ಕುರುಬ  ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯ

ರಾಜಕೀಯ ಶಕ್ತಿ ಬೆಳೆದು ಎಲ್ಲರಿಗೂ ಅಧಿಕಾರದಲ್ಲಿ ಪಾಲು ಸಿಗಬೇಕು

ಸ್ವಾತಂತ್ರ್ಯ ದೊರೆತು 76 ವರ್ಷಗಳಾದರೂ ಅನೇಕ ಜಾತಿಗಳು  ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಗಿಲ್ಲ.:

ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳಗಾವಿ  : ಸ್ವಾತಂತ್ರ್ಯ ಬಂದು 76 ವರ್ಷಗಳಾದರೂ ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆತಿಲ್ಲ. ಇನ್ನೂ ಕೂಡ ಅನೇಕ ಜಾತಿಗಳು  ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಿಲ್ಲ.  ದೇಶದಲ್ಲಿ  ಹಾಗೂ ಕರ್ನಾಟಕದಲ್ಲಿ ಈಗಲೂ ಇಂಥ ಸ್ಥಿತಿ ಇದೆ ಎಂದು ಮುಖ್ಯವಾಹಿನಿಗೆ ಬರದೇ ಸಮಸಮಾಜದ ನಿರ್ಮಾಣ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದಿಸಿದರು.

ಬೆಳಗಾವಿಯ ನೆಹರೂ ನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ  ಇಂದು  ನಡೆದ ಶೆಫರ್ಡ್ ಇಂಡಿಯಾ ಇಂಟರ್ ನ್ಯಾಷನಲ್ ನ 9ನೇ ರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಾತಿ ವ್ಯವಸ್ಥೆಯ ಸಮಾಜದಲ್ಲಿ ವಾಸ್ತವಿಕ  ಅಂಶಗಳನ್ನು ಅರ್ಥಮಾಡಿಕೊಂಡು ಅದರಂತೆ ನಡೆಯಬೇಕಾದುದ್ದು ನಮ್ಮ ಕರ್ತವ್ಯ.  ಈ ದೃಷ್ಟಿಯಿಂದ ಇಂಥ ಸಂಘಟನೆ, ಸಮಾವೇಶಗಳು ಅತ್ಯಂತ ಅವಶ್ಯಕ. ಅಧಿಕಾರ ವಿಕೇಂದ್ರೀರಣವಾಗಿ, ಗ್ರಾಮ ಸ್ವರಾಜ್ಯವಾಗಬೇಕು ಎಂದು ಗಾಂಧಿಜೀ ಹೇಳಿದ್ದರು .

ಸಮಾಜದ ಪ್ರಗತಿಗೆ ರಾಜಕೀಯ ಪ್ರಾತಿನಿಧ್ಯ ಅತ್ಯಗತ್ಯ

ಕುರುಬ ಸಮಾಜ ಸಂಘಟಿತವಾಗಿ ಉತ್ತಮ ಕೆಲಸ ಮಾಡಿದೆ. ರಾಜಕೀಯ ಶಕ್ತಿ ಬೆಳೆದು ಎಲ್ಲರಿಗೂ ಅಧಿಕಾರದಲ್ಲಿ ಪಾಲು ಸಿಗಬೇಕು.  ಯಾವುದೇ ಸಮಾಜದ ಪ್ರಗತಿಗೆ ರಾಜಕೀಯ ಪ್ರಾತಿನಿಧ್ಯ ಅತ್ಯಗತ್ಯ. ನಿಮ್ಮ ಪರವಾಗಿ ಧ್ವನಿ ಎತ್ತುವವರು ಇಲ್ಲದಿದ್ದಾಗ ಆ ಸಮುದಾಯ ಹಿಂದುಳಿಯುತ್ತದೆ. ಸಂಘಟನೆ ಮಾಡಿ, ರಾಜಕೀಯವಾಗಿ ಬೆಳೆಯುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕುರುಬ  ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ಕೇಂದ್ರಕ್ಕೆ ಒತ್ತಾಯ :

ಎಲ್ಲ ಜಾತಿಯವರನ್ನೂ ಒಳಗೊಂಡು ಸರ್ಕಾರವನ್ನು ನಡೆಸುವಂತಹ ಶಕ್ತಿ ಕೊಡು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಅನೇಕ ರಾಜ್ಯಗಳಲ್ಲಿ ಕುರುಬ ಸಮುದಾಯದವರು ಎಸ್ ಸಿ, ಎಸ್.ಟಿ., ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಲ್ಲಿಯೂ ಇದ್ದಾರೆ.  ಗುಲ್ಬರ್ಗ , ಬೀದರ್ , ಯಾದಗಿರಿಯಲ್ಲಿ ಗೊಂಡ, ರಾಜಗೊಂಡ ಕುರುಬ ಸಮುದಾಯದವರು ಎಸ್ ಟಿ ಗೆ ಸೇರಿದರೆ, ಕೊಡಗು ಜಿಲ್ಲೆಯಲ್ಲಿ ಎಲ್ಲ ಕುರುಬರು ಎಸ್ ಟಿ ಗೆ ಸೇರಿದ್ದಾರೆ.  ಗುಲ್ಬರ್ಗ , ಬೀದರ್ , ಯಾದಗಿರಿಯಲ್ಲಿ  ಕುರುಬರು ಮತ್ತು ಗೊಂಡ ಸಮುದಾಯದವರು ಒಂದೇ ಆಗಿದ್ದು, ಈ ಸಮುದಾಯಗಳನ್ನು ಎಸ್ ಟಿ ಗೆ ಸೇರಿಸಬೇಕು ಎಂದು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಈಗ ಈ ವಿಚಾರವು ಕೇಂದ್ರ ಸರ್ಕಾರದ ಅಂಗಳದಲ್ಲಿದೆ. ಗೊಲ್ಲರು, ಕುರುಬರು, ಕೋಳಿ ಸಮಾಜವು ಸೇರಿದಂತೆ ವಿವಿಧ ಸಮಾಜಗಳನ್ನು ಎಸ್ ಟಿ ಸಮುದಾಯಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

Share this :