by gadi@dmin | Nov 15, 2023 | Scrolling News ( Right to Left ), Top ಸುದ್ದಿಗಳು, ರಾಜ್ಯ
ರಾಜ್ಯ ಮಟ್ಟದ ಅಭಿವೃದ್ಧಿ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದ ರಾಜ್ಯಪಾಲರು
ಮೈಸೂರು 15. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನೆ ಸಂಸ್ಥೆ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಬಿರ್ಸಾಮುಂಡ ಜಯಂತಿ ಹಾಗೂ ಜನಜಾತಿ ಗೌರವ ದಿವಸ -2023 ಕಾರ್ಯಕ್ರಮದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭಾಗಹವಹಿಸಿ, ಅಭಿವೃದ್ಧಿ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ನವೆಂಬರ್ 15 ರಂದು ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ದೇಶದಾದ್ಯಂತ ಬುಡಕಟ್ಟು ಹೆಮ್ಮೆಯ ದಿನವನ್ನಾಗಿ ಆಚರಿಸಲಾಗುತ್ತಿದೆ. ರಾಷ್ಟ್ರ ಮತ್ತು ರಾಜ್ಯದ ಇತಿಹಾಸ ಮತ್ತು ಸಂಸ್ಕೃತಿ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಸಂರಕ್ಷಿಸುವಲ್ಲಿ ಬುಡಕಟ್ಟು ಸಮುದಾಯದ ಕೊಡುಗೆಯಿಂದ ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಎಲ್ಲಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಲು ಮತ್ತು ಅವರ ಪ್ರಯತ್ನಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ ಎಂದರು.
ಬಿರ್ಸಾ ಮುಂಡಾ ಅವರ ಜನ್ಮದಿನದಂದು, ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಬಿರ್ಸಾ ಮುಂಡಾ ಅವರ ಪಾವನಸ್ಥಳದಿಂದ ಅಭಿವೃದ್ಧಿಪಡಿಸಿದ ಭಾರತ ಸಂಕಲ್ಪ ಯಾತ್ರೆಯನ್ನು ಧ್ವಜಾರೋಹಣ ಮಾಡುವ ಮೂಲಕ ಭಾರತ್ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸುತ್ತಿದ್ದಾರೆ. ಈ ಸಂಕಲ್ಪ ಯಾತ್ರೆಯು ಜನವರಿ 25 ರವರೆಗೆ ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಹಾದುಹೋಗುತ್ತದೆ. ಈ ಸಮಯದಲ್ಲಿ, ಪ್ರಧಾನಿ ಮೋದಿ ಅವರು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ ಒಟ್ಟಾರೆ ಅಭಿವೃದ್ಧಿಯ ಉದ್ದೇಶಕ್ಕಾಗಿ 24 ಸಾವಿರ ಕೋಟಿ ರೂಪಾಯಿಗಳ ಯೋಜನೆಯನ್ನು ಪ್ರಾರಂಭಿಸುತ್ತಾರೆ. ಅಲ್ಲದೆ, 18 ಸಾವಿರ ಕೋಟಿ ರೂಪಾಯಿ ಮೌಲ್ಯದ ಪಿಎಂ-ಕಿಸಾನ್ ಯೋಜನೆಯ 15 ನೇ ಕಂತು ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಸಂಕಲ್ಪ ಯಾತ್ರೆಯು 2047 ರ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತಕ್ಕೆ ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಈ ಯಾತ್ರೆಯ ಮೂಲಕ, ರಾಜ್ಯ ಸರ್ಕಾರದ ಯೋಜನೆಗಳು ಮತ್ತು ವಿವಿಧ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ದುರ್ಬಲ ಜನಸಂಖ್ಯೆಗೆ ತಲುಪಿಸುವ ಪ್ರಯತ್ನವಿದೆ ಎಂದು ಹೇಳಿದರು.
ಆಯುಷ್ಮಾನ್ ಭಾರತ್, ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪಿಎಂ ಆವಾಸ್ ಯೋಜನೆ, ಪಿಎಂ ಉಜ್ವಲ ಯೋಜನೆ, ಪಿಎಂ ಕಿಸಾನ್ ಸಮ್ಮಾನ್, ಜಲ ಜೀವನ್ ಮಿಷನ್,ಜನ್ ಧನ್ ಯೋಜನೆ, ಅಟಲ್ ಪಿಂಚಣಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಮತ್ತು ಪಿಎಂ ಪೋಶನ್ ಅಭಿಯಾನ ಮುಂತಾದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಮತ್ತು ಯೋಜನೆಗೆ ಅರ್ಹರಾಗಿದ್ದರೂ ಯೋಜನೆಯ ಪ್ರಯೋಜನಗಳನ್ನು ಪಡೆಯದ ಅಂತಹ ಜನರನ್ನು ಯೋಜನೆಗಳ ಪ್ರಯೋಜನಗಳನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಪ್ರಯತ್ನವಿದೆ. ಇದರೊಂದಿಗೆ, ರಾಜ್ಯದ ನಗರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನಗರಾಭಿವೃದ್ಧಿ ಇಲಾಖೆಯ ಯೋಜನೆಗಳ ಪ್ರಯೋಜನಗಳನ್ನು ಸಾರ್ವಜನಿಕ ಜಾಗೃತಿಯ ಮೂಲಕ ವಂಚಿತ, ದುರ್ಬಲ ಮತ್ತು ಅರ್ಹ ಜನರಿಗೆ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ವಿಕಾಸ್ ಭಾರತ್ ಸಂಕಲ್ಪ ಯಾತ್ರೆಯ ಉದ್ದೇಶವು ಯೋಜನೆಗಳ ಪ್ರಯೋಜನಗಳನ್ನು ಕೊನೆಯ ವ್ಯಕ್ತಿಗೆ ತಲುಪಿಸುವಲ್ಲಿ ಹಾಗೂ ಬುಡಕಟ್ಟು ಸಮುದಾಯದ ಹಿತದೃಷ್ಟಿಯಿಂದ ಆಯೋಜಿಸಲಾದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಯಶಸ್ವಿಗೊಳಿಸಲು ಕೈಜೋಡಿಸಿ ಎಂದು ಕರೆ ನೀಡಿದರು.
ಗೌರವಾನ್ವಿತ ಬಿರ್ಸಾ ಮುಂಡಾ ಅವರ ಜನ್ಮ ದಿನದ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ ಎಂದ ಅವರು ಸರ್ವರಿಗೂ ಜನ ಜಾತಿ ಗೌರವ ದಿನದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದಲ್ಲಿ ಮೈಸೂರಿನ ಮೇಯರ್ ಶಿವಕುಮಾರ್, ಕೇಂದ್ರ ಪ್ರೆಸ್ ಇನ್ಫಾರ್ಮಶನ್ ಬ್ಯುರೋ ಅಪರ ಪ್ರದಾನ ನಿರ್ದೇಶಕರಾದ ರವೀಂದ್ರ, ಕೇಂದ್ರ ಜಲಶಕ್ತಿ ನಿರ್ದೇಶಕರಾದ ವಿನಾಯಕ್ ಭಟ್, ದೂರದರ್ಶನದ ಡಿಡಿಜಿ ಅನಿಲ್ ಕುಮಾರ್, ಜಿಲ್ಲಾಧಿಕಾರಿ ರಾಜೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
by gadi@dmin | Nov 12, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಕೆ ವಿ ಪ್ರಭಾಕರ್ ರವರಿಗೆ ಬೆಳಗಾವಿಯಲ್ಲಿ ಅಭಿಮಾನದ ಅಭಿನಂದನೆ
ಪತ್ರಕರ್ತರು ತಮ್ಮ ಮತ್ತು ಕುಟುಂಬದ ಕಾಳಜಿ ವಹಿಸಿ: ಕೆ.ವಿ.ಪ್ರಭಾಕರ್
ಬೆಳಗಾವಿ ನ 11: ಪತ್ರಕರ್ತರು ಒತ್ತಡದ ಬದುಕಿನಿಂದ ಹೊರ ಬಂದು ತಮ್ಮ ಮತ್ತು ಕುಟುಂಬದ ಆರೋಗ್ಯದ ಕಡೆ ಕಾಳಜಿ ವಹಿಸಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು ಕರೆ ನೀಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಳಗಾವಿ ಘಟಕ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರ ಸಮುದಾಯದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ. ಮಾಸಾಶನ ಹೆಚ್ಚಳ ಸೇರಿ ಹಲವು ಬೇಡಿಕೆಗಳನ್ನು ಈ ಬಾರಿಯ ಬಜೆಟ್ ನಲ್ಲಿ ಈಡೇರಿಸಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ನೀಡಬೇಕು ಎನ್ನುವ ಬೇಡಿಕೆ ಕುರಿತಾಗಿ ಇಲಾಖೆಯಿಂದ ಒಂದು ಪ್ರಸ್ತಾವನೆಯನ್ನು ತರಿಸಿಕೊಳ್ಳಲಾಗಿದೆ. ಮುಂದಿನ ಬಜೆಟ್ ನಲ್ಲಿ ಈ ಬೇಡಿಕೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ, ಗದಗ ಡಂಬಳ ತೋಂಟದಾರ್ಯ ಮಠದ ಶ್ರೀ ಡಾ. ಸಿದ್ದರಾಮ ಸ್ವಾಮೀಜಿ, ಎಸ್ಪಿ ಡಾ. ಭೀಮಾಶಂಕರ ಗುಳೇದ, ಶಾಸಕ ರಾಜು ಸೇಠ್, ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ, ವಾರ್ತಾ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ, ಮಹಾನಗರ ಪಾಲಿಕೆ ಕಮಿಷ್ನರ್ ಅಶೋಕ ದುಡಗುಂಟಿ, ಸರ್ವೋತ್ತಮ ಜಾರಕಿಹೊಳಿ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಹಿರಿಯ ಪತ್ರಕರ್ತರನ್ನೂ ಸನ್ಮಾನಿಸಲಾಯಿತು. 150 ಮಂದಿ ಹಿರಿಯ ಪತ್ರಿಕಾ ವಿತರಕರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೈಕಲ್ ಗಳನ್ನು ವಿತರಿಸಿದರು.
ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರ ತಂಡದ ಗಿರೀಶ್ ಕೋಟೆ, ಕೆ ಪಿ ಪುಟ್ಟಸ್ವಾಮಯ್ಯ, ಎಮ್ ಕೆ ಹೆಗಡೆ , ದೀಪಕ್ ಕರಾಡೆ, ಕೆ ಎಸ್ ನಾಗರಾಜ್ ರವರಿಗೂ ಇದೇ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
by gadi@dmin | Nov 10, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ರಾಜ್ಯ
ಬೆಳಗಾವಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ ವಿ ಪ್ರಭಾಕರ್ ಅವರಿಗೆ ಅಭಿಮಾನದ ಅಭಿನಂದನೆ ಸಮಾರಂಭ.
ಬೆಳಗಾವಿ, 10, ಮಾನ್ಯ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಶ್ರೀ ಕೆ ವಿ ಪ್ರಭಾಕರ್ ರವರನ್ನು ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಗಿರೀಶ್ ಕೋಟೆ, ಶ್ರೀ ಕೆ ಪಿ ಪುಟ್ಟಸ್ವಾಮಯ್ಯ, ಶ್ರೀ ಕೆ ಎಸ್ ನಾಗರಾಜ್, ಶ್ರೀ ದೀಪಕ ಕರಾಡೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವವರ ಮಾಧ್ಯಮ ಸಲಹೆಗಾರರಾದ ಶ್ರೀ ಎಂ ಕೆ ಹೆಗಡೆಯವರನ್ನೂ ಕೂಡ, ಮಾಧ್ಯಮ ಕ್ಷೇತ್ರದಲ್ಲಿ ಗಣಣೀಯ ಸೇವೆ ಸಲ್ಲಿಸಿ ಈಗ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ಬೆಳಗಾವಿ ಪತ್ರಕರ್ತರಿಂದ ಅಭಿಮಾನದ ಅಭಿನಂದನೆ ಜರುಗಲಿದೆ.
ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲೆಯ ಘಟಕ ಮತ್ತು ವಿವಿಧ ಪತ್ರಿಕಾ ಸಂಘಗಳಿಂದ ಬೆಳಗಾವಿ ನಗರದಲ್ಲಿ ಶನಿವಾರ, ದಿನಾಂಕ 11-11-2023ರಂದು ನೆಹರು ನಗರದಲ್ಲಿರುವ ಕನ್ನಡ ಭವನದಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಸಮಾರಂಭವು ಜಗದ್ಗುರುಗಳಾದ ಡಾ|| ತೋಂಟದ ಸಿದ್ದರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೋಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಪತ್ರಿಕಾ ವಿತರಕರಿಗೆ ಸೈಕಲ್ ವಿತರಣೆಯನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಶ್ರೀ ಲಕ್ಷ್ಮೀ ಹೆಬ್ಬಾಳಕರ ವಿತರಣೆ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಡಾ.ಭೀಮಶಿ ಜಾರಕಿಹೋಳಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಆಸೀಫ್ (ರಾಜು) ಶೇಠ, ಶ್ರೀ ಅಭಯ ಪಾಟೀಲ, ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡೂರು, ಅತಿಥಿಗಳಾಗಿ ಶ್ರೀ ಬಿ ಸಿ ಲೋಕೇಶ್, ಶ್ರೀ ಎಚ್.ಬಿ.ಮದನಗೌಡ, ಶ್ರೀ ಪುಂಡಲೀಕ ಬಾಳೋಜಿ, ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ್ ಪಾಟೀಲ, ನಗರ ಪೋಲಿಸ್ ಆಯುಕ್ತರಾದ ಶ್ರೀ ಎಸ್ ಎನ್ ಸಿದ್ದರಾಮಪ್ಪ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಭೀಮಾಶಂಕರ್ ಗುಳೇದ, ವಾರ್ತಾ ಇಲಾಖೆಯ ಉಪನಿರ್ದೇಶಕರಾದ ಶ್ರೀ ಗುರುನಾಥ್ ಕಡಬೂರು, ಶ್ರೀಮತಿ ಶುಭಾ ರತ್ನಾಯಕ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ದಿಲೀಪಕುಮಾರ್ ಕುರುಂದವಾಡೆ ಹಾಗೂ ಹಲವಾರು ಸಂಘ ಸಂಸ್ಥಗಳು ಮತ್ತು ಜಿಲ್ಲೆಯ ಪತ್ರಕರ್ತ ಮಿತ್ರರು ಭಾಗವಹಿಲಿದ್ದಾರೆ.
ಸಮಯ : ಬೆಳಿಗ್ಗೆ.11ಕ್ಕೆ,
ದಿನಾಂಕ : 11.11.2023, ಶನಿವಾರ., ಸ್ಥಳ : ಕನ್ನಡ ಭವನ, ನೆಹರು ನಗರ, ಬೆಳಗಾವಿ
by gadi@dmin | Nov 7, 2023 | Scrolling News ( Right to Left ), Top ಸುದ್ದಿಗಳು, ರಾಜ್ಯ
ಇಂದಿರಾಗಾಂಧಿಯವರಿಗೆ ರಾಜಕೀಯ ಮರುಜನ್ಮ ನೀಡಿದ ಡಿಬಿಸಿ ಅಸ್ತಂಗತ
ಬೆಂಗಳೂರು, – ಚಿಕ್ಕಮಗಳೂರು ರಾಜಕೀಯವನ್ನು ಇತಿಹಾಸದ ಪುಟಗಳಲ್ಲಿ ಸೇರುವಂತೆ ಮಾಡಿದವರಲ್ಲಿ ಡಿ.ಬಿ.ಚಂದ್ರೇಗೌಡರು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತಾರೆ. 1974ರಲ್ಲಿ ಲೋಕಸಭಾ ಸದಸ್ಯರಾದ ಗೌಡರು ರಾಜೀನಾಮೆ ನೀಡಿದ್ದರ ಫಲ ಶ್ರೀಮತಿ ಇಂದಿರಾಗಾಂಧಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪುನರ್ ಅಯ್ಕೆಯಾಗುತ್ತಾರೆ.
ಬುದ್ದಿವಂತ ಚಂದ್ರೇಗೌಡರು ದೇಶದ ಲೋಕಸಭೆ, ರಾಜ್ಯಸಭೆ, ವಿಧಾನಸಭೆ, ವಿಧಾನಪರಿಷತ್ ಪ್ರತಿನಿಧಿಸಿದ್ದ ಬುದ್ಧಿವಂತ ರಾಜಕಾರಣಿ ಜೊತೆಗೆ ಕಾಂಗ್ರೆಸ್, ಕ್ರಾಂತಿರಂಗ, ಜನತಾಪಕ್ಷ, ಭಾರತೀಯ ಜನತಾ ಪಕ್ಷ ಹೀಗೆ ಹಲವು ಪಕ್ಷಗಳಿಂದ ಸ್ಪರ್ಧೆ ಮಾಡಿದ್ದರು.
ಚಿಕ್ಕಮಗಳೂರು ಲೋಕಸಭೆ, ಬೆಂಗಳೂರು ಉತ್ತರ, ತೀರ್ಥಹಳ್ಳಿ ಮತ್ತು ಶೃಂಗೇರಿ ವಿಧಾನಸಭಾ ಕ್ಷೇತ್ರಗಳಿಂದ ಅಯ್ಕೆಯಾಗಿದ್ದವರು ಉತ್ತಮ ವಾಗ್ಮಿ ಯು ಹೌದು.ಚಂದ್ರೇಗೌಡರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪತ್ರಿಕೆ ಹಾರೈಸುತ್ತದೆ.
by gadi@dmin | Nov 2, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು, ತಂತ್ರಜ್ನಾನ, ನಮ್ಮ ಬೆಂಗಳೂರು
ಮಹಾರಾಣಿ ಮಹಿಳಾ ಕ್ಲಸ್ಟರ್ ವಿವಿಯ ಚೊಚ್ಚಲ ಘಟಿಕೋತ್ಸವ: ಪ್ರೋ. ಪಿ. ಬಲರಾಮ್, ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಕರ್ನಾಟಕದಲ್ಲಿ ಮಹಿಳಾ ಅಭಿವೃದ್ಧಿಗೆ ಆದ್ಯತೆ – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಬೆಂಗಳೂರು,ನ, 2; ಕರ್ನಾಟಕ ಒಳಗೊಂಡಂತೆ ದೇಶದಲ್ಲಿ ಮಹಿಳಾ ಅಭಿವೃದ್ಧಿಗೆ ಆದ್ಯತೆ ದೊರೆಯುತ್ತಿದ್ದು, ಲಿಂಗತಾರತಮ್ಯ ನಿವಾರಣೆಯತ್ತ ದೇಶ ಸಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಹೇಳಿದ್ದಾರೆ.
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಚೊಚ್ಚಲ ಘಟಿಕೋತ್ಸವಕ್ಕೆ ಅವರು ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಖ್ಯಾತ ವಿಜ್ಞಾನಿ ಪ್ರೊ. ಪಿ. ಬಲರಾಮ್ ಮತ್ತು ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರಿಗೆ ಬಹು ಹಿಂದಿನಿಂದಲೇ ಶಕ್ತಿ ತುಂಬುವ ಪ್ರಯತ್ನಗಳು ನಡೆಯುತ್ತಿವೆ. 1948 ರಲ್ಲಿಯೇ ಮೈಸೂರು ಮಹಾರಾಜರು ಮಹಾರಾಣಿ ಕಾಲೇಜು ಸ್ಥಾಪಿಸಿದ್ದರು. ರಾಜ್ಯ ಸರ್ಕಾರ ಕೂಡ ಮಹಾರಾಣಿ ವಿವಿಯನ್ನು ಶ್ರೇಷ್ಠತೆಯತ್ತ ಕೊಂಡೊಯ್ಯಲು ಸಹಕಾರ ನೀಡುತ್ತಿದೆ ಎಂದರು.
ಕೇಂದ್ರ ಸರ್ಕಾರ ಕೂಡ ಭೇಟಿ ಬಚಾವೋ ಭೇಟಿ ಫಡಾವೋ ಸೇರಿದಂತೆ ಹಲವಾರು ಮಹಿಳಾ ಆಧಾರಿತ ಕಾರ್ಯಕ್ರಮಗಳ ಮೂಲಕ ಮಹಿಳಾ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಮಹಿಳೆಯರು ಕ್ರೀಡೆಯಲ್ಲಿ ಮಹೋನ್ನತ ಸಾಧನೆ ಮಾಡುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯುದಯಪಥದತ್ತ ಸಾಗುತ್ತಿರುವುದು ಉತ್ತಮ ಬೆಳವಣಿಗೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ನಿರ್ಧರಿಸಿದ್ದು, ಇವೆಲ್ಲವೂ ಮಹಿಳೆಯರಿಗೆ ಉತ್ತಮ ಪ್ರಾತಿನಿಧ್ಯ ದೊರಕಿಸಿಕೊಡುವ ಪ್ರಯತ್ನಗಳಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಘಟಿಕೋತ್ಸವ ಭಾಷಣ ಮಾಡಿದ ಭಾರತೀಯ ವಿಜ್ಞಾನ ಸಂಸ್ಥೆಯ ಮಾಜಿ ನಿರ್ದೇಶಕ, ಪದ್ಮಭೂಷಣ ಪ್ರೊ. ಪಿ. ಬಲರಾಮ್, ಶಿಕ್ಷಣ, ವಿಜ್ಞಾನ, ಸಂಶೋಧನೆ ಸಾರ್ವಜನಿಕ ವಲಯದ ವಿಚಾರಗಳಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕು. ಭವ್ಯ ಭವಿಷ್ಯ ಯುವ ಸಮೂಹದ ಕೈಯಲ್ಲಿದ್ದು, ಅದರಲ್ಲೂ ಮುಂದಿನ ದಿನಗಳಲ್ಲಿ ಮಹಿಳೆಯರ ಪಾತ್ರ ಹೆಚ್ಚಿರುತ್ತದೆ. ಈ ದೇಶದಲ್ಲೂ ಮಹಿಳಾ ಮೀಸಲಾತಿ ಬಗ್ಗೆ ವ್ಯಾಪಕ ಚರ್ಚೆ ನಡೆಯಿತು. ಆದರೆ ಇದೀಗ ಮೀಸಲಾತಿ ಜಾರಿಗೆ ತೀರ್ಮಾನವಾಗಿದ್ದು, ಅನುಷ್ಠಾನ ಮುಂದೂಡಲಾಗಿದೆ ಎಂದರು.
ಶಿಕ್ಷಣ ಕೇವಲ ಜ್ಞಾನವಷ್ಟೇ ಅಲ್ಲದೇ ನಿರಂತರ ಕಲಿಕೆಯೂ ಇದರ ಮೂಲಗುಣವಾಗಿದೆ. ವಿವಿಗಳಲ್ಲಿ ಕೇವಲ ಕಲಿಯುವುದಲ್ಲ, ಏನನ್ನು ಮತ್ತು ಹೇಗೆ ಕಲಿಯಬೇಕು ಎಂಬುದು ಮುಖ್ಯವಾಗಲಿದೆ. ಕಠಿಣ ಪರಿಶ್ರಮ ಅತ್ಯಂತ ಅಗತ್ಯ. ಪ್ರೊ. ನಾರಾಯಣಮೂರ್ತಿ ಅವರು ವ್ಯಕ್ತಿಗಳ ಅಭಿವೃದ್ಧಿಗೆ ಕಠಿಣ ಶ್ರಮ ಅಗತ್ಯ ಎಂದು ಹೇಳಿದ್ದು, ಇದನ್ನು ಬೇರೆ ರೀತಿ ಅರ್ಥೈಸಲಾಗುತ್ತಿದೆ. ಬದುಕಿನಲ್ಲಿ ವೈಫಲ್ಯ ಸಹಜವಾದದ್ದು, ನಂತರವಷ್ಟೇ ಗೆಲುವು ಸಾಧ್ಯ ಎಂದು ಪ್ರತಿಪಾದಿಸಿದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹೆಚ್ಚಿನ ಪ್ರಮಾಣದಲ್ಲಿ ಅಧ್ಯಯನ ಮಾಡುತ್ತಿದ್ದು, ಬಾಲಕರು ಖಾಸಗಿ ಕಾಲೇಜುಗಳಿಗೆ ಹೆಚ್ಚು ಸೇರುತ್ತಿದ್ದಾರೆ. ಮಹಾರಾಣಿ ಕಾಲೇಜು ಇದಕ್ಕೆ ಉದಾಹರಣೆಯಾಗಿದ್ದು, ಇಲ್ಲಿನ ಕಲಾ, ವಿಜ್ಞಾನ ಕಾಲೇಜು ಎದುರುಗಡೆ ಎರಡು ಸಾವಿರ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳನ್ನು ನಿರ್ಮಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ನೀಡಿದ್ದು, ಅತ್ಯಂತ ದೊಡ್ಡ ಮೂಲ ಸೌಕರ್ಯ ಕಲ್ಪಿಸಿದ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಶಿಥಿಲಗೊಂಡಿರುವ ಮೈಸೂರಿನ ಮಹಾರಾಜ ವಿಜ್ಞಾನ, ಕಲೆ, ವಾಣಿಜ್ಯ ಕಾಲೇಜಿಗೆ ಭೇಟಿ ನೀಡಿದ್ದು, ಅಲ್ಲಿ 11 ಸಾವಿರ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಬಡ ವಿದ್ಯಾರ್ಥಿಗಳು ಕಲಿಯುತ್ತಿರುವ ಇಲ್ಲಿ 51 ಕೋಟಿ ರೂ ವೆಚ್ಚದಲ್ಲಿ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಇನ್ಪೋಸಿಸ್ ಮುಖ್ಯಸ್ಥರಾದ ಪ್ರೊ. ನಾರಾಯಣ ಮೂರ್ತಿ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಶಿಘ್ಲಘಟ್ಟದವರು. ಆದರೆ ಸುಧಾಮೂರ್ತಿ ಅವರು ಹುಬ್ಬಳ್ಳಿ ಕಡೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅವರು ನಮ್ಮ ಹಿಂದುಳಿದ ಜಿಲ್ಲೆಯತ್ತಲೂ ದೃಷ್ಟಿ ಹರಿಸಬೇಕು. ಇಲ್ಲಿನ ಅಭಿವೃದ್ಧಿಗೂ ಕೊಡುಗೆ ನೀಡಬೇಕು, ಈಗಾಗಲೇ ಪ್ರೊ. ನಾರಾಯಣ ಮೂರ್ತಿ ಅವರ ಜೊತೆ ಭವಿಷ್ಯದ ಶಿಕ್ಷಣ ಸ್ವರೂಪದ ಬಗ್ಗೆ ಚರ್ಚೆ ನಡೆಸಿರುವುದಾಗಿ ಎಂದು ಡಾ. ಎಂ.ಸಿ. ಸುಧಾಕರ್ ಹೇಳಿದರು.
ಕಾರ್ಯಕ್ರಮದಲ್ಲಿ ಇನ್ಪೋಸಿಸ್ ಫೌಂಡೇಷನ್ ಮುಖ್ಯಸ್ಥರಾದ ಡಾ. ಸುಧಾಮೂರ್ತಿ, ಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಲ್. ಗೋಮತಿ ದೇವಿ, ಕುಲಸಚಿವರಾದ ಪ್ರೊ. ಅನುರಾಧ ಬಿ, ಆಡಳಿತ ವಿಭಾಗದ ಕುಲಸಚಿವರಾದ ಸಂಗಪ್ಪ, ಸಿಂಡಿಕೇಟ್ ಸದಸ್ಯರು ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಪಾಲ್ಗೊಂಡಿದ್ದರು.
by gadi@dmin | Nov 2, 2023 | Home Page - Highlights ( Red Background ), Scrolling News ( Right to Left ), Top ಸುದ್ದಿಗಳು
ಪುತ್ತಿಗೆ ಪರ್ಯಾಯ ಸಮಿತಿ ಮಹಾ ಪೋಷಕರಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದ ಶ್ರೀ ಪುತ್ತಿಗೆ ಪರ್ಯಾಯ ಸಮಿತಿಯ ಮಹಾ ಪೋಷಕರಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರನ್ನು ನೇಮಿಸಲಾಗಿದೆ. ಪುತ್ತಿಗೆ ಮಠದಲ್ಲಿ ಬುಧವಾರ ನಡೆದ ಪರ್ಯಾಯೋತ್ಸವ ಪೂರ್ವಭಾವಿ ಸಭೆಯಲ್ಲಿ ಸಚಿವರನ್ನು ಪರ್ಯಾಯ ಸಮಿತಿಯ ಮಹಾಪೋಷಕರನ್ನಾಗಿ ಘೋಷಿಸಲಾಯಿತು.
ಬಳಿಕ ಮಾತನಾಡಿದ ಸಚಿವರು, ಮುಂದಿನ ಜನವರಿಯಲ್ಲಿ ನಡೆಯಲಿರುವ ಶ್ರೀ ಪುತ್ತಿಗೆ ಪರ್ಯಾಯೋತ್ಸವಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು ಎಂದರು. ಮುಂದಿನ ಉಡುಪಿ ಭೇಟಿ ವೇಳೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯೋತ್ಸವ ಸಂಬಂಧ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗುವುದು ಎಂದರು.
ಪುತ್ತಿಗೆ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಶ್ರೀ ಕೃಷ್ಣ ಪರಮಾತ್ಮ ನನಗೆ ಕರುಣಿಸಿದ್ದಾನೆ. ಪುತ್ತಿಗೆ ಮಠ ದೇಶ, ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ಹಿಂದೂ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿ, ಇದನ್ನು ಉಳಿಸಿ, ಬೆಳಸುವ ಕರ್ತವ್ಯ ನಮ್ಮದು. ನಮ್ಮ ಸಂಸ್ಕೃತಿಯನ್ನು ಪುತ್ತಿಗೆ ಶ್ರೀಗಳು ವಿದೇಶಿ ನೆಲದಲ್ಲಿ ಪಸರಿಸುತ್ತಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಯಾವುದೇ ರಾಜಕೀಯ ತರದೇ ಭಕ್ತಿಭಾವದಿಂದ ಪರ್ಯಾಯೋತ್ಸವದಲ್ಲಿ ಪಾಲ್ಗೊಳ್ಳೋಣ. ದೇಶ ವಿದೇಶಗಳಿಂದ ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಯನ್ನು ಮಾಡೋಣ ಎಂದರು. ಪುತ್ತಿಗೆ ಪರ್ಯಾಯ ಸಮಿತಿ ಮಹಾ ಪೋಷಕರನ್ನಾಗಿ ನನ್ನನ್ನು ನೇಮಿಸಿದ್ದು, ಈ ಹುದ್ದೆಗೆ ತಕ್ಕಂತೆ ಕಾರ್ಯನಿರ್ವಹಿಸುವೆ ಎಂದು ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಈ ವೇಳೆ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗು ಮಾಜಿ ಶಾಸಕ ರಘುಪತಿ ಭಟ್, ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ದೇವಿ ಪ್ರಸಾದ್ ಶೆಟ್ಟಿ ಬೆಳಪು, ಸ್ವಾಗತ ಸಮಿತಿಯ ಕೋಶಾಧಿಕಾರಿ ರಂಜನ್ ಕಲ್ಕೂರ ಹಾಗೂ ಪ್ರಸಾದ್ ಕಾಂಚನ್ ಉಪಸ್ಥಿತರಿದ್ದರು.