by gadi@dmin | Aug 29, 2023 | Top ಸುದ್ದಿಗಳು, ಕನ್ನಡ ನಾಡು ನುಡಿ
ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಗಸ್ಟ್ ೩೧ ಗುರುವಾರ ಸಂಜೆ ೫.೦೦ ಗಂಟೆಗೆ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ.
ಕನ್ನಡ ಚಳವಳಿ ವೀರಸೇನಾನಿ ಮ.ರಾಂಮೂರ್ತಿ ಪ್ರಶಸ್ತಿ, ಕನ್ನಡ ಕಾಯಕ ದತ್ತಿ ಪ್ರಶಸ್ತಿ, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಹಾಗೂ ಮನೋಹರಿ ಪಾರ್ಥಸಾರಥಿ ʻಮನುಶ್ರೀʼ ದತ್ತಿ ಪ್ರಶಸ್ತಿ ಪದಾನ ಸಮಾರಭವನ್ನು ಹಮ್ಮಿಕೊಳ್ಳಲಾಗಿದೆ. ಬೇಲಿಮಠ ಮಹಾಸಂಶ್ಥಾನದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಿಮರ್ಶಕರು, ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ಪಿ.ಬಿ. ನಾರಾಯಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಲೇಖಕಿ, ಅನುವಾದಕರಾದ ಡಾ. ವನಮಾಲಾ ವಿಶ್ವನಾಥ ಹಾಗೂ ದತ್ತಿ ದಾನಿಗಳಾದ ಪದ್ಮಭೂಷಣ ಡಾ. ಬಿ. ಸರೋಜಾದೇವಿ, ಶ್ರೀ ವ.ಚ.ಚನ್ನೇಗೌಡ, ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
೨೦೨೩ನೆಯ ಸಾಲಿನ ʻಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ಪ್ರಶಸ್ತಿʼಯನ್ನು ಕನ್ನಡ ಹೋರಾಟಗಾರರು ಹಾಗೂ ಕಲಾವಿದರೂ ಆಗಿರುವ ಬೆಂಗಳೂರಿನ ಶ್ರೀ ಜಿ. ಕೆ. ಸತ್ಯ ಅವರಿಗೆ, ೨೦೨೩ನೆಯ ಸಾಲಿನ ಕನ್ನಡ ಕಾಯಕ ಪ್ರಶಸ್ತಿಯನ್ನು ಕನ್ನಡ ಪರ ಹೋರಾಟಗಾರ ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಪರಿಸರ ಹೋರಾಟಗಾರ, ಕೃಷಿ ಬರಹಗಾರ ಉತ್ತರ ಕನ್ನಡ ಜಿಲ್ಲೆಯ ಶ್ರೀ ಶಿವಾನಂದ ಕಳವೆ ಮತ್ತು ರಂಗಭೂಮಿ ಕಲಾವಿದೆ ಹೆಲನ್ ಮೈಸೂರು ಅವರಿಗೆ, ೨೦೨೨ ಹಾಗೂ ೨೦೨೩ನೆಯ ಸಾಲಿನ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಯನ್ನು ಲೇಖಕಿಯರಾದ ಮೈಸೂರಿನ ಡಾ. ಎ. ಪುಷ್ಪ ಅಯ್ಯಂಗಾರ್ ಮತ್ತು ವಿಜಯಪುರದ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಅವರಿಗೆ, ೨೦೨೨ ಹಾಗೂ ೨೦೨೩ನೆಯ ಸಾಲಿನ ʻಮನೋಹರಿ ಪಾರ್ಥಸಾರಥಿ ʻಮನುಶ್ರೀʼ ಪ್ರಶಸ್ತಿʼಯನ್ನು ಲೇಖಕಿಯರಾದ ಮಂಡ್ಯದ ಶ್ರೀಮತಿ ಗುಣಸಾಗರಿ ನಾಗರಾಜ ಮತ್ತು ಚಿಕ್ಕಮಗಳೂರಿನ ಶ್ರೀಮತಿ ಡಿ. ಎನ್. ಗೀತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
by gadi@dmin | Aug 29, 2023 | Top ಸುದ್ದಿಗಳು, ರಾಜ್ಯ
ನೂರು ದಿನದಲ್ಲಿ ದಿಕ್ಕುತಪ್ಪಿದ ಸರ್ಕಾರ : ಬಸವರಾಜ ಬೊಮ್ಮಾಯಿ
ಬೆಂಗಳೂರು: ನೂರು ದಿನ ಪೂರೈಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಿನ ಐದು ವರ್ಷದ ದಿಕ್ಸೂಚಿ ನೀಡುವ ಬದಲು ದಿಕ್ಕು ತಪ್ಪಿದ್ದು, ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರದ ಹಗಲು ದರೋಡೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಫಲ್ಯಗಳ ಕುರಿತು ಬಿಜೆಪಿ ಹೊರ ತಂದಿರುವ ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ ಪುಸ್ತಕವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರೊಂದಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಸಂಪೂರ್ಣ ಬಹುಮತ ಪಡೆದ ಸರ್ಕಾರ ಯಾವ ರೀತಿ ಆಡಳಿತ ಆರಂಭ ಮಾಡಿ ಯಾವ ರೀತಿ ದಿಕ್ಸೂಚಿ ನೀಡಬೆಕಾಗಿತ್ತು ಅದರ ಬದಲು ದಿಕ್ಕು ತಪ್ಪಿದ ಸರ್ಕಾರ ಇದಾಗಿದೆ. ಸರ್ಕಾರ ಗೊಂದಲದಲ್ಲಿ ಸಿಲುಕಿ ಮಾತಿಗೆ ತಪ್ಪಿದ ಸರ್ಕಾರ ಇದಾಗಿದೆ. ಹಣಕಾಸಿನ ವ್ಯವಸ್ಥೆಯನ್ನು ಹಳಿ ತಪ್ಪಿಸಿದೆ. ನಾವು ಸರಪ್ಲಸ್ ಬಜೆಟ್ ಮಂಡನೆ ಮಾಡಿದ್ದೇವು ಇವರು ಬಂದ ಮೇಲೆ 8 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಸುಮಾರು 35 ಸಾವಿರ ಕೋಟಿ ತೆರಿಗೆ ಹೆಚ್ಚಳ ಮಾಡಿದ್ದಾರೆ. ಒಟ್ಟು 45 ಸಾವಿರ ಕೋಟಿ ರೂ. ತೆರಿಗೆ ಮೂಲಕ ಸಂಗ್ರಹಿಸುವ ಅವಕಾಶ ಮಾಡಿಕೊಂಡು 12 ಸಾವಿರ ಕೋಟಿ ಡೆಫಿಸಿಟ್ ಹೆಚ್ಚಳ ಮಾಡಿಕೊಂಡಿದ್ದಾರೆ ನಾವು ಕೊವಿಡ್ ನಂತರ ಸರ್ ಪ್ಲಸ್ ಬಜೆಟ್ ಮಾಡಿದ್ದೇವು. ಇವರು ಕೊವಿಡ್ ಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಾರಿಗೆ ನೌಕರರ ಸಂಬಳ ವಿಳಂಬವಾಗುತ್ತಿದೆ. ಇವರು ಬಂದ ಮೇಲೆ ಒಂದು ಕಿಮಿ ರಸ್ತೆಯನ್ನೂ ಮಾಡಿಲ್ಲ ಎಂದು ಹೇಳಿದರು.
ದಮನಕಾರಿ ನೀತಿ ಅನುಕರಣೆ
ಯಾರಾದರೂ ದೂರು ಕೊಟ್ಟರೆ ಅವರ ವಿರುದ್ದ ಕ್ರಮ ಕಾಂಟ್ರಾಕ್ಟರ್ ಗಳು ರಾಜ್ಯಪಾಲರಿಗೆ ದೂರು ನೀಡಿದರೆ ಅವರಿಗೆ ನೊಟೀಸ್ ನೀಡುತ್ತಿದ್ದಾರೆ. ಶಾಸಕ ಬಿ.ಆರ್ ಪಾಟಿಲ್ ಅವರು ಫೇಕ್ ಲೆಟರ್ ಅಂತ ಹೇಳಿದರು. ಅದು ಫೆಕ್ ಹೌದೊ ಅಲ್ಲವೊ ಅನ್ನುವುದು ತನಿಖೆಯಾಗಬೇಕು. ಅದನ್ನು ಬಿಟ್ಟು ಸುದ್ದಿ ಮಾಡಿದ ಪತ್ರಕರ್ತರಿಗೆ ನೊಟೀಸ್ ನೀಡುತ್ತಿದ್ದಾರೆ. ಯಾರೇ ಏನೇ ಪೋಸ್ಟ್ ಮಾಡಿದರೆ ಅವರನ್ನು ಜೈಲಿಗೆ ಹಾಕುವ ದಮನಕಾರಿ ಧೋರಣೆ ಅನುಸರಿಸಲಾಗುತ್ತಿದೆ.
ಕ್ರೈಮ ಗಳು ರಾಜಾರೋಷವಾಗಿ ನಡೆಯುತ್ತಿದೆ. ಅಕ್ರಮ ಬಾರ್ ಗಳು ತಲೆ ಎತ್ತುತ್ತಿವೆ. ಮಂತ್ರಿಗಳಿಗೆ ಕಮಿಷನ್ ನೀಡಲು ಪೈಪೋಟಿ ನಡೆಯುತ್ತಿದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಂಪೂರ್ಣ ಸ್ಥಗಿತ ಆಗಿದೆ ಎಂದು ಹೇಳಿದರು.
ಕಾವೇರಿ ರಾಜ್ಯದ ಹಿತ ಕಾಯುವಲ್ಲಿ ವಿಫಲ
ಕಾವೇರಿ ವಿಷಯದಲ್ಲಿ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಫಲ ಆಗಿದೆ. ರಾಜ್ಯದ ಹಿತ ಕಾಯುವಲ್ಲಿ ಸರ್ಕಾರ ವಿಫಲ ಆಗಿದೆ ಅಂತ ಸರ್ವಪಕ್ಷದ ಸಭೆಯಲ್ಲಿ ಹೇಳಿದ್ದೇನೆ. 10 ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸೂಚನೆ ನೀಡಿರುವದನ್ನು ಪ್ರಶ್ನಿಸಲು ಇನ್ನೂ ಸುಪ್ರೀಂ ಕೋರ್ಟ್ ಗೆ ಯಾಕೆ ಹೋಗಿಲ್ಲ. ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಲ್ಲಿ ಎರಡು ಬಾರಿ ವಿಚಾರಣೆ ನಡೆಯಿತು. ಈಗ ಸುಪ್ರೀಂ ಕೋರ್ಟ್ ಆದೇಶ ಮಾಡಿದರೆ ನಮ್ಮ ರೈತರ ಪರಿಸ್ಥಿತಿ ಏನಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಿದ್ಯುತ್ ಅಭಾವ ಹೆಚ್ಚಾಗುತ್ತಿದೆ. ಜಲ ವಿದ್ಯುತ್ ಸ್ಥಗಿತ ಆಗುತ್ತಿದೆ. ಕಲ್ಲಿದ್ದಲು ಖರಿದಿಗೆ ಹಣ ಇಲ್ಲ. ಜಿರೋ ಬಿಲ್ ಬದಲು ಜಿರೊ ವಿದ್ಯುತ್ ಸ್ಥಿತಿ ಬಂದಿದೆ. ಗ್ಯಾರೆಂಟಿ ಯೋಜನೆಗಳಿಗೆ ಎಸ್ಸಿ ಎಸ್ಟಿ ಹಣ ಬಳಕೆ ಮಾಡಿದ್ದಾರೆ. ಎಸ್ಸಿಪಿ ಟಿಎಸ್ಪಿ ಕಾಯ್ದೆಯ 7ಡಿ ಯನ್ನು ತೆಗೆದು ಹಾಕುವುದಾಗಿ ಹೇಳಿದ್ದರು. ಅಧಿವೇಶನದಲ್ಲಿ ಅದನ್ನು ಯಾಕೆ ಮಂಡನೆ ಮಾಡಲಿಲ್ಲ. ಅವರಿಗೆ ಹಣ ದುರ್ಬಳಕೆ ಮಾಡಿಕೊಳ್ಳಬೆಕಿದೆ ಹೀಗಾಗಿ ಅದನ್ನು ತೆಗೆದು ಹಾಕುತ್ತಿಲ್ಲ ಎಂದರು.
ಪೊಲಿಸ್ ಸ್ಟೇಶನ್ ಗಳಲ್ಲಿ ವಸೂಲಿ ದಂಧೆ ಮುಕ್ತವಾಗಿ ನಡೆಯುತ್ತಿದೆ. ಏಜೆಂಟರನ್ನು ಇಟ್ಟುಕೊಂಡು ವಸೂಲಿ ನಡೆಸುತ್ತಿದ್ದಾರೆ. ಜಿಲ್ಲೆಗಳಲ್ಲಿ ಕಾನ್ಬಸ್ಟೇಬಲ್ ಕಿರುಕುಳತಾಳದೇ ಮೇಲಾಧಿಕಾರಿಗಳ ವಿರುದ್ಧ ನೇರವಾಗಿಯೇ ಆರೋಪ ಮಾಡಿದ್ದಾರೆ. ಇವರು ನೂರು ದಿನದಲ್ಲಿ ರಾಜ್ಯವನ್ನು ಅಧೊಗತಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಬಿಜೆಪಿ ಈ ಸರ್ಕಾರದ ವಿರುದ್ದ ಹೋರಾಟ ಆರಂಭಿಸಿದೆ. ಇವರು ಇದೇ ರೀತಿ ಮುಂದುವರೆದರೆ ರಾಜ್ಯದ ಜನರೇ ಹೋರಾಟ ಮಾಡುವ ಸಮಯ ಬರುತ್ತದೆ ಎಂದರು.
ರಾಜ್ಯ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ಜಾರಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್ ಮನವಿ ಮಾಡಿಕೊಂಡಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಲಕ್ದ್ಮೀ ಯೋಜನೆಗೆ 1 ಕೋಟಿಗೂ ಹೆಚ್ಚು ಅರ್ಜಿ ಬಂದಿವೆ ಅಂತ ಹೇಳಿದ್ದಾರೆ. ಆದರೆ, ಎಷ್ಟು ಜನರನ್ನು ಆಯ್ಕೆ ಮಾಡಿದ್ದಾರೆ ಎಂದು ಬಹಿರಂಗಪಡಿಸಿಲ್ಲ. ಫಲಾನುಭವಿಗಳನ್ನು ಹೊರಗಿಡುವ ಪ್ರಯತ್ನ ಮಾಡಲಾಗುತ್ತಿದೆ. ಅರೆ ಬೆಂದ ಯೋಜನೆಗಳಿಗೆ ನಮ್ಮ ಬೆಂಬಲ ಇಲ್ಲ ಎಂದರು.
ಬಿಜೆಪಿ ಶಾಸಕ ಎಸ್ ಟಿ ಸೊಮಶೇಖರ್ ಗೃಹ ಲಕ್ಷ್ಮಿ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಅವರು ಯಾಕೆ ಬೆಂಬಲ ಕೊಡುತ್ತಿದ್ದಾರೆ ಅನ್ನುವುದನ್ನು ಕೇಳುತ್ತೇನೆ ಎಂದರು.
ಸರ್ಕಾರದಲ್ಲಿ ಅಸ್ಥಿರತೆ
ಕಾಂಗ್ರೆಸ್ ನಲ್ಲಿ 135 ಶಾಸಕರಿದ್ದರೂ ಅಲ್ಲಿ ಸ್ಥಿರತೆ ಇಲ್ಲ. ಅದಕ್ಕಾಗಿ ಪ್ರತಿಪಕ್ಷದ ಶಾಸಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಅವರ ಪಕ್ಷದ ಶಾಸಕರೇ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.
ಯಶಸ್ವಿ ನಿರ್ವಹಣೆ
ನಾವು ಆರಂಭದಿಂದಲೂ ಎಲ್ಲರೂ ಪ್ರತಿಪಕ್ಷದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೆವೆ. 66 ಶಾಸಕರೂ ಸದನದ ಒಳಗೆ ಪ್ರತಿಪಕ್ಷದ ನಾಯಕನ ಸ್ಥಾನ ನಿಭಾಯಿಸಿದ್ದೇವೆ. ಒಂದು ಪಕ್ಷವಾಗಿ ಎಲ್ಲರೂ ಸೇರಿ ಸದನದ ಹೊರಗೆ ಹೋರಾಟ ನಡೆಸುತ್ತಿದ್ದೇವೆ. ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಹಾಜರಿದ್ದರು
by gadi@dmin | Aug 29, 2023 | Top ಸುದ್ದಿಗಳು, ರಾಜ್ಯ
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಹರಿಹರಕ್ಕೆ ಪ್ರಶಸ್ತಿ
ದಾವಣಗರೆ: ಛತ್ತಿಸ್‌ಘಡ ರಾಜ್ಯದ ಬಿಲಯ್ ನಗರದಲ್ಲಿ ಆಗಸ್ಟ್ 25ರಿಂದ 28ರವರೆಗೆ ನಡೆದ 29ನೇ ರಾಷ್ಟ್ರೀಯ ಬೆಂಚ್ ಪ್ರೆಸ್ ಹಾಗು ಡೆಡ್ ಲಿಫ್ಟಿಂಗ್ ಸ್ಪರ್ಧೆಗಳು ಪುರುಷರ, ಮಹಿಳೆಯರ ಹಾಗು ಮಾಸ್ಟರ್ಸ್ ವಿಭಾಗದಲ್ಲಿ ನಡೆದಿದ್ದವು.
ಈ ಸ್ಪರ್ದೆಗಳಲ್ಲಿ ಹರಿಹರ ಬ್ರದರ್ಸ್ ಜಿಮ್‌ನಿಂದ 4 ಜನ ಕ್ರೀಡಾಪಟುಗಳು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, 59 ಕೆಜಿ ವಿಭಾಗದಲ್ಲಿ ಖಾಜ ಮೋಹಿನೋದ್ದಿನ್ ಅವರು ಭಾಗವಹಿಸಿ ಬೆಸ್ಟ್ ಬೆಂಚ್ ಪ್ರೆಸರ್ ಅಫ್ ಇಂಡಿಯಾ-2023ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂದೆ ನಡೆಯಲಿರುವ ಅಂತರರಾಷ್ಟ್ರೀಯ ಬೆಂಚ್ ಸ್ಪರ್ದೆಗಳಿಗೆ ಆಯ್ಕೆಯಾಗಿರುತ್ತಾರೆ. ಇದೇ ಸ್ಪರ್ಧೆಗಳಲ್ಲಿ 73 ಕೆಜಿ ತೂಕದ ವಿಭಾಗದಲ್ಲಿ ಶಹಾಬಾಜ್ ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ. ವಿಜೇತ ಕ್ರೀಡಾಪಟುಗಳಿಗೆ ಬ್ರದರ್ಸ್ ಜಿಮ್ನಾ ಸಂಚಾಲಕ, ಅಂತರಾಷ್ಟ್ರೀಯ ದೇಹದಾರ್ಢ್ಯ ಪಟು ಅಕ್ರಂ ಬಾಷ, ತರಬೇತುದಾರ ಮಹಮ್ಮದ್ ರಫೀಕ್ ಸೇರಿದಂತೆ ಎಲ್ಲಾ ಕ್ರೀಡಾಪಟುಗಳು ಶುಭ ಹಾರೈಸಿದ್ದಾರೆ.
by gadi@dmin | Aug 27, 2023 | Home Page - Highlights ( Red Background ), Top ಸುದ್ದಿಗಳು, Uncategorized, ನಮ್ಮ ಬೆಂಗಳೂರು
ರಾಷ್ಟ್ರೀಯ ಸಂವಹನ ಕಾಂಗ್ರೆಸ್ (ಎನ್.ಸಿ.ಸಿ.)ನ ಕಾರ್ಯಕಾರಿ ಅಧ್ಯಕ್ಷರಾಗಿ ಪ್ರೊ. ಬಿ.ಕೆ. ರವಿ ಆಯ್ಕೆ
ಕೊಪ್ಪಳ, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಿ.ಕೆ. ರವಿಯವರು ರಾಷ್ಟ್ರೀಯ ಸಂವಹನ ಕಾಂಗ್ರೆಸ್ (National Communication Congress)ನ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ದೇಶದ ಮಾಧ್ಯಮ ವಿದ್ವಾಂಸರು, ಸಂವಹನ ತಜ್ಞರು, ಮಾಧ್ಯಮ ಶಿಕ್ಷಕರು, ಸಂಶೋಧಕರು ಮತ್ತು ಭಾರತೀಯ ಮಾಧ್ಯಮದ ವೃತ್ತಿಪರರನ್ನು ಒಳಗೊಂಡಿರುವ ರಾಷ್ಟ್ರೀಯ ಸಂವಹನ ಕಾಂಗ್ರೆಸ್, ರಾಷ್ಟ್ರದಾದ್ಯಂತ ಮಾಧ್ಯಮಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು, ಸಮ್ಮೇಳನಗಳು, ಪ್ರಕಟಣೆಗಳು, ತರಬೇತಿ ಹಾಗೂ ಸಂಶೋಧನೆಗಳನ್ನು ನಡೆಸಲಿದೆ. ಭಾರತೀಯ ಮಾಧ್ಯಮ ಶಿಕ್ಷಣ ಹಾಗೂ ಭಾರತೀಯ ಮಾಧ್ಯಮ ಉದ್ಯಮದ ನಡುವೆ ಸಂಪರ್ಕ ಸಾಧಿಸುವ ಸೇತುವೆಯಾಗಿ ಎನ್.ಸಿ.ಸಿ. ಕಾರ್ಯನಿರ್ವಹಿಸಲಿದೆ.
ಕೊಲ್ಕತ್ತ, ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಎನ್.ಸಿ.ಸಿ.ಯ ಅಧ್ಯಕ್ಷರಾಗಿ ವಿಶ್ವಭಾರತಿ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಬಿಪ್ ಲ್ಯಾಬ್ ಲೋಹಾ ಚೌಧುರಿ; ಉಪಾಧ್ಯಕ್ಷರಾಗಿ ಮಕನ್ ಲಾಲ್ ಚತುರ್ವೇದಿ ರಾಷ್ಟ್ರೀಯ ಪತ್ರಿಕೋದ್ಯಮ ಮತ್ತು ಸಂವಹನ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಜಿ. ಸುರೇಶ್ ಹಾಗೂ ಮಹಾಪ್ರಧಾನ ಕಾರ್ಯದರ್ಶಿಯಾಗಿ ಭುವನೇಶ್ವರ ಉಕ್ಕಲ್ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಪ್ರೊ. ಉಪೇಂದ್ರ ಪಾಢಿ ಚುನಾಯಿತರಾಗಿದ್ದಾರೆ.
by gadi@dmin | Aug 24, 2023 | Top ಸುದ್ದಿಗಳು, ರಾಜ್ಯ
ಬೆಂಗಳೂರು ಆ 23 : ಚಂದ್ರಯಾನ 3 ಯಶಸ್ವಿ ಆದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು.
ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ 3 ಯೋಜನೆ ಭಾರತದ ಹಲವು ವರ್ಷಗಳ ಕನಸಾಗಿದೆ. ಇಸ್ರೋ ವಿಜ್ಞಾನಿಗಳು ಭಾರತೀಯರೆಲ್ಲರ ಕನಸನ್ನು ನನಸು ಮಾಡಿದ್ದಾರೆ.
ಬಾಹ್ಯಾಕಾಶ ವಿಜ್ಞಾನಕ್ಕೆ ಪ್ರಾರಂಭದ ದಿನಗಳಲ್ಲಿಯೇ ಬೆಂಬಲ ಮತ್ತು ನೆರವನ್ನು ನೀಡಿದ್ದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲ ನೀಡಿದೆ.
ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಪೂರ್ವವಾದ ಸಾಧನೆ ಮಾಡಿದೆ. ಭಾರತೀಯರೆಲ್ಲರಿಗೂ ಇದು ಹೆಮ್ಮೆಯ ಕ್ಷಣ. ಈ ಅಸಾಧಾರಣ ಸಾಧನೆ ಮಾಡಿದ ಪ್ರತಿಯೊಬ್ಬ ವಿಜ್ಞಾನಿಗಳಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಮುಂಚೂಣಿ ದೇಶಗಳ ಸಾಲಿನಲ್ಲಿ ಮತ್ತೊಮ್ಮೆ ನಿಚ್ಚಳವಾಗಿ ಪ್ರಕಾಶಿಸಿದೆ.
ಇಸ್ರೋ ಸಂಸ್ಥೆಯ ಮುಂದಿನ ದಿನಗಳ ಎಲ್ಲಾ ಪ್ರಯತ್ನಗಳಿಗೂ ಶುಭ ಹಾರೈಸುತ್ತೇನೆ.
by gadi@dmin | Aug 20, 2023 | Top ಸುದ್ದಿಗಳು, ಕನ್ನಡ ನಾಡು ನುಡಿ
ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಇಂದಿನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಸರಳತೆ ಹಾಗೂ ಮಕ್ಕಳ ಬಗೆಗಿನ ಅವರ ಅಕ್ಕರೆ, ಸಂಸ್ಕೃತಿಯ ಬಗೆಗಿನ ಅವರ ಪ್ರೀತಿಗೆ ಉದಾಹರಣೆಯಾಗುವಂತಹ ಸ್ವಾರಸ್ಯಕರ ಸಂಗತಿಯೊಂದು ನಡೆಯಿತು .
ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ ಅವರಿಗೆ ಗೋಕಾಕದ ಒಬ್ಬ 15 ವರ್ಷದ ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಕುಮಾರಿ ಪ್ರತೀಕ್ಷ ಮಲ್ಲಿಕಾರ್ಜುನ ಕೊಕ್ಕರಿ ಅವರು ಭೇಟಿ ಮಾಡಿ ತಾನು ಬರೆದ ‘ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ ತಾಯಿ ‘ಎಂಬ ಕಾದಂಬರಿಯನ್ನು ಕೊಟ್ಟು ಮುಖ್ಯಮಂತ್ರಿಗಳಿಗೆ ಕೊಡಲು ಮನವಿ ಮಾಡಿದರು.
ಆಪ್ತ ಕಾರ್ಯದರ್ಶಿಗಳು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಕೂಡಲೇ ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಾರಂಭ ನಡೆಯುತ್ತಿದ್ದ ವೇದಿಕೆಯಲ್ಲಿಯೇ ವಿದ್ಯಾರ್ಥಿನಿಯನ್ನು ಕರೆದು ,ಆಕೆ ಬರೆದ ಕೃತಿಯನ್ನು ಪಡೆದುಕೊಂಡು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಇಷ್ಟು ಚಿಕ್ಕವಯಸ್ಸಿಗೆ ಕಾದಂಬರಿ ಬರೆದ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಒಂದು ಚಿತ್ರ ತೆಗೆಯುವಂತೆಯೂ ಸೂಚಿಸಿದರು.