಯಾಗಿ ದೇಶದ ಉದ್ದಗಲ ಪ್ರಶ್ನಿಸಲು `ಇಂಡಿಯಾ’ ಮೈತ್ರಿಕೂಟ ವಿಫಲವಾಗಿದೆ.
ಇವಕ್ಕೆ ಬಲವಾದ ಕಾರಣವಿದೆ. ಅದು “ಅಂತರ್ಗತ ವೈರುಧ್ಯಗಳು” ಹಾಗೂ ಪಕ್ಷದೊಳಗಿರುವ ಭಿನ್ನಮತ. ಇದರಲ್ಲಿ ಭಿನ್ನಮತ ಎಂಬುದು ಕಾಂಗ್ರೆಸ್ ಹೈಕಮಾಂಡ್ನಲ್ಲಿ ಒಬ್ಬರಾಗಿರುವ ಹರಿಪ್ರಸಾದ್ ಅವರಿಂದಲೇ ಎದ್ದಿದೆ. ಬಹುಶಃ ಅವರಷ್ಟು ಕಠಿಣವಾಗಿ ಭಾಜಪ-ಜೆಡಿಎಸ್ ಪಕ್ಷದ ನಾಯಕರು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರೆತ್ತದೆ ಟೀಕಿಸಿರುವುದು ಕಡಿಮೆ. ಇದೇ ರೀತಿ ಅಂತರ್ಗತ ವೈರುಧ್ಯಗಳು ಹೊರಬರುವ ಹೆದರಿಕೆಯೂ ಕೂಟದಲ್ಲಿರುವ ಇತರೆ ಪಕ್ಷಗಳನ್ನು ಕಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟಿರುವ ಮಮತಾ ಬ್ಯಾನರ್ಜಿ ಅವರ ಆಡಳಿತ, ರಾಜಕೀಯ ನಡೆಯನ್ನು ಸೀತಾರಾಂ ಯೆಚೂರಿಯಂತಹ ನಾಯಕರು ಟೀಕಿಸಲು ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳದ ಬಹರಂಪುರ್ನ ಸಂಸದ ಅಧೀರ್ರಂಜನ್ ಚೌಧರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕ. ಇವರೆಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಎಸಗುವರೋ ಎಂಬ ಧಾವಂತ ಸೋನಿಯಾಗಾಂಧಿ-ರಾಹುಲ್ಗಾಂಧಿ ಅವರಲ್ಲಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ನಡೆಯುತ್ತಿರುವಂತಹ ವೈಯಕ್ತಿಕ ದ್ವೇಷ, ವಿರೋಧಾಭಾಸ ದೇಶದ ಉದ್ದಗಲ ಕಾಣಿಸಿಕೊಳ್ಳುವ ಸಂಭವವನ್ನು ತಳ್ಳಿಹಾಕುವಂತಿಲ್ಲ.
ಮುಂಬೈನ ಸಭೆಯಲ್ಲಿ ಅಂಗಪಕ್ಷಗಳ ನಡುವೆ ಹೊಂದಾಣಿಕೆ ಕಾಯ್ದುಕೊಳ್ಳುವ ಉದ್ದೇಶದಿಂದ 14 ಸದಸ್ಯರ ಸಮನ್ವಯ ಸಮಿತಿಯನ್ನು `ಇಂಡಿಯಾ’ ರಚಿಸಿಕೊಂಡಿದೆ. ಸಮನ್ವಯ ಸಮಿತಿ ಉನ್ನತಾಧಿಕಾರ ಸಮಿತಿಯಾಗಿಯೂ ಕಾರ್ಯನಿರ್ವಹಿಸಲಿದೆ. ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ಸಿ. ವೇಣುಗೋಪಾಲ್, ಎನ್ಸಿಪಿ ನಾಯಕ ಶರದ್ಪವಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಆರ್ಜೆಡಿಯ ತೇಜಸ್ವಿಯಾದವ್, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಶಿವಸೇನೆಯ ಸಂಜಯ್ ರಾವುತ್, ಸಿಪಿಐನ ರಾಜಾ, ನ್ಯಾಷನಲ್ ಕಾನ್ಫರೆನ್‌್ಸನ ಒಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೂರೆನ್, ಎಎಪಿಯ ರಾಘವ್ ಛಡ್ಡಾ, ಸಮಾಜವಾದಿ ಪಕ್ಷದ ಜಾವೇರಿ ಆಲಿಖಾನ್, ಜೆಡಿಯುನ ಲಾಲನ್ಸಿಂಗ್ ಅವರುಗಳಿದ್ದಾರೆ. ಜೊತೆಗೆ 10 ಸದಸ್ಯರ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ಸಮನ್ವಯ ಸಮಿತಿಯ ಸಂಚಾಲಕ ಹುದ್ದೆಯನ್ನು ಬಿಹಾರದ ಮುಖ್ಯಮಂತ್ರಿ ನಿತೀಷ್ಕುಮಾರ್ ವಹಿಸಿಕೊಳ್ಳುವರೆಂಬ ನಿರೀಕ್ಷೆ ಇತ್ತು. ಆದರೆ ಸಂಚಾಲಕ ಹುದ್ದೆಯನ್ನು ನಿತೀಷ್ಕುಮಾರ್ ಒಪ್ಪಿರುವುದಿಲ್ಲ. ಇದನ್ನು ಗಮನಿಸಿಯೇ ಮಾಜಿ ಪ್ರಧಾನಿ ದೇವೇಗೌಡ ಅವರು, `ಇಂಡಿಯಾ’ ಮೈತ್ರಿಕೂಟದ ಸಂಚಾಲಕ ಯಾರೆಂದು ಪ್ರಶ್ನಿಸಿದ್ದಾರೆ.
ಇಲ್ಲಿ ಭಾಜಪದ `ರಾಷ್ಟ್ರೀಯತೆ’ಯ ನಿರೂಪಣೆಯು ಬಹುಮುಖಿ ಮತ್ತು ಸಂಕೀರ್ಣವಾಗಿದೆ. ಜೊತೆಗೆ ಇದರ ಸಾಂಸ್ಥಿಕ ಶಕ್ತಿ, ವರ್ಚಸ್ವಿನಾಯಕತ್ವ, ಪರಿಣಾಮಕಾರಿ ಸಂವಹನ ತಂತ್ರಗಳನ್ನು ಎದುರಿಸಲು `ಇಂಡಿಯಾ’ ಮೈತ್ರಿಕೂಟ ಹೆಚ್ಚು ಕೇಂದ್ರಿಕೃತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಇದೇ ಬಗೆಯಲ್ಲಿ `ಭಾಜಪ’ದ ಹಿಂದುತ್ವ ಸಿದ್ಧಾಂತವನ್ನು ಎದುರಿಸಲು `ಇಂಡಿಯಾ’ ಮೈತ್ರಿಕೂಟದ ಬಳಿ ಯಾವುದೇ ಪ್ರಬಲವಾದ ತಂತ್ರಗಳಿಲ್ಲ. ಆದರಿವತ್ತು ರಾಜಕೀಯ ಹಿನ್ನೆಲೆ ಮತ್ತು ರಾಜಕೀಯ ಪಕ್ಷಗಳ ಇತಿಹಾಸ ಆಧರಿಸಿ ರಾಜಕಾರಣಿಗಳು ವೈಯುಕ್ತಿಕ ಸಂಘರ್ಷದಲ್ಲಿ ತೊಡಗಿಕೊಂಡಿದ್ದಾರೆ. ಉದಾಹರಣೆಗೆ ಸನಾತನ ಧರ್ಮದ ಕುರಿತು ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ವಿವಾದವನ್ನು ಗಮನಿಸಬಹುದಾಗಿದೆ.
ಉದಯನಿಧಿ ಅವರ ಹೇಳಿಕೆ ಡಿಎಂಕೆ ಪಕ್ಷದ ಭಾಗ ಮಾತ್ರ. ಆದರೆ `ಇಂಡಿಯಾ’ ಮೈತ್ರಿಕೂಟ ಒಟ್ಟಾರೆಯಾಗಿ ಹಿಂದೂಧರ್ಮವನ್ನು ವಿರೋಧಿಸುತ್ತದೆ ಎಂಬುದು ಬಿಂಬಿತವಾಗಿದೆ. ಹೀಗಾಗಿ `ವಿಭಿನ್ನವಾಗಿ’ ಪ್ರತಿಕ್ರಿಯಿಸುತ್ತಿವೆ. ಅವುಗಳಲ್ಲಿ ಏಕರೂಪತೆಯೇ ಇಲ್ಲವಾಗಿದೆ. ಇದು ಬಗೆಹರಿಯಬೇಕೆಂದರೆ, 28 ಪಕ್ಷಗಳು ಕೂಡಿ ಉದಯನಿಧಿ ಸ್ಟಾಲಿನ್ ಮತ್ತು ರಾಹುಲ್ಗಾಂಧಿ ಅವರ ವಿಚಾರಧಾರೆಗಳನ್ನು ವಿರೋಧಿಸುತ್ತದೆಯೇ ಅಥವಾ ಸಮರ್ಥಿಸುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಆಗ ಮಾತ್ರ ಸ್ಪಷ್ಟ ದೃಷ್ಟಿಕೋನವನ್ನು ಪ್ರಸ್ತುತಪಡಿಸಿದಂತಾಗುತ್ತದೆ. ಆಗ ಜನ ಕೂಡ `ಎನ್ಡಿಎ’ ಬೇಕಾ ಅಥವಾ `ಇಂಡಿಯಾ’ ಬೇಕಾ ಎಂದು ನಿರ್ಧರಿಸಲು ಸಹಾಯವಾಗುತ್ತದೆ.
ಇದೇ ಹೊತ್ತಿನಲ್ಲಿ ಅಜಿತ್ಪವಾರ್ ಮತ್ತು ಏಕನಾಥ ಶಿಂಧೆ ನೇತೃತ್ವದ ಎನ್ಸಿಪಿ ಬಣಗಳು ಒಳಗೊಂಡಂತೆ 38 ಪಕ್ಷಗಳು ಭಾಜಪ ನೇತೃತ್ವದ ಎನ್ಡಿಎ ಸಭೆಯಲ್ಲಿ ಭಾಗವಹಿಸಿದ್ದವು. ಇದೀಗ ಕರ್ನಾಟಕದ `ಜಾತ್ಯತೀತ ಜನತಾದಳ’ ಕೂಡ ಭಾಜಪ ತೆಕ್ಕೆಗೆ ಜಾರಿ ಬಿದ್ದಿದೆ.
ಅತ್ತ `ಇಂಡಿಯಾ’ ಮೈತ್ರಿಕೂಟದ ಪ್ರಧಾನ ಮುಖ್ಯಸ್ಥ ತಾನೇ ಎಂದು ಬಿಂಬಿಸಿಕೊಳ್ಳಲು ಮೈತ್ರಿಕೂಟದ ನಾಯಕರು ಮುಂದಾಗುತ್ತಿಲ್ಲ. ಅದರಲ್ಲೂ ಕಾಂಗ್ರೆಸ್ ಪಕ್ಷ ತಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದು ಬಹಿರಂಗವಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಸಾರಿಸಿ ಕೂತಿದೆ. ಆದರೂ `ಇಂಡಿಯಾ’ ಮೈತ್ರಿಕೂಟದ ಹಿಂದಿರುವ `ಚಾಲನಶಕ್ತಿ’ ಯಾರೆಂಬ ಅರಿವು ಎಲ್ಲರಿಗೂ ಗೊತ್ತಿದೆ. ಮುಂಬೈ ಸಮಾವೇಶದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ಗಾಂಧಿಯವರು ಕಟ್ಟಕಡೆಯವರಾಗಿ ಭಾಷಣ ಮಾಡಿದರೂ ಸಿಕ್ಕ ಮಹತ್ವ ಇವರಿಬ್ಬರ ನಾಯಕತ್ವವನ್ನು ತಿಳಿಸುತ್ತದೆ. ಇದಲ್ಲದೆ ಪಾಟ್ನಾದಲ್ಲಿ ಮೊದಲ ಸಮಾವೇಶ ನಡೆಸಿ ಮೈತ್ರಿಕೂಟದ ಸೂತ್ರಧಾರರಲ್ಲಿ ಪ್ರಮುಖ ಎನಿಸಿಕೊಂಡಿದ್ದ ಬಿಹಾರದ ಮುಖ್ಯಮಂತ್ರಿ ನಿತೀಷ್ಕುಮಾರ್ ಅವರ ಪ್ರಾಮುಖ್ಯತೆಯನ್ನು ತಗ್ಗಿಸಿದಂತೆ ಕಂಡುಬಂದಿದೆ.
ಭಾಜಪವನ್ನು ಆಡಳಿತದಿಂದ ದೂರ ಇಡಲು ಪ್ರಾದೇಶಿಕ ಪಕ್ಷಗಳಿಗೆ ತನ್ನದೇ ಆದ ಕಾರಣಗಳಿರಬಹುದು. ಇದರ ಲಾಭ ಪಡೆಯಲು ಕಾಂಗ್ರೆಸ್ ತುದಿಗಾಲ ಮೇಲೆ ನಿಂತಿದೆ. ಜೊತೆಗೆ ಹಿಂದಿನಂತೆ `ದೊಡ್ಡಣ್ಣ’ ಎಂಬ ಪಟ್ಟದಿಂದಲೂ ಕೆಳಗಿಳಿದಿದೆ. ಚುನಾವಣೆ ಹೊಂದಾಣಿಕೆಗಾಗಿ `ಗದ್ದುಗೆ ಹಕ್ಕಿ’ನ ಪ್ರತಿಪಾದನೆಯಿಂದಲೂ ದೂರ ಉಳಿದಿದೆ. ಎನ್ಡಿಎಗೆ ಎದುರಾಗಿ `ಇಂಡಿಯಾ’ ಮೈತ್ರಿಕೂಟ ಒಟ್ಟು ಮೂರು ಸಭೆಗಳನ್ನು ನಡೆಸಿದೆ. ಅವು ಪಾಟ್ನಾ, ಬೆಂಗಳೂರು, ಮುಂಬೈನಲ್ಲಿ ನಡೆದಿದೆ. ಸಮನ್ವಯ ಸಮಿತಿ ಸಭೆಯೊಂದು ಮಧ್ಯಪ್ರದೇಶದ ಭೂಪಾಲ್ನಲ್ಲಿ ನಡೆದಿದೆ. 14 ಸದಸ್ಯರ ಸಭೆಯಲ್ಲಿ 12 ನಾಯಕರು ಮಾತ್ರ ಪಾಲ್ಗೊಂಡಿದ್ದರು. ಟಿಎಂಸಿಯ ಅಭಿಷೇಕ್ ಬ್ಯಾನರ್ಜಿಗೆ ಇ.ಡಿ. ಸಮನಸ್‌್ಸ ನೀಡಿದ್ದರಿಂದ ಗೈರಾಗಿದ್ದರು. ಹಾಗೆಯೇ ಸಮನ್ವಯ ಸಮಿತಿ ನಿರ್ಧರಿಸಿದ್ದ `ಇಂಡಿಯಾ’ ಮೈತ್ರಿಕೂಟದ ಮೊದಲ ಜಂಟಿ ರ್ಯಾಲಿಯನ್ನು ರದ್ದುಪಡಿಸಿಕೊಂಡಿದೆ. 2024ರ ಭಾಜಪ-ಜೆಡಿಎಸ್ ಸೇರಿದಂತೆ 39 ಪಕ್ಷಗಳ `ಒಗ್ಗಟ್ಟಿನ ಬಲ’ ಮತ್ತು `ಅಧಿಕಾರ ಶಕ್ತಿ’ಯನ್ನು 28 ಪಕ್ಷಗಳ `ಇಂಡಿಯಾ’ ಮೈತ್ರಿಕೂಟ ತಡೆಯಲು ಸಾಧ್ಯವೇ? ಲೋಕಸಭೆಯಲ್ಲಿ 28 ಪಕ್ಷಗಳಿಂದ ಸುಮಾರು 150 ಸದಸ್ಯರಿದ್ದಾರೆ. `ಎನ್ಡಿಎ’ದ 39 ಮತ್ತು ಜೆಡಿಎಸ್ ಪಕ್ಷಗಳ ಸಂಖ್ಯಾಬಲದ ಮುಂದೆ ಇದು ಶೇಕಡ 50ರಷ್ಟು ಮಾತ್ರವಾಗಿದೆ.
ಇವೆಲ್ಲವುಗಳ ನಡುವೆಯೂ 28 ರಾಜಕೀಯ ಪಕ್ಷಗಳ ಮೈತ್ರಿ ಸಣ್ಣ ಸಾಧನೆಯಲ್ಲ. ಇವರುಗಳು ಆದಷ್ಟು ಬೇಗ ಏಕತೆಯನ್ನು ಪ್ರದರ್ಶಿಸಿ, ರಾಜಿ ಮಾಡಿಕೊಂಡು ಒಂದಾಗಿ ಸಾಗಿದರೆ ಜನರಲ್ಲಿ ವಿಶ್ವಾಸಾರ್ಹತೆ ಮೂಡಿಸುತ್ತದೆ. ಕಾರಣ, ಹಿಂದೆಂದೂ ರಾಜಕೀಯ ಪಕ್ಷಗಳು ಚುನಾವಣೆಗೂ ಪೂರ್ವದಲ್ಲಿ ಇಷೆ್ಟೂಂದು ಪೂರ್ವತಯಾರಿಯೊಂದಿಗೆ ಹೋರಾಟ ಮಾಡಿದ್ದಿಲ್ಲ. ಇತ್ತೀಚಿನ ಉಪ ಚುನಾವಣೆಗಳಲ್ಲಿ ಪ್ರತಿಪಕ್ಷಗಳ ಸಾಧನೆ ಕಂಡಾಗ ಜನಸಾಮಾನ್ಯರ ಬೆಂಬಲ ಗಳಿಸುತ್ತಿದೆ.
ಕರ್ನಾಟಕ ಛತ್ತೀಸ್ಗಢ, ರಾಜಸ್ತಾನ ಮತ್ತು ಹಿಮಾಚಲ ಪ್ರದೇಶ ಕಾಂಗ್ರೆಸ್ಸಿನ ಅಧಿಕಾರ ಶಕ್ತಿಕೇಂದ್ರ. ಇವುಗಳೇ `ಇಂಡಿಯಾ’ ಮೈತ್ರಿಕೂಟದ ಶಕ್ತಿಸ್ಥಳ. ಡಿಎಂಕೆ, ತೃಣಮೂಲ ಕಾಂಗ್ರೆಸ್, ಎಎಪಿ ಸೀಟು ಹಂಚಿಕೆ ಸಂದರ್ಭದಲ್ಲಿ ಅದೆಷ್ಟರಮಟ್ಟಿಗೆ ಒಗ್ಗಟ್ಟು ಜಪಿಸುತ್ತವೆಯೋ ಕಾದು ನೋಡಬೇಕಿದೆ. ಸದ್ಯ ಶಿವಸೇನೆ ಮತ್ತು ಎನ್ಸಿಪಿ ಭಿನ್ನಾಭಿಪ್ರಾಯ ಗಮನಿಸಿದಾಗ, `ಇಂಡಿಯಾ’ ಮೈತ್ರಿಕೂಟ ದುರ್ಬಲಗೊಳಿಸಲು `ಎನ್ಡಿಎ’ ಸದ್ಯಕ್ಕೆ ಕಣ್ಣು-ಕಿವಿ-ಮೂಗು ಮುಚ್ಚಿ ಕೂತರು ಸಾಕೆನಿಸುತ್ತದೆ.
ಭಾಜಪ ಸೋಲಿಸುವುದು ಸುಲಭ ಸಾಧ್ಯವಲ್ಲ ಎಂಬುದನ್ನು `ಇಂಡಿಯಾ’ ಮೈತ್ರಿಕೂಟ ಅರಿಯುವ ಅಗತ್ಯವಿದೆ. ಇಷ್ಟಕ್ಕೂ `ಇಂಡಿಯಾ’ ಮೈತ್ರಿಕೂಟ ಸೆಣೆಸುತ್ತಿರುವುದು ಆಡಳಿತರೂಢ ಭಾಜಪ ವಿರುದ್ಧವಲ್ಲ. ಬದಲಿಗೆ ಪ್ರಬಲವಾದ `ಸಿದ್ಧಾಂತ’ದ ವಿರುದ್ಧ ಎಂಬುದನ್ನು ಮೊದಲು ತಿಳಿಯುವ ಅನಿವಾರ್ಯತೆ ಇದೆ. `ಏಕರೂಪತೆ’ ಇಲ್ಲದ ಬಹುತ್ವ ಮತ್ತು `ವೈವಿಧ್ಯತೆ’ಯ ದೃಷ್ಟಿಕೋನ `ಭಾಜಪ’ ವಿರುದ್ಧ ಪರಿಣಾಮಕಾರಿಯಾಗುವುದಿಲ್ಲ. ನಮ್ಮ ಜನ `ಹಿಂದುತ್ವ’ ಮತ್ತು ಭಾಜಪದ `ರಾಷ್ಟ್ರೀಯತೆ’ಯನ್ನು ಅಪ್ಪಿಕೊಳ್ಳುವುದೇ ಹೆಚ್ಚು. ಇದನ್ನು `ಇಂಡಿಯಾ’ ಮೈತ್ರಿಕೂಟ ಅರ್ಥಮಾಡಿಕೊಳ್ಳಬೇಕು. `ಇಂಡಿಯಾ’ ಮೈತ್ರಿಕೂಟ ಪತ್ರಿಕಾಗೋಷ್ಠಿ, ಸಾಮಾಜಿಕ ಮಾಧ್ಯಮ ಪೋಸ್‌್ಟಗಳ ಹೊರತಾಗಿ ಇನ್ನೂ ಪ್ರತಿಭಟನೆ, ರ್ಯಾಲಿಗಳ ಹಂತಕ್ಕೆ ಹೋಗಿರುವುದಿಲ್ಲ. ಮಧ್ಯಪ್ರದೇಶದ ಭೂಪಾಲ್ನಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ನಡೆಸಲು ಉದ್ದೇಶಿಸಿದ್ದ `ಇಂಡಿಯಾ’ ಮೈತ್ರಿಕೂಟದ ಸರ್ವಪಕ್ಷಗಳ ಉದ್ದೇಶಿತ ಮೊದಲ ಜಂಟಿ ರ್ಯಾಲಿಯನ್ನು ರದ್ದುಪಡಿಸಿಕೊಂಡಿದೆ. ಅಲ್ಲದೆ, ವಿರೋಧ ಪಕ್ಷಗಳು ಸರ್ಕಾರದ ಕ್ರಮಗಳನ್ನು ಟೀಕಿಸುವುದನ್ನು ಕಡಿಮೆಗೊಳಿಸಿ, ರಾಷ್ಟ್ರೀಯ ಸ್ವಯಂಸೇವಕ ಸಂಘಟನೆಗಳನ್ನು ಟೀಕಿಸುತ್ತಾ ಕೂತಿವೆ.
`ಇಂಡಿಯಾ’ ಮೈತ್ರಿಕೂಟ ಒಗ್ಗಟ್ಟಾಗಿ ಸಮನ್ವಯತೆಯಿಂದ, ಸುಗಮವಾಗಿ ಸಾಗುತ್ತಾ ಸಂಯೋಜಕರನ್ನು ನೇಮಕ ಮಾಡಿಕೊಂಡು ಸಾಗಿದರೆ, ಆಡಳಿತ ಪಕ್ಷಕ್ಕೆ ನಡುಕವಂತೂ ಶುರುವಾಗುತ್ತದೆ. ಇದನ್ನರಿತು 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಗದ್ದುಗೆ ಹಿಡಿಯಲು `ಎನ್ಡಿಎ’ಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸಲಾಗುತ್ತಿದೆ.
`ಇಂಡಿಯಾ’ ಮೈತ್ರಿಕೂಟದ ಎದುರು ಮುಳ್ಳಿನ ಮತ್ತು ಒಡೆದ ಗಾಜಿನ ಚೂರುಗಳ ಹಾದಿ ಇದೆ. ಭವಿಷ್ಯದಲ್ಲಿ 28 ಪಕ್ಷಗಳ ನಾಯಕರು `ಎನ್ಡಿಎ’ನ ಆಮಿಶ-ಓಲೈಕೆಗೆ ಒಳಗಾಗುವ ಸಂಭವಗಳನ್ನು ತಳ್ಳಿಹಾಕುವಂತಿಲ್ಲ. ಇನ್ನೂ ಸೀಟು ವಿಚಾರ ಬಂದಾಗ 28 ಪಕ್ಷಗಳ ನಾಯಕರು ಒಂದಾಗಿ, ಒಟ್ಟಾಗಿ ನಿಲ್ಲುವಂತಾಗಲಿ. ಸದ್ಯಕ್ಕೆ ಕರ್ನಾಟಕ ರಾಜಕಾರಣ ಅನುಸರಿಸಲು `ಇಂಡಿಯಾ’ ಮಂತ್ರಿಕೂಟದ ಪಕ್ಷಗಳು ಹೋಗಬಾರದಾಗಿದೆ.
ಮುಖ್ಯವಾಗಿ `ಒಳಗೊಳ್ಳುವಿಕೆ’, `ವೈವಿಧ್ಯತೆ’ ಮತ್ತು `ಬಹುತ್ವ’ ಕುರಿತು `ಇಂಡಿಯಾ’ ಮೆತ್ರಿಕೂಟದೊಳಗಿರುವ ಎಲ್ಲಾ 28 ರಾಜಕೀಯ ಪಕ್ಷಗಳು ಏಕಧ್ವನಿಯಲ್ಲಿ ಮಾತನಾಡಬೇಕು. ಇಂತಹ ಒಗ್ಗಟ್ಟು ಪ್ರದರ್ಶಿಸದಿದ್ದಲ್ಲಿ `ಗೆಲುವು’ ಸಾಧ್ಯವೇ ಇಲ್ಲ.

ತಜ್ಞರ ತಂಡದ ಜತೆ ಚರ್ಚೆ ಬಳಿಕ ತೀರ್ಮಾನ: ಹೋರಾಟಗಾರರಿಗೆ ಸಿದ್ದರಾಮಯ್ಯ ಅಭಯ

ತಜ್ಞರ ತಂಡದ ಜತೆ ಚರ್ಚೆ ಬಳಿಕ ತೀರ್ಮಾನ: ಹೋರಾಟಗಾರರಿಗೆ ಸಿದ್ದರಾಮಯ್ಯ ಅಭಯ

ಸಂಕಷ್ಟ ಸೂತ್ರಕ್ಕೆ ಒತ್ತಡ ಹಾಕುವ ಅಗತ್ಯವಿದೆ

ತಜ್ಞರ ತಂಡದ ಜತೆ ಚರ್ಚೆ ಬಳಿಕ ತೀರ್ಮಾನ: ಹೋರಾಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ

ಬೆಂಗಳೂರು, ಸೆಪ್ಟೆಂಬರ್ 29: ತಮಿಳುನಾಡಿಗೆ ಕಾವೇರಿ ನೀರು ಬಿಡಬಾರದೆನ್ನುವುದೇ ನಮ್ಮ ಅನಿಸಿಕೆಯಾಗಿದೆ. ಇಂದು ಸಂಜೆ ತಜ್ಞರ ತಂಡದ ಜತೆಗಿನ ಸಭೆ ಬಳಿಕ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಹೋರಾಟಗಾರರ ನಿಯೋಗಕ್ಕೆ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಕಾವೇರಿ ವಿವಾದ ಕುರಿತಂತೆ ರಾಜ್ಯ ಕಬ್ಬು ಬೆಳೆಗಾರರ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದ ಹೋರಾಟಗಾರರ ನಿಯೋಗದೊಂದಿಗೆ ಇಂದು ನಡೆದ ಮಹತ್ವದ ಸಭೆಯಲ್ಲಿ   ಅವರು ಪ್ರತಿಕ್ರಿಯಿಸಿದರು.

ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಎರಡು ಸಮಿತಿಗಳು  ಪರಿಸ್ಥಿತಿ ಅವಲೋಕನ ಮಾಡಿ ಆದೇಶ ನೀಡುತ್ತವೆ. ಬಿಳಿಗುಂಡ್ಲುವಿನಲ್ಲಿ ನೀರು ಬಿಡಬೇಕೆಂದು ಆದೇಶವಾಗಿತ್ತು. ಸಾಮಾನ್ಯ ಪರಿಸ್ಥಿತಿಯಲ್ಲಿ 177.25 ಟಿ ಎಂಸಿ ನೀರನ್ನು ಒಂದು ವರ್ಷದಲ್ಲಿ ಬಿಡಬೇಕೆಂದು ಆದೇಶವಿದೆ. ನಮ್ಮ ರಾಜ್ಯಕ್ಕೆ  284. 85 ಟಿಎಂಸಿ ನೀರು ಅಗತ್ಯವಿದೆ. ಸುಪ್ರೀಂ ಕೋರ್ಟ್ ನಲ್ಲಿ ಸಂಕಷ್ಟ ಸೂತ್ರ ಸಿದ್ಧಪಡಿಸಿಲ್ಲ. 2 ಸಮಿತಿಗಳಾಗಬೇಕೆಂದು ನ್ಯಾಯಮಂಡಳಿಯೇ ತೀರ್ಮಾನ ಮಾಡಿದೆ ಎಂದು ವಿವರಿಸಿದರು.

ಪ್ರತಿ ಬಾರಿ ಸಭೆ ಕರೆದಾಗಲೂ  ಪ್ರತಿಭಟಿಸುತ್ತಲೇ ಬಂದಿದ್ದೇವೆ

ಈ ವರ್ಷ ಆಗಸ್ಟ್ ನಲ್ಲಿ ಮಳೆ ಕೈಕೊಟ್ಟಿದ್ದರಿಂದ ಸಮಸ್ಯೆ ಉಂಟಾಯಿತು. ಈ ತಿಂಗಳೂ ಕೂಡ ಮಳೆ ಅಷ್ಟೇನೂ ಆಗಿಲ್ಲ. ತಮಿಳುನಾಡಿಗೆ ಹಿಂಗಾರು ಮಳೆಯಿದೆ. ಈವರೆಗೆ 43 ಟಿಎಂಸಿ ನೀರು ಹೋಗಿದೆ. 123 ಟಿಎಂಸಿ ನೀರು ಬಿಡಬೇಕು ಎಂದು ಆದೇಶವಾಗಿದೆ. ಆದರೆ ನಾವು ನೀರು ಬಿಟ್ಟಿಲ್ಲ. ಕಾವೇರಿ ಪ್ರಾಧಿಕಾರ ಪ್ರತಿ ಬಾರಿ ಸಭೆ ಕರೆದಾಗಲೂ ನಾವು ಪ್ರತಿಭಟಿಸುತ್ತಲೇ ಬಂದಿದ್ದೇವೆ.  ನೀರಿಲ್ಲ ಎಂದೇ ಹೇಳಿದ್ದೇವೆ. ಸುಪ್ರೀಂಕೋರ್ಟ್ ಮುಂದೆಯೂ ಅರ್ಜಿ ಹಾಕಿದ್ದೆವು. ನಮಗೆ ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ನೀರಾವರಿಗೆ ಅಗತ್ಯವಿದೆ.  30 ಟಿ ಎಂಸಿ ಕುಡಿಯುವ ನೀರಿಗೆ ಅಗತ್ಯ. ಹಾಗೂ ಕೈಗಾರಿಕೆಗಳಿಗೆ 3 ಟಿಎಂಸಿ ನೀರು ಅಗತ್ಯ. ಒಟ್ಟು 106 ಟಿಎಂಸಿ ಅವಶ್ಯಕತೆ ರಾಜ್ಯಕ್ಕೆ ಇದೆ. ಆದರೆ ನಮ್ಮ ಬಳಿ ಇರುವುದು ಕೇವಲ 50 ಟಿಎಂಸಿ ನೀರು. ನಮ್ಮ ಮೊದಲ ಆದ್ಯತೆ ಕುಡಿಯುವ ನೀರು ಎಂದು ವಿವರಿಸಿದರು.

ಇಂದು ಸಂಜೆ ಸಭೆ

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೊಂದಿಗೆ ನೀರಾವರಿ ತಜ್ಞರು, ಮಾಜಿ ಅಡ್ವೊಕೇಟ್ ಜನರಲ್ ಗಳೊಂದಿಗೆ ಇಂದು ಸಂಜೆ  ಸಭೆ ಕರೆಯಲಾಗಿದ್ದು, ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ನೀರು ಕೊಡಬಾರದೆಂದು ನಮ್ಮ ಅನಿಸಿಕೆ. ನೀರು ಬಿಡದಿದ್ದರೆ, ಜಲಾಶಯಗಳನ್ನು ಕೇಂದ್ರ ಸರ್ಕಾರ  ವಶಕ್ಕೆ ಪಡೆಯಬಹುದು, contempt of court ಆಗುತ್ತದೆ, ಸರ್ಕಾರವನ್ನು ಡಿಸ್ಮಿಸ್ ಮಾಡಬಹುದು ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಸಭೆಯಲ್ಲಿ ಮಾತನಾಡಿದ ಕುರುಬೂರು ಶಾಂತಕುಮಾರ್ ಅವರು  ಕರ್ನಾಟಕದ ಜನರಿಗೆ ಪೆಟ್ಟು ಬೀಳುವ ಆದೇಶ ಬೀಳುತ್ತಿದೆ.  ಜನ ಆತಂಕಗೊಂಡಿದ್ದಾರೆ. ರೈತರ ಪರವಾಗಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘಟನೆಗಳು ಜನಪರವಾಗಿ ಹೋರಾಟ ಮಾಡಿದಾಗ ಅವರ ಮೇಲೆ ಹಾಕಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು. ಮೇಕೆದಾಟು ಯೋಜನೆಗೆ  ಶೀಘ್ರ ಕಾಯಕಲ್ಪ ನೀಡಬೇಕೆಂದು  ಒತ್ತಾಯಿಸಿದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ ಸಾರ್ವಜನಿಕರು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಪ್ರಾಧಿಕಾರದ ತೀರ್ಪು ಅವೈಜ್ಞಾನಿಕವಾಗಿದೆ. ಲೋಪ ಎಲ್ಲಿ ಆಗಿದೆ ಎಂದು ಸ್ಪಷ್ಟಪಡಿಸಬೇಕು.  ನಮ್ಮ ಹಕ್ಕೊತ್ತಾಯವನ್ನು ತಮಿಳುನಾಡಿನಂತೆಯೇ ತೀವ್ರವಾಗಿ ಮಾಡಬೇಕು. ಸಂಕಷ್ಟ ಪರಿಹಾರ ಸೂತ್ರ ಇಲ್ಲದಿದ್ದರೂ ನೀರು ಬಿಡುವಂತೆ ಸೂಚಿಸುವುದು  ತಪ್ಪು. ಆದೇಶ ಉಲ್ಲಂಘನೆ ಮಾಡಿದರೆ ಏನಾಗುತ್ತದೆ ಎಂದು ಪಟ್ಟಿ ಮಾಡಬೇಕು ಎಂದು ಹೇಳಿದರು.  ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ತಮಿಳುನಾಡು ಬೆಳೆಗೆ

ನೀರು ಕೇಳುತ್ತಿದೆ.  ತಕ್ಷಣ ಸದನ ಕರೆದು ಈ ಕುರಿತು ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಸಂಜೆ ತಜ್ಞರ ತಂಡದ ಜತೆಗೂ ಚರ್ಚಿಸಲಾಗುವುದು. ಬಳಿಕ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಿಯೋಗದಲ್ಲಿ ರೈತ, ದಲಿತ, ಕಾರ್ಮಿಕ ಮತ್ತು ಕನ್ನಡ ಸಂಘಟನೆಗಳ ಮುಖಂಡರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಂದ್ ಗೆ ಬೆಂಬಲಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಪ್ರತಿಭಟನೆ

ಬಂದ್ ಗೆ ಬೆಂಬಲಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಪ್ರತಿಭಟನೆ

ಬಂದ್ ಗೆ ಬೆಂಬಲಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಪ್ರತಿಭಟನೆ

ಸರ್ಕಾರ ಕಾವೇರಿ ಹೋರಾಟವನ್ನು ಲಘುವಾಗಿ ಪರಿಗಣಿಸಬಾರದು: ಶಿವಕುಮಾರ್ ಮೇಟಿ

ಬೆಂಗಳೂರು: ಕಾವೇರಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ಗೆ   ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯಿಂದ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು.

ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ನೇತೃತ್ವದಲ್ಲಿ ರಾಜಾಜಿನಗರದ ಭಾಷ್ಯಂ ಸರ್ಕಲ್‌ನಿಂದ ರಾಮಮಂದಿರವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಮೇಟಿ, ಕಾವೇರಿ ನಮ್ಮ ನಾಡಿನ ಜೀವ ನದಿಯಾಗಿದ್ದು,  ಈ ವರ್ಷ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಮಳೆಯಾಗದೇ ಕಾವೇರಿ ಕಣಿವೆಯ ಡ್ಯಾಮ್ ಗಳು ಖಾಲಿಯಾಗಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ.

ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟವನ್ನು ಪ್ರಬಲವಾಗಿ ನಡೆಸಬೇಕು. ಸಂಸದರೂ ಕೂಡ ರಾಜ್ಯದ ಪರವಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.

ಸರ್ಕಾರಗಳು ಹೋರಾಟಗಾರರನ್ನು ಲಘುವಾಗಿ ತೆಗೆದುಕೊಳ್ಳಬಾರದು. ಕಾವೇರಿ ವಿಚಾರದಲ್ಲಿ ಇಡಿ ರಾಜ್ಯ ಒಂದಾಗಿ ಹೋರಾಟ ನಡೆಸಿದ್ದು, ತಕ್ಷಣ ಕಾನೂನು ಹೋರಾಟ ತೀವ್ರಗೊಳಿಸಿ ಕಾವೇರಿ ಉಳಿಸಬೇಕು ಎಂದು ಆಗ್ರಹಿಸಿದರು.