ಬಂದ್ ಗೆ ಬೆಂಬಲಿಸಿ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆ ವತಿಯಿಂದ ಪ್ರತಿಭಟನೆ
ಸರ್ಕಾರ ಕಾವೇರಿ ಹೋರಾಟವನ್ನು ಲಘುವಾಗಿ ಪರಿಗಣಿಸಬಾರದು: ಶಿವಕುಮಾರ್ ಮೇಟಿ
ಬೆಂಗಳೂರು: ಕಾವೇರಿ ನೀರಿಗಾಗಿ ನಡೆದ ಕರ್ನಾಟಕ ಬಂದ್ ಗೆ ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾಸಂಸ್ಥೆಯಿಂದ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು.
ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ನೇತೃತ್ವದಲ್ಲಿ ರಾಜಾಜಿನಗರದ ಭಾಷ್ಯಂ ಸರ್ಕಲ್‌ನಿಂದ ರಾಮಮಂದಿರವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಮೇಟಿ, ಕಾವೇರಿ ನಮ್ಮ ನಾಡಿನ ಜೀವ ನದಿಯಾಗಿದ್ದು, ಈ ವರ್ಷ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಮಳೆಯಾಗದೇ ಕಾವೇರಿ ಕಣಿವೆಯ ಡ್ಯಾಮ್ ಗಳು ಖಾಲಿಯಾಗಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಲಿದೆ.
ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕ ಹೋರಾಟವನ್ನು ಪ್ರಬಲವಾಗಿ ನಡೆಸಬೇಕು. ಸಂಸದರೂ ಕೂಡ ರಾಜ್ಯದ ಪರವಾಗಿ ಕೇಂದ್ರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರಗಳು ಹೋರಾಟಗಾರರನ್ನು ಲಘುವಾಗಿ ತೆಗೆದುಕೊಳ್ಳಬಾರದು. ಕಾವೇರಿ ವಿಚಾರದಲ್ಲಿ ಇಡಿ ರಾಜ್ಯ ಒಂದಾಗಿ ಹೋರಾಟ ನಡೆಸಿದ್ದು, ತಕ್ಷಣ ಕಾನೂನು ಹೋರಾಟ ತೀವ್ರಗೊಳಿಸಿ ಕಾವೇರಿ ಉಳಿಸಬೇಕು ಎಂದು ಆಗ್ರಹಿಸಿದರು.