by gadi@dmin | Sep 29, 2023 | Top ಸುದ್ದಿಗಳು, ಕನ್ನಡ ನಾಡು ನುಡಿ, ರಾಜ್ಯ
ಹಂಪಿಗೆ ಮತ್ತೊಂದು ಪ್ರಶಸ್ತಿಯ ವಿಶೇಷ ಗರಿ
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ನೀಡುವ “ಪ್ರವಾಸಿ ಗ್ರಾಮ ಪ್ರಶಸ್ತಿ” ಯು ನಮ್ಮ ಹಂಪಿ ಗ್ರಾಮಕ್ಕೆ ದೊರೆತದ್ದು ಅತ್ಯಂತ ಖುಷಿಯ ಸಂಗತಿ. ಕಳೆದ ವಾರವಷ್ಟೇ ಹೊಯ್ಸಳರ ಕಾಲದ ದೇವಾಲಯಗಳು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದವು,
ಈಗ ಹಂಪಿ ಗ್ರಾಮವು ಉತ್ತಮ ಪ್ರವಾಸಿ ಗ್ರಾಮವಾಗಿ ಗುರುತಿಸಲ್ಪಟ್ಟಿರುವುದರಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಮತ್ತಷ್ಟು ಚೈತನ್ಯ ಮತ್ತು ಉತ್ತೇಜನ ನೀಡುತ್ತದೆ.
ಕರ್ನಾಟಕ ಎಂದರೆ ಐತಿಹಾಸಿಕ ಪ್ರವಾಸಿಗಳ ತಾಣ. ಈ ತಾಣಗಳು ಸೌಂದರ್ಯಕ್ಕೆ ಭೂಷಣ ಎಂದು ಸಣ್ಣ ನೀರಾವರಿ ಸಚಿವರಾದ ಎನ್ ಎಸ್ ಭೋಸರಾಜ್ ರವರು ಹರ್ಷ ವ್ಯಕ್ತ ಪಡಿಸಿದ್ದಾರೆ.
by gadi@dmin | Sep 11, 2023 | Top ಸುದ್ದಿಗಳು, ರಾಜ್ಯ
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆಯಲ್ಲಿ 8 ಜನ ಆಯ್ಕೆ
ಆನಂದ ಬೈದನಮನೆಗೆ 269 ಅತೀ ಹೆಚ್ಚು
ಬೆಂಗಳೂರು, ಪ್ರತಿಷ್ಠಿತ ಪತ್ರಕರ್ತರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅತ್ಯಂತ ಅಧಿಕ ಮತ ಪಡೆದು ಆನಂದ ಪಿ ಬೈದನಮನೆ ಆಯ್ಕೆಯಾದರೆ, ಕ್ರಮವಾಗಿ ರಮೇಶ ಪಾಳ್ಯ, ಧ್ಯಾನ ಪೂನಚ್ಚ, ಮೋಹನ್ ಕುಮಾರ್ ಬಿ ಎನ್, ಕೃಷ್ಣಕುಮಾರ್ ಪಿ ಎಸ್, ವಿನೋದಕುಮಾರ್ ಬಿ ನಾಯ್ಕ್, ಸೋಮಶೇಖರ್ ಕೆ ಎಸ್, (ಸೋಮಣ್ಣ), ಪರಮೇಶ್ ಕೆ ವಿ. ಆಯ್ಕೆಯಾಗಿದ್ದಾರೆ.
ಆಟೋ ಗುರ್ತಿನಲ್ಲಿ ಸ್ಪರ್ಧಿಸಿದ್ದ ಆನಂದ ಬೈದನಮನೆ
ವಿವಿಧ ಮೀಸಲಾತಿಗಳಲ್ಲಿ ಅವಿರೋದವಾಗಿ ಆಯ್ಕೆಯಾದವರ ವಿವರ :
ಎಮ್ ಎಸ್ ರಾಜೇಂದ್ರ, ರಮೇಶ್ ಬಿ (ರಮೇಶ ಹಿರೇಜಂಬೂರ) ದೊಡ್ಡಬೊಮ್ಮಯ್ಯ, ನಯನಾ ಎಸ್, ವನಿತ ಎಸ್ ಎಂದು ಸಂಘದ ಚುನಾವಣಾಧಿಕಾರಿಗಳಾದ ವಿನುತ ವಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
by gadi@dmin | Sep 6, 2023 | Top ಸುದ್ದಿಗಳು, ಕನ್ನಡ ನಾಡು ನುಡಿ
ಬಾಗಲಕೋಟೆ- ಕುಡಚಿ ರೈಲ್ವೆ ಮಾರ್ಗ 2025ಕ್ಕೆ ಪೂರ್ಣ – ಪಾಟೀಲ
ಗದಗ- ವಾಡಿ ರೈಲ್ವೆ ಮಾರ್ಗ ಮುಗಿಸಲು 2026ರ ಮಾರ್ಚ್ ಗಡುವು- ಸಚಿವ ಎಂ ಬಿ ಪಾಟೀಲ
ಎರಡು ಮಹತ್ವದ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು
ಬೆಂಗಳೂರು : ಉತ್ತರ ಕರ್ನಾಟಕ ಭಾಗದ ಮಹತ್ವದ ರೈಲ್ವೆ ಯೋಜನೆಗಳಲ್ಲಿ ಒಂದಾದ 257 ಕಿಲೋಮೀಟರ್ ಉದ್ದದ ಗದಗ- ವಾಡಿ ನಡುವಿನ ಮಾರ್ಗವನ್ನು 2026ರ ಮಾರ್ಚ್ ಒಳಗೆ ಮುಗಿಸುವ ಗಡುವು ಹಾಕಿಕೊಳ್ಳಲಾಗಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ ಬುಧವಾರ ಹೇಳಿದ್ದಾರೆ.
ಉತ್ತರ ಕರ್ನಾಟಕದ ಎರಡು ಮುಖ್ಯ ರೈಲ್ವೆ ಯೋಜನೆಗಳಾದ ಗದಗ-ವಾಡಿ ಮತ್ತು ಬಾಗಲಕೋಟೆ-ಕುಡಚಿ ನಡುವಿನ ಮಾರ್ಗಗಳ ಪ್ರಗತಿ ಪರಿಶೀಲನೆ ಬಗ್ಗೆ ಪ್ರತ್ಯೇಕ ಸಭೆಗಳನ್ನು ನಡೆಸಿದ ಸಂದರ್ಭದಲ್ಲಿ ಅವರು ಹೀಗೆ ಹೇಳಿದರು.
ಒಟ್ಟು ರೂ. 1,922 ಕೋಟಿ ಅಂದಾಜು ವೆಚ್ಚದ ಈ ಯೋಜನೆಯು ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆಗಳ ತಲಾ ಶೇಕಡಾ 50ರಷ್ಟು ವೆಚ್ಚ ಹಂಚಿಕೆಯಲ್ಲಿ ನಡೆಯುತ್ತಿದೆ. ಈ ಕಾಮಗಾರಿಗೆ 4,002 ಎಕರೆ ಭೂಮಿ ಅಗತ್ಯವಿದ್ದು, ಈಗಾಗಲೇ 3,945 ಎಕರೆ ಭೂಮಿಯನ್ನು ಕಾಮಗಾರಿಗಾಗಿ ಬಿಟ್ಟುಕೊಡಲಾಗಿದೆ. ಮಿಕ್ಕ 57 ಎಕರೆ ಭೂಮಿಯನ್ನು ಇನ್ನೊಂದು ತಿಂಗಳೊಳಗೆ ಕೊಡಲಾಗುತ್ತದೆ ಎಂದು ಸಚಿವರು ವಿವರಿಸಿದರು.
ಗದಗದಿಂದ ತಳಕಲ್ ವರೆಗೆ ಈಗಾಗಲೇ ರೈಲ್ವೆ ಹಳಿ ಇದೆ. ತಳಕಲ್ ನಿಂದ ಕುಷ್ಟಗಿವರೆಗಿನ 57 ಕಿ.ಮೀ. ಪೈಕಿ ಹನುಮಪುರದವರೆಗೆ ಕೆಲಸ ಮುಗಿದಿದೆ. ಕುಷ್ಟಗಿವರೆಗಿನ ಮಾರ್ಗ ಮಾರ್ಚ್ 24ರೊಳಗೆ ಮುಗಿಯಲಿದೆ.ಅದಾದ ಮೇಲೆ ಇಲ್ಲಿ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಲಿದೆ ಎಂದು ಪಾಟೀಲ ತಿಳಿಸಿದರು.
ಇನ್ನೊಂದು ಭಾಗದಲ್ಲಿ ವಾಡಿ ಕಡೆಯಿಂದ ಶೋರಾಪುರದವರೆಗೆ ಕಾಮಗಾರಿ ನಡೆಯುತ್ತಿದೆ ಎಂದೂ ಹೇಳಿದರು.
ಗದಗ-ವಾಡಿ ರೈಲು ಮಾರ್ಗ ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಒತ್ತು ಕೊಡುವಂತೆ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರು ಸಚಿವರನ್ನು ಕೋರಿದರು. ಆಗ ಸಚಿವ ಪಾಟೀಲರು ಸಭೆಯಲ್ಲಿದ್ದ ರೈಲ್ವೆ ಅಧಿಕಾರಿಗಳಿಗೆ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಗಮನಹರಿಸಲು ಸೂಚಿಸಿದರು. ಕಾಮಗಾರಿ ನಡೆಯುತ್ತಿರುವ ಸ್ಥಳಗಳಿಗೆ ತಂಡಗಳನ್ನು ಕಳುಹಿಸಿ ಗುಣಮಟ್ಟ ಖಾತ್ರಿ ಗೊಳಿಸಿಕೊಳ್ಳುವಂತೆಯೂ ನಿರ್ದೇಶನ ನೀಡಿದರು.
ಒಟ್ಟಾರೆ, ಈ ರೈಲ್ವೆ ಮಾರ್ಗದ ಕಾಮಗಾರಿ 2026ರ ಮಾರ್ಚ್ ಅವಧಿಯನ್ನು ಮೀರುವಂತಿಲ್ಲ. ಈ ಕಾಲಮಿತಿ ಮೀರಿ ಪುನಃ ಕಾಮಗಾರಿ ವೆಚ್ಚ ಹೆಚ್ಚಳವಾಗದಂತೆ ಗಮನ ವಹಿಸಬೇಕು ಎಂದರು.
ಮತ್ತೊಂದು ಯೋಜನೆಯಾದ, ಬಾಗಲಕೋಟೆ- ಕುಡಚಿ, 142 ಕೋಟಿ ಕಿ.ಮೀ. ಉದ್ದದ ರೂ 1,530 ಕೋಟಿ ವೆಚ್ಚದ ಕಾಮಗಾರಿಗೆ ಬೇಕಾಗಿದ್ದ 2,496 ಎಕರೆ ಭೂಮಿಯ ಪೈಕಿ 2,476 ಎಕರೆ ಈಗಾಗಲೇ ಹಸ್ತಾಂತರವಾಗಿದೆ. ಉಳಿದ 20 ಎಕರೆ ಭೂಮಿಯನ್ನು ಸದ್ಯದಲ್ಲೇ ಬಿಟ್ಟುಕೊಡಲಾಗುವುದು. 2025ರ ಡಿಸೆಂಬರ್ ಒಳಗೆ ಈ ಕಾಮಗಾರಿ ಮುಗಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಇದೇ ವೇಳೆ ಸಚಿವರು ಈ ಯೋಜನೆಯನ್ನು ಸಾಧ್ಯವಾದರೆ 2025ರ ಏಪ್ರಿಲ್ ಒಳಗೆ, ಅಂದರೆ ಆರು ತಿಂಗಳು ಮುಂಚಿತವಾಗಿ ಮುಗಿಸಲು ಸಂಬಂಧಪಟ್ಟ ಅಧಿಕಾರಿಗಳನ್ನು ಕೋರಿದರು.
ಬಾಗಲಕೋಟೆ- ಖಚ್ಚಿದೋಣಿ- ಲೋಕಾಪುರದವರೆಗಿನ 60 ಕಿ.ಮೀ. ರೈಲ್ವೆ ಕಾಮಗಾರಿ 2024ರ ಮಾರ್ಚ್ ವೇಳೆಗೆ ಮುಗಿಯಲಿದೆ. ಆನಂತರ, ಈ ಭಾಗದಲ್ಲಿ ರೈಲು ಸಂಚಾರ ಆರಂಭವಾಗಲಿದೆ. ಮತ್ತೊಂದು ಕಡೆ ಕುಡಚಿ ಭಾಗದಿಂದ ಕಾಮಗಾರಿ ಆರಂಭಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲಸಗಳಿಗೆ ಚಾಲನೆ ಕೊಡಬೇಕಿದೆ. ಕುಡಚಿಯಿಂದ ಜಗದಾಳ್ ವರೆಗಿನ ಕೆಲಸ ಶುರುವಾಗಲಿದೆ ಎಂದರು.
ಶಾಸಕ ಬಸವರಾಜ ರಾಯರೆಡ್ಡಿ ಮತ್ತು ಎಂ.ಎಲ್.ಸಿ. ಹಾಗೂ ಕರ್ನಾಟಕ ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ ಅವರು ನಂತರ ಸಚಿವ ಎಂ ಬಿ ಪಾಟೀಲ ಅವರು ಯೋಜನೆಗಳ ಕಾಮಗಾರಿಗಳ ಬಗ್ಗೆ ಮುತುವರ್ಜಿ ವಹಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಪ್ಪಳ ಸಂಸದ ಕರಡಿ ಸಂಗಣ್ಣ, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ರೈಲ್ವೆ ಅಧಿಕಾರಿಗಳು, ಮೂಲಸೌಕರ್ಯ ಇಲಾಖೆ ಎಸಿಎಸ್ ಗೌರವ ಗುಪ್ತ, ಹಾಜರಿದ್ದರು. ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪಾಲ್ಗೊಂಡಿದ್ದರು.
by gadi@dmin | Sep 6, 2023 | Top ಸುದ್ದಿಗಳು, ರಾಜ್ಯ
ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ
54 ಲಕ್ಷ ಮಕ್ಕಳಿಗೆ ಕ್ಷೀರ ಭಾಗ್ಯದಿಂದ ನೆರವಾಗಿದೆ
ನಮ್ಮ ಸರ್ಕಾರದ ಕ್ಷೀರ ಭಾಗ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ವುಗೆ ಗಳಿಸಿದೆ
ತುಮಕೂರು ಸೆ 6: ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿ ದಿನ ಸೇವಿಸುವಂತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಹತ್ತು ವರ್ಷಗಳಿಂದ ಪ್ರತೀ ದಿನ ಲಕ್ಷಾಂತರ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ನಮ್ಮ ಹೆಮ್ಮೆಯ ಈ ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ ಎಂದು ವಿವರಿಸಿದರು.
ಬಡವರು, ಮಧ್ಯಮ ವರ್ಗದವರ ಬದುಕಿಗೆ ಅನುಕೂಲ ಆಗುವ ಕಾರ್ಯಕ್ರಮವನ್ನು ನಾವು ರೂಪಿಸಿದರೆ ಬಿಜೆಪಿ ಯವರು ಅಡ್ಡಗಾಲು ಹಾಕಿ ಕಾರ್ಯಕ್ರಮ ವಿಫಲಗೊಳಿಸಲು ಯತ್ನಿಸಿದರು. ಸ್ವತಃ ಪ್ರಧಾನಿ ಮೋದಿಯವರು ಬಡವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅಪ್ಪಟ ಸುಳ್ಳು ಹೇಳಿದರು ಎಂದು ಟೀಕಿಸಿದರು.
ಅಂಬಾನಿ, ಅದಾನಿಗೆ ಕೊಟ್ಟರೆ ದೇಶದ ಆರ್ಥಿಕತೆಗೆ ನಷ್ಟ ಆಗುವುದಿಲ್ಲವೇ ಪ್ರಧಾನಿ ಮೋದಿಯವರೇ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಡವರು ಮಧ್ಯಮ ವರ್ಗದವರು ಸಮಾಧಾನದಿಂದ ಎರಡು ಹೊತ್ತು ಊಟ ಮಾಡಿದರೆ ವಿರೋಧಿಸಬೇಡಿ ಎಂದರು.
ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ , ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ , ಶಾಸಕರುಗಳಾದ ರಂಗನಾಥ್, ಷಡಾಕ್ಷರಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
by gadi@dmin | Sep 6, 2023 | Top ಸುದ್ದಿಗಳು, ಕನ್ನಡ ನಾಡು ನುಡಿ, ರಾಜ್ಯ
ಮಹಾತ್ಮಗಾಂಧಿಯನ್ನು ಕೊಂದ ಮನಸ್ಥಿತಿಯೇ ಗೌರಿಲಂಕೇಶ್, ಎಂ.ಎಂ.ಕಲ್ಬುರ್ಗಿಯವರನ್ನೂ ಕೊಂದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಸೆ 5 : ಅತ್ಯಂತ ಧರ್ಮವಂತರಾಗಿ ಬದುಕುತ್ತಿದ್ದ ಮಹಾತ್ಮಗಾಂಧಿಯನ್ನು ಕೊಂದ ಮನಸ್ಥಿತಿಯೇ ಗೌರಿ ಲಂಕೇಶ್, ದಾಭೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಗೌರಿ ಮೆಮೋರಿಯಲ್ ಟ್ರಸ್ಟ್ ಪತ್ರಕರ್ತೆ ಗೌರಿ ಲಂಕೇಶ್ ಸ್ಮರಣಾರ್ಥ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮಗಾಂಧಿ ಅತ್ಯಂತ ಧರ್ಮನಿರಪೇಕ್ಷತೆಯಿಂದ ಬದುಕನ್ನು ಆಚರಿಸುತ್ತಿದ್ದರು. ಇದನ್ನು ಸಹಿಸಲಾಗದ ಮನಸ್ಥಿತಿ ಅವರನ್ನು ಕೊಂದು ಹಾಕಿದರು. ಗೌರಿ ಲಂಕೇಶ್ ಅವರು ಇಂದು ನಮ್ಮ ಜತೆಗಿಲ್ಲ ಆದರೆ ಅವರ ಅದಮ್ಯ ಚೇತನ ನಮ್ಮ ಜತೆಗಿದೆ ಎಂದರು.
ಮಹಾತ್ಮಗಾಂಧಿ, ಗೌರಿ ಲಂಕೇಶ್ ಮಾತ್ರವಲ್ಲ. ಯಾರ್ಯಾರು ಬಸವಾದಿ ಶರಣರು, ಅಂಬೇಡ್ಕರ್, ಬುದ್ಧರ ವಿಚಾರ ಧಾರೆಗಳನ್ನು ಆಚರಿಸುತ್ತಾ ಜಾತಿ ಅಸಮಾನತೆ, ಧರ್ಮ ಸಂಘರ್ಷವನ್ನು ವಿರೋಧಿಸುತ್ತಾರೋ ಅವರೆಲ್ಲರಿಗೂ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ.
ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಭಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗೌರಿಯನ್ನು ಕೊಂದ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿ, 500 ಕ್ಕೂ ಹೆಚ್ವು ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ವೇಗವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ತನಿಖಾ ತಂಡದ ವೃತ್ತಿಪರತೆ ಮತ್ತು ಶ್ರಮ ವ್ಯರ್ಥ ಆಗುವುದಿಲ್ಲ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ ಎಂದು ತಿಳಿಸಿದರು.
ಅಖಿಲ ಭಾರತ ರೈತ ಆಂದೋಲನದ ನಾಯಕ ರೈತ ಮುಖಂಡ ರಾಕೇಶ್ ಟಿಕಾಯತ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮಾನವ ಹಕ್ಕು ಹೋರಾಟಗಾರ್ತಿ ತೀಸ್ತಾ ಸೆತಲ್ವಾದ್, ರಾಜಕೀಯ ಕಾರ್ಯಕರ್ತೆ ಏಂಜೆಲಾ ರಂಗದ್, ಬಹುಭಾಷಾ ನಟ ಪ್ರಕಾಶ್ ರೈ, ಕೇರಳ ರಾಜ್ಯದ ಮಾಜಿ ಸಚಿವೆ ಶಾಸಕಿ ಶೈಲಜ ಟೀಚರ್, ಖ್ಯಾತ ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ, ಮುಸ್ಲಿಂ ಒಕ್ಕೂಟದ ಮುಖಂಡರಾದ ಯಾಸಿನ್ ಮಲ್ಪೆ, ಮಾಜಿ ಸಚಿವ ಆಂಜನೇಯ ಅವರು ತಮ್ಮ ವಿಚಾರ ಮಂಡಿಸಿದರು.
by gadi@dmin | Aug 30, 2023 | Top ಸುದ್ದಿಗಳು, ರಾಜ್ಯ
ನೂರು ದಿನಗಳ ಸಂಭ್ರಮ: ನುಡಿದಂತೆ ನಡೆದ ಸರ್ಕಾರ
ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಗೆ ಮೈಸೂರಿನಲ್ಲಿ ಅದ್ದೂರಿ ಚಾಲನೆ
ದೇಶದಲ್ಲಿಯೇ ಕರ್ನಾಟಕ ಮಾದರಿ
ಚುನಾವಣಾ ಪ್ರಣಾಳಿಕೆಯನ್ನು ಸಮರ್ಪಕವಾಗಿ ಜಾರಿಮಾಡುವುದು ರಾಜಧರ್ಮ :ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಆಗಸ್ಟ್ 30: ಚುನಾವಣಾ ಪ್ರಣಾಳಿಕೆಯನ್ನು ಸಮರ್ಪಕವಾಗಿ ಜಾರಿಮಾಡಬೇಕಿರುವುದು ಯಾವುದೇ ಸರ್ಕಾರದ ರಾಜಧರ್ಮ. ಅದರಂತೆ ನಮ್ಮ ಸರ್ಕಾರ ಗೃಹಲಕ್ಮೀ ಯೋಜನೆಯನ್ನು ಜಾರಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು .
ಅವರು ಇಂದು ಸರ್ಕಾರದ ಮಹತ್ವಾಕಾಂಕ್ಷಿ, ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಈವರೆಗೆ ಕೊಟ್ಟ ಮಾತಿನಂತೆ ಯಾವ ಸರ್ಕಾರವೂ ನಡೆದುಕೊಂಡಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ನಮ್ಮ ಸರ್ಕಾರ ಮುಂದಿನ 5 ವರ್ಷಗಳಲ್ಲಿ ಜನರಿಗೆ ನೀಡಿರುವ ಭರವಸೆಗಳನ್ನು ನೂರಕ್ಕೆ ನೂರು ಈಡೇರಿಸುವ ವಿಶ್ವಾಸ, ಭರವಸೆ ನಮಗಿದೆ. ಐದು ಗ್ಯಾರಂಟಿಗಳನ್ನು ನಾವು ಜನರ ಮುಂದಿಟ್ಟಿದ್ದೆವು. ಗೃಹಜ್ಯೋತಿ, ಶಕ್ತಿ ಯೋಜನೆ, ಅನ್ನಭಾಗ್ಯ, ನಾಲ್ಕನೇ ಗ್ಯಾರಂಟಿಯಾಗಿ ಗೃಹಲಕ್ಷ್ಮೀ ಯೋಜನೆಯನ್ನು ಇಂದು ಜಾರಿಮಾಡಲಾಗಿದೆ ಎಂದರು.
ನೂರ ದಿನಗಳ ಸಾಧನೆ ಬಿಂಬಿಸುವ ಕಿರುಹೊತ್ತಿಗೆ
ಈ ತಿಂಗಳ 27 ನೇ ತಾರೀಖೆಗೆ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಜನತೆಯ ಮುಂದೆ ಸರ್ಕಾರದ ಸಾಧನೆಗಳನ್ನು ತಿಳಿಸಲು ಸಣ್ಣ ಕೈಪಿಡಿ ಹೊರತರಲಾಗಿದೆ. ಈ ಕಿರುಹೊತ್ತಿಗೆ ಕಳೆದ ಮೂರು ತಿಂಗಳು, 10 ದಿನಗಳಲ್ಲಿ ಮಾಡಿರುವ ಸಾಧನೆಗಳನ್ನು ಒಳಗೊಂಡಿದೆ. ಈ ರಾಜ್ಯದ ಜನತೆಗೆ ನಮ್ಮ ಕರ್ತವ್ಯ ಜವಾಬ್ದಾರಿ ಹಾಗೂ ಸಾಧನೆಗಳನ್ನು ಮುಂದಿಡುವ ಪ್ರಯತ್ನ ಮಾಡಿದೆ ಎಂದರು.
ಬೃಹತ್ ಪ್ರಮಾಣದಲ್ಲಿ ಬಡವರಿಗೆ ಹಣ ವರ್ಗಾವಣೆ
ಕರ್ನಾಟಕದಲ್ಲಿ 1.26 ಕೋಟಿ ಕುಟುಂಬಗಳಿವೆ. ಆ ಕುಟುಂಬಗಳ ಯಜಮಾನಿಯಾರಿಗೆ 2000 ರೂ.ಗಳನ್ನು ಅವರ ಖಾತೆಗೆ ಇಂದು ಜಮಾ ಮಾಡಲಾಗಿದೆ. ಈ ಯೋಜನೆಗೆ 1.10 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಇಡೀ ಭಾರತದಲ್ಲಿ ಯಾವ ರಾಜ್ಯವೂ ತೊಂದರೆಯಲ್ಲಿರುವ ಜನರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಂದರೆ ವರ್ಷಕ್ಕೆ 24 ಸಾವಿರ ಹಣವನ್ನು ಬಡವರಿಗೆ ವರ್ಗಾಯಿಸಿಲ್ಲ ಎನ್ನುವುದು ಕಟುಸತ್ಯ. ಜೂನ್ 11 ರಂದು ಶಕ್ತಿ ಯೋಜನೆ ಜಾರಿಯಾಗಿದ್ದು, 48,500 ಕೋಟಿ ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಅನ್ನಭಾಗ್ಯ ಕಾರ್ಯಕ್ರಮವನ್ನು ಜುಲೈ 10 ರಂದು ಜಾರಿಗೆ ತಂದೆವು. ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೇ ಹೋದರೂ ನಾವು 170 ರೂ.ಗಳನ್ನು ಅಕ್ಕಿ ಸಿಗುವವರೆಗೂ ಪ್ರತಿ ಬಿಪಿಎಲ್, ಅಂತ್ಯೋದಯ ಕಾರ್ಡುದಾರರ ಖಾತೆಗೆ ಜಮಾ ಮಾಡಿದ್ದೇವೆ ಎಂದರು.
ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ
ಜುಲೈ ತಿಂಗಳಿಂದ ಗೃಹಜ್ಯೋತಿ ಕಾರ್ಯಕ್ರಮದಡಿ 200 ಯೂನಿಟ್‍ವರೆಗೆ ವಿದ್ಯುತ್ ಬಳಸುವವರಿಗೆಲ್ಲಾ ಉಚಿತ ವಿದ್ಯುತ್ ಒದಗಿಸಿ ಶೂನ್ಯ ಬಿಲ್ ನೀಡುತ್ತಿದ್ದೇವೆ. ಈ ಯೋಜನೆಗೆ 1.56 ಕೋಟಿ ಜನ ನೋಂದಾಯಿಸಿಕೊಂಡಿದ್ದಾರೆ. ಪ್ರಧಾನಿಗಳೇ ಈ 5 ಗ್ಯಾರಂಟಿಗಳನ್ನು ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ. ಯುವನಿಧಿಯನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಪ್ರಾರಂಭವಾಗಲಿದೆ. ಎಲ್ಲಾ ಅಭಿವೃದ್ದಿ ಕಾರ್ಯಕ್ರಮಗಳನ್ನು ಜಾರಿ ಮಾಡಿ, ನೀರಾವರಿ, ಲೋಕೋಪಯೋಗಿ, ವಸತಿ, ಗ್ರಾಮಿಣಾಭಿವೃದ್ಧಿಗೆ ಅನುದಾನವಿಟ್ಟು 5 ಗ್ಯಾರಂಟಿಗಳನ್ನು ಜಾರಿ ಮಾಡಿದೆ. 56 ಸಾವಿರ ಕೋಟಿ ರೂ.ಗಳು ಒಂದು ವರ್ಷಕ್ಕೆ ತಗಲುತ್ತದೆ. ನಮ್ಮದು ಬಡವರ , ದಲಿತರ, ಹಿಂದುಳಿದ, ಅಲ್ಪಸಂಖ್ಯಾತರ ರೈತರ, ಕಾರ್ಮಿಕರ, ಯುವಕರ ಪರವಾದ ಸರ್ಕಾರ ಎಂದು ಸಾಬೀತು ಮಾಡಲಾಗಿದೆ. ಯಾರು ಏನೇ ಹೇಳಿದರೂ ನಾನು ನುಡಿದಂತೆ ನಡೆದಿದ್ದೇವೆ. ವಿರೋಧ ಪಕ್ಷದವರು ಹೇಳಿರುವುದು ಸುಳ್ಳು ಎಂದರು. ರಾಜ್ಯದಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.
ನೂರು ದಿನಗಳಲ್ಲಿ ಸರ್ಕಾರದ ಸಾಧನೆಯನ್ನು ಬಿಂಬಿಸುವ ಕರ್ನಾಟಕ ಮಾದರಿ ಪುಸಕ್ತವನ್ನು ಬಿಡುಗಡೆ ಮಾಡಲಾಯಿತು.
ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲಾ, ಕೆ.ಸಿ.ವೇಣುಗೋಪಾಲ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಸಚಿವ ಡಾ: ಕೆ.ಹೆಚ್.ಮುನಿಯಪ್ಪ, ಸಚಿವರಾದ ಕೃಷ್ಣಬೈರೇಗೌಡ, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಚೆಲುವರಾಯಸ್ವಾಮಿ, ಕೆ.ಹೆಚ್.ಮುನಿಸ್ವಾಮಿ, ಡಾ:ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಪಿ.ನರೇಂದ್ರಸ್ವಾಮಿ, ಬೋಸರಾಜು , ಶಾಸಕರು ಉಪಸ್ಥಿತರಿದ್ದರು.