ಬೆಳಗಾವಿಯಲ್ಲಿ ಶೆಫರ್ಡ್ ಇಂಡಿಯಾ ರಾಷ್ಟ್ರೀಯ ಸಮಾವೇಶ

ಬೆಂಗಳೂರು:

ವಿಶ್ವದಾದ್ಯಂತ ಇರುವ ಕುರುಬ ಸಮುದಾಯದ ಬೇರುಗಳನ್ನು ಒಗ್ಗೂಡಿಸಿ, ಬೆಳೆಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಶೆಫರ್ಡ್ ಇಂಡಿಯಾ ಇಂಟರ್‌ನ್ಯಾಷನಲ್ ಸಂಸ್ಥೆ 9ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದು, ಅ.2 ಗಾಂಧಿಜಯಂತಿಯಂದು ಬೆಳಗಾವಿಯಲ್ಲಿ ರಾಷ್ಟ್ರೀಯ ಪ್ರತಿನಿಧಿಗಳ ಮಹಾಸಮಾವೇಶವನ್ನು ಹಮ್ಮಿ ಕೊಂಡಿರುವುದಾಗಿ ಮಾಜಿ ಸಚಿವ ಹಾಗೂ ಸಂಸ್ಥೆಯ ಸಂಸ್ಥಾಪಕ ರಾಷ್ಟ್ರೀಯ ಉಪಾಧ್ಯಕ್ಷ ಹೆಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾರ್ಷಿಕೋತ್ಸವದ ಅಂಗವಾಗಿ 2 ದಿನಗಳ ಕಾರ್ಯಕ್ರಮ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ದೇಶದ ವಿವಿಧೆಡೆಗಳ ಸಾಧಕರು, ಹಿರಿಯರು, ಗಣ್ಯರು, ರಾಜಕೀಯ ನಾಯಕರು, ರಾಜ್ಯಪಾಲರು ಪಾಲ್ಗೊಳ್ಳಲಿದ್ದಾರಲ್ಲದೇ, ಅ.3ರಂದು ಇಡೀ ಭಾರತದಲ್ಲಿ ನಮ್ಮ ಸಮುದಾಯದಿಂದ ಮುಖ್ಯಮಂತ್ರಿಗಳಾಗಿರುವ, ಹೆಮ್ಮೆಯ ನಾಯಕ ಸಿದ್ದರಾಮಯ್ಯನವರಿಗೆ ರಾಷ್ಟ್ರೀಯ ಸನ್ಮಾನ ಮಾಡುವ ಘನೋದ್ದೇಶವನ್ನು ಹೊಂದಲಾಗಿದೆ ಎಂದರು.

ಕುರುಬ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವುದು, ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು, ಕುರಿಗಾಹಿಗಳಿಗೆ ಶಿಕ್ಷಣ.. ಇವೇ ಮೊದಲಾದ ಸೌಲಭ್ಯ ಕಲ್ಪಿಸುವುದು ಸೇರಿ ಒಟ್ಟು 11 ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.

ಕುರುಬ ಸಮುದಾಯದ ಹಿತಾಸಕ್ತಿಗಳನ್ನು ಕಾಪಾಡುವ ಹಾಗೂ ಹೊಸ ಆಶಯಗಳಿಗೆ ಹೊಂದಿಕೊಳ್ಳುವ, ಹತ್ತು ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಹಾಗೂ ಭಾರತ ಸರ್ಕಾರಕ್ಕೆ ಕೆಲವೊಂದು ಸಲಹೆಗಳನ್ನು ನೀಡುವ ಮೂಲಕ ಕುರುಬರ ಆಶೋತ್ತರಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸಮಾವೇಶದಲ್ಲಿ ಅಮೂಲಾಗ್ರ ಚಿಂತನ-ಮAಥನಗಳನ್ನು ನಡೆಸಲಿದೆ ಎಂದು ಹೇಳಿದರು.

ನಾಡಿನ ಮತ್ತು ಗಡಿಯಾಚೆಯ ಸಮಸ್ತ ಕುರುಬ ಬಾಂಧವರು ಸಂಘಟನೆಯ ಎಲ್ಲ ಕಾರ್ಯಗಳಿಗೂ ಸಹಭಾಗಿತ್ವ ನೀಡಿದ್ದಾರೆ. ಅವರೆಲ್ಲರಿಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಹಾಗೂ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಇದೇ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು, ಸಮುದಾಯದ ಬೇಡಿಕೆಗಳು ಹಾಗೂ ವಾರ್ಷಿಕೋತ್ಸವದ ಕುರಿತು ಮಾಹಿತಿ ನೀಡಿದರು. ಮುಂದುವರೆದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಹಾಗೂ ಎಚ್.ಡಿ.ಕುಮಾರಸ್ವಾಮಿ ಕಾವೇರಿ ವಿಚಾರದಿಂದ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬಹುದು ಎಂದು ತಿಳಿದುಕೊಂಡಿದ್ದಾರೆ. ಬಿಜೆಪಿ ಮತ ಜೆಡಿಎಸ್‌ಗೆ ವರ್ಗಾವಣೆ ಆಗುವುದಿಲ್ಲ. ಹಾಗೆಯೇ ಜೆಡಿಎಸ್ ಮತವೂ ಬಿಜೆಪಿಗೆ ವರ್ಗಾವಣೆ ಆಗುವುದಿಲ್ಲ. ಈ ಎರಡೂ ಪಕ್ಷಗಳ ಮತ ಕಾಂಗ್ರೆಸ್‌ಗೆ ವರ್ಗಾವಣೆಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮಹಾಪ್ರಧಾನ ಕರ‍್ಯದರ್ಶಿ ಎಂ.ನಾಗರಾಜ್, ಖಜಾಂಚಿ ಡಾ.ಎಂ.ಜಯಪ್ಪ, ಉಪಾಧ್ಯಕ್ಷ ಬಾಬು ಎಸ್.ಜಿದ್ದೀಮನಿ ಸೇರಿದಂತೆ ಮತ್ತಿತರರು ಹಾಜರಿದ್ದರು.

Share this :