by Gadi Nudi | Sep 6, 2024 | Home Page - Highlights ( Red Background ), Top ಸುದ್ದಿಗಳು
ಎತ್ತಿನಹೊಳೆ ಎರಡನೆ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ: ಮುಖ್ಯಮಂತ್ರಿಗಳ ಗ್ಯಾರಂಟಿ ನುಡಿ
ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಯತ್ನಿಸುತ್ತಾರೆ ಹುಷಾರು: ಸಿಎಂ ಎಚ್ಚರಿಕೆ
ಹಾಸನ (ಹೆಬ್ಬಹಳ್ಳಿ) ಸೆ 6: ಎತ್ತಿನಹೊಳೆ ಎರಡನೆ ಹಂತ 2027ಕ್ಕೆ ಮುಗಿದು ಕುಡಿಯುವ ನೀರು 7 ಜಿಲ್ಲೆಗಳ ಲಕ್ಷಾಂತರ ಮನೆಗಳನ್ನು ತಲುಪುವುದು ಶತಸಿದ್ಧ ಎಂದು ಮುಖ್ಯಮಂತ್ರಿ ಅವರು ಭರವಸೆಯಿಂದ ನುಡಿದರು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದ ಬಳಿಕ, ಹೆಬ್ಬಹಳ್ಳಿಯ 4 ನೇ ವಿತರಣಾ ತೊಟ್ಟಿ ಬಳಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಇದು ಎರಡು ಹಂತದ ಯೋಜನೆ. ಮೊದಲ ಹಂತ ಉದ್ಘಾಟನೆಯಾಗಿದೆ. ಎರಡನೇ ಹಂತ 2027 ಕ್ಕೆ ಮುಕ್ತಾಯಗೊಂಡು ಇಡೀ ಯೋಜನೆ ಯಶಸ್ವಿ ಜಾರಿ ಆಗುತ್ತದೆ. ಲಕ್ಷಾಂತರ ಫಲಾನುಭವಿಗಳ ಯೋಜನೆಯ ಅನುಕೂಲ ತಲುಪಲಿದೆ. 7 ಜಿಲ್ಲೆಗಳ ಜನತೆಯ ಮನಗೆ ಕುಡಿಯುವ ನೀರು ತಲುಪುತ್ತದೆ. ಹತ್ತಾರು ಕೆರೆಗಳನ್ನು ತುಂಬಿಸಲಾಗುತ್ತದೆಎಂದು ಸ್ಪಷ್ಟ ಭರವಸೆ ನೀಡಿದರು.
ಹೀಗಿದ್ದರೂ ಕೆಲವರು, ನಿಮ್ಮ ಕಣ್ಣೆದುರಿಗೇ ಇರುವ ಸತ್ಯವನ್ನು ಸುಳ್ಳು ಎಂದು ಬಿಂಬಿಸಿ ನಿಮ್ಮನ್ನು ಬಕ್ರಾ ಮಾಡಲು ಕೆಲವರು ಯತ್ನಿಸುತ್ತಾರೆ. ಆದ್ದರಿಂದ ಅಪನಂಬಿಕೆ ಸೃಷ್ಟಿಸುವವರ ಮಾತುಗಳನ್ನು ಕೇಳಬೇಡಿ. ನಿಮ್ಮ ಕಣ್ಣೆದುರಿಗೆ ಇರುವುದನ್ನು ನಂಬಿ ಎಂದು ಕರೆ ನೀಡಿದರು.
ಎತ್ತಿನಹೊಳೆಗೆ ನನ್ನ ಕಾಲದಲ್ಲೇ ಭೂಮಿಪೂಜೆ ಆಗಿತ್ತು. ಮೊದಲ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿದ್ದೇನೆ. ಎರಡನೇ ಹಂತದ ಯೋಜನೆಯನ್ನೂ ನಾನೇ ಉದ್ಘಾಟಿಸಿ ಯೋಜನೆಯನ್ನು ಪೂರ್ಣ ಮಾಡಿ ಕುಡಿಯುವ ನೀರನ್ನು ಕೊಟ್ಟೇ ಕೊಡ್ತೀವಿ. ಕೆರೆಗಳನ್ನು ತುಂಬಿಸಿಯೇ ತೀರುವುದೂ ಶತಸಿದ್ಧ ಎಂದು ಗ್ಯಾರಂಟಿ ಮಾತುಗಳನ್ನಾಡಿದರು.
ಕುಡಿಯುವ ನೀರಿನ ವಿಚಾರದಲ್ಲಿ ರೈತರಿಗೆ ಅರಣ್ಯಾಧಿಕಾರಿಗಳು ಯಾವುದೇ ತೊಂದರೆ ಕೊಡಬಾರದು ಇದೇ ಸಂದರ್ಭದಲ್ಲಿ ಸ್ಪಷ್ಟ ಸೂಚನೆ ನೀಡಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.
ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿ ಐದು ತಾಲ್ಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
by Gadi Nudi | Sep 6, 2024 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಚಾಲನೆ ನೀಡಿದ CM
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ಕ್ಕೆ ಸಕಲೇಶಪುರ ತಾಲ್ಲೂಕಿನ ಬೈಕೆರೆ ದೊಡ್ಡನಗರದ ಪಂಪ್ ಹೌಸ್ ನಲ್ಲಿ ಚಾಲನೆ ನೀಡಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕುಗಳ ಬದುಕನ್ನೇ ಬದಲಾಯಿಸುವ ಈ ಮಹತ್ವಾಕಾಂಕ್ಷೆ ಯೋಜನೆಗೆ ಮುಖ್ಯಮಂತ್ರಿಗಳಿಂದ ಚಾಲನೆ ದೊರೆಯಿತು.
ಉಪಮುಖ್ಯಮಂತ್ರಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಚಿವರಾದ ರಾಜಣ್ಣ, ಎಂ.ಬಿ.ಪಾಟೀಲ್, ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿ ಐದು ತಾಲ್ಲೂಕುಗಳ ಶಾಸಕರು, ಚುನಾಯಿತ ಪ್ರತಿನಿಧಿಗಳು ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
by gadi@dmin | Aug 29, 2024 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ರಾಜ್ಯಕ್ಕೆ ಕಳೆದ ಐದು ವರ್ಷಗಳಲ್ಲಿ 80,000 ಕೋಟಿ ಅನುದಾನ ಕೊರತೆ-ಸಿ ಎಂ
ಕೊರತೆ ಸರಿದೂಗಿಸಲು 16ನೇ ಹಣಕಾಸು ಆಯೋಗದಿಂದ ಸಕಾರಾತ್ಮಕ ಸ್ಪಂದನೆ- ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 29:
ರಾಜ್ಯಕ್ಕೆ ಕಳೆದ ಐದು ವರ್ಷಗಳಿಂದ ವಿಶೇಷ ಅನುದಾನ ಹಾಗೂ ತೆರಿಗೆ ಹಂಚಿಕೆಯಲ್ಲಿ 80,000 ಕೋಟಿ ಅನುದಾನ ಕಡಿಮೆಯಾಗಿದೆ. ಇದನ್ನು ಸರಿಪಡಿಸಬೇಕೆಂದು 16ನೇ ಹಣಕಾಸು ಆಯೋಗವನ್ನು ಕೋರಲಾಗಿದ್ದು, ಆಯೋಗವು ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ತಾಜ್ ವೆಸ್ಟೆಂಡ್ ಹೋಟೆಲ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಡಿವಿಸಿಬಲ್ ಪೂಲ್ ಗೆ ಸೆಸ್ ಮತ್ತು ಸರ್ಜಾಜ್ ನ್ನು ಸೇರಿಸಬೇಕೆಂದು ಹಾಗೂ ಭಾರತ ಸರ್ಕಾರಕ್ಕೆ ಬರುವ ತೆರಿಗೆಯೇತರ ಆದಾಯವನ್ನೂ ಸಹ ಡಿವಿಸಿಬಲ್ ಪೂಲ್ ಗೆ ಸೇರಿಸಬೇಕೆಂದು ಕೋರಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ರಾಜ್ಯ ಸರ್ಕಾರ ಪ್ರತಿ ವರ್ಷ 5000 ಕೋಟಿ ಯಂತೆ ಐದು ವರ್ಷಕ್ಕೆ 25,000 ಕೋಟಿ ರೂ. ಖರ್ಚು ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರವೂ ಇದಕ್ಕೆ ಅನುರೂಪದ ಅನುದಾನ ನೀಡಬೇಕೆಂದು ಕೋರಲಾಗಿದೆ. ಬೆಂಗಳೂರು ಅಭಿವೃದ್ಧಿಗೆ ಸುಮಾರು 55,000 ಕೋಟಿ ರೂ. ವೆಚ್ಚವಾಗಲಿದ್ದು, ಈ ಮೊತ್ತದ ಅರ್ಧದಷ್ಟಾದರೂ ಅನುದಾನ ನೀಡಬೇಕೆಂದು ಕೋರಲಾಗಿದೆ ಎಂದರು.
ಪಶ್ಚಿಮ ಘಟ್ಟ ವಿಪತ್ತು ನಿರ್ವಹಣೆಗೆ ಹೆಚ್ಚಿನ ಅನುದಾನ ನೀಡಲು ಕೋರಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯಗಳಿಗೆ ದಂಡವಿಧಿಸಬಾರದು. ದೇಶದ ಜಿಡಿಪಿಗೆ ನಮ್ಮ ರಾಜ್ಯದಿಂದ ಶೇ.9 ರಷ್ಟು ಕೊಡುಗೆ ನೀಡುತ್ತಿದ್ದು, ಅದರಲ್ಲಿ ನಮಗೆ ಕೇವಲ ಶೇ. 1.5 ರಷ್ಟು ಮಾತ್ರ ರಾಜ್ಯದ ಪಾಲಿಗೆ ಬರುತ್ತಿದೆ. ಇದನ್ನು ಸರಿಪಡಿಸಲು ಕೋರಲಾಗಿದೆ. 14 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 4.713 ಪ್ರಮಾಣದ ತೆರಿಗೆ ಹಂಚಿಕೆಯಾಗುತ್ತಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಈ ಪ್ರಮಾಣ 3.647 ಕ್ಕೆ ಇಳಿದಿದ್ದು, ಈ ಪ್ರಮಾಣವನ್ನೂ ಸರಿಪಡಿಸಬೇಕೆಂದು ಕೋರಲಾಗಿದೆ. ತೆರಿಗೆ ಪ್ರಮಾಣದಲ್ಲಿ 1.66 % ಕಡಿಮೆಯಾಗಿರುವ ಬಗ್ಗೆ ಆಯೋಗಕ್ಕೆ ವಿವರಣೆ ನೀಡಲಾಗಿದೆ ಎಂದರು.
ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನರೇಂದ್ರ ಮೋದಿಯವರು ತೆರಿಗೆ ಹಂಚಿಕೆಯಲ್ಲಿ ಶೇ. 50 ರಷ್ಟು ಪಾಲಿಗೆ ಬೇಡಿಕೆಯಿಟ್ಟಿದ್ದರು. ಅನೇಕ ರಾಜ್ಯಗಳು ಈ ರೀತಿ ಬೇಡಿಕೆ ಸಲ್ಲಿಸಿರುವುದರಿಂದ , ಕರ್ನಾಟಕದ ಬೇಡಿಕೆಯನ್ನು ಈಡೇರಿಸಬಹುದೆಂಬ ವಿಶ್ವಾಸವಿದೆ ಎಂದರು
by gadi@dmin | Aug 29, 2024 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು
ಛಲವಾದಿ ನಾರಾಯಣಸ್ವಾಮಿ ಒಬ್ಬ ಶೆಡ್ ಗಿರಾಕಿ: ಎಂ.ಬಿ ಪಾಟೀಲ ಆಕ್ರೋಶ
ರಾಹುಲ್ ಖರ್ಗೆಗೆ ಸಿ.ಎ. ನಿವೇಶನ ಹಂಚಿಕೆಗೆ ಯೋಗ್ಯತೆಯೊಂದೇ ಮಾನದಂಡ
ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ರಾಹುಲ್ ಖರ್ಗೆ ಅವರ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ಏರೋಸ್ಪೇಸ್ ಪಾರ್ಕಿನಲ್ಲಿ 5 ಎಕರೆ ಸಿ.ಎ. ನಿವೇಶನ ಕೊಟ್ಟಿದ್ದಕ್ಕೆ ಎಗರಾಡುತ್ತಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸತ್ಯ ಹರಿಶ್ಚಂದ್ರರೇನಲ್ಲ. 2006ರಲ್ಲಿ ಮೈಸೂರಿನ ಹೆಬ್ಬಾಳದಲ್ಲಿ 2 ಎಕರೆ ಜಾಗ ಪಡೆದುಕೊಂಡಿರುವ ಅವರು 18 ವರ್ಷಗಳಾದರೂ ಅಲ್ಲಿ ಏನೂ ಮಾಡದೆ ಕಾಟಾಚಾರಕ್ಕೆ ಒಂದು ಶೆಡ್ ಹಾಕಿಕೊಂಡು ಕೂತಿರುವ ಆಸಾಮಿ. ಅವರೊಬ್ಬ ಶೆಡ್ ಗಿರಾಕಿಯೇ ವಿನಾ ರಾಹುಲ್ ಖರ್ಗೆ ಅವರಂತೆ ಉದ್ಯಮಶೀಲರಲ್ಲ. ಇಂಥವರು ನಮಗೆ ಪಾಠ ಮಾಡಲು ಬರುತ್ತಾರೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಎರಡು ಗಂಟೆ ಕಾಲ ದಾಖಲೆ ಸಮೇತ ಮಾತನಾಡಿದ ಅವರು, `ರಾಹುಲ್ ಖರ್ಗೆ ಎರಡು ಬಾರಿ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿದ್ದಾರೆ; ಎಂಜಿನಿಯರಿಂಗ್ ಪದವೀಧರರು. ಡಿಆರ್ ಡಿಓ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇಂಥ ಅರ್ಹರಿಗೆ ಸಿ.ಎ. ನಿವೇಶನ ಕೊಡದೆ ಬಿಜೆಪಿಯವರಂತೆ ನಿಯಮಗಳನ್ನು ಗಾಳಿಗೆ ತೂರಿ ಯಾರಿಗೆ ಬೇಕೋ ಅವರಿಗೆ ಕೊಡಬೇಕಾಗಿತ್ತೇನು? ನಾರಾಯಣಸ್ವಾಮಿ ಈಗ ತಮಗೆ ಮಂಜೂರಾಗಿರುವ ಕೈಗಾರಿಕಾ ನಿವೇಶನದ ಸಮರ್ಪಕ ಬಳಕೆಗೆ ಮತ್ತೊಮ್ಮೆ 6 ತಿಂಗಳ ಕಾಲಾವಕಾಶ ಪಡೆದುಕೊಂಡಿದ್ದಾರೆ. ಇಲ್ಲೂ ಅವರು ವಿಫಲರಾದರೆ, ನಿಯಮಗಳ ಪ್ರಕಾರ ಆ ಜಮೀನನ್ನು ಸರಕಾರದ ವಶಕ್ಕೆ ಪಡೆಯುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ದಲಿತರಾದ ನಾರಾಯಣಸ್ವಾಮಿ ಸ್ವತಃ ತಮ್ಮ ಸಮುದಾಯದ ಹಿರಿಯರೂ ಮುತ್ಸದ್ದಿಗಳೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದ ವಿರುದ್ಧ ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇದು ಬಿಜೆಪಿಯ ಕುತಂತ್ರ. ದಲಿತರು ಪರಸ್ಪರ ಹೊಡೆದಾಡುತ್ತಿದ್ದರೆ ಅವರಿಗೆ ಲಾಭವಿದೆ. ತಮಗೆ ನೀಡಿರುವ ಕೈಗಾರಿಕಾ ನಿವೇಶನದಲ್ಲಿ ನಾರಾಯಣಸ್ವಾಮಿ ಇಷ್ಟು ಹೊತ್ತಿಗೆ ಶೇ.51ರಷ್ಟು ಭೂಮಿಯ ಬಳಕೆ ಮಾಡಿಕೊಳ್ಳಬೇಕಾಗಿತ್ತು. ಆದರೆ ಅವರು ಕೇವಲ ಶೇಕಡ 5ರಷ್ಟು ಭೂಮಿಯಲ್ಲಿ ಕಾಟಾಚಾರಕ್ಕೆ ಶೆಡ್ ಹಾಕಿ, `ಬಾಡಿಗೆಗೆ ಇದೆ’ ಎಂದು ಬೋರ್ಡ್ ನೇತು ಹಾಕಿದ್ದಾರೆ. ಇಂಥ ಲಜ್ಜೆಗೆಟ್ಟ ವ್ಯಕ್ತಿ ದೇಶದ ನೇತಾರರಲ್ಲಿ ಒಬ್ಬರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಮಾತನಾಡುವ ದುಸ್ಸಾಹಸ ಮಾಡುತ್ತಿದ್ದಾರೆ ಎಂದು ಅವರು ಹರಿಹಾಯ್ದರು.
ನಾರಾಯಣಸ್ವಾಮಿ 2006ರಲ್ಲಿ `ಬೃಂದಾವನ್ ಸಾಫ್ಟ್ವೇರ್’ ಎನ್ನುವ ಕಂಪನಿ ಶುರು ಮಾಡುವುದಾಗಿ ಭೂಮಿ ಪಡೆದುಕೊಂಡರು. ಆ ಮೇಲೆ ಅಲ್ಲಿ ಅದೇ ಹೆಸರಿನ ಗಾರ್ಮೆಂಟ್ಸ್ ಕಾರ್ಖಾನೆ ಆರಂಭಿಸುತ್ತೇನೆ ಎಂದರು. ಬಳಿಕ ಗೋದಾಮು ಮಾಡುತ್ತೇನೆಂದರು. ಅವರು ಕಾಲಕಾಲಕ್ಕೆ ಬೇರೆಬೇರೆ ಉದ್ದೇಶಕ್ಕೆ ಬದಲಿಸಿಕೊಂಡರೇ ವಿನಾ ಏನನ್ನೂ ದಡ ಮುಟ್ಟಿಸಲಿಲ್ಲ. ಇದಾದ ಮೇಲೆ ಸರಕಾರವು ನಿಯಮದಂತೆ 2016ರ ನ.11ರಂದು ಜಮೀನನ್ನು ವಾಪಸ್ ಪಡೆಯಲು ಆದೇಶಿಸಿತು. ಇದರ ವಿರುದ್ಧ ಹೈಕೋರ್ಟಿಗೆ ಹೋಗಿ ತಡೆಯಾಜ್ಞೆ ತಂದ ಈ ವ್ಯಕ್ತಿ ಈಗ ಪುಕ್ಕಟೆ ಪ್ರಚಾರಕ್ಕೆ ಇಳಿದಿದ್ದಾರೆ ಎಂದು ಅವರು ವಿವರಿಸಿದರು.
ನಾರಾಯಣಸ್ವಾಮಿ ರಾಜಕೀಯದಲ್ಲಿ ಮೇಲಕ್ಕೆ ಬರಲು ಖರ್ಗೆಯವರೇ ಕಾರಣರು. ಅವರು ರೈಲ್ವೆ ಸಚಿವರಾಗಿದ್ದಾಗ ಈ ವ್ಯಕ್ತಿಯನ್ನು ರೈಲ್ವೆ ಬಳಕೆದಾರರ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿ, ರೈಲ್ವೆ ಭವನದಲ್ಲಿ ಕಚೇರಿ ಕೂಡ ಕೊಟ್ಟಿದ್ದರು. ಆದರೂ ನಾರಾಯಣಸ್ವಾಮಿ ಉಂಡ ಮನೆಗೆ ಎರಡು ಬಗೆಯುತ್ತಿದ್ದಾರೆ. ಹೀಗೆ ಮಾತನಾಡಿದರೆ ಬಿಜೆಪಿಯಲ್ಲಿ ಇನ್ನೂ ಮೇಲೇರಬಹುದು ಎನ್ನುವ ಭ್ರಮೆಯಲ್ಲಿ ಅವರಿರಬಹುದು ಎಂದು ಪಾಟೀಲ ಕುಟುಕಿದ್ದಾರೆ.
ಇವರು ಹೇಳುವ ಹಾಗೆ ಈ ನಿವೇಶಕ್ಕೆ 72 ಅರ್ಜಿ ಬಂದಿರಲಿಲ್ಲ. ಬಂದಿದ್ದು ಕೇವಲ 6 ಅರ್ಜಿ. ಅದರಲ್ಲಿ ಮೂರು ವಸತಿ ಉದ್ದೇಶದ್ದು. ಅಲ್ಲಿ ಈಗಾಗಲೇ ಅಂತಹ ಉದ್ದೇಶಕ್ಕೆ ಕೊಟ್ಟಿದ್ದರಿಂದ ಅವುಗಳನ್ನು ತಿರಸ್ಕರಿಸಲಾಗಿದೆ. ಉಳಿದಂತೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ಅರ್ಜಿ ಬಂದಿದ್ದರೂ ಸಮಪರ್ಕ ದಾಖಲೆ ಸಲ್ಲಿಸಿರಲಿಲ್ಲ. ಇನ್ನು ಉಳಿದಿದ್ದು ರಾಹುಲ್ ಮಾತ್ರ. ಇವರು ಎಲ್ಲ ರೀತಿಯಲ್ಲೂ ಸಮರ್ಥರಿದ್ದು, ಸಾಮಾನ್ಯ ವರ್ಗದ ಕೋಟಾದಲ್ಲೂ ಅವರು ಅರ್ಹರಾಗಿದ್ದರು ಎಂದು ತಿರುಗೇಟು ನೀಡಿದರು.
ಆರೆಸ್ಸೆಸ್ ಅಂಗವಾಗಿರುವ ರಾಷ್ಟ್ರೋತ್ಥಾನ ಪರಿಷತ್ತಿಗೆ ಹೈಟೆಕ್ ಡಿಫೆನ್ಸ್ ಪಾರ್ಕಿನಲ್ಲಿ ವಿವಿಧೋದ್ದೇಶ ವಾಣಿಜ್ಯ ಸಂಕೀರ್ಣಕ್ಕೆಂದು 2013ರಲ್ಲಿ 5 ಎಕರೆ ಕೊಡಲಾಗಿದೆ. ಇದುವರೆಗೂ ಅವರು ಅಲ್ಲಿ ಏನೂ ಮಾಡಿಲ್ಲ. ಕೋವಿಡ್ ನೆವ ಹೇಳಿಕೊಂಡು ಮತ್ತೆ ಮತ್ತೆ ಕಾಲಾವಕಾಶ ಕೇಳಿಕೊಂಡು ಬಂದಿದ್ದಾರೆ. ಇತ್ತೀಚೆಗೆ 2023ರ ಡಿ.26ರಂದು ಪುನಃ ಎರಡು ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ. ಈ ಜಮೀನನ್ನು ವಾಪಸ್ ಪಡೆಯಬೇಕೋ ಬೇಡವೋ ಎನ್ನುವುದನ್ನು ಲೆಹರ್ ಸಿಂಗ್ ಮತ್ತು ನಾರಾಯಣಸ್ವಾಮಿ ಹೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಮುರುಗೇಶ ನಿರಾಣಿ ಹಿಂದೆ ಕೈಗಾರಿಕಾ ಸಚಿವರಾಗಿದ್ದಾಗ ಬಾಗಲಕೋಟೆಯ ನವನಗರ ಕೈಗಾರಿಕಾ ಪ್ರದೇಶದಲ್ಲಿ 2012ರ ಮಾರ್ಚ್ 12ರಂದು ತಮಗೆ ತಾವೇ 25 ಎಕರೆ ಕೊಟ್ಟುಕೊಂಡು, ಅಲ್ಲಿ ತೇಜಸ್ ಇಂಟರ್ನ್ಯಾಷನಲ್ ಸ್ಕೂಲ್ ಕಟ್ಟಿದ್ದಾರೆ. ಅದು ಆಗ್ರೋ ಟೆಕ್ ಪಾರ್ಕಗೆ ಮೀಸಲಾಗಿದ್ದ ಜಾಗ. ಆಮೇಲೆ ಪುನಃ ಕೈಗಾರಿಕಾ ಸಚಿವರಾದಾಗ ಕೂಡ 2022ರ ಡಿ.19ರಂದು ಅಲ್ಲೇ ಮತ್ತೆ 6.17 ಎಕರೆ ತೆಗೆದುಕೊಂಡು, ತಮಗೆ ತಾವೇ ಅಭಿನಂದನಾ ಪತ್ರ ಬರೆದುಕೊಂಡಿದ್ದಾರೆ. ಇಂಟರ್ನೆಟ್ ಜಾಲಾಡಿದರೆ ಇವರೆಲ್ಲರ ಜಾತಕ ಬಯಲಾಗುತ್ತದೆ ಎಂದು ಅವರು ಅಂಕಿಅಂಶಗಳ ಸಹಿತ ವಿವರಿಸಿದರು.
ಚಾಣಕ್ಯ ವಿ.ವಿ.ಯದೂ ಇದೇ ಕತೆಯಾಗಿದೆ. 2025ರ ಜೂನ್ ಒಳಗೆ ಅವರು 116 ಎಕರೆಯಲ್ಲಿ ಕನಿಷ್ಠ ಶೇ.51ರಷ್ಟು ಜಾಗವನ್ನು ಬಳಕೆ ಮಾಡದಿದ್ದರೆ ಉಳಿದ ಜಾಗವನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಪಾಟೀಲ ಹೇಳಿದ್ದಾರೆ.
ಚಾಣಕ್ಯ ವಿವಿ ಗೂ ಕೇವಲ 50 ಕೋಟಿಗೆ ಈ ಜಮೀನು ನೀಡಿದ್ದು, ಇದರಿಂದ ಕೆಐಎಡಿಬಿಗೆ 137 ಕೋಟಿ ರೂಪಾಯಿ ನಷ್ಟ ಆಗಿದೆ. ಇದರ ವಿರುದ್ಧ ಏಕೆ ನಾರಾಯಣಸ್ವಾಮಿ ರಾಜ್ಯಪಾಲರಿಗೆ ದೂರು ನೀಡಿಲ್ಲ ಎಂದು ಸಚಿವರು ಪ್ರಶ್ನಿಸಿದರು.
by gadi@dmin | Jul 31, 2024 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು
ಬೆಂಗಳೂರು ಜುಲೈ 31; ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಬಿಜೆಪಿ ಜೆಡಿಎಸ್ ವಿರುದ್ದ ಕುರುಬ ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಸಮುದಾಯದವರು ರಾಜ್ಯದೆಲ್ಲಡೆ ಸಿಡಿದೇಳಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ಆಗ್ರಹಿಸಿದೆ.
ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಈರಣ್ಣ, ಮಾಜಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಕಾರ್ಯಾಧ್ಯಕ್ಷ ಬಸವರಾಜ ಲ.ಬಸಲಿಗುಂದಿ ಸಿದ್ಧಾರಮಯ್ಯ ವಿರುದ್ಧ ಪಾದಯಾತ್ರೆಯ ಬೆದರಕೆ ಹಾಕಿದರೆ ಪರ್ಯಾಯವಾಗಿ ಕುರುಬರ ಸಂಘ ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳು ಇಡೀ ರಾಜ್ಯಾದ್ಯಂತ ಪ್ರತಿಭಟನಾ ಕಾರ್ಯಕ್ರಮ ಮತ್ತು ಹಿಂದುಳಿದ ವರ್ಗಗಳ ಎಚ್ಚರಿಕೆ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಬಂದಾಕ್ಷಣ ತನಿಖಾ ಆಯೋಗ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು, ಈ ಹಿಂದೆಯೂ ಹಿಂದುಳಿದ ವರ್ಗಗಳ ನಾಯಕರಾದ ದೇವರಾಜು ಅರಸು, ಎಸ್.ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರಂಸಿಂಗ್ ವಿರುದ್ಧ ಇಂತಹದೇ ಷಡ್ಯಂತ್ರ ರೂಪಿಸಲಾಗಿತ್ತು, ಈಗ ಸಮಸ್ತ ಹಿಂದುಳಿದ ಸಮುದಾಯಗಳು ಜಾಗೃತವಾಗಿವೆ, ಸಮಾಜವಾದದ ಹಿನ್ನಲೆಯಿಂದ ಬಂದಿರುವ ಸಿದ್ದರಾಮಯ್ಯನವರು ಬಡವರು,ಮಹಿಳೆಯರು, ರೈತರು, ಕಾರ್ಮಿಕರ ಪರ ಇರುವಂತೆ ಈ ವರ್ಗಗಳು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರದ ಪರ ಬಂಡೆಯಂತೆ ನಿಂತಿವೆ ಎಂದು ತಿಳಿಸಿದರು.
by gadi@dmin | Nov 29, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಕಾಗಿನೆಲೆ ಪೀಠ ಒಂದು ಜಾತಿಯ ನೆಲೆ ಅಲ್ಲ. ಎಲ್ಲಾ ಶೋಷಿತ ಜಾತಿ-ಸಮುದಾಯಗಳ ನೆಲೆ: ಸಿಎಂ ಸಿದ್ದರಾಮಯ್ಯ
ಕನಕದಾಸರು ಜಾತಿ ಮತ್ತು ಅನಕ್ಷರತೆಯ ಅಸಮಾನತೆ ಹೋಗಲಾಡಿಸಲು ಹೋರಾಡಿದರು
ಯಾವ ಧರ್ಮವೂ ಜಾತಿ ಆಧಾರದಲ್ಲಿ ಮನುಷ್ಯನ ಶೋಷಣೆ ಮಾಡಿ ಎನ್ನುವುದಿಲ್ಲ
ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದೇ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾವೇರಿ ನ 29: ಹಿಂದಿನ ಜನ್ಮ-ಮುಂದಿನ ಜನ್ಮ ಎನ್ನುವುದೇ ಇಲ್ಲ. ಈ ಜನ್ಮದಲ್ಲಿ ನಾವು ಮಾಡುವ ಕೆಲಸಗಳೇ ಮುಖ್ಯ. ಈ ಕಾರಣಕ್ಕೆ ಬಸವಾದಿ ಶರಣರು ಮತ್ತು ಕನಕದಾಸರು ಕರ್ಮ ಸಿದ್ಧಾಂತ ಮತ್ತು ಜನ್ಮದ ಮೌಡ್ಯವನ್ನು ಸಾರಾಸಗಟಾಗಿ ತಿರಸ್ಕರಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.
ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದಲ್ಲಿ ಆಯೋಜಿಸಿದ್ದ 536ನೇ ಶ್ರೀ ಕನಕ ಜಯಂತ್ಯೋತ್ಸವ ಮತ್ತು ಭಾವೈಕ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಕಾಗಿನೆಲೆ ಪೀಠ ಯಾವತ್ತೂ ಒಂದು ಜಾತಿಯ ನೆಲೆ ಆಗಬಾರದು. ಇದು ಎಲ್ಲಾ ಶೋಷಿತ ಸಮುದಾಯಗಳ ನೆಲೆ ಆಗಬೇಕು. ಕನಕ ಜಯಂತಿ ಪ್ರಯುಕ್ತ ಭಾವೈಕ್ಯತಾ ಸಮಾವೇಷ ಏರ್ಪಿಡಿಸಿರುವ ಶ್ರೀ ಮಠದ ಗುರುಗಳಿಗೆ ಹೃದಯಪೂರ್ವಕವಾಗಿ ವಂದಿಸುತ್ತೇನೆ. ಇದು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮ ಎಂದು ಅಪಾರವಾಗಿ ಮೆಚ್ಚಿಕೊಂಡರು.
ನಾವ್ಯಾರೂ ಅರ್ಜಿ ಹಾಕೊಂಡು ಜಾತಿ-ಧರ್ಮ ಆರಿಸಿಕೊಂಡು ಹುಟ್ಟಿಲ್ಲ. ಮೊದಲು ಮನುಷ್ಯರು ಮನುಷ್ಯರನ್ನು ಪ್ರೀತಿಸಬೇಕು. ಜಾತಿ-ಧರ್ಮ ರಹಿತ ಮನುಷ್ಯ ಪ್ರೇಮವನ್ನೇ ಕನಕದಾಸರು ಜಗತ್ತಿಗೆ ನೀಡಿದರು ಎಂದು ವಿವರಿಸಿದರು.
ಕನಕಗುರು ಪೀಠ ಸ್ಥಾಪಿಸುವಾಗ ಇದನ್ನು ಕುರುಬರ ಮಠ ಆಗಬೇಕು ಎಂದು ಇಚ್ಚಿಸಲೇ ಇಲ್ಲ. ಎಲ್ಲಾ ಶೋಷಿತ ಧರ್ಮಗಳ ಮಠ ಆಗಬೇಕು ಎನ್ನುವುದು ನಮ್ಮಗಳ ಉದ್ದೇಶ ಆಗಿತ್ತು ಎಂದು ನೆನಪು ಮಾಡಿಕೊಂಡರು.
ಧರ್ಮ ಇರುವುದು ನಮಗಾಗಿ. ನಾವು ಧರ್ಮಕ್ಕಾಗಿ ಅಲ್ಲ. ಅದಕ್ಕೇ ಕನಕದಾಸರು ಕುಲ ಕುಲವೆಂದು ಬಡಿದಾಡದಿರಿ ಎಂದು ಹೇಳಿದ್ದು. ಬಸವಣ್ಣನವರು, “ಇವ ನಮ್ಮವ ಇವ ನಮ್ಮವ” ಎಂದಿದ್ದು. ಕುವೆಂಪು ಅವರು, “ಹುಟ್ಟುವಾಗ ಎಲ್ಲರೂ ವಿಶ್ವ ಮಾನವರು” ಎಂದರು, ಅಂಬೇಡ್ಕರ್ ಅವರು ಸಮ ಸಮಾಜದ ಬಗ್ಗೆ ಹೇಳಿದರು. ಬಸವಾದಿ ಶರಣರು, ಕನಕದಾಸರು, ಅಂಬೇಡ್ಕರ್, ಕುವೆಂಪು, ಸೂಫಿಗಳ ಆಶಯಗಳೆಲ್ಲಾ ಒಂದೇ ಆಗಿತ್ತು. ಆದ್ದರಿಂದ ನಾವುಗಳು ಇವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಲ್ಲೇಶಪ್ಪ ಹೊರಪೇಟೆ ಅವರ ಕನಕನ ಹೆಜ್ಜೆ ಮಕ್ಕಳ ಕಾದಂಬರಿಯನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದರು.
ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರೇವಣಸಿದ್ದೇಶ್ವರ, ಶ್ರೀ ಬೀರಲಿಂಗೇಶ್ವರ, ಶ್ರೀ ಮೈಲಾರಲಿಂಗೇಶ್ವರ, ಶ್ರೀ ಮಹಾಸಿದ್ದೇಶ್ವರಿ ದೇವರುಗಳ ಕುಂಭಾಭಿಷೇಕ ನೆರವೇರಿಸಿದರು.
ಹುಬ್ಬಳ್ಳಿ, ಮೂರುಸಾವಿರ ಮಠದ ಶ್ರೀಮನ್ ಮಹಾರಾಜ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಹಜರತ್ ಬೀಜಾಪುರದ ಹಾಶಿಮ್ ಪೀರ್ ದರ್ಗಾದ ಸೈಯ್ಯದ್ ಮೊಹಮ್ಮದ್ ತನ್ವೀರ್ ಹಾಶ್ಮಿ, ಕರ್ನಾಟಕ ಧರ್ಮಪ್ರಾಂತ್ಯದ ಧರ್ಮಗುರು ಡಾ.ಫಾ.ಅಲ್ಫೋನ್ಸ್ ಫರ್ನಾಂಡೀಸ್ ಯೇಸ ಅವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್, ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ, ವಿಧಾನಸಭೆಯ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ, ಮಾಜಿ ಸಚಿವರಾದ ಹೆಚ್.ಎಂ.ರೇವಣ್ಣ, ಹೊಸದುರ್ಗ ಶಾಸಕರಾದ ಬಿ.ಜಿ.ಗೋವಿಂದಪ್ಪ, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ರಾಣೆಬೆನ್ನೂರು ಶಾಸಕರಾದ ಪ್ರಕಾಶ್ ಕೋಳಿವಾಡ, ಹಾನಗಲ್ ಶಾಸಕರಾದ ಶ್ರೀನಿವಾಸ್ ಮಾನೆ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.