by gadi@dmin | Oct 21, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ಪೋಟೊ ಸುದ್ದಿ, ರಾಜ್ಯ
ಹುತಾತ್ಮ ಸಿಬ್ಬಂದಿಯ ಗುಂಪು ವಿಮಾ ಮೊತ್ತ 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ : ಸಿದ್ದರಾಮಯ್ಯ
ಬೆಂಗಳೂರು , ಅಕ್ಟೋಬರ್ 21: ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ವತಿಯಿಂದ ಮೈಸೂರು ರಸ್ತೆಯ ಸಿಎಆರ್ ( ಕೇಂದ್ರ) ಆಯೋಜಿಸಿರುವ “ ಪೊಲೀಸ್ ಹುತಾತ್ಮರ ದಿನಾಚರಣೆ”ಯಲ್ಲಿ ಭಾಗವಹಿಸಿದ್ದ ಕ್ಷಣಗಳು.
ಬೆಂಗಳೂರು ಅ 21: ಕರ್ತವ್ಯದ ಮೇಲಿದ್ದಾಗ ಹುತಾತ್ಮರಾಗುವ ಪೊಲೀಸ್ ಸಿಬ್ಬಂದಿಯ ಗುಂಪು ವಿಮಾ ಮೊತ್ತವನ್ನು 20 ಲಕ್ಷದಿಂದ 50 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
ಇಂದು ಪೊಲೀಸ್ ಸಂಸ್ಮರಣ ದಿನದ ಅಂಗವಾಗಿ ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮರಿಗೆ ಪುಷ್ಪಚಕ್ರ ಅರ್ಪಿಸಿ ನಮನ ಸಲ್ಲಿಸಿ ಮಾತನಾಡಿದರು.
ಪೊಲೀಸ್ ವ್ಯವಸ್ಥೆ ರಾಜ್ಯದ , ಸರ್ಕಾರದ ಘನತೆಯನ್ನು ಹೆಚ್ಚಿಸುವಂತೆ ಕೆಲಸ ಮಾಡುತ್ತದೆ. ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆಗೆ ನೇರ ಸಂಬಂಧವಿದೆ.
ಯಾವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಮರ್ಪಕವಾಗಿರುತ್ತದೋ ಅಲ್ಲಿಗೆ ಬಂಡವಾಳ ಹೆಚ್ಚಾಗಿ ಬರುತ್ತದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಾಗಿ, ಅಭಿವೃದ್ಧಿ ವೇಗ ಪಡೆದುಕೊಳ್ಳುತ್ತದೆ. ಇದರ ಪರಿಣಾಮ ನಾಡಿನ ಜನರ ತಲಾ ಆದಾಯದ ಪ್ರಮಾಣವೂ ಹೆಚ್ಚಾಗುತ್ತದೆ. ಆದ್ದರಿಂದ ನಾಡಿನ ಕಾನೂನು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಕಟ್ಟು ನಿಟ್ಟಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ತಂತ್ರಜ್ಞಾನ ಬೆಳೆದಂತೆ ಪೊಲೀಸ್ ವ್ಯವಸ್ಥೆ ಹೊಸ ಹೊಸ ಸವಾಲುಗಳಿಗೆ ಮುಖಾಮುಖಿ ಆಗುತ್ತದೆ. ಸೈಬರ್ ತಂತ್ರಜ್ಞಾನದ ಜತೆಗೇ ಸೈಬರ್ ಅಪರಾಧಗಳೂ ಹೆಚ್ಚಾಗುತ್ತಿವೆ. ಇದನ್ನು ಪರಿಣಾಮಕಾರಿಯಾಗಿ ತಡೆ ಹಿಡಿಯಬೇಕು ಎನ್ನುವ ಸೂಚನೆ ನೀಡಿದರು.
ಸುಳ್ಳು ಸುದ್ದಿಗಳು, ಅಶಾಂತಿ ಸೃಷ್ಟಿಸುವ ಸುಳ್ಳುಗಳನ್ನು, ದ್ವೇಷ ಹರಡುವ ಸುಳ್ಳುಗಳನ್ನು ವ್ಯಾಪಕವಾಗಿ ಹರಡಲಾಗುತ್ತಿದೆ. ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಸಮಾನವಾಗಿ ನಡೆಸಿಕೊಳ್ಳುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆ ಮೇಲಿದೆ ಎಂದರು.
ಆದ್ದರಿಂದ ಸುಳ್ಳು ಸುದ್ದಿ ಹರಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. ಸುಳ್ಳು ಮತ್ತು ದ್ವೇಷದ ಸುದ್ದಿಗಳು ನಾಡಿನ GDP ಗೆ ಮಾರಕ. ಅಶಾಂತಿಯ ಪರಿಣಾಮವಾಗಿ ಜನರ ತಲಾ ಆದಾಯಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಸುಳ್ಳು ಸುದ್ದಿ ಹರಡುವ ಜಾಲ ತಾಣಗಳು ಮತ್ತು ಅವನ್ನು ನಿರ್ವಹಿಸುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ಮಹಿಳೆ, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ರಕ್ಷಣೆ ಕೊಡುವ ಅಗತ್ಯವಿದೆ. ಸುಗಮ ಸಂಚಾರ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಹೀಗಾಗಿ ಹೆಚ್ಚುವರಿ ಪೊಲೀಸ್ ಹುದ್ದೆ ಸೃಷ್ಟಿಸಿದ್ದೇವೆ. ಹೆಚ್ಚುವರಿ ಮಹಿಳಾ ಮತ್ತು ಸಂಚಾರ ಠಾಣೆಗಳನ್ನು ಆರಂಭಿಸಿದ್ದೇವೆ. ಹೊಸ ವಾಹನ ಖರೀದಿಗೆ 100 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂದರು.
2125 ಪೊಲೀಸ್ ವಸತಿ ಗೃಹಗಳನ್ನು ನಿರ್ಮಿಸಲು 450 ಕೋಟಿ ನೀಡಲಾಗುವುದು. ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಆರೋಗ್ಯ ಭಾಗ್ಯಕ್ಕಾಗಿ 100 ಕೋಟಿ ರೂ ಒದಗಿಸಲಾಗಿದೆ. ನಿವೃತ್ತ ಸಿಬ್ಬಂದಿಯ ಆರೋಗ್ಯ, ಚಿಕಿತ್ಸೆಗಾಗಿ ನಿಶ್ಚಿತ ಠೇವಣಿ ಇಡಲಾಗಿದೆ. ಪೊಲೀಸ್ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕಾಗಿ 7 ಜಿಲ್ಲೆಗಳಲ್ಲಿ 7 ಪೊಲೀಸ್ ಪಬ್ಲಿಕ್ ಶಾಲೆ ಆರಂಭಿಸಲಾಗುತ್ತಿದೆ. ಇವುಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರ ಬದ್ದವಾಗಿದೆ. ಪೊಲೀಸ್ ಕ್ಯಾಂಟೀನ್ ಗಳನ್ನು ಆರಂಭಿಸಲಾಗುತ್ತಿದೆ ಎಂದರು.
ಗೃಹ ಮಂತ್ರಿ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಮತ್ತು ಪೊಲೀಸ್ ಇಲಾಖೆಯ ನಾನಾ ವಿಭಾಗಗಳ ಮುಖ್ಯಸ್ಥರು ಪುಷ್ಪ ನಮನ ಸಲ್ಲಿಸಿದರು.
ಕಳೆದ ಒಂದು ವರ್ಷದಲ್ಲಿ ದೇಶದಾದ್ಯಂತ ಹುತಾತ್ಮರಾದ ಎಲ್ಲಾ ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಸ್ಮರಿಸಿ ನಮನ ಸಲ್ಲಿಸಲಾಯಿತು.
by gadi@dmin | Oct 21, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್ ಅವರು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆರೋಗ್ಯ ವಿಚಾರಿಸಿ ಬೇಗ ಗುಣಮುಖರಾಗುವಂತೆ ಹಾರೈಸಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರು ಜತೆಗಿದ್ದರು.
by gadi@dmin | Oct 20, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ನಮ್ಮ ಬೆಂಗಳೂರು, ರಾಜ್ಯ
ನಮ್ಮ ಮೆಟ್ರೋ ಮಾರ್ಗ ಉದ್ಘಾಟಿಸಿದ ಪ್ರಧಾನಿ
ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಬೈಯಪ್ಪನಹಳ್ಳಿ-ಕೆ.ಆರ್.ಪುರಂ, ಕೇಂಗೇರಿ – ಚಲ್ಲಘಟ್ಟ ವಿಸ್ತರಣೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಉತ್ತರ ಪ್ರದೇಶದ ರಾಜ್ಯಪಾಲರು, ಮುಖ್ಯಮಂತ್ರಿಗಳು ಭಾಗವಹಿಸಿದ್ದರು.
by gadi@dmin | Oct 18, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ಕನ್ನಡ ನಾಡು ನುಡಿ, ರಾಜ್ಯ
ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡ, ಇಸ್ರೋದ ಸೋಮನಾತ್ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಿದ ರಾಜ್ಯಪಾಲರು
ಬೆಂಗಳೂರು 17.10.2023: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಬೆಂಗಳೂರು ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ ಸಮಾರಂಭದಲ್ಲಿ ಗೌರವಾನ್ವಿತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಬೆಂಗಳೂರು ವಿಶ್ವವಿದ್ಯಾಲಯ ಗೌರವಾನ್ವಿತ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹೌಗೂ ಹಾಗೂ ವಿಜ್ಞಾನಿ ಮತ್ತು ಇಸ್ರೋ ಅಧ್ಯಕ್ಷರಾದ ಶ್ರೀ ಸೋಮನಾಥ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
ಘಟಿಕೋತ್ಸವವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಅತ್ಯುತ್ತಮವಾದ ಕೆಲಸಗಳನ್ನು ಮಾಡಿ ದೇಶದ ಪ್ರಗತಿಗೆ ಗಣನೀಯ ಕೊಡುಗೆ ನೀಡಿದ ಭಾರತದ ಮಾಜಿ ಪ್ರಧಾನಿ ಶ್ರೀ ದೇವೇಗೌಡರನ್ನು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪದವಿಯೊಂದಿಗೆ ಗೌರವಿಸಿರುವುದು ಸಂತೋಷದ ವಿಷಯ. ವಿಜ್ಞಾನಿ ಮತ್ತು ಇಸ್ರೋ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ಸೋಮನಾಥ್ ಅವರಿಗೆ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ. ಕಾರಣಾಂತರಗಳಿಂದ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಸಮಾಜಕ್ಕಾಗಿ ಈ ಇಬ್ಬರು ಮಹನೀಯರ ಕೊಡುಗೆ ನಿರಂತರವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
by gadi@dmin | Oct 18, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ: ಸಕಾರಾತ್ಮಕ ಸ್ಪಂದನೆಗೆ ಸಿಎಂ ಭರವಸೆ
ಬೆಂಗಳೂರು, ಅಕ್ಟೋಬರ್ 18- ಪ್ರಸ್ತುತ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ನೇಮಕಾತಿಯಲ್ಲಿ ಶೇ.3 ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಇತರ ಇಲಾಖೆಗಳಲ್ಲಿಯೂ ಶೇ.2 ರಷ್ಟು ಮೀಸಲಾತಿ ನೀಡುವ ಕುರಿತು ಸಕಾರಾತ್ಮಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇತ್ತೀಚೆಗೆ ಚೀನಾದಲ್ಲಿ ನಡೆದ 19ನೇ ಏಷ್ಯನ್ ಗೇಮ್ಸ್ನಲ್ಲಿ ಪದಕ ಪಡೆದ ರಾಜ್ಯದ ಕ್ರೀಡಾಪಟುಗಳು ಮತ್ತು ತರಬೇತುದಾರರನ್ನು ಅವರು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸನ್ಮಾನಿಸಿ, ನಗದು ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದರು.
ದೇಶ ಮತ್ತು ರಾಜ್ಯದ ಗೌರವ ಹೆಚ್ಚು ಮಾಡಿದ್ದೀರಿ. ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಬಾರಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು ಅತ್ಯಧಿಕ ಪದಕಗಳನ್ನು ಗೆದ್ದಿದ್ದಾರೆ. ಕಳೆದ ಬಾರಿ 70, ಈ ಬಾರಿ 107 ಪದಕ ಗೆದ್ದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಡೀ ಜಗತ್ತಿನಲ್ಲಿ ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಏಷ್ಯನ್ ಗೇಮ್ಸ್ನಲ್ಲಿಯೂ ಮೊದಲ-ಎರಡನೇ ಸ್ಥಾನ ಬಂದರೆ ಗೌರವ ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡಲು ಬದ್ಧವಾಗಿದ್ದು, ತಾವು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಏಷ್ಯನ್ ಗೇಮ್ಸ್, ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಬಹುಮಾನ ಮೊತ್ತ ನೀಡುವ ಕುರಿತು ಘೋಷಿಸಲಾಗಿತ್ತು. ಅತಿ ಹೆಚ್ಚು ಮೊತ್ತದ ಬಹುಮಾನ ಘೋಷಿಸಿದ ಮೊದಲ ರಾಜ್ಯ ನಮ್ಮದು ಎಂದು ಅವರು ವಿವರಿಸಿದರು.
ಈಗ ನಮ್ಮ ರಾಜ್ಯದಿಂದ 8 ಜನ ಪದಕ ಪಡೆದಿದ್ದಾರೆ, ಸರ್ಕಾರ ಮತ್ತು ಏಳು ಕೋಟಿ ಕನ್ನಡಿಗರ ವತಿಯಿಂದ ಅಭಿನಂದನೆಗಳು. ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ಸಣ್ಣ ವಿಷಯವಲ್ಲ. ಇದಕ್ಕೆ ಅಪಾರ ಪರಿಶ್ರಮದ ಅಗತ್ಯವಿದೆ. ನೀವು ಅದ್ಭುತ ಸಾಧನೆ ಮಾಡಿದ್ದೀರಿ. ಓಲಿಂಪಿಕ್ಸ್ನಲ್ಲಿಯೂ ಪದಕ ಗೆಲ್ಲುವ ಪ್ರಯತ್ನ ಮಾಡಿ ಎಂದು ಶುಭ ಹಾರೈಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ನಸೀರ್ ಅಹ್ಮದ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಪದಕ ವಿಜೇತರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಏಷ್ಯನ್ ಗೇಮ್ಸ್ನ ಪದಕ ವಿಜೇತ ರಾಜ್ಯದ ಕ್ರೀಡಾಪಟುಗಳಾದ ರಾಜೇಶ್ವರಿ ಗಾಯಕ್ವಾಡ್ (ಕ್ರಿಕೆಟ್- ಚಿನ್ನ), ರೋಹನ್ ಬೋಪಣ್ಣ (ಟೆನ್ನಿಸ್- ಮಿಕ್ಸ್ಡ್ ಡಬಲ್ಸ್- ಚಿನ್ನ), ಮಿಜೋ ಚಾಕೋ ಕುರಿಯನ್, ನಿಹಾಲ್ ಜೋಯಲ್ (ಅಥ್ಲೆಟಿಕ್ಸ್ ಪುರುಷರ 4*400 ಮೀ. ರಿಲೇ -ಕಾಯ್ಡಿರಿಸಿದ ಕ್ರೀಡಾಪಟು- ಚಿನ್ನ), ಮಿಥುನ್ ಮಂಜುನಾಥ್ (ಪುರುಷರ ಬ್ಯಾಡ್ಮಿಂಟನ್- ಬೆಳ್ಳಿ), ಸಾಯಿ ಪ್ರತೀಕ್ (ಪುರುಷರ ಬ್ಯಾಡ್ಮಿಂಟನ್ ಬೆಳ್ಳಿ), ದಿವ್ಯಾ (ಶೂಟಿಂಗ್- ಎರಡು ಬೆಳ್ಳಿ ಪದಕ), ಹಾಗೂ ತರಬೇತುದಾರರಾದ ವಿ.ತೇಜಸ್ವಿನಿ ಬಾಯಿ (ಕಬಡ್ಡಿ- ಚಿನ್ನ), ಅಂಕಿತ ಬಿ.ಎಸ್. (ಹಾಕಿ- ಕಂಚು), ಸಿ.ಎ.ಕುಟ್ಟಪ್ಪ (ಬಾಕ್ಸಿಂಗ್ ಮುಖ್ಯ ತರಬೇತುದಾರರು- 1 ಬೆಳ್ಳಿ ಮತ್ತು 4 ಕಂಚು) ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸನ್ಮಾನ ಮಾಡಿ, ನಗದು ಪುರಸ್ಕಾರ ಪ್ರದಾನ ಮಾಡಿದರು.